ಬಸವಣ್ಣ ಒಬ್ಬ ಹೇಡಿ, ಅಕ್ಕಮಹಾದೇವಿ ಆ ರೀತಿಯ ಮಹಿಳೆ; ಅಶ್ಲೀಲ ಪೋಸ್ಟ್ ಹಾಕಿದ ಕಿಡಿಗೇಡಿ ಬಂಧನಕ್ಕೆ ಆಗ್ರಹ
Basavanna and Akka Mahadevi: ಶಿವಶರಣರ ಬಗ್ಗೆ ಅವಹೇಳನಕಾರಿ ಪೋಸ್ಟ್ ಖಂಡಿಸಿ ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಸವಾದಿ ಶರಣರ ಅನುಯಾಯಿಗಳು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದು, ಕಿಡಿಗೇಡಿಯ ಬಂಧನಕ್ಕೆ ಆಗ್ರಹಿಸಿದ್ದಾರೆ.
ಬಸವಣ್ಣ ಮತ್ತು ಅಕ್ಕಮಹಾದೇವಿ. -
ವಿಜಯಪುರ: ಶಿವಶರಣರಾದ ಬಸವಣ್ಣ, ಅಕ್ಕಮಹಾದೇವಿ (Basavanna and Akka Mahadevi ) ಅವರ ಬಗ್ಗೆ ವ್ಯಕ್ತಿಯೊಬ್ಬ ಕೀಳುಮಟ್ಟದ ಪದಗಳೊಂದಿಗೆ ಅಶ್ಲೀಲ, ಅವಹೇಳನಕಾರಿ ಪೋಸ್ಟ್ ಮಾಡಿರುವುದು ಕಂಡುಬಂದಿದ್ದು, ಕಿಡಿಗೇಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಸವಾದಿ ಶರಣರ ಅನುಯಾಯಿಗಳು ಆಗ್ರಹಿಸಿದ್ದಾರೆ.
ರಮಾಕಾಂತ ಎಂಬ ವ್ಯಕ್ತಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಬಸವಣ್ಣ, ಅಕ್ಕಮಹಾದೇವಿ ಅವರ ಬಗ್ಗೆ ಅವಹೇಳಕಾರಿ ಪೋಸ್ಟ್ ಹಾಕಿದ್ದಾನೆ. ಇದಕ್ಕೆ ವಿಜಯಪುರ ಸೇರಿ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಈ ಕೃತ್ಯ ಎಸಗಿದ ರಮಾಕಾಂತನನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಜಿಲ್ಲೆಯಾದ್ಯಂತ ಬಸವ ಅನುಯಾಯಿಗಳು ಬೀದಿಗಿಳಿದಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ
ಶಿವಶರಣರ ಬಗ್ಗೆ ಅವಹೇಳನಕಾರಿ ಪೋಸ್ಟ್ ಖಂಡಿಸಿ ವಿಜಯಪುರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಸವಾದಿ ಶರಣರ ಅನುಯಾಯಿಗಳು ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ರಮಾಕಾಂತ ಎಂಬ ವ್ಯಕ್ತಿ ಉದ್ದೇಶಪೂರ್ವಕವಾಗಿ ಸಮಾಜದ ಶಾಂತಿ ಕದಡಲು ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಇಂತಹ ಕೃತ್ಯ ಎಸಗಿದ್ದಾನೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದು, "ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ. ಅಂತಹ ಮಹಾನ್ ಚೇತನಕ್ಕೆ ಅವಮಾನ ಮಾಡಿರುವುದು ಇಡೀ ಮಾನವಕುಲಕ್ಕೆ ಮಾಡಿದ ಅವಮಾನ. ಆರೋಪಿ ರಮಾಕಾಂತನನ್ನು ಕೂಡಲೇ ಪತ್ತೆ ಹಚ್ಚಿ ಅರೆಸ್ಟ್ ಮಾಡಬೇಕು. ಸೈಬರ್ ಕ್ರೈಂ ಅಡಿಯಲ್ಲಿ ಆತನ ವಿರುದ್ಧ ಕಠಿಣ ಪ್ರಕರಣ ದಾಖಲಿಸಬೇಕು" ಎಂದು ಒತ್ತಾಯಿಸಿದರು.
ದಾವಣೆಗೆರೆ ಉದ್ಯಮಿಗೆ ಹನಿಟ್ರ್ಯಾಪ್; 25 ಲಕ್ಷ ರೂ. ಬೇಡಿಕೆ ಇಟ್ಟಿದ್ದ ನರ್ಸ್ ಸೇರಿ ನಾಲ್ವರು ಅರೆಸ್ಟ್
ಒಂದು ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಲು ವಿಳಂಬ ಮಾಡಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಬಸವ ಅನುಯಾಯಿಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.