Self Harming: ಯುವತಿ ಅನುಮಾನಾಸ್ಪದ ಸಾವು; ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ
25 ವರ್ಷದ ಯುವತಿ ಅನುಮಾನಾಸ್ಪದ ಸಾವನ್ನಪ್ಪಿದ್ದು, ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಮೃತಳನ್ನು ದಾವಣಗೆರೆ ಜಿಲ್ಲೆಯ ಮೂಲದ ಸುಪ್ರಿಯಾ ಎಂದು ಗುರುತಿಸಲಾಗಿದೆ. ಎಂಬಿಎ ಪದವಿ ಪಡೆದಿದ್ದ ಸುಪ್ರಿಯಾ, ಬೈಕ್ ರೈಡಿಂಗ್ ತರಬೇತಿ ಪಡೆಯುತ್ತಿದ್ದಳು ಎನ್ನಲಾಗಿದೆ.
-
Vishakha Bhat
Nov 2, 2025 11:34 AM
ಬೆಂಗಳೂರು: 25 ವರ್ಷದ ಯುವತಿ ಅನುಮಾನಾಸ್ಪದ ಸಾವನ್ನಪ್ಪಿದ್ದು, ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದೆ. ಮೃತಳನ್ನು ದಾವಣಗೆರೆ ಜಿಲ್ಲೆಯ ಮೂಲದ ಸುಪ್ರಿಯಾ ಎಂದು ಗುರುತಿಸಲಾಗಿದೆ. ಎಂಬಿಎ ಪದವಿ (Self Harming) ಪಡೆದಿದ್ದ ಸುಪ್ರಿಯಾ, ಬೈಕ್ ರೈಡಿಂಗ್ ತರಬೇತಿ ಪಡೆಯುತ್ತಿದ್ದಳು ಎನ್ನಲಾಗಿದೆ. ಈ ಘಟನೆ ಸುಬ್ರಹ್ಮಣ್ಯನಗರದ ಮಿಲ್ಕ್ ಕಾಲೋನಿಯಲ್ಲಿರುವ ಬಾಡಿಗೆ ಮನೆಯಲ್ಲಿ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸುಪ್ರಿಯಾ ಕಳೆದ ಎರಡು ವರ್ಷಗಳಿಂದ ಹೆಚ್ಚು ಕಾಲ ಸುಬ್ರಹ್ಮಣ್ಯನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಳು.
ಕಳೆದ ಎರಡು ದಿನಗಳಿಂದ ಆಕೆಯ ಕೋಣೆಯ ಬಾಗಿಲು ಲಾಕ್ ಆಗಿತ್ತು. ಇದರಿಂದ ಅನುಮಾನಗೊಂಡ ಮನೆ ಮಾಲೀಕರು ಇಂದು ಬಾಗಿಲು ತೆರೆದಾಗ ದಾರುಣ ದೃಶ್ಯ ಕಂಡುಬಂದಿತು. ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ತುಂಡಾಗಿ ಬಿದ್ದಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು ಎಂದು ತಿಳಿದು ಬಂದಿದೆ.
ದಾವಣಗೆರೆಯಿಂದ ಬೆಂಗಳೂರಿಗೆ ಉದ್ಯೋಗಕ್ಕಾಗಿ ಬಂದಿದ್ದ ಸುಪ್ರಿಯಾ, ಕಳೆದ ಎರಡು ದಿನಗಳಿಂದ ತಮ್ಮ ಪೋಷಕರ ಕರೆಗಳಿಗೆ ಸ್ಪಂದಿಸಿಲ್ಲ. ಮೊದಲ ದಿನ ಸುಮ್ಮನಿದ್ದ ಪೋಷಕರು ಎರಡನೇ ದಿನ ಆತಂಕಕ್ಕೀಡಾದರು. ತಕ್ಷಣ ಮನೆ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಮನೆ ಮಾಲೀಕರು ಸ್ಥಳಕ್ಕೆ ತೆರಳಿ ಬಾಗಿಲು ತೆರೆದಾಗಲೇ ಘಟನೆ ಬೆಳಕಿಗೆ ಬಂದಿದೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆಯೇ ಕಾರಣವೆಂದು ಅನುಮಾನಿಸಲಾಗಿದ್ದು, ಯುಡಿಆರ್ (ಅನುಮಾನಾಸ್ಪದ ಸಾವು) ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಪೊಲೀಸರು ಮನೆಯಲ್ಲಿ ಸಿಕ್ಕ ಸಾಕ್ಷ್ಯಗಳು, ಮೊಬೈಲ್ ಡೇಟಾ ಮತ್ತು ಸುತ್ತಲಿನ ಸಿಸಿಟಿವಿ ಫೂಟೇಜ್‌ಗಳನ್ನು ಪರಿಶೀಲಿಸುತ್ತಿದ್ದಾರೆ.