ಪಶ್ಚಿಮ ಬಂಗಾಳ: ಬಿಜೆಪಿ ಕಾರ್ಯಕರ್ತರೊಬ್ಬರನ್ನು (BJP leader) ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ (west bengal) ನಡೆದಿದೆ. ಈ ಕುರಿತು ಬಿರ್ಭೂಮ್ (Birbhum district) ಎಸ್‌ಪಿ ವಿದಿತ್ ರಾಜ್ ಭುಂಡೇಶ್ ಅವರು ಮಾಹಿತಿ ನೀಡಿದ್ದು, ಬಿರ್ಭೂಮ್ ಜಿಲ್ಲೆಯ ತ್ರಿಶೂಲಪಟ್ಟಿ ಪ್ರದೇಶದಲ್ಲಿ ಭಾನುವಾರ ಸಂಜೆ ಚಂದನ್ ಭಲ್ಲಾ (46) ಎಂಬವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರು ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರಾಗಿದ್ದರು. ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ಬಳಿಕ ಸಾವಿನ ನಿಖರ ಕಾರಣವನ್ನು ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಈ ಘಟನೆಗೆ ಕಾರಣರಾದವರನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಭಲ್ಲಾ ಅವರ ಕುಟುಂಬ ಸದಸ್ಯರು ನೀಡಿರುವ ಮಾಹಿತಿ ಪ್ರಕಾರ ಭಾನುವಾರ ಸಂಜೆ ಚಂದನ್ ಭಲ್ಲಾ ಅವರು ಮನೆಯಿಂದ ಹೊರಡುವ ಮೊದಲು ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬರಿಂದ ಕರೆ ಬಂದಿತ್ತು ಎನ್ನಲಾಗಿದೆ ಎಂದು ಹೇಳಿದರು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಇಂಡಿಗೋ ವಿಮಾನಕ್ಕೆ ಹಾನಿ; ತಪ್ಪಿದ ಭಾರಿ ದುರಂತ
ಹತ್ಯೆಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಈ ಕುರಿತು ತನಿಖೆ ಪ್ರಾರಂಭಿಸಲಾಗಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದರು.
ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರು ಮತ್ತು ಬಿಜೆಪಿ ಮಂಡಲ ಅಧ್ಯಕ್ಷರಾಗಿದ್ದ ಚಂದನ್ ಭಲ್ಲಾ ಅವರನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬೋಲ್ಪುರ್‌ನ ವಾರ್ಡ್ ಸಂಖ್ಯೆ 12ರ ತ್ರಿಶೂಲಪಟ್ಟಿ ಪ್ರದೇಶದ ರಸ್ತೆಯೊಂದರಲ್ಲಿ ಅವರಿಗೆ ಅತ್ಯಂತ ಸಮೀಪದಿಂದ ಗುಂಡಿಕ್ಕಲಾಗಿದೆ. ಅವರು ಮೃತಪಟ್ಟಿದ್ದಾರೆ ಎಂದು ಖಚಿತ ಪಡಿಸಿಕೊಂಡ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಚಂದನ್ ಅವರು ಭೂಮಿ ಮಾರಾಟದ ವ್ಯವಹಾರ ನಡೆಸುತ್ತಿದ್ದರು. ಒಬ್ಬರಿಗೆ ನಿವೇಶನ ತೋರಿಸಲು ತಮ್ಮ ಬೈಕ್‌ನಲ್ಲಿ ಮನೆಯಿಂದ ಹೊರಗೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಅವರ ಪತ್ನಿ ಶ್ಯಾಮಲಿ ಭಲ್ಲಾ ತಿಳಿಸಿದ್ದಾರೆ.
ಮೃತರ ಹಿರಿಯ ಸಹೋದರ ಗೌರ್ ಚಂದ್ರ ಭಲ್ಲಾ ಅವರು ನೀಡಿರುವ ಮಾಹಿತಿ ಪ್ರಕಾರ ಭಾನುವಾರ ಬೆಳಗ್ಗೆ ನನೂರ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವು ಬಿಜೆಪಿ ಸದಸ್ಯರು ಮನೆಗೆ ಬಂದಿದ್ದರು. ಹತ್ಯೆಯ ಹಿಂದೆ ಅವರ ಕೈವಾಡವಿರಬಹುದು ಎಂದು ಶಂಕಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಕಾರ್ಯ ಪ್ರಾರಂಭಿಸಿದ್ದಾರೆ.
ಜೈಪುರ ಮೆಟ್ರೋದ ಸ್ವಚ್ಛತಾ ನಿರ್ವಹಣೆಗೆ ರಷ್ಯನ್ ಮಹಿಳೆ ಫಿದಾ: ದುಬೈ ಮೆಟ್ರೋದಂತಿದೆ ಎಂದು ಪ್ರಶಂಸೆ
ಚಂದನ್ ಭಲ್ಲಾ ಅವರ ಹತ್ಯೆ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿಯ ಬೋಲ್ಪುರ್ ಸಾಂಸ್ಥಿಕ ಜಿಲ್ಲಾ ಅಧ್ಯಕ್ಷ ಶ್ಯಾಮಪದ ಮೊಂಡಲ್, ಚಂದನ್ ಭಲ್ಲಾ ಅವರು ಪಕ್ಷದಲ್ಲಿ ದೀರ್ಘಕಾಲದಿಂದ ಸಕ್ರಿಯ ಕಾರ್ಯಕರ್ತರಾಗಿದ್ದರು. ಪಕ್ಷದ ಕಾರ್ಯಕರ್ತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದು ಅತ್ಯಂತ ದುರದೃಷ್ಟಕರ. ಈ ಕುರಿತು ಪೊಲೀಸ್ ಆಡಳಿತವು 24 ಗಂಟೆಯೊಳಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.