ಹೈದರಾಬಾದ್, ಜ.25: ಮಾಜಿ ಪ್ರಿಯಕರನ ಪತ್ನಿಗೆ ಮಹಿಳೆಯೊಬ್ಬಳು ಎಚ್ಐವಿ ವೈರಸ್ ಅನ್ನು ಇಂಜೆಕ್ಟ್ (Woman Injects HIV) ಮಾಡಿರುವ ಆಘಾತಕಾರಿ ಘಟನೆ ಆಂಧ್ರಪ್ರದೇಶದ (Andhra Pradesh) ಕರ್ನೂಲ್‍ನಲ್ಲಿ ನಡೆದಿದೆ. ಸಂತ್ರಸ್ತೆಯು ವೈದ್ಯೆಯಾಗಿದ್ದು, ತನ್ನ ಪತಿಯ ಮಾಜಿ ಪ್ರಿಯತಮೆ ಆಕೆಯ ವಿರುದ್ಧ ಈ ರೀತಿ ದುಷ್ಕೃತ್ಯ ಎಸಗಿದ್ದಾಳೆ. ಎಚ್‌ಐವಿ ಇಂಜೆಕ್ಷನ್ ನೀಡಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳನ್ನು ಕರ್ನೂಲ್ ನಿವಾಸಿ ಬಿ ಬೋಯಾ ವಸುಂಧರಾ, ಅದೋನಿಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ ಕೊಂಗೆ ಜ್ಯೋತಿ ಮತ್ತು 20ರ ಹರೆಯದ ಅವರ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ಜನವರಿ 24 ರಂದು ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಮ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತಾಂತರ ಜಾಲ; ಆರು ಮಂದಿಯ ಬಂಧನ
ಇತರ ಮೂವರೊಂದಿಗೆ ಸೇರಿ ರಸ್ತೆ ಅಪಘಾತ ಸಂಭವಿಸಿದಂತೆ ಸಂಚು ರೂಪಿಸಿದ ನಂತರ, ವಸುಂಧರಾ ತನ್ನ ಮಾಜಿ ಪ್ರಿಯಕರನ ಪತ್ನಿಯಾದ ವೈದ್ಯೆಗೆ ಎಚ್‌ಐವಿ ವೈರಸ್ ಅನ್ನು ಚುಚ್ಚಿದ್ದಾಳೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಂದ ಆರೋಪಿಯು ಎಚ್‌ಐವಿ ಸೋಂಕಿತ ರಕ್ತದ ಮಾದರಿಗಳನ್ನು ಪಡೆದುಕೊಂಡಿದ್ದಾಳೆ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಈ ಮಾದರಿಗಳು ಅಗತ್ಯವಿದೆ ಎಂದು ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ಸೋಂಕಿತ ರಕ್ತವನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಟ್ಟು, ನಂತರ ದಾಳಿಯ ಸಮಯದಲ್ಲಿ ಮಹಿಳಾ ವೈದ್ಯೆಗೆ ಚುಚ್ಚಿದ್ದಾಗಿ ಹೇಳಿಕೊಂಡಿದ್ದಾಳೆ.
ತನ್ನ ಮಾಜಿ ಪ್ರಿಯಕರ ಬೇರೊಬ್ಬಳು ಮಹಿಳೆಯನ್ನು ಮದುವೆಯಾಗಿರುವುದು ಆರೋಪಿ ಮಹಿಳೆಯ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿ ದಂಪತಿಗಳನ್ನು ಹೇಗಾದರೂ ಬೇರ್ಪಡಿಸಬೇಕೆಂದು ಸಂಚು ರೂಪಿಸಿದ್ದಾಳೆ. ಉದ್ದೇಶಪೂರ್ವಕ ರಸ್ತೆ ಅಪಘಾತದ ನಂತರ ಸಂತ್ರಸ್ತೆಗೆ ಸಹಾಯ ಮಾಡುವಂತೆ ನಟಿಸುತ್ತಾ ಎಚ್‌ಐವಿ ವೈರಸ್ ಅನ್ನು ಚುಚ್ಚಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಜನವರಿ 9 ರಂದು ಮಧ್ಯಾಹ್ನ 2.30ರ ಸುಮಾರಿಗೆ ಕರ್ನೂಲ್‌ನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಸಂತ್ರಸ್ತೆ, ಮಧ್ಯಾಹ್ನದ ಊಟಕ್ಕೆ ಕರ್ತವ್ಯ ಮುಗಿಸಿ ಸ್ಕೂಟರ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ವಿನಾಯಕ ಘಾಟ್‌ನ ಕೆ.ಸಿ. ಕಾಲುವೆ ಬಳಿ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಆಕೆಯ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದಾಗಿ ಆಕೆ ಬಿದ್ದು ಗಾಯಗೊಂಡಿದ್ದಾರೆ. ನಂತರ ಆರೋಪಿಗಳು ಸಹಾಯ ಮಾಡುವ ನೆಪದಲ್ಲಿ ಆಕೆಯ ಬಳಿಗೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಸುಂಧರಾ ಅವರನ್ನು ಆಟೋರಿಕ್ಷಾಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಸಂತ್ರಸ್ತೆ ಕೂಗಾಡಿದ್ದಾರೆ. ಆರೋಪಿ ಮಹಿಳೆಯು ಸ್ಥಳದಿಂದ ಪರಾರಿಯಾಗುವ ಮೊದಲು ಎಚ್‌ಐವಿ ಇಂಜೆಕ್ಷನ್ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ಪತಿ ಕೂಡ ವೈದ್ಯರಾಗಿದ್ದಾರೆ. ಅವರು ಜನವರಿ 10 ರಂದು ಕರ್ನೂಲ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 126, 118, 272ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.