ನವದೆಹಲಿ: 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ (Self Harming Case) ಮಾಡಿಕೊಂಡಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ನಡೆದಿದೆ. ಬಾಲಕ ತನ್ನ ಶಿಕ್ಷಕರನ್ನು ದೂಷಿಸಿ ಆತ್ಮಹತ್ಯೆ ಪತ್ರ ಬರೆದಿದ್ದಾನೆ. ಈ ಸಂಬಂಧ 16 ವರ್ಷದ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದು, ಮೂವರು ಶಿಕ್ಷಕರು ಮತ್ತು ಶಾಲೆಯ ಪ್ರಾಂಶುಪಾಲರು ತನ್ನ ಮಗನಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನೋವಿನಿಂದ ಹೇಳಿದ್ದಾರೆ.
ದೆಹಲಿಯ ಪ್ರಮುಖ ಶಾಲೆಯೊಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದ ಬಾಲಕ ತನ್ನ ಆತ್ಮಹತ್ಯೆ ಪತ್ರದಲ್ಲಿ, ಕ್ಷಮಿಸಿ ಅಮ್ಮ, ನಾನು ನಿಮ್ಮ ಹೃದಯವನ್ನು ಹಲವು ಬಾರಿ ಮುರಿದಿದ್ದೇನೆ. ಇದೀಗ ನಾನು ಕೊನೆಯ ಬಾರಿಗೆ ಅದನ್ನು ಮಾಡುತ್ತಿದ್ದೇನೆ. ಶಾಲೆಯಲ್ಲಿ ಶಿಕ್ಷಕರು ಹೀಗೇ ಇದ್ದಾರೆ, ನಾನು ಏನು ಹೇಳಲಿ? ಎಂದು ಬರೆದಿದ್ದಾನೆ. ಈ ಘಟನೆಯು ಪೋಷಕರಲ್ಲಿ ತೀವ್ರ ಕಳವಳವನ್ನುಂಟುಮಾಡಿದೆ.
ಮಗಳನ್ನೇ ನರಬಲಿ ಕೊಡಲು ತಾಯಿಯ ಸಂಚು? ಕುತ್ತಿಗೆ ಕಡಿದ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್
ಹದಿಹರೆಯದ ಬಾಲಕನ ತಂದೆ ತನ್ನ ಮಗ ಮಂಗಳವಾರ ಬೆಳಿಗ್ಗೆ 7.15 ಕ್ಕೆ ಶಾಲೆಗೆ ಹೋಗಿದ್ದ ಎಂದು ಹೇಳಿದ್ದಾರೆ. ಆದರೆ, ಮಧ್ಯ ದೆಹಲಿಯ ರಾಜೇಂದ್ರ ಪ್ಲೇಸ್ ಮೆಟ್ರೋ ನಿಲ್ದಾಣದ ಬಳಿ 16 ವರ್ಷದ ಬಾಲಕ ಗಾಯಗೊಂಡು ಬಿದ್ದಿದ್ದಾನೆ ಎಂದು ಮಧ್ಯಾಹ್ನ 2.45 ರ ಸುಮಾರಿಗೆ ತಂದೆಗೆ ಕರೆ ಬಂದಿತು. ತಂದೆ ಕರೆ ಮಾಡಿದ ವ್ಯಕ್ತಿಗೆ ತನ್ನ ಮಗನನ್ನು ಬಿಎಲ್ ಕಪೂರ್ ಆಸ್ಪತ್ರೆಗೆ ಕರೆದೊಯ್ಯುವಂತೆ ಕೇಳಿಕೊಂಡರು. ಕುಟುಂಬವು ಅಲ್ಲಿಗೆ ತಲುಪಿದಾಗ, ಅವನು ಮೃತಪಟ್ಟಿದ್ದಾನೆ ಎಂದು ಅವರಿಗೆ ತಿಳಿಸಲಾಯಿತು.
ಮೆಟ್ರೋ ನಿಲ್ದಾಣದಲ್ಲಿ ಬಾಲಕ ಪ್ಲಾಟ್‌ಫಾರ್ಮ್‌ನಿಂದ ಹಾರಿದ್ದಾನೆ ಎಂದು ತಿಳಿದುಬಂದಿದೆ. ಮೂವರು ಶಿಕ್ಷಕರು ಮತ್ತು ಶಾಲಾ ಪ್ರಾಂಶುಪಾಲರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದನಂತೆ. ಕಳೆದ ನಾಲ್ಕು ದಿನಗಳಿಂದ ಶಿಕ್ಷಕರೊಬ್ಬರು ಶಾಲೆಯಿಂದ ಹೊರಹಾಕಲಾಗುವುದು ಮತ್ತು ವರ್ಗಾವಣೆ ಪ್ರಮಾಣಪತ್ರ (TC) ನೀಡಲಾಗುವುದು ಎಂದು ಬೆದರಿಕೆ ಹಾಕುತ್ತಿದ್ದರು ಎಂದು ಬಾಲಕನ ಸ್ನೇಹಿತರು ಹೇಳಿದ್ದರು.
