ನವದೆಹಲಿ: ಶಂಕಿತ ಇಬ್ಬರು ಭಯೋತ್ಪಾದಕರನ್ನು (terrorist) ಉತ್ತರ ಪ್ರದೇಶದ (Uttar Pradesh) ಬಿಜ್ನೋರ್‌ನಲ್ಲಿ ಭಯೋತ್ಪಾದನಾ ನಿಗ್ರಹ ದಳ (Anti-Terrorist Squad) ಬಂಧಿಸಿದೆ. ಬಂಧಿತರನ್ನು ಉವೈದ್ ಮಲಿಕ್ ಮತ್ತು ಜಲಾಲ್ ಹೈದರ್ ಎಂದು ಗುರುತಿಸಲಾಗಿದೆ. ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಈ ಇಬ್ಬರನ್ನು ಬಂಧಿಸಲಾಗಿದೆ. ಇವರು ಪಾಕಿಸ್ತಾನ (Pakistan) ಮೂಲದ ಭಯೋತ್ಪಾದನಾ ತಂಡದ ಸಾಮಾಜಿಕ ಮಾಧ್ಯಮ ಖಾತೆಯನ್ನು ನಿರ್ವಹಿಸುತ್ತಿದ್ದರು ಮಾತ್ರವಲ್ಲದೇ ಪಶ್ಚಿಮ ಏಷ್ಯಾದಲ್ಲಿ ನೆಲೆಸಿರುವ ಮೀರತ್ ಮಾವಾನಾ ಪ್ರದೇಶದ ನಿವಾಸಿ ಅಕಿಬ್ ಜೊತೆಗೆ ಸಂಬಂಧ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ. ಇನ್ನಿಬ್ಬರ ವಿರುದ್ಧ ಲುಕ್ಔಟ್ ನೊಟೀಸ್ ಜಾರಿಗೊಳಿಸಲಾಗಿದ್ದು, ದೇಶ, ವಿದೇಶಗಳಲ್ಲಿ ತನಿಖೆ ಮುಂದುವರಿಸಲಾಗಿದೆ.
ಇನ್‌ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡು ಶಂಕಿತ ಉಗ್ರರು ಭಯೋತ್ಪಾದನಾ ಚಟುವಟಿಕೆಗಳಿಗೆ ಆನ್‌ಲೈನ್ ನೇಮಕಾತಿಗಳನ್ನು ನಡೆಸುತ್ತಿದ್ದರು. ಭಾರತ, ದಕ್ಷಿಣ ಆಫ್ರಿಕಾ ಮತ್ತು ಸೌದಿ ಅರೇಬಿಯಾದಲ್ಲಿ ಸಂಪರ್ಕ ಹೊಂದಿರುವ ಅಕಿಬ್ ನೊಂದಿಗೆ ಉವೈದ್ ಮಲಿಕ್ ಮತ್ತು ಜಲಾಲ್ ಹೈದರ್ ಕೂಡ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐಎಎಸ್ ಅಧಿಕಾರಿಯಿಂದ ವ್ಯಕ್ತಿಗೆ 95 ಲಕ್ಷ ರೂಪಾಯಿ ವಂಚನೆ ಆರೋಪ; ತನಿಖೆಗೆ ಆದೇಶ
ಉವೈದ್ ಮಲಿಕ್ ಮತ್ತು ಜಲಾಲ್ ಹೈದರ್ ವಿಚಾರಣೆ ವೇಳೆ ತಾವು ಸಾಮಾಜಿಕ ಮಾಧ್ಯಮದ ಮೂಲಕ ಭಯೋತ್ಪಾದನೆಯ ಮೂಲಭೂತ ವಿಷಯಗಳನ್ನು ಹರಡುತ್ತಿದ್ದೆವು. ರಾಷ್ಟ್ರವಿರೋಧಿ ಭಾವನೆಗಳನ್ನು ಪ್ರಚೋದಿಸಲು ಮತ್ತು ಹಿಂಸಾತ್ಮಕ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಬಳಸುತ್ತಿದ್ದೆವು. ನಿರಂತರ ಡಿಜಿಟಲ್ ಸಂವಹನದ ಮೂಲಕ ಜಾಲವನ್ನು ಭಾರತದೊಳಗೆ ವಿಸ್ತರಿಸಲು ಪ್ರಯತ್ನಿಸುತ್ತಿದೆವು ಎಂದು ತಿಳಿಸಿದ್ದಾರೆ.
ಆರೋಪಿಗಳು ಸುಮಾರು ಮೂರು ವರ್ಷಗಳ ಹಿಂದೆ ಸೂರತ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಅಕಿಬ್ ಮತ್ತು ದಕ್ಷಿಣ ಆಫ್ರಿಕಾ ಮೂಲದ ಆತನ ಸಹಚರ ಮೈಜುಲ್ ಜೊತೆ ಸಂಪರ್ಕ ಸಾಧಿಸಿದ್ದಾಗಿ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಆನ್‌ಲೈನ್ ಮೂಲಕ ನಡೆಯುವ ಇವರ ಜಾಲವು ಗಡಿಯಾಚೆಗೂ ವ್ಯಾಪಿಸಿದೆ. ಇದರ ಹಿಂದೆ ದೊಡ್ಡ ಗುಂಪು ಕೆಲಸ ಮಾಡುತ್ತಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಉವೈದ್ ಮಲಿಕ್ ಮತ್ತು ಜಲಾಲ್ ಹೈದರ್ ಬಂಧನಕ್ಕೂ ಮೊದಲು ಕಳೆದ ಏಪ್ರಿಲ್ 2 ರಂದು ಎಟಿಎಸ್ ಮೀರತ್ ಮತ್ತು ಗೌತಮ್ ಬುದ್ಧ ನಗರದ ನಾಲ್ವರನ್ನು ಪೊಲೀಸರು ಬಂಧಿಸಿದ್ದರು. ಇವರು ಲಕ್ನೋ ರೈಲು ನಿಲ್ದಾಣವನ್ನು ಗುರಿಯಾಗಿಸಿಕೊಂಡು ದಾಳಿಗೆ ಸಂಚು ರೂಪಿಸುತ್ತಿದ್ದರು ಎನ್ನಲಾಗಿದೆ.
ಕಳೆದ ವರ್ಷದ ಕೊನೆಯಲ್ಲಿ ಅಕಿಬ್ ಎಕೆ -47 ರೈಫಲ್ ಮತ್ತು ಸ್ಫೋಟಕಗಳನ್ನು ಪ್ರದರ್ಶಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಈ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ಪ್ರಕರಣ ಕೂಡ ದಾಖಲಿಸಿದ್ದರು. ಆರಂಭದಲ್ಲಿ ಇದು ಆಟಿಕೆ ಎಂದು ಪರಿಗಣಿಸಲಾಗಿತ್ತಾದರೂ ಇದಕ್ಕೆ ಸಂಬಂಧಿಸಿ ಹೊಸ ಸಾಕ್ಷಿಗಳು ದೊರೆಯುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಭಯೋತ್ಪಾದನಾ ನಿಗ್ರಹ ದಳಕ್ಕೆ ವರ್ಗಾಯಿಸಲಾಗಿದೆ.
ಅಕಿಬ್ ಗೆ ಈಗಾಗಲೇ ಮೂರು ಲುಕ್ಔಟ್ ನೊಟೀಸ್ ಜಾರಿಗೊಳಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಜಿಬಾಬಾದ್‌ನ ಸಮೀರ್ ಎಂದು ಗುರುತಿಸಲಾದ ವ್ಯಕ್ತಿಯ ಪತ್ತೆಗೂ ಕೂಡ ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.