ಹೈದರಾಬಾದ್, ಏ.11: ಮದುವೆಯಾಗಲು ನಿರಾಕರಿಸಿದ ಕಾರಣ ವ್ಯಕ್ತಿಯೊಬ್ಬ ಯುವತಿಗೆ ಎಚ್‌ಐವಿ ಪಾಸಿಟಿವ್ ರಕ್ತವನ್ನು (HIV-positive blood injects) ಚುಚ್ಚಿದ್ದ ಘಟನೆ ಹೈದರಾಬಾದ್‍ನಲ್ಲಿ (Hyderabad) ನಡೆದಿತ್ತು. ಇದಾದ ಒಂದು ತಿಂಗಳ ನಂತರ ಇದೀಗ 24 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ (Crime News). ಮಾರ್ಚ್ 11 ರಂದು ಈ ಘಟನೆ ನಡೆದಿದ್ದು, ಆರೋಪಿ ಮನೋಹರ್ ಎಂಬಾತ ಯುವತಿಯ ಮನೆಯಲ್ಲಿ ಬಲವಂತವಾಗಿ ತನ್ನ ಎಚ್‌ಐವಿ ಸೋಂಕಿತ ರಕ್ತವನ್ನು ಆಕೆಗೆ ಇಂಜೆಕ್ಟ್ ಮಾಡಿದ್ದ. ಪೊಲೀಸರ ಪ್ರಕಾರ, ಆರೋಪಿ ಮತ್ತು ಸಂತ್ರಸ್ತೆ ಸಂಬಂಧಿಕರಾಗಿದ್ದು, ಆಕೆಯ ಪೋಷಕರು ಆರಂಭದಲ್ಲಿ ತಮ್ಮ ಮಗಳ ಮದುವೆಯನ್ನು ಅವನೊಂದಿಗೆ ಮಾಡಲು ಯೋಜಿಸಿದ್ದರು. ಆದರೆ, ನಂತರ ಈ ಮದುವೆಯನ್ನು ರದ್ದುಗೊಳಿಸಿದ್ದರು.
ಆರೋಪಿಯ ಪೋಷಕರು ಈಗಾಗಲೇ ಎಚ್ಐವಿ ಪೀಡಿತರಾಗಿದ್ದರಿಂದ, ಯುವತಿಯ ಪೋಷಕರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆ ವ್ಯಕ್ತಿಗೆ ವೈರಸ್ ಪರೀಕ್ಷೆ ಮಾಡಿಸಿದರು. ಅದರಲ್ಲಿ ಅವನಿಗೂ ಸೋಂಕು ಇರುವುದು ದೃಢಪಟ್ಟಿತು. ಮಹಿಳೆ ತಕ್ಷಣ ಮದುವೆಯನ್ನು ರದ್ದುಗೊಳಿಸಿದಳು. ನಂತರ ಆರೋಪಿಯು ಆಕೆಗೆ ಇಂಜೆಕ್ಷನ್ ನೀಡಿದ್ದಾನೆ. ಘಟನೆ ಬಳಿಕ ಆರೋಪಿಯನ್ನು ಬಂಧಿಸಲಾಯಿತು.
Hyderabad Case: ಪಾಳು ಮನೆಯಲ್ಲಿತ್ತು ಅಸ್ಥಿ ಪಂಜರ; ಗುರುತು ಪತ್ತೆಗೆ ಸಹಾಯ ಮಾಡಿದ ನೋಕಿಯಾ ಫೋನ್!
ಘಟನೆ ನಡೆದು ಸುಮಾರು ಒಂದು ತಿಂಗಳ ನಂತರ, ಏ.10 ರಂದು ಯುವತಿ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯ ಕುಟುಂಬ ಸದಸ್ಯರು ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಯುವತಿ ತೀವ್ರ ಮಾನಸಿಕ ಒತ್ತಡದಲ್ಲಿದ್ದಳು. ಎಚ್‌ಐವಿ ಸೋಂಕಿತ ರಕ್ತವನ್ನು ಚುಚ್ಚಿದ್ದರಿಂದ ಆಕೆಯ ಮಾನಸಿಕ ಪರಿಣಾಮವೇ ಈ ಹೆಜ್ಜೆಯನ್ನಿಡುವಂತೆ ಮಾಡಿರಬಹುದು. ಆದರೆ, ನಾವು ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೋಚಾರಂ ಐಟಿ ಕಾರಿಡಾರ್ ಪೊಲೀಸ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.
ಥಲಸ್ಸೇಮಿಯಾ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳಲ್ಲಿ ಎಚ್ಐವಿ ಸೋಂಕು
ಥಲಸೀಮಿಯಾ ಮೂಳೆ ಮಜ್ಜೆ ಕಾಯಿಲೆಯಿಂದ ಬಳಲುತ್ತಿದ್ದ ಐದು ಮಕ್ಕಳಿಗೆ ನೀಡಲಾಗುತ್ತಿದ್ದ ಜೀವ ರಕ್ಷಿಸುವ ಚಿಕಿತ್ಸೆ ದುರಂತಕ್ಕೆ ಕಾರಣವಾಗಿದ್ದ ಘಟನೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶದಲ್ಲಿ ನಡೆದಿತ್ತು. ಸತ್ನಾದ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆದ ರಕ್ತ ವರ್ಗಾವಣೆಯ ವೇಳೆ ಮಕ್ಕಳಿಗೆ ಎಚ್‌ಐವಿ ಸೋಂಕಿತ ರಕ್ತವನ್ನು ನೀಡಲಾಗಿತ್ತು. ಈ ಘಟನೆಯು ನಿರ್ಲಕ್ಷ್ಯದ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ನಿಯಮಿತ ರಕ್ತ ವರ್ಗಾವಣೆ ಮಾಡಲೇಬೇಕಿದ್ದ ಈ ಮಕ್ಕಳಿಗೆ ಒಟ್ಟು 189 ಯೂನಿಟ್ ರಕ್ತವನ್ನು ನೀಡಲಾಗಿತ್ತು. ಈ ರಕ್ತವನ್ನು ಮೂರು ವಿಭಿನ್ನ ರಕ್ತ ಬ್ಯಾಂಕ್‌ಗಳಿಂದ ಸಂಗ್ರಹಿಸಲಾಗಿದ್ದು, ಇದರ ಮೂಲಕ ಅವರು 150ಕ್ಕೂ ಹೆಚ್ಚು ದಾನಿಗಳಿಂದ ರಕ್ತವನ್ನು ಪಡೆದಿದ್ದರು. ಜಿಲ್ಲಾ ಮಟ್ಟದ ತನಿಖೆಯಲ್ಲಿ, ದಾನಿಗಳ ರಕ್ತದ ಮೂಲಕವೇ ಮಕ್ಕಳಿಗೆ ಎಚ್‌ಐವಿ ಸೋಂಕು ತಲುಪಿದೆ ಎಂದು ದೃಢಪಡಿಸಿತ್ತು. ಇದು ರಕ್ತ ತಪಾಸಣಾ ಪ್ರೋಟೋಕಾಲ್‌ಗಳಲ್ಲಿ ಸಂಭವಿಸಿದ ವೈಫಲ್ಯವನ್ನು ತೋರಿಸುತ್ತದೆ.