ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Black Magic: ವಾಮಾಚಾರದ ಶಂಕೆ; ಒಂದೇ ಕುಟುಂಬದ ಐವರನ್ನು ಸಜೀವವಾಗಿ ಸುಟ್ಟು ಹಾಕಿದ ಗ್ರಾಮಸ್ಥರು

ವಾಮಾಚಾರ ನಡೆಸುತ್ತಿದ್ದಾರೆ ಎನ್ನುವ ಶಂಕೆಯಿಂದ ಐವರನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಬಿಹಾರದ ಪುರ್ನಿಯಾ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ಪ್ರದೇಶದ ಟೆಟ್ಗಾಮಾ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಬಾಬು ಲಾಲ್ ಒರಾನ್, ಸೀತಾ ದೇವಿ, ಮಂಜೀತ್ ಒರಾನ್, ರಾನಿಯಾ ದೇವಿ ಮತ್ತು ತಪ್ಟೋ ಮೊಸಾಮತ್ ಎಂದು ಗುರುತಿಸಲಾಗಿದೆ.

ಒಂದೇ ಕುಟುಂಬದ ಐವರನ್ನು ಸುಟ್ಟು ಹಾಕಿದ ಗ್ರಾಮಸ್ಥರು

Profile Ramesh B Jul 7, 2025 11:54 PM

ಪಾಟ್ನಾ: ದೇಶದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಒಂದೇ ಕುಟುಂಬದ ಐವರು ಬಲಿಯಾಗಿದ್ದಾರೆ. ವಾಮಾಚಾರ (Black Magic) ನಡೆಸುತ್ತಿದ್ದಾರೆ ಎನ್ನುವ ಶಂಕೆಯಿಂದ ಐವರನ್ನು ಜೀವಂತವಾಗಿ ಸುಟ್ಟುಹಾಕಿರುವ ಈ ಭೀಬತ್ಸ ಘಟನೆ ಬಿಹಾರದ ಪುರ್ನಿಯಾ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ಪ್ರದೇಶದ ಟೆಟ್ಗಾಮಾ ಗ್ರಾಮದಲ್ಲಿ (Tetgama Village) ನಡೆದಿದೆ. ʼʼಭಾನುವಾರ (ಜು. 6) ರಾತ್ರಿ 50 ಮಂದಿಯನ್ನು ಒಳಗೊಂಡ ಗ್ರಾಮಸ್ಥರ ಗುಂಪು ಸೀತಾ ದೇವಿ ಅವರ ಮನೆಗೆ ನುಗ್ಗಿ ಅವರ ಕುಟುಂಬಸ್ಥರನ್ನು ಕೊಲೆ ಮಾಡಿದೆ. ಸೀತಾ ದೇವಿ ಮನೆಯವರು ವಾಮಾಚಾರ ನಡೆಸುತ್ತಿದ್ದಾರೆ ಎನ್ನುವ ಶಂಕೆಯೇ ಇದಕ್ಕೆ ಕಾರಣʼʼ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ತಡರಾತ್ರಿ ಟೆಟ್ಗಾಮಾ ಗ್ರಾಮದಲ್ಲಿ ಎಲ್ಲರೂ ಮಲಗಿದ್ದ ವೇಳೆ ಈ ದಾಳಿ ನಡೆದಿದೆ. 50ಕ್ಕೂ ಹೆಚ್ಚು ಜನರಿದ್ದ ಗುಂಪೊಂದು ಸೀತಾ ದೇವಿಯ ಮನೆಗೆ ನುಗ್ಗಿ ಅವರು 'ಮಾಟಮಂತ್ರ' ಮಾಡುತ್ತಿದ್ದಾರೆಂದು ಆರೋಪಿಸಿತು. ʼʼಮನೆಗೆ ನುಗ್ಗಿದ ಜನರ ಗುಂಪು ಎಲ್ಲರನ್ನೂ ಥಳಿಸಲು ಪ್ರಾರಂಭಿಸಿತು. ಇದರಿಂದ ಗಾಬರಿಬಿದ್ದು ಅವರಿಂದ ತಪ್ಪಿಸಿಕೊಂಡು ಓಡಿ ಹೋಗಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದೆʼʼ ಎಂದು ಸೀತಾ ದೇವಿ ಅವರ 16 ವರ್ಷದ ಪುತ್ರ ಸೋನು ಕುಮಾರ್ ಘಟನೆಯನ್ನು ವಿವರಿಸಿದ್ದಾರೆ.



