ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್..! ಸಿಯಾ-ಚೇತನ್ ಸಂಬಂಧದ ಶಾಕಿಂಗ್ ಮಾಹಿತಿ ಬಹಿರಂಗ

ರಿಯಾಲ್ಟರ್ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಗಳು ಬೆಳಕಿಗೆ ಬಂದಿವೆ. ಆರೋಪಿ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ನಡುವೆ 2,004 ಕರೆಗಳು ನಡೆದಿರುವುದು, ಡಿಲೀಟ್ ಮಾಡಲಾದ ವಾಟ್ಸಾಪ್ ಹಾಗೂ ಇನ್‌ಸ್ಟಾಗ್ರಾಂ ಚಾಟ್‌ಗಳನ್ನು ಫೊರೆನ್ಸಿಕ್ ತಜ್ಞರು ಮರುಪಡೆಯಲು ಮುಂದಾಗಿರುವುದು, ಜೂನ್ 17ರಂದು ಇಬ್ಬರೂ ಕಫೆಯಲ್ಲಿ ಸುಮಾರು ಒಂದು ಗಂಟೆ ಭೇಟಿಯಾಗಿರುವುದು ಸೇರಿದಂತೆ ಹಲವು ಅಂಶಗಳ ಕುರಿತು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಎಲ್ಲಾ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಿ ಹತ್ಯೆಯ ಹಿಂದಿನ ಸಂಚಿನ ಬಗ್ಗೆ ಸತ್ಯಾಂಶ ಹೊರತರಲು ತನಿಖೆ ಮುಂದುವರಿದಿದೆ.

ಕೇತನ್ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್..!

ಕೇತನ್ ಹತ್ಯೆ ಕೇಸ್‌ಗೆ ಟ್ವಿಸ್ಟ್ -

Profile
Sushmitha Jain Jun 27, 2026 10:49 AM

ಪುಣೆ, ಜೂ.27: ರಿಯಾಲ್ಟರ್ ಕೇತನ್ ಅಗರ್ವಾಲ್ (Ketan Agarwal) ಹತ್ಯೆ (Murder) ಪ್ರಕರಣದ ತನಿಖೆಗೆ (Investigation) ಹೊಸ ತಿರುವು ಸಿಕ್ಕಿದ್ದು, ಪ್ರಕರಣದ ಇಬ್ಬರು ಆರೋಪಿಗಳಾದ (Accused) ಸಿಯಾ ಗೋಯಲ್ (Siya Goyal) ಮತ್ತು ಚೇತನ್ ಚೌಧರಿ (Chetan Chaudhary) ನಡುವಿನ ಆಪ್ತ ಸಂಬಂಧ ಕುರಿತು ಪೊಲೀಸರು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ.

ಪೊಲೀಸರ ಪ್ರಕಾರ, ಕ್ರಿಕೆಟಿಗನಾಗಿರುವ ಚೇತನ್ ಚೌಧರಿ, ಸಿಯಾದ ಅಣ್ಣ ಸಾಹಿಲ್ ಗೋಯಲ್ ಅವರೊಂದಿಗೆ ಹಲವು ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿದ್ದ. ಆ ವೇಳೆ ಸಿಯಾ ತನ್ನ ಅಣ್ಣನೊಂದಿಗೆ ಪಂದ್ಯಗಳಿಗೆ ಬರುತ್ತಿದ್ದ ಕಾರಣ, ಅಲ್ಲಿಯೇ ಸಿಯಾ ಮತ್ತು ಚೇತನ್ ಮೊದಲ ಬಾರಿ ಪರಿಚಿತರಾಗಿದ್ದರು.

ದೀಪಾವಳಿ ಸಮಾರಂಭದ ಬಳಿಕ ಮತ್ತಷ್ಟು ಆತ್ಮೀಯತೆ

2025ರ ದೀಪಾವಳಿ ಸಂದರ್ಭದಲ್ಲಿ ಸಾಮಾನ್ಯ ಸ್ನೇಹಿತನೊಬ್ಬ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಬ್ಬರೂ ಮತ್ತೆ ಭೇಟಿಯಾಗಿದ್ದು, ಆ ಬಳಿಕ ಅವರ ಸಂಪರ್ಕ ಹೆಚ್ಚಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕಾಲ್ ಡೀಟೇಲ್ ರೆಕಾರ್ಡ್ (CDR) ಪರಿಶೀಲಿಸಿದ ವೇಳೆ, ಜನವರಿಯಿಂದ ಇಬ್ಬರ ನಡುವೆ 2,004 ಕರೆಗಳು ನಡೆದಿರುವುದು ಬೆಳಕಿಗೆ ಬಂದಿದೆ. ಈ ಕರೆಗಳ ಒಟ್ಟು ಅವಧಿ ಸುಮಾರು 238 ಗಂಟೆಗಳು ಆಗಿದ್ದು, ಇಬ್ಬರೂ ನಿರಂತರ ಸಂಪರ್ಕದಲ್ಲಿದ್ದುದನ್ನು ಇದು ಸೂಚಿಸುತ್ತದೆ.

