Robbery Case: ಮಠದಲ್ಲಿ 300 ಕೋಟಿ ರೂ. ಇದೆಯೆಂದು ದರೋಡೆಗೆ ಬಂದ ಕಳ್ಳರು, ಆದರೆ ಸಿಕ್ಕಿದ್ದು ಮಾತ್ರ 50 ಸಾವಿರ ರೂ. ; ಖದೀಮರ ಹೆಡೆಮುರಿ ಕಟ್ಟಿದ ಪೊಲೀಸರು
ಮಠದಲ್ಲಿ ಕೋಟ್ಯಂತರ ರೂ. ಹಣ ಇದೆ ಎಂದು ತಿಳಿದು ಮಠಕ್ಕೆ ಕನ್ನ ಹಾಕಲು ಹೋದ ಖದೀಮರು 50 ಸಾವಿರ ರೂ. ಹಣ ದರೋಡೆ ಮಾಡಿ, ಕೊನೆಗೆ ಪೊಲೀಸರ ಅತಿಥಿಯಾಗಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮಹಿಷಿ ಉತ್ತರಾಧಿ ಮಠದಲ್ಲಿ ನಡೆದಿದೆ.


ಶಿವಮೊಗ್ಗ: ಮಠದಲ್ಲಿ ಕೋಟ್ಯಂತರ ರೂ. ಹಣ ಇದೆ ಎಂದು ತಿಳಿದು ಮಠಕ್ಕೆ ಕನ್ನ ಹಾಕಲು ಹೋದ ಖದೀಮರು 50 ಸಾವಿರ ರೂ. ಹಣ ದರೋಡೆ ಮಾಡಿ, ಕೊನೆಗೆ ಪೊಲೀಸರ ಅತಿಥಿಯಾಗಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮಹಿಷಿ ಉತ್ತರಾಧಿ ಮಠದಲ್ಲಿ ನಡೆದಿದೆ. (Robbery Case) ಹಣವಿದೆ ಎಂಬ ಸುಳ್ಳು ಸುದ್ದಿಯನ್ನು ನಂಬಿ 12 ದರೋಡೆಕೋರರು ದರೋಡೆಗೆ ಯತ್ನಿಸಿದ್ದಾರೆ. ಆದರೆ ದರೋಡೆಗಿಳಿದವರಿಗೆ ಸಿಕ್ಕಿದ್ದು ಕೇವಲ 50 ಸಾವಿರ ರೂ. ಮಾತ್ರ. ಈ ಸಂಬಂಧ 12 ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.
ತೀರ್ಥಹಳ್ಳಿ ತಾಲೂಕು ಮಹಿಷಿ ಗ್ರಾಮದ ಪುರಾತನ ಉತ್ತರಾದಿ ಮಠದಲ್ಲಿ 300 ಕೋಟಿ ರೂ. ಇದೆ ಎಂಬ ವದಂತಿ ಮೇರೆಗೆ 15ಕ್ಕೂ ಹೆಚ್ಚಿರುವ ಖದೀಮರ ತಂಡ, ಏ.5ರ ರಾತ್ರಿ ಮಠಕ್ಕೆ ನುಗ್ಗಿ ಅಲ್ಲಿದ್ದವರನ್ನು ಬೆದರಿಸಿ ಮಠದಲ್ಲಿದ್ದ 50 ಸಾವಿರ ರೂ.ಗಳನ್ನು ದರೋಡೆ ಮಾಡಿದ್ದರು. ಈ ಕುರಿತು ಮಾಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ಪೊಲೀಸರು ಮಠಕ್ಕೆ ಭೇಟಿ ನೀಡಿದಾಗ 50 ಸಾವಿರ ರೂ. ದರೋಡೆ ಆಗಿರುವುದು ತಿಳಿದುಬಂದಿತ್ತು. ಮಠದಲ್ಲಿನ ಬಂಗಾರ ಸೇರಿ ಬೇರೆ ಯಾವುದೇ ವಸ್ತು ಕಳುವಾಗಿರಲಿಲ್ಲ. ಪರಿಶೀಲಿಸಿದಾಗ ಖದೀಮರ ತಂಡವೊಂದು ಬಂದು ದರೋಡೆ ನಡೆಸಿರುವುದು ತನಿಖೆಯಿಂದ ತಿಳಿದುಬಂದಿತ್ತು.
