ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Chandigarh Murder: ಆಪ್‌ ನಾಯಕನ ಪತ್ನಿ ಕೊಲೆಗೆ ಬಿಗ್‌ ಟ್ವಿಸ್ಟ್‌; ಗರ್ಲ್‌ಫ್ರೆಂಡ್‌ ಜೊತೆ ಸೇರಿ ಪತಿಯೇ ಸುಪಾರಿ ಕೊಟ್ಟ!

ಆಪ್‌ ನಾಯಕ ಅನೋಖ್ ಮಿತ್ತಲ್ ಪತ್ನಿಯನ್ನು ಇತ್ತೀಚೆಗೆ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು. ಇದೀಗ ಆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ ಲಭಿಸಿದ್ದು, ಅನೋಖ್​ ಮಿತ್ತಲ್ ತನ್ನ ಪತ್ನಿಯ ಹತ್ಯೆಗೆ ಸುಪಾರಿ ನೀಡಿದ್ದ ಎನ್ನುವ ನಿಜಾಂಶ ಬೆಳಕಿಗೆ ಬಂದಿದೆ. ವಿವಾಹೇತರ ಸಂಬಂಧದಿಂದಾಗಿ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.

ಆಪ್‌ ಲೀಡರ್‌ ಪತ್ನಿ ಕೊಲೆ ಕೇಸ್‌ನಲ್ಲಿ ಬಿಗ್‌ ಟ್ವಿಸ್ಟ್‌! ಪತಿಯೇ ಕೊಲೆಗಾರ

ಕೊಲೆ ಅಪರಾಧಿಗಳು

Profile Vishakha Bhat Feb 18, 2025 10:00 AM

ಚಂಡೀಗಢ: ಆಮ್ ಆದ್ಮಿ ಪಕ್ಷದ ನಾಯಕ ಅನೋಖ್ ಮಿತ್ತಲ್ ಪತ್ನಿಯನ್ನು ಇತ್ತೀಚೆಗೆ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದರು. ಜತೆಗೆ ದರೋಡೆ ಮಾಡಲಾಗಿದೆ ಎಂದು ದೂರು ದಾಖಲಿಸಲಾಗಿತ್ತು. ಆದರೆ ಇದೀಗ ಪ್ರಕರಣ ಬೇರೊಂದು ತಿರುವು ಪಡೆದುಕೊಂಡಿದ್ದು, ಅನೋಖ್​ ಮಿತ್ತಲ್ ತನ್ನ ಪತ್ನಿಯ ಹತ್ಯೆಗೆ ಸುಪಾರಿ ನೀಡಿದ್ದ ಎನ್ನುವ ನಿಜಾಂಶ ಬೆಳಕಿಗೆ ಬಂದಿದೆ. ಸೋಮವಾರ ಲುಧಿಯಾನ ಪೊಲೀಸರು ಮಿತ್ತಲ್‌ ಮತ್ತು ಆತನ ಗೆಳತಿಯನ್ನು ಬಂಧಿಸಿದ್ದಾರೆ. ಕೊಲೆ ಮಾಡಲು ಕೆಲವರನ್ನು ನೇಮಿಸಿಕೊಂಡಿದ್ದ. ಮಿತ್ತಲ್, ಸ್ನೇಹಿತೆ ಸೇರಿ 6 ಜನರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಒಬ್ಬ ವ್ಯಕ್ತಿ ತಲೆ ಮರೆಸಿಕೊಂಡಿದ್ದಾನೆ.

ಲುಧಿಯಾನ ಪೊಲೀಸ್ ಆಯುಕ್ತ ಕುಲದೀಪ್ ಸಿಂಗ್ ಚಾಹಲ್ ಮಾತನಾಡಿ, ಮಿತ್ತಲ್ ತನ್ನ ತನ್ನ ಪ್ರೇಯಸಿ ಸಹಾಯದಿಂದ ಪತ್ನಿ ಲಿಪ್ಸಿಯನ್ನು ಕೊಲೆ ಮಾಡಲು ಸುಪಾರಿ ನೀಡಿ ಕೊಲೆಗಾರರನ್ನು ನೇಮಿಸಿಕೊಂಡಿದ್ದ ಎಂದು ಅವರು ಹೇಳಿದ್ದಾರೆ. ಚಾಹಲ್ ಅವರ ಪ್ರಕಾರ, ಮಿತ್ತಲ್, ಪತ್ನಿಯನ್ನು ಕೊಲ್ಲಲು ಹಂತಕರಿಗೆ 2.5 ಲಕ್ಷ ರೂ.ಗಳನ್ನು ನೀಡಲು ಒಪ್ಪಿಕೊಂಡಿದ್ದ, ಈಗಾಗಲೇ 50 ಸಾವಿರ ರೂ. ಮುಂಗಡವಾಗಿ ನೀಡಿದ್ದ, ಉಳಿದ 2 ಲಕ್ಷ ರೂ. ಕೊಲೆಯ ಬಳಿಕ ನೀಡುತ್ತೇನೆ ಎಂದು ಹೇಳಿದ್ದ.

