31 ವರ್ಷಗಳ ಹಿಂದೆ 13ರ ಹರೆಯದ ಬಾಲಕನ್ನು ಕೊಂದ ವ್ಯಕ್ತಿ ಅರೆಸ್ಟ್; ವೇಷ ಮರೆಸಿಕೊಂಡಾತ ಬಲೆಗೆ ಬಿದ್ದಿದ್ದು ಹೇಗೆ? ಇಲ್ಲಿದೆ ರೋಚಕ ಕಾರ್ಯಾಚರಣೆಯ ವಿವರ
31 ವರ್ಷಗಳ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆ ಕೊಲೆ ಪ್ರಕರಣದ ಅಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ. 1995ರಲ್ಲಿ ಬಾಲಕನನ್ನು ಕೊಲೆ ಮಾಡಿ ತಲೆ ಮರೆಸಿಕೊಂಡು, ಬೇರೆ ಬೇರೆ ಹೆಸರಿನಿಂದ ಗುರುತಿಸಿಕೊಂಡಿದ್ದ ಸಲೀಂ ಖಾನ್ ಆಲಿಯಾಸ್ ಸಲೀಂ ವಾಸ್ತಿಕ್‌ನನ್ನು ದೆಹಲಿ ಪೊಲೀಸರು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಲೋನಿಯಲ್ಲಿ ಬಂಧಿಸಿದ್ದಾರೆ.
ಸಲೀಂ ಖಾನ್ (ಸಂಗ್ರಹ ಚಿತ್ರ) -
ದೆಹಲಿ, ಏ. 25: 31 ವರ್ಷಗಳ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯನ್ನು ಬೆಚ್ಚಿಬೀಳಿಸಿದ ಕೊಲೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. 1995ರಲ್ಲಿ ಬಾಲಕನನ್ನು ಕೊಲೆ ಮಾಡಿ ತಲೆ ಮರೆಸಿಕೊಂಡು, ಬೇರೆ ಬೇರೆ ಹೆಸರಿನಿಂದ ಗುರುತಿಸಿಕೊಂಡಿದ್ದ ಅಪರಾಧಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. 2 ದಶಕಗಳಿಂದ ಪದೇ ಪದೆ ವಾಸಸ್ಥಾನವನ್ನು ವಿವಿಧ ರಾಜ್ಯಗಳಿಗೆ ಬದಲಾಯಿಸುತ್ತಿದ್ದ ಸಲೀಂ ಖಾನ್ (Salim Khan) ಆಲಿಯಾಸ್ ಸಲೀಂ ವಾಸ್ತಿಕ್‌ನನ್ನು (Salim Wastik) ದೆಹಲಿ ಪೊಲೀಸರು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಲೋನಿಯಲ್ಲಿ ಬಂಧಿಸಿದ್ದಾರೆ. ಆ ಮೂಲಕ ಹಲವು ವರ್ಷಗಳಿಂದ ಕಗ್ಗಂಟಾಗಿದ್ದ ಪ್ರಕರಣ ಬಗೆಹರಿದಿದೆ.