ಮತ್ತೊಬ್ಬ ಶಿಕ್ಷಕ ಒಮ್ಮೆ ತನ್ನ ಮಗನನ್ನು ತಳ್ಳಿದ್ದ ಎಂದು ತಂದೆ ಆರೋಪಿಸಿದ್ದಾರೆ. ಮಂಗಳವಾರದಂದು ತರಗತಿಯಲ್ಲಿ ಬಾಲಕ ಬಿದ್ದಾಗ ಒಬ್ಬ ಶಿಕ್ಷಕ ಅವನನ್ನು ಅವಮಾನಿಸಿ, ಅತಿಯಾಗಿ ನಟಿಸುತ್ತಿದ್ದಾನೆ ಎಂದು ಅಪಹಾಸ್ಯ ಮಾಡಿದರಂತೆ. ಬಳಿಕ ಅವನನ್ನು ತುಂಬಾ ಗದರಿಸಲಾಯಿತು ಎಂದು ಆರೋಪಿಸಲಾಗಿದೆ. ಅವನು ಅಳಲು ಪ್ರಾರಂಭಿಸಿದ್ದಕ್ಕೆ ಎಷ್ಟು ಬೇಕಾದರೂ ಅಳಬಹುದು ಎಂದು ಶಿಕ್ಷಕ ವ್ಯಂಗ್ಯ ಮಾಡಿದ್ದರಂತೆ. ಇದೆಲ್ಲವೂ ನಡೆಯುತ್ತಿರುವಾಗ ಪ್ರಾಂಶುಪಾಲರು ಸಹ ಇದ್ದರು. ಆದರೆ ಅದನ್ನು ತಡೆಯಲು ಅವರು ಏನೂ ಮಾಡಲಿಲ್ಲ ಎಂದು ಮೃತ ಬಾಲಕನ ತಂದೆ ಆರೋಪಿಸಿದರು.
ಈ ಹಿಂದೆಯೂ ಸಹ ಬೋಧಕ ಸಿಬ್ಬಂದಿಯಿಂದ ಮಾನಸಿಕ ಕಿರುಕುಳದ ಬಗ್ಗೆ ತನ್ನ ಮಗ ಆತನ ತಾಯಿಗೆ ದೂರು ನೀಡಿದ್ದನು. ಈ ಸಂಬಂಧ ಶಾಲೆಯಲ್ಲಿ ಪ್ರಶ್ನಿಸಲಾಯಿತು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮೃತ ಬಾಲಕನ ತಂದೆ ಹೇಳಿದರು.
Self Harming: ವಿಡಿಯೋ ಮಾಡಿಟ್ಟು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ
ಆತ್ಮಹತ್ಯೆ ಟಿಪ್ಪಣಿ
ಹುಡುಗನ ಬ್ಯಾಗಿನಲ್ಲಿ ಆತ್ಮಹತ್ಯೆ ಪತ್ರ ಸಿಕ್ಕಿತ್ತು. ಪತ್ರ ಪಡೆದವರು ನಿರ್ದಿಷ್ಟ ಸಂಖ್ಯೆಗೆ ಕರೆ ಮಾಡಲು ಅವನು ಕೇಳಿಕೊಂಡಿದ್ದ. ಅಲ್ಲದೆ ತಾನು ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದ. ಆದರೆ ಶಾಲೆಯಲ್ಲಿ ನಡೆದ ಘಟನೆಯಿಂದಾಗಿ ತನಗೆ ಬೇರೆ ದಾರಿಯಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾನೆ. ನಂತರ ಅವನು ತನ್ನ ಅಂಗಗಳು ಕೆಲಸ ಮಾಡುವ ಸ್ಥಿತಿಯಲ್ಲಿದ್ದರೆ ದಾನ ಮಾಡುವಂತೆ ಕೇಳಿಕೊಂಡಿದ್ದ.
ಪ್ರಾಂಶುಪಾಲರು ಮತ್ತು ಇಬ್ಬರು ಶಿಕ್ಷಕರನ್ನು ಹೆಸರಿಸುತ್ತಾ, ತನ್ನ ಕೊನೆಯ ಆಸೆಯೆಂದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾನೆ. ಬೇರೆ ಯಾವ ಮಕ್ಕಳಿಗೂ ಇಂತಹ ಸ್ಥಿತಿ ಬರಬಾರದು ಎಂದು ಪತ್ರದಲ್ಲಿ ಹೇಳಿದ್ದಾನೆ. ತನ್ನ ಅಣ್ಣನ ಬಳಿ ಯಾವಾಗಲೂ ರೇಗಾಡುತ್ತಿದ್ದಕ್ಕೆ ಕ್ಷಮೆ ಕೇಳಿದ್ದಾನೆ. ಹಾಗೆಯೇ ತನ್ನ ತಂದೆಗೆ ತಕ್ಕಂತೆ ಒಳ್ಳೆಯ ಮನುಷ್ಯನಾಗಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾನೆ. ಯಾವಾಗಲೂ ತನ್ನನ್ನು ಬೆಂಬಲಿಸಿದ್ದಕ್ಕಾಗಿ ತನ್ನ ತಾಯಿಗೆ ಧನ್ಯವಾದ ಹೇಳುತ್ತಾ, ತನ್ನ ತಂದೆ ಮತ್ತು ಸಹೋದರನಿಗಾಗಿ ಹಾಗೆಯೇ ಮಾಡುವುದನ್ನು ಮುಂದುವರಿಸಲು ಕೇಳಿಕೊಂಡಿದ್ದಾನೆ. ಆದರೆ, ಶಿಕ್ಷಕರು ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಬರೆದಿದ್ದಾನೆ.