ಪತಿಯ ಸರ್ಕಾರಿ ಉದ್ಯೋಗ ಪತ್ನಿಗೆ ಸಿಕ್ಕಿದ್ದಕ್ಕೆ ಕೋಪ; ಸೊಸೆಯನ್ನೇ ಹತ್ಯೆಗೈದ ಅತ್ತೆ!
Crime News: ಪತಿಯ ಸರ್ಕಾರಿ ಉದ್ಯೋಗ ಪತ್ನಿಗೆ ವರ್ಗಾವಣೆಗೊಂಡಿದ್ದಕ್ಕೆ ಕೋಪಗೊಂಡ ಅತ್ತೆ, ಸೊಸೆಯನ್ನೇ ಹತ್ಯೆಗೈದಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ರೈಲ್ವೆ ಉದ್ಯೋಗ ಹಾಗೂ ಗ್ರಾಚ್ಯುಟಿ ನಿಧಿ ವಿಚಾರದಲ್ಲಿ ಕೋಪಗೊಂಡ 60 ವರ್ಷದ ಅತ್ತೆ, ತನ್ನ ಸೊಸೆಯನ್ನೇ ಹತ್ಯೆ ಮಾಡಿದ್ದಾಳೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ -
ಥಾಣೆ: ಪುತ್ರನ ಸಾವಿನ ನಂತರ ಆತನ ಸರ್ಕಾರಿ ಕೆಲಸ ಅನುಕಂಪದ ಆಧಾರದ ಮೇಲೆ ಪತ್ನಿಗೆ ಸಿಕ್ಕಿದೆ. ರೈಲ್ವೆ ಉದ್ಯೋಗ ಮತ್ತು ಗ್ರಾಚ್ಯುಟಿ ನಿಧಿಗೆ ಸಂಬಂಧಿಸಿದಂತೆ ಕೋಪಗೊಂಡ ಆಕೆಯ ಅತ್ತೆ 60 ವರ್ಷದ ಮಹಿಳೆ ತನ್ನ ಸೊಸೆಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharashtra) ಥಾಣೆ ಜಿಲ್ಲೆಯಲ್ಲಿ ನಡೆದಿದೆ (Crime News).
ಹೊಸ ವರ್ಷದ ಮೊದಲ ದಿನದಂದು, ಕಲ್ಯಾಣ್ ಪ್ರದೇಶದ ವಾಲ್ಧುನಿ ಸೇತುವೆಯ ಬಳಿ ತಲೆ ಮತ್ತು ಮುಖಕ್ಕೆ ತೀವ್ರ ಗಾಯಗಳಾಗಿ ಬಿದ್ದಿರುವ ಮಹಿಳೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಕೂಡಲೇ ಆ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಆಕೆ ಈಗಾಗಲೇ ಮೃತಪಟ್ಟಿದ್ದಾಳೆ ಎಂದು ಹೇಳಿದರು. ಆರಂಭದಲ್ಲಿ ಮಹಾತ್ಮ ಫುಲೆ ಚೌಕ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಲಾಯಿತು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.
ಯಲ್ಲಾಪುರ ರಂಜಿತಾ ಹತ್ಯೆ ಪ್ರಕರಣ; ಆರೋಪಿ ರಫೀಕ್ ಶವ ಕಾಡಿನಲ್ಲಿ ಪತ್ತೆ!
ಲತಾಬಾಯಿ ನಾಥ ಗಂಗುರ್ಡೆ ಎಂಬ ಮಹಿಳೆಯು ತಮ್ಮ ಸೊಸೆ ರೂಪಾಲಿ ವಿಲಾಸ್ ಗಂಗುರ್ಡೆ (35) ಬೆಳಗ್ಗೆ 8 ಗಂಟೆಯಿಂದ ಕಾಣೆಯಾಗಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದರು. ಆ ಬಳಿಕ ಪೊಲೀಸರು ತಮ್ಮ ತನಿಖೆಯನ್ನು ಪ್ರಾರಂಭಿಸಿದರು. ನಂತರ ವಾಲ್ಧುನಿ ಸೇತುವೆಯ ಬಳಿ ಪತ್ತೆಯಾದ ಮಹಿಳೆ ರೂಪಾಲಿ ಎಂದು ಅವರು ಗುರುತಿಸಿದರು.
