ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Odisha Crime: ಅನಾಥ ಮಗುವನ್ನು ರಕ್ಷಿಸಿದ್ದೇ ಜೀವಕ್ಕೆ ಮುಳುವಾಯ್ತು; ದತ್ತು ಮಗಳಿಂದಲೇ ಕೊಲೆಯಾದ ತಾಯಿ

Crime News: ಒಡಿಶಾದ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದ ಮೂರು ದಿನದ ನವಜಾತ ಶಿಶುವನ್ನು ದತ್ತು ತೆಗೆದುಕೊಂಡ ಮಹಿಳೆಯನ್ನು ಆಕೆಯೇ ಸಾಕಿದ ದತ್ತು ಮಗಳು ಇಬ್ಬರು ಯುವಕರ ಸಹಾಯದಿಂದ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬುದ್ಧಿ ಹೇಳಿದ್ದಕ್ಕೆ ಸಾಕು ತಾಯಿಯನ್ನೇ ಕೊಂದ ದತ್ತು ಮಗಳು

ದತ್ತು ಮಗಳಿಂದ ಮೃತಪಟ್ಟ ತಾಯಿ.

Profile Sushmitha Jain May 17, 2025 11:38 PM

ಭುವನೇಶ್ವರ: ಒಡಿಶಾದ (Odisha) ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದ ಮೂರು ದಿನದ ನವಜಾತ ಶಿಶುವನ್ನು(Newborn Baby) ದತ್ತು ತೆಗೆದುಕೊಂಡ ಮಹಿಳೆಯನ್ನು ಆಕೆಯೇ ಸಾಕಿದ ದತ್ತು ಮಗಳು (Adopted Daughter) ಇಬ್ಬರು ಯುವಕರ ಸಹಾಯದಿಂದ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, 13 ವರ್ಷದ 8ನೇ ತರಗತಿ ವಿದ್ಯಾರ್ಥಿನಿಯಾದ ಈ ಬಾಲಕಿ ಇಬ್ಬರು ಸ್ನೇಹಿತರೊಂದಿಗೆ ಸೇರಿ, ಗಜಪತಿ ಜಿಲ್ಲೆಯ ಪರಲಾಖೇಮುಂಡಿ ಪಟ್ಟಣದ ತಮ್ಮ ಬಾಡಿಗೆ ಮನೆಯಲ್ಲಿ ತನ್ನನ್ನು ದತ್ತು ಪಡೆದ 54 ವರ್ಷದ ರಾಜಲಕ್ಷ್ಮೀ ಕರ್‌ ಅವರನ್ನು ಕೊಲೆ ಮಾಡಿದ್ದಾಳೆ.

ಬಾಲಕಿ ಇಬ್ಬರು ಯುವಕರೊಂದಿಗಿನ ಸಂಬಂಧ ಹೊಂದಿರುವುದನ್ನು ರಾಜಲಕ್ಷ್ಮೀ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಮಹಿಳೆಯ ಆಸ್ತಿಯ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶವೂ ಈ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ರಾಜಲಕ್ಷ್ಮೀಗೆ ನಿದ್ರೆ ಮಾತ್ರೆಗಳನ್ನು ಕೊಟ್ಟು ನಂತರ ದಿಂಬಿನ ಸಹಾಯದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮರುದಿನ, ಭುವನೇಶ್ವರದಲ್ಲಿ ರಾಜಲಕ್ಷ್ಮೀ ಸಂಬಂಧಿಕರ ಸಮ್ಮುಖದಲ್ಲಿ ಅವರ ಶವವನ್ನು ಸುಟ್ಟುಹಾಕಲಾಗಿದೆ. ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರಿಗೆ ತಿಳಿಸಲಾಗಿತ್ತು.

