ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಆರ್‌ಎಸ್‌ಎಸ್ ಕಚೇರಿ ಮೇಲೆ ದಾಳಿ ನಡೆಸಿದ ಆರೋಪಿ ಪರಾರಿಗೆ ಯತ್ನ; ಪೊಲೀಸರಿಂದ ಗುಂಡೇಟು

Accused Attempts to Escape: ಝಾರ್ಖಂಡ್‌ನ ರಾಂಚಿಯಲ್ಲಿ ಆರ್‌ಎಸ್‌ಎಸ್ ಕಚೇರಿಯ ಮೇಲೆ ನಡೆದಿದ್ದ ಪೆಟ್ರೋಲ್ ಬಾಂಬ್ ದಾಳಿಗೆ ಸಂಬಂಧಿಸಿದಂತೆ ಬಂಧಿಸಲಾದ ಆರೋಪಿಗಳಲ್ಲಿ ಒಬ್ಬ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರ್‌ಎಸ್‌ಎಸ್ ಕಚೇರಿ ಮೇಲೆ ದಾಳಿ ನಡೆಸಿದ ಆರೋಪಿ ಪರಾರಿಗೆ ಯತ್ನ

ರಾಂಚಿ, ಜೂ.18: ಝಾರ್ಖಂಡ್‌ನ ರಾಂಚಿ (Ranchi) ಯಲ್ಲಿ ಆರ್‌ಎಸ್‌ಎಸ್ ಕಚೇರಿಯ ಮೇಲೆ ನಡೆದಿದ್ದ ಪೆಟ್ರೋಲ್ ಬಾಂಬ್ ದಾಳಿಗೆ (Petro bomb attack) ಸಂಬಂಧಿಸಿದಂತೆ ಬಂಧಿಸಲಾದ ಆರೋಪಿಗಳಲ್ಲಿ ಒಬ್ಬ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗಾಯಗೊಂಡಿದ್ದಾನೆ. ಜೂನ್ 16 ರಂದು ರಾಂಚಿಯ ಚುಟಿಯಾ ಪ್ರದೇಶದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಚೇರಿಯ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಬಂಧಿಸಲಾದ ಮೂವರಲ್ಲಿ ಸೈಫಿ ಅನ್ಸಾರಿ ಅಲಿಯಾಸ್ ರೋಹಿತ್ ಎಂದು ಗುರುತಿಸಲಾದ ಆರೋಪಿಯೂ ಸೇರಿದ್ದಾನೆ. ಇತರ ಇಬ್ಬರು ಆರೋಪಿಗಳನ್ನು ಅಮನ್ ಅನ್ಸಾರಿ ಮತ್ತು ಸಯಾಮ್ ಸುಜನ್ ಎಂದು ಗುರುತಿಸಲಾಗಿದೆ.

ಆರೋಪಿ ಸೈಫಿಯನ್ನು ಕೊಟ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಿತ್ತು. ಈ ವೇಳೆ ಸ್ನಾನಗೃಹಕ್ಕೆ ಹೋಗುವ ನೆಪದಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪೊಲೀಸ್ ತಂಡವು ತಕ್ಷಣ ಅವನನ್ನು ಬೆನ್ನಟ್ಟಿ ನಂತರ ಮಂಡಲ್ ಟೋಲ್ ಪ್ಲಾಜಾ ಪ್ರದೇಶದ ಬಳಿ ಅವನನ್ನು ತಡೆದಿದೆ. ಕಾರ್ಯಾಚರಣೆಯ ಸಮಯದಲ್ಲಿ, ಆರೋಪಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ. ಈ ವೇಳೆ ನಡೆದ ಪ್ರತಿದಾಳಿಯಲ್ಲಿ, ಆರೋಪಿಗೆ ಗುಂಡೇಟಿನಿಂದ ಗಾಯವಾಯಿತು. ನಂತರ ಆತನನ್ನು ವಶಕ್ಕೆ ತೆಗೆದುಕೊಂಡು ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಯಿತು.