ಸಲೀಂ ವಾಸ್ತಿಕ್ ಹೆಸರಿನಲ್ಲಿ ಯುಟ್ಯೂಬ್ ನಡೆಸುತ್ತಿದ್ದ ಸಲೀಂ ಮೇಲೆ ಇದೇ ವರ್ಷದ ಫೆಬ್ರವರಿಯಲ್ಲಿ ದಾಳಿ ನಡೆದಿತ್ತು. ಸಲೀಂ ನಕಲಿ ಗುರುತಿನ ಮೂಲಕ ಹಲವು ವರ್ಷಗಳಿಂದ ಗಾಜಿಯಾಬಾದ್‌ನಲ್ಲಿ ವಾಸಿಸುತ್ತಿದ್ದಾನೆ. ಹಳೆಯ ದಾಖಲೆಗಳು, ಫಿಂಗರ್‌ಪ್ರಿಂಟ್ ಮತ್ತು ಫೋಟೊಗಳ ಆಧಾರದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಪಹರಣ, ಪಲಾಯನ ಮತ್ತು ಕೊಲೆ ಪ್ರಕರಣದಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
ಹರಿಯಾಣ, ಉತ್ತರ ಪ್ರದೇಶದಾದ್ಯಂತ ಪಯಣ
ʼʼಕಳೆದ 31 ವರ್ಷಗಳಲ್ಲಿ ಸಲೀಂ ಖಾನ್ ನಿರಂತರವಾಗಿ ಹರಿಯಾಣ ಮತ್ತು ಉತ್ತರ ಪ್ರದೇಶದ ಮೂಲಕ ಪ್ರಯಾಣಿಸುವ ಮೂಲಕ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದʼʼ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಜಿ ಐಆರ್‌ಎಸ್ ಅಧಿಕಾರಿ ಪುತ್ರಿ ಕೊಲೆ ಪ್ರಕರಣ; ವಿಚಾರಣೆಯಲ್ಲಿ ಹತ್ಯೆ ಬಗ್ಗೆ ಹಂತಕ ಹೇಳಿದ್ದೇನು?
ಅಂದು ಏನಾಗಿತ್ತು?
1995ರಲ್ಲಿ ನಡೆದ ಉದ್ಯಮಿಯ 13 ವರ್ಷದ ಮಗನ ಅಪಹರಣ ಮತ್ತು ಕೊಲೆ ಪ್ರಕರಣ ಇದಾಗಿದೆ. 1995ರ ಜನವರಿ 20ರಂದು ಸಿಮೆಂಟ್ ವ್ಯಾಪಾರಿಯ ಪುತ್ರನನ್ನು ಸಲೀಂ ಅಪಹರಿಸಿದ್ದ. ಬಾಲಕ ಓದುತ್ತಿದ್ದ ಶಾಲೆಯಲ್ಲಿ ಸಲೀಂ ಮಾರ್ಷಲ್ ಆರ್ಟ್ ತರಬೇತಿ ನೀಡುತ್ತಿದ್ದ. ಅಪಹರಿಸಿದ ಬಳಿಕ ಸಲೀಂ 30,000 ರುಪಾಯಿಗಾಗಿ ಬೇಡಿಕ ಇಟ್ಟಿದ್ದ. ಬಳಿಕ ಪೊಲೀಸರು ಅನುಮಾನದಿಂದ ಆತನನ್ನು ಬಂಧಿಸಿದ್ದರು. ಈ ವೇಳೆ ಸಲೀಂ ಬಾಲಕನನ್ನು ಕೊಂದು ಮುಸ್ತಫಾಬಾದ್‌ನಲ್ಲಿ ಚರಂಡಿಗೆ ಎಸೆದಿರುವುದಾಗಿ ಬಾಯ್ಬಿಟ್ಟಿದ್ದ. ಕೃತ್ಯಕ್ಕೆ ನೆರವಾದ ಅನಿಲ್‌ನನ್ನೂ ಪೊಲೀಸರು ಬಂಧಿಸಿದ್ದರು.
ಸುದೀರ್ಘ ವಿಚಾರಣೆ ನಡೆದ ಬಳಿಕ 1997ರ ಆಗಸ್ಟ್‌ನಲ್ಲಿ ಸಲೀಂ ಮತ್ತು ಅನಿಲ್‌ಗೆ ಜೀವಾವಧಿ ಶಿಕ್ಷೆ ವಿಧಿಲಾಯಿತು. 2000ರಲ್ಲಿ ಸಲೀಂಗೆ ಜಾಮೀನು ಲಭಿಸಿತು. ಅದಾದ ಬಳಿಕ ಸಲೀಂ ಜೈಲಿಗೆ ಬಂದು ಶರಣಾಗಲಿಲ್ಲ. 2011ರಲ್ಲಿ ಜುಲೈಯಲ್ಲಿ ಈತನ ಶಿಕ್ಷೆಯನ್ನು ಕೋರ್ಟ್ ಎತ್ತಿ ಹಿಡಿಯಿತು.