ಈ ಪ್ರಕರಣವು ಎರಡು ವಾರಗಳಿಗೂ ಹೆಚ್ಚು ಕಾಲ ಗುಪ್ತವಾಗಿತ್ತು. ರಾಜಲಕ್ಷ್ಮೀಯ ಸಹೋದರ ಶಿಬ ಪ್ರಸಾದ್ ಮಿಶ್ರಾ ಅವರು ಭುವನೇಶ್ವರದಲ್ಲಿ ಬಾಲಕಿಯ ಮೊಬೈಲ್ ಫೋನ್‌ನ್ನು ಪತ್ತೆ ಮಾಡಿದಾಗ ಈ ಕೊಲೆಯ ಪ್ಲ್ಯಾನ್ ಬಯಲಿಗೆ ಬಂದಿತು. ಫೋನ್‌ನ ಇನ್‌ಸ್ಟಾಗ್ರಾಮ್ ಚಾಟ್‌ಗಳನ್ನು ಪರಿಶೀಲಿಸಿದಾಗ, ರಾಜಲಕ್ಷ್ಮೀಯನ್ನು ಕೊಲೆ ಮಾಡುವ ಮತ್ತು ಆಕೆಯ ಚಿನ್ನಾಭರಣ ಹಾಗೂ ಹಣವನ್ನು ಕಬಳಿಸುವ ಯೋಜನೆಯ ವಿವರಗಳು ದೊರೆತವು. ಈ ಆಧಾರದ ಮೇಲೆ, ಮಿಶ್ರಾ ಅವರು ಮೇ 14ರಂದು ಪರಲಾಖೇಮುಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ತನಿಖೆಯ ಬಳಿಕ, 13 ವರ್ಷದ ಬಾಲಕಿ, ದೇವಾಲಯದ ಪೂಜಾರಿ ಗಣೇಶ್ ರಥ್ (21) ಮತ್ತು ಅವನ ಸ್ನೇಹಿತ ದಿನೇಶ್ ಸಾಹು (20) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಗಜಪತಿ ಜಿಲ್ಲೆಯ ಪೊಲೀಸ್ ಅಧೀಕ್ಷಕ (ಎಸ್‌ಪಿ) ಜತೀಂದ್ರ ಕುಮಾರ್ ಪಾಂಡಾ ಅವರ ಪ್ರಕಾರ, ಸುಮಾರು 14 ವರ್ಷಗಳ ಹಿಂದೆ ರಾಜಲಕ್ಷ್ಮೀ ಮತ್ತು ಅವರ ಪತಿ ಭುವನೇಶ್ವರದ ರಸ್ತೆ ಬದಿಯಲ್ಲಿದ್ದ ಈ ನವಜಾತ ಶಿಶುವನ್ನು ಕಂಡು ದತ್ತು ತೆಗೆದುಕೊಂಡಿದ್ದರು. ಮಕ್ಕಳಿಲ್ಲದಿದ್ದ ಈ ದಂಪತಿ ಈ ಬಾಲಕಿಯನ್ನು ತಮ್ಮ ಸ್ವಂತ ಮಗುವಿನಂತೆ ಸಾಕಿದ್ದರು. ಒಂದು ವರ್ಷದ ನಂತರ ರಾಜಲಕ್ಷ್ಮೀಯ ಪತಿ ಮೃತಪಟ್ಟಿದ್ದರು. ಅಂದಿನಿಂದ ಅವರು ಒಂಟಿಯಾಗಿ ಬಾಲಕಿಯನ್ನು ಪೋಷಿಸಿದ್ದರು. ಕೆಲವು ವರ್ಷಗಳ ಹಿಂದೆ, ತನ್ನ ಮಗಳು ಕೇಂದ್ರೀಯ ವಿದ್ಯಾಲಯದಲ್ಲಿ ಓದಲಿ ಎಂಬ ಉದ್ದೇಶದಿಂದ ರಾಜಲಕ್ಷ್ಮೀ ಪರಲಾಖೇಮುಂಡಿಗೆ ಸ್ಥಳಾಂತರಗೊಂಡು, ಅಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಈ ಸುದ್ದಿಯನ್ನು ಓದಿ: Crime News: ಬೆತ್ತಲೆ ವ್ಯಕ್ತಿಯಿಂದ ಮೊಬೈಲ್‌ ಅಂಗಡಿ ದರೋಡೆ, ಬೆಂಗಳೂರಿನಲ್ಲಿ ನಡೆದ ಘಟನೆ