ಮಿತ್ತಲ್ ಈ ಹಿಂದೆ ಎರಡು ಬಾರಿ ಆಕೆಯ ಕೊಲೆಗೆ ಪ್ರಯತ್ನಿಸಿದ್ದ ಎಂದು ತಿಳಿದು ಬಂದಿದೆ. ಆತ ವಿವಾಹೇತರ ಸಂಬಂಧ ಹೊಂದಿದ್ದು, ಪತ್ನಿಗೆ ತಿಳಿದಿತ್ತು. ಆಕೆ ಎಲ್ಲರ ಬಳಿ ಹೇಳಬಹುದು ಎಂಬ ಭಯದಿಂದಾಗಿ ಈ ಕೃತ್ಯ ನಡೆಸಿದ್ದಾನೆ. ಅಪರಾಧಕ್ಕೆ ಬಳಸಲಾದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಅಪರಾಧ ನಡೆದ ಸ್ಥಳದಲ್ಲಿ ಮಿತ್ತಲ್ ಪ್ರೇಯಸಿ ಅಲ್ಲಿಲ್ಲದಿದ್ದರೂ, ಯೋಜನೆ ಮತ್ತು ಪಿತೂರಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾಳೆ ಎಂದು ಆಯುಕ್ತರು ಹೇಳಿದರು.

ಈ ಸುದ್ದಿಯನ್ನೂ ಓದಿ: Kalaburagi News: ಮನೆ ಕೆಲಸದಾಕೆ ಜತೆ ಸಲುಗೆ; ಪತಿ ಕಾಲು ಮುರಿಯಲು ಸುಪಾರಿ ಕೊಟ್ಟ ಪತ್ನಿ!

ಭಾನುವಾರ ಅನೋಖ್​ ಮಿತ್ತಲ್ ನಾಟಕ ನಡೆಸಿದ್ದು, ತಾನು ತನ್ನ ಪತ್ನಿ ಜತೆ ರೆಸ್ಟೋರೆಂಟ್​ನಲ್ಲಿ ಊಟ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದೆವು, ರೂರ್ಕಾ ರಸ್ತೆಯ ಬಳಿ ಕಾರನ್ನು ನಿಲ್ಲಿಸಿದಾಗ ಇನ್ನೊಂದು ವಾಹನದಲ್ಲಿ ಬಂದ ಐದಾರು ಮಂದಿ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿದ್ದರು, ಬಳಿಕ ಯಾವುದೋ ವಸ್ತುವಿನಿಂದ ನಾನು ಪ್ರಜ್ಞೆ ಕಳೆದುಕೊಂಡಿದ್ದೆ ಎಂದು ಹೇಳಿದ್ದ. ಸುಮಾರು 20 ನಿಮಿಷಗಳ ನಂತರ ಪ್ರಜ್ಞೆ ಬಂದಾಗ, ತನ್ನ ಪತ್ನಿ ಗಂಭೀರ ಗಾಯಗಳೊಂದಿಗೆ ರಸ್ತೆಯಲ್ಲಿ ಬಿದ್ದಿರುವುದನ್ನು ನೋಡಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದೆ ಅಷ್ಟರಲ್ಲಾಗಲೇ ಪತ್ನಿ ಮೃತಪಟ್ಟಿದ್ದಳು ಎಂದು ಹೇಳಿದ್ದ. ದಾಳಿಕೋರರು ತಮ್ಮ ಕಾರು ಮತ್ತು ಪತ್ನಿಯ ಆಭರಣಗಳನ್ನು ಕದ್ದಿದ್ದಾರೆ ಎಂದು ಕಥೆ ಕಟ್ಟಿದ್ದ. ಇದೀಗ ಸತ್ಯಾಂಶ ಹೊರ ಬಿದ್ದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.