Engineer Self Harming: ಸರಣಿ ಆತ್ಮಹತ್ಯೆಗೆ ಮತ್ತೊಂದು ಸೇರ್ಪಡೆ; ಗದಗದಲ್ಲಿ ಇಂಜಿನಿಯರ್ ಆತ್ಮಹತ್ಯೆ
Engineer Self Harming: ಸರಣಿ ಆತ್ಮಹತ್ಯೆಗೆ ಮತ್ತೊಂದು ಸೇರ್ಪಡೆ; ಗದಗದಲ್ಲಿ ಇಂಜಿನಿಯರ್ ಆತ್ಮಹತ್ಯೆ
ಹರೀಶ್ ಕೇರ
January 3, 2025
ಗದಗ: ಇತ್ತೀಚೆಗೆ ಸರಕಾರಿ ನೌಕರರು, ಗುತ್ತಿಗೆದಾರರ (Contractor) ಆತ್ಮಹತ್ಯೆ ಪ್ರಕರಣಗಳು ರಾಜಕಾರಣಿಗಳಲ್ಲಿ ನಡುಕ ಹುಟ್ಟಿಸುತ್ತಿವೆ. ಈ ಸರಣಿಗೆ ಇನ್ನೊಂದು ಸೇರ್ಪಡೆಯಾಗಿದ್ದು, ಗದಗದಲ್ಲಿ (Gadag news) ಮತ್ತೊಬ್ಬ ಇಂಜಿನಿಯರ್ ಆತ್ಮಹತ್ಯೆ (Engineer Self Harming) ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ.
ಗದಗ ಜಿಲ್ಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಗದಗ ನಗರದ ಕೇಂದ್ರ ಬಸ್ ನಿಲ್ದಾಣ ಬಳಿಯ ಪಲ್ಲವಿ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿರ್ಮಿತಿ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಶಂಕರಗೌಡ ಪಾಟೀಲ್ (54) ಆತ್ಮಹತ್ಯೆ ಮಾಡಿಕೊಂಡ ಇಂಜಿನಿಯರ್. ಪಲ್ಲವಿ ಲಾಡ್ಜ್‌ನ ರೂಂ ನಂಬರ್ 513ರಲ್ಲಿ ಇವರು ಫ್ಯಾನ್‌ಗೆ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.
ಮೃತ ಇಂಜಿನಿಯರ್ ಶಂಕರಗೌಡ ಪಾಟೀಲ್ ಅವರು ಗದಗ ನಗರದ ನಿವಾಸಿ. ಬೆಳಗ್ಗೆ 7.30ಕ್ಕೆ ಚಹಾ ಕುಡಿದು ಮನೆಯಿಂದ ಹೊರಬಂದ ಇವರು ಕಚೇರಿಗೆ ಹೋಗದೆ ಲಾಡ್ಜ್‌ಗೆ ಹೋಗಿದ್ದಾರೆ. ಲಾಡ್ಜ್ ಕೋಣೆಯಿಂದ ಮಧ್ಯಾಹ್ನವಾದರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಬಾಗಿಲು ಬಡಿದಾಗ ಪ್ರತಿಕ್ರಿಯೆ ನೀಡಿಲ್ಲ. ಕಿಟಕಿ ಮೂಲಕ ನೋಡಿದಾಗ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ. ಪೊಲೀಸರಿಗೆ ದೂರು ನೀಡಲಾಗಿದೆ.
ಸ್ಥಳಕ್ಕೆ ಆಗಮಿಸಿದ ಗದಗ ನಗರದ ಬಡಾವಣೆ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಈವರೆಗೆ ಗುತ್ತಿಗೆ ಇಂಜಿನಿಯರ್ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಮನೆಯವರಿಗೆ ಮಾಹಿತಿ ನೀಡಲಾಗಿದ್ದು, ಅವರ ಸಮ್ಮುಖದಲ್ಲಿ ಮೃತದೇಹವನ್ನು ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ರವಾನಿಸಲಾಗಿದೆ.
ಇತ್ತೀಚೆಗೆ ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಕೋಲಾಹಲಕ್ಕೆ ಕಾರಣವಾಗಿದೆ. ಇನ್ನೂ ಹಲವು ಸರಕಾರಿ ನೌಕರರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜಕಾರಣಿಗಳ ಹಾಗೂ ಅಧಿಕಾರಿಗಳ ಬುಡಕ್ಕೆ ಬಿಸಿನೀರು ತಂದಿಟ್ಟಿದ್ದಾರೆ. ಇದೀಗ ಮತ್ತೊಬ್ಬ ಇಂಜಿನಿಯರ್ ಸಾವು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: Contractor Death: ಗುತ್ತಿಗೆದಾರ ಆತ್ಮಹತ್ಯೆ ಕೇಸ್ ವಿಚಾರಣೆಗೆ ಇಂದು ಬೀದರ್‌ಗೆ ಸಿಐಡಿ ತಂಡ