ಆದರೆ, ಇನ್ಸ್‌ಪೆಕ್ಟರ್ ವಿಜಯ್ ನಾಯಕ್ ನೇತೃತ್ವದ ಅಪರಾಧ ವಿಭಾಗದ ತಂಡ ಆಕೆಯನ್ನು ಪ್ರಶ್ನಿಸಿದಾಗ ನಾಪತ್ತೆ ಕಥೆಗೆ ತಿರುವು ಸಿಕ್ಕಿತು. ರೂಪಾಲಿ ಅವರ ಪತಿಯು ರೈಲ್ವೆ ಉದ್ಯೋಗಿದ್ದರು. ಅವರು ಸೆಪ್ಟೆಂಬರ್ 2025 ರಲ್ಲಿ ನಿಧನರಾದರು. ಅವರ ಮರಣದ ನಂತರ, ರೂಪಾಲಿ ಅವರು ಗ್ರಾಚ್ಯುಟಿ ಹಣ 9-10 ಲಕ್ಷ ರೂ.ಗಳನ್ನು ಪಡೆದಿದ್ದರು. ಅದನ್ನು ಲತಾಬಾಯಿ ತನಗೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ವಿಲಾಸ್ ಅವರ ರೈಲ್ವೆ ಕೆಲಸದ ಬಗ್ಗೆ ಲತಾಬಾಯಿ ಮತ್ತು ರೂಪಾಲಿ ನಡುವೆ ವಿವಾದ ಉಂಟಾಗಿತ್ತು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಲತಾಬಾಯಿ ತಮ್ಮ 15 ವರ್ಷದ ಮೊಮ್ಮಗನನ್ನು ಅನುಕಂಪದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬೇಕೆಂದು ಬಯಸಿದ್ದರು. ಆದರೆ ರೂಪಾಲಿ ಸ್ವತಃ ಆ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು ಎಂದು ಅವರು ಹೇಳಿದರು.
ನಂತರ ಲತಾಬಾಯಿ ತನ್ನ ಸ್ನೇಹಿತ ಜಗದೀಶ್ ಮಹಾದೇವ್ ಮ್ಹಾತ್ರೆ (67) ಜೊತೆ ಸೇರಿ ರೂಪಾಲಿಯನ್ನು ಕೊಲೆ ಮಾಡಲು ಸಂಚು ರೂಪಿಸಿದರು. ಹಿಂದಿನ ರಾತ್ರಿ, ಇಬ್ಬರೂ ರೂಪಾಲಿ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ, ಆಕೆಯನ್ನು ಹತ್ಯೆ ಮಾಡಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳು ರಕ್ತದ ಕಲೆಗಳನ್ನು ಒರೆಸಿ, ಮೃತ ರೂಪಾಲಿಯ ರಕ್ತದಿಂದ ತೊಯ್ದ ಬಟ್ಟೆಗಳನ್ನು ಬದಲಾಯಿಸಿ, ಸೇತುವೆಯ ಬಳಿ ಎಸೆದು ಹೋಗಿದ್ದಾರೆ ಎಂದು ಕಲ್ಯಾಣ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕಲ್ಯಾಣ್ ಗೆಟೆ ಹೇಳಿದ್ದಾರೆ. ಆರೋಪಿಗಳು ತಾವು ಕೊಲೆ ಮಾಡಿದ ಮಹಿಳೆಯ ನಾಪತ್ತೆ ದೂರು ದಾಖಲಿಸುವ ಮೂಲಕ ತನಿಖೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರು. ನಮ್ಮ ತಂಡವು 24 ಗಂಟೆಗಳ ಒಳಗೆ ಪ್ರಕರಣವನ್ನು ಭೇದಿಸಿತು ಎಂದು ಅವರು ಹೇಳಿದರು.
ಲತಾಬಾಯಿ ಮತ್ತು ಮ್ಹಾತ್ರೆ ಅವರನ್ನು ಕೊಲೆ ಮತ್ತು ಸಾಕ್ಷ್ಯಗಳ ನಾಶಕ್ಕೆ ಕಾರಣವಾದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.