17 ವರ್ಷದ ಅಪ್ರಾಪ್ತೆಗೆ ಮಾದಕ ದ್ರವ್ಯ ನೀಡಿ ಅಶ್ಲೀಲ ವಿಡಿಯೊ ಸೆರೆ ಹಿಡಿದ ಯುವಕ; ತಾಯಿ ಆತ್ಮಹತ್ಯೆಗೆ ಯತ್ನ
ಆಂಧ್ರ ಪ್ರದೇಶದಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಗೆ ಮಾದಕ ದ್ರವ್ಯ ನೀಡಿ ಅಶ್ಲೀಲ ವಿಡಿಯೊ ಸೆರೆ ಹಿಡಿದಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಬಹಿರಂಗವಾದ ನಂತರ ಬಾಲಕಿಯ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಾಂದರ್ಭಿಕ ಚಿತ್ರ -
ಅಮರಾವತಿ, ಡಿ. 15: 17 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವಕನೊಬ್ಬ ಮಾದಕ ದ್ರವ್ಯ ನೀಡಿ, ಆಕೆಯೊಂದಿಗೆ ಅಶ್ಲೀಲವಾಗಿ ವರ್ತಿಸಿದ್ದಾನೆ. ಅಪ್ರಾಪ್ತೆಯ ಒಪ್ಪಿಗೆಯಿಲ್ಲದೆ ಆಕೆಯೊಂದಿಗೆ ಫೋಟೊ ತೆಗೆದು, ವಿಡಿಯೊ ರೆಕಾರ್ಡ್ ಮಾಡಿದ್ದಾನೆ. ಇದನ್ನು ತಿಳಿದ ವಿದ್ಯಾರ್ಥಿನಿಯ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಈ ಘಟನೆ ನಡೆದಿದೆ.
TeluguScribe ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಪ್ರಕಾರ, ಅದೇ ಕಾಲೇಜಿನಲ್ಲಿ ಓದುತ್ತಿರುವ ಹಿರಿಯ ವಿದ್ಯಾರ್ಥಿಯೊಬ್ಬ ಇನ್‌ಸ್ಟಾಗ್ರಾಮ್ ಮೂಲಕ ಪ್ರಥಮ ವರ್ಷದ ಇಂಟರ್ಮೀಡಿಯೇಟ್ ವಿದ್ಯಾರ್ಥಿನಿಯನ್ನು ಪರಿಚಯಿಸಿಕೊಂಡಿದ್ದಾನೆ. ಆಕೆಯ ವಿಶ್ವಾಸ ಗಳಿಸಿದ ನಂತರ, ಎರಡನೇ ವರ್ಷದ ವಿದ್ಯಾರ್ಥಿ ಅಪ್ರಾಪ್ತ ವಯಸ್ಕ ಬಾಲಕಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಮನವೊಲಿಸಿ ಕ್ರಮೇಣ ಮಾದಕ ವ್ಯಸನಿಯನ್ನಾಗಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆಗೆ ವಂಚನೆ, ಲೈಂಗಿಕ ಕಿರುಕುಳ ಆರೋಪ; ಬ್ರಹ್ಮಾನಂದ ಗುರೂಜಿ ವಿರುದ್ಧ ಎಫ್‌ಐಆರ್
ಆರೋಪಿಯು ಅಪ್ರಾಪ್ತೆಯ ಒಪ್ಪಿಗೆಯಿಲ್ಲದೆ ಆಕೆಯ ಜತೆ ಅಶ್ಲೀಲವಾಗಿ ವರ್ತಿಸಿದ್ದಾನೆ. ವಿಡಿಯೊಗಳನ್ನು ರೆಕಾರ್ಡ್ ಮಾಡಿದ್ದಾನೆ ಮತ್ತು ಫೋಟೊಗಳನ್ನು ತೆಗೆದುಕೊಂಡಿದ್ದಾನೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.