ಈ ಸುದ್ದಿಯನ್ನೂ ಓದಿ: Black Magic: ಸ್ನೇಹಮಯಿ ಕೃಷ್ಣ ಮೇಲೆ ವಾಮಾಚಾರ: ಇಬ್ಬರು ಆರೆಸ್ಟ್, ಪ್ರಸಾದ್‌ ಅತ್ತಾವರ ಮೇಲೆ ಕೇಸ್

ʼʼಬಿದಿರು ದೊಣ್ಣೆಯನ್ನು ಹಿಡಿದುಕೊಂಡು ಬಂದ ಜನರ ಗುಂಪು ಮನೆಯವರಿಗೆಲ್ಲ ಥಳಿಸತೊಡಗಿತು. ಅವರು ತಾಯಿಯನ್ನು ಮಾಟಗಾತಿ ಎಂದು ಕರೆದರು. ಗ್ರಾಮಸ್ಥರ ದಾಳಿಯಿಂದ ತಾಯಿ, ತಂದೆ, ಸಹೋದರ ಮತ್ತು ಅತ್ತಿಗೆ ಮೃತಪಟ್ಟಿದ್ದಾರೆʼʼ ಎಂದು ಸೋನು ಕುಮಾರ್ ತಿಳಿಸಿದ್ದಾನೆ. ಮೃತರನ್ನು ಬಾಬು ಲಾಲ್ ಒರಾನ್, ಸೀತಾ ದೇವಿ, ಮಂಜೀತ್ ಒರಾನ್, ರಾನಿಯಾ ದೇವಿ ಮತ್ತು ತಪ್ಟೋ ಮೊಸಾಮತ್ ಎಂದು ಗುರುತಿಸಲಾಗಿದೆ. ಇವರನ್ನು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ.

ಸೋನು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿದ್ದಾಗಿ ಪೂರ್ನಿಯಾ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಪಂಕಜ್ ಕುಮಾರ್ ಶರ್ಮಾ ತಿಳಿಸಿದ್ದಾರೆ. ʼʼಮಾಟ ಮಾಡುತ್ತಿದ್ದಾರೆ ಎಂಬ ಅನುಮಾನದ ಮೇಲೆ ತಮ್ಮ ಕುಟುಂಬ ಸದಸ್ಯರನ್ನು ಹೊಡೆದು ಸುಟ್ಟುಹಾಕಲಾಯಿತು ಮತ್ತು ಅವರ ಶವಗಳನ್ನು ಎಸೆಯಲಾಗಿದೆ ಎಂದು ಸೋನು ಕುಮಾರ್ ಹೇಳಿದ್ದಾನೆ. ನಾವು ಶವಗಳನ್ನು ವಶಪಡಿಸಿಕೊಂಡಿದ್ದೇವೆ" ಎಂದು ಪಂಕಜ್ ಕುಮಾರ್ ಶರ್ಮಾ ವಿವರಿಸಿದ್ದಾರೆ.

ಇತ್ತೀಚೆಗೆ ರಾಮದೇವ್ ಒರಾನ್ ಎಂಬ ಗ್ರಾಮಸ್ಥನ ಪುತ್ರನೊಬ್ಬ ಮೃತಪಟ್ಟಿದ್ದ. ಅಲ್ಲದೆ ಮತ್ತೊಬ್ಬ ತೀವ್ರ ಅಸ್ವಸ್ಥಗೊಂಡಿದ್ದ. ಇದಕ್ಕೆ ಸೀತಾ ದೇವಿ ನಡೆಸಿದ ಮಾಟವೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

"ರಾಮ್‌ದೇವ್ ಒರಾನ್ ಅವರ ಮಕ್ಕಳ ಪೈಕಿ ಓರ್ವ 3 ದಿನಗಳ ಹಿಂದೆ ನಿಧನ ಹೊಂದಿದ್ದ. ಜತೆಗೆ ಮತ್ತೊಬ್ಬ ಮಗ ಅಸ್ವಸ್ಥಗೊಂಡಿದ್ದ. ಇದಕ್ಕೆ ಸೀತಾ ದೇವಿ ಮಾಡುತ್ತಿದ್ದ ಮಾಟಮಂತ್ರವೇ ಕಾರಣ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು. ಇದೇ ಕಾರಣಕ್ಕೆ ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿ ಇಲ್ಲಿಯವರೆಗೆ ಇಬ್ಬರನ್ನು ಬಂಧಿಸಲಾಗಿದೆ.