ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಬಿಜೆಪಿ ಲೀಡರ್‌ ಹತ್ಯೆ, ವಿಷಯ ತಿಳಿದು ಆರೋಪಿಯ ತಂದೆ ಆತ್ಮಹತ್ಯೆ

Madhya Pradesh: ಕಟ್ನಿ ಬಿಜೆಪಿ ಪಿಚಡಾ ಮೋರ್ಚಾ ಮಂಡಲ ಅಧ್ಯಕ್ಷೆ 38 ವರ್ಷದ ನೀಲು (ನೀಲೇಶ್) ರಜಕ್, ಕೈಮೋರ್ ಪಟ್ಟಣದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ತಲೆ ಮತ್ತು ಎದೆಗೆ ಗುಂಡು ಹಾರಿಸಿದ್ದಾರೆ.

ಬಿಜೆಪಿ ಲೀಡರ್‌ ಹತ್ಯೆ, ವಿಷಯ ತಿಳಿದು ಆರೋಪಿಯ ತಂದೆ ಆತ್ಮಹತ್ಯೆ

ಮಧ್ಯಪ್ರದೇಶದಲ್ಲಿ ಬಿಜೆಪಿ ಲೀಡರ್‌ ಹತ್ಯೆ -

ಹರೀಶ್‌ ಕೇರ ಹರೀಶ್‌ ಕೇರ Oct 29, 2025 9:10 AM

ಭೋಪಾಲ್‌, ಅ.29: ಮಧ್ಯಪ್ರದೇಶದ (Madhya Pradesh) ಕಟ್ನಿ ಜಿಲ್ಲೆಯ ಕೈಮೋರ್ ರೆಸ್ಟ್ ಹೌಸ್ ಮುಂದೆ ಸೋಮವಾರ ಬೆಳಿಗ್ಗೆ ಇಬ್ಬರು ದುಷ್ಕರ್ಮಿಗಳು ಬಿಜೆಪಿ ಮುಖಂಡ (BJP leader killed) ನಿಲೇಶ್ ರಾಜಕ್ ಎಂಬವರನ್ನು ಗುಂಡಿಕ್ಕಿ (Murder case) ಕೊಂದಿದ್ದಾರೆ. ಇದಾದ ನಂತರ ಆರೋಪಿಗಳಲ್ಲಿ ಒಬ್ಬನ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿಲೇಶ್ ರಜಕ್ ಎಂಬ ವ್ಯಕ್ತಿಯನ್ನು ಇಬ್ಬರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ವಿಶ್ವಕರ್ಮ ತಿಳಿಸಿದ್ದಾರೆ.

“ಕೈಮೋರ್ ಪೊಲೀಸ್ ಠಾಣೆ ಪ್ರದೇಶದಲ್ಲಿ, ಕೈಮೋರ್ ರೆಸ್ಟ್ ಹೌಸ್ ಮುಂದೆ ಇಂದು ದುರಂತ ಘಟನೆ ಸಂಭವಿಸಿದೆ, ನಿಲೇಶ್ ರಾಜಕ್ ಅವರನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸರು ಕೂಡಲೇ ಪ್ರಕರಣ ದಾಖಲಿಸಿಕೊಂಡಿದ್ದು, ಶಂಕಿತರನ್ನು ಗುರುತಿಸಿ ಬಂಧಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಶಂಕಿತರನ್ನು ಗುರುತಿಸಲಾಗಿದೆ ಮತ್ತು ಅವರನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ. ಅವರನ್ನು ಶೀಘ್ರದಲ್ಲೇ ವಶಕ್ಕೆ ಪಡೆಯಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಹೇಳಿದರು.

ಘಟನೆ ನಡೆದ ತುಸು ಸಮಯದ ಬಳಿಕ, ಆರೋಪಿಗಳಲ್ಲಿ ಒಬ್ಬ ಎಂದು ಗುರುತಿಸಲ್ಪಟ್ಟವನ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎಸ್ಪಿ ವಿಶ್ವಕರ್ಮ ತಿಳಿಸಿದ್ದಾರೆ. ಆರೋಪಿಯ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ದೇಹ ಮುಂದಿನ ಕಾನೂನು ಪ್ರಕ್ರಿಯೆಗೆ ಒಳಗಾಗುತ್ತಿದೆ ಎಂದು ಅವರು ಹೇಳಿದರು. ಆರೋಪಿಗಳನ್ನು ಪ್ರಿನ್ಸ್ (30) ಮತ್ತು 33 ವರ್ಷದ ಅಕ್ರಮ್ ಖಾನ್ ಎಂದು ಗುರುತಿಸಲಾಗಿದೆ. ಪ್ರಿನ್ಸ್ ತಂದೆ ನೆಲ್ಸನ್ ಜೋಸೆಫ್, ತಮ್ಮ ಮಗ ಕೊಲೆಯಲ್ಲಿ ಭಾಗಿಯಾಗಿದ್ದಾನೆಂದು ತಿಳಿದ ನಂತರ ಆತ್ಮಹತ್ಯೆ ಮಾಡಿಕೊಂಡರು.

ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ; ಆರೋಪಿ ಭಾರತಕ್ಕೆ ಪರಾರಿಯಾಗಿರುವ ಶಂಕೆ

ಕಟ್ನಿ ಬಿಜೆಪಿ ಪಿಚಡಾ ಮೋರ್ಚಾ ಮಂಡಲ ಅಧ್ಯಕ್ಷೆ 38 ವರ್ಷದ ನೀಲು (ನೀಲೇಶ್) ರಜಕ್, ಕೈಮೋರ್ ಪಟ್ಟಣದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರ ತಲೆ ಮತ್ತು ಎದೆಗೆ ಗುಂಡು ಹಾರಿಸಿದ್ದಾರೆ. ವೈರಲ್‌ ಆಗಿರುವ ವೀಡಿಯೊದಲ್ಲಿ, ಇಬ್ಬರು ಮುಸುಕುಧಾರಿಗಳು ಗುಂಡು ಹಾರಿಸುತ್ತಿರುವುದನ್ನು ತೋರಿಸಲಾಗಿದೆ.

ಹತ್ಯೆಯಾದ ಕೆಲವೇ ನಿಮಿಷಗಳಲ್ಲಿ, ನೂರಾರು ನಿವಾಸಿಗಳು ಬೀದಿಗಳಿಗೆ ಬಂದು, ಕೊಲೆಗಾರರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ರಜಕ್ ಅವರ ಕುಟುಂಬ ಮತ್ತು ಬೆಂಬಲಿಗರು ವಿಜಯರಾಘವಗಢ ಸರ್ಕಾರಿ ಆಸ್ಪತ್ರೆಯ ಮುಂದೆ ರಸ್ತೆಗಳನ್ನು ತಡೆದು, ನ್ಯಾಯ ಸಿಗುವವರೆಗೆ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡಲು ನಿರಾಕರಿಸಿದರು. ಪ್ರತಿಭಟನೆ ಆರು ಗಂಟೆಗಳಿಗೂ ಹೆಚ್ಚು ಕಾಲ ನಡೆಯಿತು. ಬಿಜೆಪಿ ಶಾಸಕ ಸಂಜಯ್ ಪಾಠಕ್ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ದೀಪಕ್ ಟಂಡನ್ ಸೋನಿ ಸಹ ಭಾಗವಹಿಸಿದ್ದರು.

ಲವ್‌ ಜಿಹಾದ್‌ ಕೋನ

ಇದೀಗ ಪ್ರಕರಣ ಕೋಮು ಬಣ್ಣ ಪಡೆದಿದೆ. 'ಲವ್ ಜಿಹಾದ್' ಪ್ರಕರಣ ಒಂದರಲ್ಲಿ ರಜಕ್ ಮಧ್ಯಪ್ರವೇಶಿಸಿದ್ದರಿಂದ ಅವರನ್ನು ಕೊಲೆ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಸಂಜಯ್ ಪಾಠಕ್ ಆರೋಪಿಸಿದ್ದಾರೆ. "ಶಾಲೆಗೆ ಹೋಗುವಾಗ ಒಬ್ಬ ವ್ಯಕ್ತಿ ಕಿರುಕುಳ ನೀಡುತ್ತಿದ್ದಾನೆ ಎಂದು ಹುಡುಗಿಯೊಬ್ಬಳು ದೂರು ನೀಡಿದ್ದಳು. ನೀಲು ಮಧ್ಯಪ್ರವೇಶಿಸಿದಾಗ, ಆ ವ್ಯಕ್ತಿ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದ. ನೀಲು ಪೊಲೀಸ್ ಠಾಣೆಗೆ ಹೋದಾಗ, ಕಿರುಕುಳ ನೀಡಿದವನ ಬದಲು ನೀಲು ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಲವ್‌ ಜಿಹಾದ್‌ ಆರೋಪಿ ನೀಲುಗೆ, 'ನಾನು ನಿನಗೆ ರಸ್ತೆಯ ಮಧ್ಯದಲ್ಲಿ ಗುಂಡು ಹೊಡೆಯುತ್ತೇನೆ' ಎಂದಿದ್ದ. ಇದಾಗಿ ಒಂದೂವರೆ ತಿಂಗಳಲ್ಲಿ ಈ ಘಟನೆ ನಡೆದಿದೆ" ಎಂದು ಪಾಠಕ್ ಆರೋಪಿಸಿದ್ದಾರೆ.