ಈ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಅಮನ್ ಅನ್ಸಾರಿ ಎಂದು ಶಂಕಿಸಲಾಗಿದ್ದು, ಪಿತೂರಿಯೊಂದಿಗೆ ಸಂಬಂಧ ಹೊಂದಿರುವ ನಿರ್ವಾಹಕರೊಂದಿಗೆ ನೇರ ಸಂಪರ್ಕದಲ್ಲಿದ್ದನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಜೂನ್ 16 ರಂದು ರಾತ್ರಿ 11.35 ರ ಸುಮಾರಿಗೆ ಈ ದಾಳಿ ನಡೆದಿದ್ದು, ಆರ್‌ಎಸ್‌ಎಸ್ ಕಚೇರಿಯ ಮೇಲೆ ಎರಡು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯಲಾಗಿದೆ ಎನ್ನಲಾಗಿದೆ. ಒಂದು ಸಾಧನವನ್ನು ಮುಖ್ಯ ದ್ವಾರದ ಹೊರಗೆ ವಶಪಡಿಸಿಕೊಳ್ಳಲಾಗಿದ್ದು, ಇನ್ನೊಂದು ಸಾಧನವನ್ನು ಕಟ್ಟಡದ ಛಾವಣಿಯ ಮೇಲೆ ಎಸೆಯಲಾಗಿದೆ. ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಎಂದು ವರದಿಯಾಗಿದೆ.

ಆರ್‌ಎಸ್‌ಎಸ್ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೂವರು ಆರೋಪಿಗಳು ಜಾರ್ಖಂಡ್ ನಿವಾಸಿಗಳು ಎಂದು ತಿಳಿದುಬಂದಿದೆ. ಒಬ್ಬ ರಾಂಚಿಯವನಾಗಿದ್ದರೆ, ಇನ್ನಿಬ್ಬರು ಲೋಹರ್ದಗಾ ಜಿಲ್ಲೆಗೆ ಸೇರಿದವರು. ಶಂಕಿತರನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೇಮಕ ಮಾಡಿಕೊಳ್ಳಲಾಗಿದ್ದು, ದಾಳಿ ನಡೆಸುವ ಮೊದಲು ಆರ್‌ಎಸ್‌ಎಸ್ ಕಚೇರಿಯ ಮೇಲೆ ನಿಗಾ ಇಡಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮತ್ತು ಆರೋಪಿ ದರೋಡೆಕೋರ ಶಹಜಾದ್ ಭಟ್ಟಿ ಜೊತೆ ಸಂಪರ್ಕ ಹೊಂದಿರುವ ಮಾಡ್ಯೂಲ್ ಭಾಗಿಯಾಗಿರಬಹುದು ಎಂದು ಭದ್ರತಾ ಸಂಸ್ಥೆಗಳು ಶಂಕಿಸಿವೆ. ಆರೋಪಿಗಳಲ್ಲಿ ಒಬ್ಬನು ದುಬೈನಲ್ಲಿ ಸುಮಾರು ಆರು ತಿಂಗಳುಗಳನ್ನು ಕಳೆದಿದ್ದ. ಈ ಹಿಂದೆ ಕ್ರಿಮಿನಲ್ ಪ್ರಕರಣವೊಂದರಲ್ಲಿ ಜೈಲಿನಲ್ಲಿದ್ದನು ಎನ್ನಲಾಗಿದೆ.

ರಾಣಾ ಸಾಹಿಬ್ ಎಂಬ ಹ್ಯಾಂಡ್ಲರ್ ಪೆಟ್ರೋಲ್ ಬಾಂಬ್‌ಗಳನ್ನು ಹೇಗೆ ಜೋಡಿಸುವುದು ಎಂಬುದನ್ನು ಪ್ರದರ್ಶಿಸುವ ವಿಡಿಯೊಗಳನ್ನು ಹಂಚಿಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. 20 ರಿಂದ 22 ವರ್ಷ ವಯಸ್ಸಿನ ಆರೋಪಿಗಳೆಲ್ಲರೂ ಈ ವಿಡಿಯೊಗಳ ಮೂಲಕ ತಂತ್ರವನ್ನು ಕಲಿತಿದ್ದು, ಸ್ಫೋಟಕ ಸಾಧನಗಳನ್ನು ತಯಾರಿಸುವಲ್ಲಿ ವೃತ್ತಿಪರವಾಗಿ ತರಬೇತಿ ಪಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.