ಸಾಹಿಲ್ ಗೋಯಲ್‌ಗೆ 10 ಗಂಟೆಗಳ ವಿಚಾರಣೆ

ಸಿಯಾ ಮತ್ತು ಚೇತನ್ ನಡುವಿನ ಸಂಬಂಧದ ಕುರಿತು ಮಾಹಿತಿ ಸಂಗ್ರಹಿಸಲು ಪೊಲೀಸರು ಸಿಯಾ ಅಣ್ಣ ಸಾಹಿಲ್ ಗೋಯಲ್ ಅವರನ್ನು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ನಂತರ ಅವರನ್ನು ಮನೆಗೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಇತರ ಕುಟುಂಬ ಸದಸ್ಯರ ಹೇಳಿಕೆಗಳನ್ನೂ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ.

ವಿಗ್ ಧರಿಸಿದ್ದಕ್ಕೆ ಭಾವೀ ಪತಿಯನ್ನು ಕೊಂದಳಾ ಸಿಯಾ? ಕೇತನ್‌ ತಂದೆ ಹೇಳಿದ್ದೇನು?

ಡಿಲೀಟ್ ಮಾಡಿದ ಚಾಟ್‌ಗಳ ಫೊರೆನ್ಸಿಕ್ ಪರಿಶೀಲನೆ

ಪ್ರಕರಣದ ತನಿಖೆ ಈಗ ಡಿಜಿಟಲ್ ಸಾಕ್ಷ್ಯಗಳತ್ತ ವಿಸ್ತರಿಸಿದೆ. ಆರೋಪಿಗಳು ತಮ್ಮ ಮೊಬೈಲ್‌ಗಳಿಂದ ವಾಟ್ಸಾಪ್ ಚಾಟ್‌ಗಳು, ಇನ್‌ಸ್ಟಾಗ್ರಾಂ ಸಂದೇಶಗಳು ಹಾಗೂ ಇತರೆ ಡಿಜಿಟಲ್ ಮಾಹಿತಿಗಳನ್ನು ಅಳಿಸಿರುವ ಶಂಕೆ ವ್ಯಕ್ತವಾಗಿದೆ. ಅಳಿಸಲಾದ ಮಾಹಿತಿಯನ್ನು ಮರುಪಡೆಯಲು ಫೊರೆನ್ಸಿಕ್ ತಜ್ಞರು ಕಾರ್ಯನಿರ್ವಹಿಸುತ್ತಿದ್ದು, ಘಟನೆಗೆ ಮುನ್ನ ಹಾಗೂ ಬಳಿಕ ನಡೆದ ಸಂವಹನದ ಸಂಪೂರ್ಣ ವಿವರಗಳನ್ನು ಸಂಗ್ರಹಿಸುವ ಪ್ರಯತ್ನ ನಡೆಯುತ್ತಿದೆ.

ಜೂನ್ 17ರ ಕೆಫೆ ಭೇಟಿ ತನಿಖೆಯ ಕೇಂದ್ರಬಿಂದು

ಕೇತನ್ ಅಗರ್ವಾಲ್ ಸಾವಿಗೆ ಒಂದು ದಿನ ಮುನ್ನ, ಅಂದರೆ ಜೂನ್ 17ರಂದು, ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಪುಣೆಯ ಲುಲ್ಲಾನಗರ ಪ್ರದೇಶದ ಕಫೆಯೊಂದರಲ್ಲಿ ಸಂಜೆ 4:30ರಿಂದ 5:30ರವರೆಗೆ ಸುಮಾರು ಒಂದು ಗಂಟೆ ಭೇಟಿಯಾಗಿದ್ದರು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಭೇಟಿಯಲ್ಲಿ ಹತ್ಯೆಗೆ ಸಂಬಂಧಿಸಿದ ಯಾವುದೇ ಚರ್ಚೆ ನಡೆದಿತ್ತೆ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಡಿಜಿಟಲ್ ಸಾಕ್ಷ್ಯಗಳು ಹಾಗೂ ಫೊರೆನ್ಸಿಕ್ ವರದಿಗಳು ಮುಂದಿನ ಬೆಳವಣಿಗೆಗಳಿಗೆ ಮಹತ್ವದ ಪಾತ್ರವಹಿಸುವ ಸಾಧ್ಯತೆ ಇದೆ.