ಹುಡುಗಿಯ ತಾಯಿ ಆಕೆಯ ಫೋನ್ ಪರಿಶೀಲಿಸಿದ್ದಾರೆ. ಯುವಕನ ಜತೆಗಿನ ಆತ್ಮೀಯ ಫೋಟೋಗಳನ್ನು ಕಂಡು ಪ್ರಶ್ನಿಸಿದ್ದಾರೆ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ಈ ಸಮಯದಲ್ಲಿ ಹುಡುಗಿ ತನ್ನ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಆರೋಪಿಸಲಾಗಿದೆ. ತನ್ನ ಪುತ್ರಿಯ ಮಾದಕ ವ್ಯಸನದ ಬಗ್ಗೆ ತಿಳಿದ ನಂತರ ಮಾನಸಿಕವಾಗಿ ಆಘಾತಕ್ಕೊಳಗಾದ ತಾಯಿ, ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆಕೆಯನ್ನು ಗುಂಟೂರು ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಂಟೂರು ಪೊಲೀಸ್ ವರಿಷ್ಠಾಧಿಕಾರಿ ರವಿಕೃಷ್ಣ ಹೇಳಿದ್ದಾರೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮತ್ತು ಅಪ್ರಾಪ್ತ ವಯಸ್ಕರಿಗೆ ಮಾದಕ ದ್ರವ್ಯಗಳನ್ನು ಪೂರೈಸುವವರನ್ನು ಗುರುತಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಕುಲ್ ಜಿಂದಾಲ್ ಹೇಳಿದ್ದಾರೆ.
ಇಲ್ಲಿದೆ ವಿಡಿಯೊ:
డ్రగ్స్కి బానిసైన కుమార్తె.. తల్లి సూసైడ్ అటెంప్ట్!
— ChotaNews App (@ChotaNewsApp) December 13, 2025
కుమార్తె మత్తు పదార్థాలకు బానిసగా మారడాన్ని చూడలేక ఓ తల్లి ఆత్మహత్యకు యత్నించింది. గుంటూరుకు చెందిన ఇంటర్ విద్యార్థినికి ఇన్స్టాలో ఇద్దరు కుర్రాళ్లు పరిచయమయ్యారు. వాళ్లు ఆ యువతికి మత్తు పదార్థాలు అలవాటు చేశారు. కుమార్తె… pic.twitter.com/g63DuS6FiK
ಕಳೆದ ಮೂರು ತಿಂಗಳುಗಳಲ್ಲಿ ಸುಮಾರು 150 ಮಾದಕ ದ್ರವ್ಯ ಬಳಕೆದಾರರನ್ನು ಗುರುತಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಜತೆಗೆ ಪೂರೈಕೆದಾರರು ಮತ್ತು ಮಾರಾಟಗಾರರನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು. ಪುನರ್ವಸತಿ ಪ್ರಕ್ರಿಯೆಯ ಭಾಗವಾಗಿ ಅಪ್ರಾಪ್ತೆಗೆ ವ್ಯಸನ ಮುಕ್ತ ಕೇಂದ್ರದಲ್ಲಿ ಸಮಾಲೋಚನೆ ಮತ್ತು ಚಿಕಿತ್ಸೆಯನ್ನು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಪ್ರತ್ಯೇಕ ಪ್ರಕರಣವೊಂದರಲ್ಲಿ, ಪಾರ್ಟಿ ಮಾಡುತ್ತಿದ್ದ ಯುವಕ- ಯುವತಿಯರಿದ್ದ ಕಟ್ಟಡಕ್ಕೆ ಪೊಲೀಸರು ದಾಳಿ ಮಾಡಿ ಹಣ ಕೇಳಿದ್ದಾರೆ. ಇದರಿಂದ ಭಯಗೊಂಡ ಯುವತಿಯೊಬ್ಬಳು ಹೋಟೆಲ್ ಬಾಲ್ಕನಿಯಿಂದ ಕೆಳಗೆ ಹಾರಿ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾನೂನು ಕಾಪಾಡಬೇಕಾದ ಪೊಲೀಸರೇ ಈ ರೀತಿ ವರ್ತಿಸಿದರೆ ಹೇಗೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.