ಬಾಲಕಿ ತನ್ನಗಿಂತ ವಯಸ್ಸಿನಲ್ಲಿ ದೊಡ್ಡವರಾದ ರಥ್ ಮತ್ತು ಸಾಹು ಜತೆ ಸಂಬಂಧ ಬೆಳೆಸಿಕೊಂಡಿದ್ದಳು. ಈ ಸಂಬಂಧಕ್ಕೆ ರಾಜಲಕ್ಷ್ಮೀ ವಿರೋಧ ವ್ಯಕ್ತಪಡಿಸಿದ್ದರಿಂದ ತಾಯಿ-ಮಗಳ ನಡುವೆ ಒಡಕು ಉಂಟಾಗಿತ್ತು. ಪೊಲೀಸರ ಪ್ರಕಾರ, ರಥ್ ಈ ಕೊಲೆಗೆ ಬಾಲಕಿಯನ್ನು ಪ್ರಚೋದಿಸಿದ್ದಾನೆ. ರಾಜಲಕ್ಷ್ಮೀಯನ್ನು ಕೊಲೆ ಮಾಡಿದರೆ ತಮ್ಮ ಸಂಬಂಧಕ್ಕೆ ಯಾವುದೇ ಅಡ್ಡಿ ಇರುವುದಿಲ್ಲ ಮತ್ತು ಆಕೆಯ ಆಸ್ತಿಯನ್ನು ಪಡೆಯಬಹುದು ಎಂದು ರಥ್ ಬಾಲಕಿಯ ಮನವೊಲಿಸಿದ್ದಾನೆ.

ಏಪ್ರಿಲ್ 29ರ ಸಂಜೆ ಬಾಲಕಿ ತನ್ನ ತಾಯಿಗೆ ನಿದ್ರೆ ಮಾತ್ರೆಗಳನ್ನು ಕೊಟ್ಟಿದ್ದಾಳೆ. ರಾಜಲಕ್ಷ್ಮೀ ಗಾಢನಿದ್ರೆಗೆ ಜಾರಿದ ನಂತರ, ಆಕೆ ರಥ್ ಮತ್ತು ಸಾಹುವನ್ನು ಕರೆದಿದ್ದಾಳೆ. ಮೂವರು ಸೇರಿ ರಾಜಲಕ್ಷ್ಮೀ ಯನ್ನು ದಿಂಬುಗಳಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಆರೋಪಿಗಳು ಕುಟುಂಬದವರಿಗೆ ಮತ್ತು ಆಸ್ಪತ್ರೆ ಸಿಬ್ಬಂದಿಗೆ ರಾಜಲಕ್ಷ್ಮೀಗೆ ಹೃದಯಾಘಾತವಾಗಿದೆ ಎಂದು ತಿಳಿಸಿದ್ದರು.

ರಾಜಲಕ್ಷ್ಮೀ ಅವರಿಗೆ ಈ ಹಿಂದೆ ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ, ಯಾರೂ ಅವರನ್ನು ಪ್ರಶ್ನಿಸಿರಲಿಲ್ಲ. ಪೊಲೀಸರ ಪ್ರಕಾರ, ಬಾಲಕಿ ಈ ಹಿಂದೆ ರಾಜಲಕ್ಷ್ಮೀಯ ಕೆಲವು ಚಿನ್ನಾಭರಣಗಳನ್ನು ರಥ್‌ಗೆ ನೀಡಿದ್ದಳು. ರಥ್ ಆ ಚಿನ್ನವನ್ನು ಸುಮಾರು 2.4 ಲಕ್ಷ ರೂಪಾಯಿಗೆ ಅಡ ಇಟ್ಟಿದ್ದ. ಪೊಲೀಸರು ಆರೋಪಿಗಳಿಂದ ಸುಮಾರು 30 ಗ್ರಾಂ ಚಿನ್ನಾಭರಣ, ಮೂರು ಮೊಬೈಲ್ ಫೋನ್‌ಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ದಿಂಬುಗಳನ್ನು ವಶಪಡಿಸಿಕೊಂಡಿದ್ದಾರೆ.