Ranya Rao case: ನಟಿ ರನ್ಯಾ ರಾವ್ ಜಾಮೀನು ಅರ್ಜಿ ವಜಾ, ಕಾರಣ ಇಲ್ಲಿದೆ
ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅನ್ನು ಡಿಆರ್ಐ ಅಧಿಕಾರಿಗಳು ಮಾರ್ಚ್ 3ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ನಟಿ ರನ್ಯಾ ರಾವ್ ಬರೋಬ್ಬರಿ 14 ಕೆಜಿಗೂ ಹೆಚ್ಚಿನ ತೂಕದ ಚಿನ್ನವನ್ನು ಕಳ್ಳ ಸಾಗಣೆ ಮಾಡುವಾಗ ಸಿಕ್ಕಿ ಬಿದ್ದಿದ್ದಳು.

ರನ್ಯಾ ರಾವ್

ಬೆಂಗಳೂರು: ಚಿನ್ನ ಅಕ್ರಮ ಕಳ್ಳಸಾಗಣೆ ಪ್ರಕರಣದ ಆರೋಪಿ ನಟಿ ರನ್ಯಾ ರಾವ್ (Kannada Actress Ranya Rao) ಜಾಮೀನು (bail) ಅರ್ಜಿ ವಜಾ ಆಗಿದೆ. ಪ್ರಕರಣದ ಗಂಭೀರತೆ ಹಾಗೂ ನಟಿಯ ಪ್ರಭಾವ ಗಮನಿಸಿರುವ 64ನೇ ಸಿಸಿಹೆಚ್ ನ್ಯಾಯಾಲಯ ನಟಿಯ ಜಾಮೀನು ಅರ್ಜಿಯನ್ನು ವಜಾ ಮಾಡಿದೆ. ನಟಿಗೆ ಇರುವ ಪ್ರಭಾವಗಳು, ಪ್ರಕರಣದ ಗಂಭೀರತೆ ಗಮನಿಸಿ ಜಾಮೀನು ನಿರಾಕರಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಆಕೆಯನ್ನು ಒಪ್ಪಿಸಲಾಗಿದೆ. ಆಕೆಗೆ ಕಳ್ಳಸಾಗಣೆಯಲ್ಲಿ ಸಹಕರಿಸಿದ್ದ ಒಬ್ಬಾತನನ್ನು ಇಂದು ಪೊಲೀಸರು ಬಂಧಿಸಿದ್ದು, ಆಕೆಯ ಕೊರಳಿನ ಸುತ್ತ ಕಾನೂನು ಕುಣಿಕೆ ಇನ್ನಷ್ಟು ಬಿಗಿಯಾಗಿದೆ.
ರನ್ಯಾ ರಾವ್ ಕೇಸ್‌ನ ಗಂಭೀರತೆಯನ್ನು ಕೋರ್ಟ್ ಗಮನಿಸಿದೆ. ಇದರಲ್ಲಿ ಅಂತಾರಾಷ್ಟ್ರೀಯ ಲಿಂಕ್‌ಗಳು ಇವೆ, ಕಸ್ಟಮ್ಸ್ ಬ್ಯಾಗೇಜ್ ನಿಯಮ ಉಲ್ಲಂಘನೆ ಮಾಡಲಾಗಿದೆ, ಹೊರಬಂದಲ್ಲಿ ಸಾಕ್ಷಿ ನಾಶ ಮತ್ತು ತನಿಖೆಯ ಹಾದಿ ತಪ್ಪಿಸಬಹುದು. ಆಕೆ ಒಂದು ವರ್ಷದ ಅವಧಿಯಲ್ಲಿ ಇಪತ್ತೇಳು ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ. ಈಕೆಯಿಂದ ಮೂವತ್ತೆಂಟು ಪರ್ಸೆಂಟ್ ಕಸ್ಟಮ್ಸ್ ಸುಂಕ ವಂಚನೆ ಆಗಿದೆ. ಒಟ್ಟು 4,83,72,694 ರೂ. ಸುಂಕ ವಂಚನೆ ಆಗಿದೆ. ಜಾಮೀನು ಕೊಟ್ಟರೆ ದೇಶ ಬಿಡುವ ಸಾಧ್ಯತೆ ಇದೆ. ಪ್ರಭಾವಿಗಳು ಪ್ರಕರಣದಲ್ಲಿದ್ದು ತನಿಖೆಯ ಹಾದಿ ತಪ್ಪಿಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಜಾಮೀನು ಅರ್ಜಿ ವಜಾ ಆಗಿದೆ.
ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಅನ್ನು ಡಿಆರ್ಐ ಅಧಿಕಾರಿಗಳು ಮಾರ್ಚ್ 3ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದರು. ನಟಿ ರನ್ಯಾ ರಾವ್ ಬರೋಬ್ಬರಿ 14 ಕೆಜಿಗೂ ಹೆಚ್ಚಿನ ತೂಕದ ಚಿನ್ನವನ್ನು ಕಳ್ಳ ಸಾಗಣೆ ಮಾಡುವಾಗ ಸಿಕ್ಕಿ ಬಿದ್ದಿದ್ದಳು. ನಟಿ ರನ್ಯಾ ರಾವ್, ಸರ್ಕಾರದ ಉನ್ನತ ಅಧಿಕಾರಿಗಳಿಗೆ ನೀಡಲಾಗುವ ಸವಲತ್ತುಗಳನ್ನು ಬಳಸಿಕೊಂಡು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಅಂಶ ತನಿಖೆಯಲ್ಲಿ ಬಹಿರಂಗವಾಗಿತ್ತು.
ರನ್ಯಾ ರಾವ್ ಹಿಂದೆ ಕೆಲವು ಸಚಿವರು, ಶಾಸಕರು ಇರುವ ವಿಷಯ ಸಹ ಸದ್ದು ಮಾಡಿತು. ರನ್ಯಾ ರಾವ್ ಬಂಧನ ಪ್ರಕರಣ ವಿಧಾನಸಭೆಯಲ್ಲಿಯೂ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ರನ್ಯಾ ರಾವ್ಗೆ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಈ ಹಿಂದೆ ಇದ್ದ ಸರ್ಕಾರ 12 ಎಕರೆ ಜಮೀನು ಮಂಜೂರು ಮಾಡಿದ ವಿಷಯವೂ ಬಹಿರಂಗವಾಯ್ತು. ಸರ್ಕಾರಿ ಅಧಿಕಾರಿಗಳನ್ನು, ವಿಶೇಷವಾಗಿ ಪೊಲೀಸ್ ವಾಹನಗಳು, ಸಿಬ್ಬಂದಿಗಳನ್ನು ನಟಿ ರನ್ಯಾ ತನ್ನ ಖಾಸಗಿ ವಿಷಯಗಳಿಗೆ ಬಳಸಿಕೊಂಡ ವಿಷಯ ತನಿಖೆಯಿಂದ ಬಹಿರಂಗವಾಗಿತ್ತು.
ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ನಟಿಯ ಜೊತೆಗೆ ಆಕೆಯ ಬಾಯ್ಫ್ರೆಂಡ್ ಆಗಿರುವ ತೆಲುಗು ಚಿತ್ರರಂಗದ ನಟ ತರುಣ್ ಕೊಂಡೂರು ಅನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಡಿಆರ್ಐ ಅಧಿಕಾರಿಗಳು ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ ಸಾಹಿಲ್ ಸಕಾರಿಯಾ ಜೈನ್ ಎಂಬಾತನನ್ನು ಬಂಧಿಸಲಾಗಿದೆ. ಈ ವ್ಯಕ್ತಿ ರನ್ಯಾ ತಂದ ಚಿನ್ನವನ್ನು ಕರಗಿಸುವ ಮತ್ತು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ. ರನ್ಯಾ ಚಿನ್ನ ಕಳ್ಳಸಾಗಣೆ ಮಾಡುವಲ್ಲಿ, ಸಾಹಿಲ್ ಸಕಾರಿಯಾ ಜೈನ್ ಹಲವು ಬಾರಿ ಸಹಾಯ ಮಾಡಿದ್ದ ಎಂದು ಆರೋಪಿಸಲಾಗಿದೆ.