ಮೋಟಾರು ಪಂಪ್ ಕದ್ದರೆಂದು ಯುವಕರಿಬ್ಬರನ್ನು ಕಂಬಕ್ಕೆ ಕಟ್ಟಿ ವಿದ್ಯುತ್ ಶಾಕ್ ನೀಡಿದ ಗ್ರಾಮಸ್ಥರು
ಮೋಟಾರು ಪಂಪ್ ಕದ್ದರೆಂದು ಯುವಕರಿಬ್ಬರನ್ನು ಕಂಬಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಮಧ್ಯಪ್ರದೇಶದ ರೈಸೆನ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಜುಲೈ 4ರಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಪೊಲೀಸರಿಗೆ ವರದಿ ಮಾಡಿದ್ದು ಪ್ರಕರಣ ದಾಖಲಿಸಲಾಗಿದೆ.
ಸಂಗ್ರಹ ಚಿತ್ರ -
ಮಧ್ಯಪ್ರದೇಶ: ಯುವಕರಿಬ್ಬರನ್ನು ಕಲ್ಲಿಗೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಮಧ್ಯಪ್ರದೇಶದ (Madhya Pradesh crime) ರೈಸೆನ್ ಜಿಲ್ಲೆಯಲ್ಲಿ ನಡೆದಿದೆ. ಮೋಟಾರು ಪಂಪ್ (Motar pamp) ಕದ್ದಿದ್ದಾರೆ ಎನ್ನುವ ಆರೋಪದಲ್ಲಿ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಮೋಡಿಯಾ ಗ್ರಾಮದಲ್ಲಿ ಇಬ್ಬರು ಯುವಕರನ್ನು ಗ್ರಾಮಸ್ಥರು ಕಟ್ಟಿ ಹಾಕಿ ಥಳಿಸಿ, ವಿದ್ಯುತ್ ಶಾಕ್ ನೀಡಿದ್ದಾರೆ. ಈ ಘಟನೆ ಜುಲೈ 4ರಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (National Human Rights Commission) ನೀಡಿರುವ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.
ರೈಸೆನ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಮೋಡಿಯಾ ಗ್ರಾಮದಲ್ಲಿ ಧನಿಯಾಖೇಡಿ ಗ್ರಾಮದ ಬೈರಾಗಿ ಸಮುದಾಯಕ್ಕೆ ಸೇರಿದ ಇಬ್ಬರು ಯುವಕರಿಗೆ ಗ್ರಾಮಸ್ಥರು ಚಿತ್ರಹಿಂಸೆ ನೀಡಿದ್ದಾರೆ. ಯುವಕರು ಮೋಟಾರು ಪಂಪ್ ಕದ್ದಿದ್ದಾರೆ ಎನ್ನುವ ಆರೋಪದಲ್ಲಿ ಗದ್ದೆಗೆ ಎಳೆದುಕೊಂಡು ಹೋಗಿ ಥಳಿಸಿ, ಚಿತ್ರಹಿಂಸೆ ನೀಡಲಾಗಿದೆ.
ಯುವಕರು ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಿ ವಿದ್ಯುತ್ ಶಾಕ್ ಕೂಡ ನೀಡಲಾಗಿದೆ. ಇದರ ವಿಡಿಯೋ ಶನಿವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಅನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈ ಕುರಿತು ಪೊಲೀಸರಿಗೆ ದೂರು ನೀಡಿದೆ.
ವಿಡಿಯೋದಲ್ಲಿ ಯುವಕರಿಬ್ಬರನ್ನು ಕಂಬಕ್ಕೆ ಕಟ್ಟಿಹಾಕಿ ಜನರ ಗುಂಪೊಂದು ಅವರಿಗೆ ಹೊಡೆಯುತ್ತಿರುವುದನ್ನು ಕಾಣಬಹುದಾಗಿದೆ. ಕೆಲವರು ಅವರಿಗೆ ವಿದ್ಯುತ್ ಶಾಕ್ ಕೂಡ ನೀಡಿರುವುದನ್ನು ಕಾಣಬಹುದಾಗಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಪ್ರಿಯಾಂಕ್ ಕನೂಂಗೊ ಅವರು ತಮ್ಮ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ರೈಸನ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಶುತೋಷ್ ಗುಪ್ತಾ, ನೀರಾವರಿ ಮೋಟಾರ್ ಪಂಪ್ ಕದ್ದಿದ್ದಾರೆ ಎನ್ನುವ ಆರೋಪದಲ್ಲಿ ಗ್ರಾಮಸ್ಥರು ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರ ಬಳಿ ಇದ್ದ ಹಲವಾರು ಮೋಟಾರ್ ಪಂಪ್ ಗಳನ್ನೂ ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಪ್ರಕರಣ ಕೂಡ ದಾಖಲಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಶನಿವಾರ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ಗ್ರಾಮಸ್ಥರು ಅವರಿಗೆ ಚಿತ್ರಹಿಂಸೆ ನೀಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಪೊಲೀಸರು ತಕ್ಷಣವೇ ಹಲ್ಲೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕೂಡ ಬಂಧಿಸಲಾಗಿದೆ. ಅವರ ಮೇಲೆ ಹಲ್ಲೆ ನಡೆಸಿರುವವರಲ್ಲಿ ಕೆಲವರನ್ನು ಬಂಧಿಸಲಾಗಿದೆ. ಉಳಿದವರನ್ನು ಗುರುತಿಸಿ ಬಂಧಿಸುವ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ಅವರು ಹೇಳಿದರು.