ದರೋಡೆಗೂ ಮುನ್ನ ತಂಡ ಮಠವನ್ನೊಮ್ಮೆ ಬಂದು ಪರಿಶೀಲನೆ ನಡೆಸಿಕೊಂಡು ಹೋಗಿದ್ದು ಸಹ ತನಿಖೆಯಿಂದ ಗೊತ್ತಾಗಿತ್ತು. ಪೂರ್ವಸಂಚಿನಂತೆ ಏ.5ರ ರಾತ್ರಿ ಟಿಟಿ ವಾಹನ ಮಾಡಿಕೊಂಡು ಬಂದು ದರೋಡೆಗೆ ಯತ್ನಿಸಿದ್ದರು. ಆದರೆ, 300 ಕೋಟಿ ಸಿಗದೇ ಬ್ಯಾಂಕ್ನಿಂದ ತಂದಿಟ್ಟಿದ್ದ 50 ಸಾವಿರ ರೂ. ದೋಚಿ ತಂಡ ಪರಾರಿಯಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಟಿಟಿ ವಾಹನ, 1 ಮಹೀಂದ್ರಾ ಬೊಲೆರೋ, 2 ವಾಹನ ಹಾಗೂ ಆಯುಧಗಳು ಸೇರಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಳೂರು ಪೊಲೀಸರು ತನಿಖೆ ನಡೆಸಿದಾ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳ ಬಂಧನಕ್ಕೆ ಮಾಳೂರು ಪೊಲೀಸರ ತಂಡ ತೆರಳಿದಾಗ ಶಿಕಾರಿಪುರದ ಪಟ್ಟಣದಲ್ಲಿ ಶ್ರೀನಿವಾಸ ಅಲಿಯಾಸ್ ಸೀನ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆಗ ಆತನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಉಳಿದ 12 ಜನರನ್ನೂ ಪೊಲೀಸರು ಬಂಧಿಸಿದ್ದಾರೆ. ಸುರೇಶ ಅಲಿಯಾಸ್ ನೇರಲೆ ಸುರೇಶ್, ಸತೀಶ್ ಅಲಿಯಾಸ್ ಸತ್ಯನಾರಾಯಣ, ಪೃಥ್ವಿರಾಜ್, ಸಿರಿ ಅಲಿಯಾಸ್ ಸಿರಿಕಾಂತ್, ಅಭಿಲಾಷ್ ಅಲಿಯಾಸ್ ಅಭಿ, ರಾಕೇಶ್, ಭರತ್ ಅಲಿಯಾಸ್ ಚಿಟ್ಟೆ, ಪವನ ಅಲಿಯಾಸ್ ಗಿಡ್ಡಪವನ್, ರಮೇಶ್ ಅಲಿಯಾಸ್ ನವೀನ, ನವೀನ ಕುಮಾರ್ ಅಲಿಯಾಸ್ ಡೈಮೆಂಡ್ ನವೀನ್, ಕರಿಬಸಪ್ಪ ಆರ್ ಬಂಧಿತರು.
ಈ ಸುದ್ದಿಯನ್ನೂ ಓದಿ: Viral Video: ದರೋಡೆ ಮಾಡಲು ಬಂದ ಖದೀಮರನ್ನು ಅಟ್ಟಾಡಿಸಿ ಹಿಡಿದ ಪೆಟ್ರೋಲ್ ಬಂಕ್ ಸಿಬಂದಿ; ವಿಡಿಯೊ ವೈರಲ್
ಮಹಷಿಯ ಉತ್ತರಾಧಿ ಮಠದಲ್ಲಿ ಹಣ ಇದೆ ಎಂದು ಜನರು ಮಾತನಾಡುವುದನ್ನು ನಂಬಿದ ರಿಪ್ಪನ್ ಪೇಟೆಯ ಸುರೇಶ್ ಹಾಗೂ ಸತೀಶ್ ಈ ದರೋಡೆಗೆ ಸಂಚು ರೂಪಿಸಿದ್ದರು. ಅದರಂತೆ ಆನಂದಪುರದ ಪೃಥ್ವಿರಾಜ್ ಎಂಬಾತನನ್ನು ಸಂಪರ್ಕಿಸಿದ್ದರು. ಈ ಪೃಥ್ವಿರಾಜ್ ಶಿಕಾರಿಪುರದ ಶ್ರೀನಿವಾಸ್ ಸೇರಿದಂತೆ ಉಳಿದ ಆರೋಪಿಗಳು ದರೋಡೆ ಪ್ಲಾನ್ ಮಾಡಿದ್ದಾರೆ. ಏ.5ರಂದು ರಾತ್ರಿ 9:30ರ ಸುಮಾರು ಮಠಕ್ಕೆ ನುಗ್ಗಿದ ತಂಡ, ಮಠದಲ್ಲಿದ್ದವರನ್ನು ಆಯುಧದಿಂದ ಬೆದರಿಸಿದ್ದಾರೆ. ನಿಮ್ಮ ಮಠದಲ್ಲಿ 300 ಕೋಟಿ ಹಣ ಇದೆ ಅಂತ ಜನರು ಮಾತನಾಡುತ್ತಿದ್ದಾರೆ, ಆ ಹಣವನ್ನು ನಮಗೆ ಕೊಟ್ಟುಬಿಡಿ ಅಂತ ಮಠದಲ್ಲಿರುವರನ್ನು ಹೆದರಿಸಿದ್ದಾರೆ. ಭಯಕ್ಕೆ ಮಠದಲ್ಲಿರುವ ವ್ಯಕ್ತಿಯೊಬ್ಬರು ನಮ್ಮಲ್ಲಿ 50 ಸಾವಿರ ರೂ. ನಗದು ಹಣ ಇದ್ದು, ಸ್ವಾಮೀಜಿಗಳು ಬರುತ್ತಾರೆಂದು ತಿಳಿದು ಬ್ಯಾಂಕ್ನಿಂದ ಈ ಹಣ ಡ್ರಾ ಮಾಡಿಕೊಂಡು ಬಂದಿರುವೆ ಅಂತ ಹೇಳಿದಾಗ, ಖದೀಮರು ಆ ಹಣವನ್ನು ದೋಚಿ ಪರಾರಿಯಾಗಿದ್ದರು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.