ಕಾನೂನಿನಿಂದ ತಪ್ಪಿಸಿಕೊಂಡ ಬಳಿಕ ಸಲೀಂ ತಲೆಮರೆಸಿಕೊಂಡು, ನಕಲಿ ಹೆಸರಿನಲ್ಲಿ ಓಡಾಡಿಕೊಂಡಿದ್ದ. ಗಾಜಿಯಾಬಾದ್‌ಗೆ ವಾಸಸ್ಥಳ ಬದಲಾಯಿಸುವ ಮುನ್ನ ಆತ ಕರ್ನಲ್ ಮತ್ತು ಅಂಬಲದಲ್ಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. 2010ರಲ್ಲಿ ಆತ ಸಲೀಂ ವಾಸ್ತಿಕ್ ಆಲಿಯಾಸ್ ಸಲೀಂ ಅಹ್ಮದ್ ಹೆಸರಿನಲ್ಲಿ ಗಾಜಿಯಾಬಾದ್‌ನಲ್ಲಿ ನೆಲೆ ನಿಂತಿದ್ದ. ಮಹಿಳೆಯರ ಬಟ್ಟೆಯ ಅಂಗಡಿ ತೆರೆದಿದ್ದ. ಜತೆಗೆ ಯುಟ್ಯೂಬರ್ ಎನಿಸಿಕೊಂಡಿದ್ದ.
ಪೊಲೀಸರು ಪತ್ತೆ ಹಚ್ಚಿದ್ದು ಹೇಗೆ?
ಜಾಮೀನು ಹೆಸರಿನಲ್ಲಿ ತಪ್ಪಿಸಿಕೊಂಡಿರುವ ಅಪರಾಧಿಗಳನ್ನು ಪತ್ತೆಹಚ್ಚುವಂತೆ ದೆಹಲಿ ಪೊಲೀಸರಿಗೆ ಟಾಸ್ಕ್ ನೀಡುವ ಮೂಲಕ ಈ ಪ್ರಕರಣ ಮತ್ತೆ ಮುನ್ನಲೆಗೆ ಬಂತು. ಜನಪ್ರಿಯ ಯುಟ್ಯೂಬರ್ ಸಲೀಂ ಖಾನ್ 31 ವರ್ಷಗಳ ಹಿಂದಿನ ಕೊಲೆ ಪ್ರಕರಣ ಅಪರಾಧಿ ಎನ್ನುವ ಸೂಚನೆ ಈ ಟೀಂಗೆ ಸಿಕ್ಕಿತು. ಬಳಿಕ ಅನುಮಾನಗೊಂಡ ಪೊಲೀಸರು ಹಳೆಯ ದಾಖಲೆ ಪರಿಶೀಲಿಸಿ, ಫೋಟೊಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಲೀಂನನ್ನು ವಶಕ್ಕೆ ಪಡೆದರು. ವಿಶೇಷ ಎಂದರೆ ಸಲೀಂನ ಜೀವನ ಚರಿತ್ರೆ ಬಾಲಿವುಡ್ ಚಿತ್ರವಾಗುವ ಸಿದ್ಧತೆಯಲ್ಲಿದೆ. ಅದಕ್ಕಿಂತ ಮೊದಲೇ ಆತ ಸೆರೆ ಸಿಕ್ಕಿದ್ದಾನೆ.
ಗೆಳೆಯನೊಟ್ಟಿಗೆ ಓಡಿ ಹೋದ ಯುವತಿ; ಯುವಕನ ವೃದ್ಧ ತಂದೆಯನ್ನು ಅಪಹರಿಸಿ ಮೂತ್ರ ಕುಡಿಸಿ ಚಿತ್ರಹಿಂಸೆ!
ಸಲೀಂ ಮೇಲೆ ದಾಳಿ ನಡೆದಿದ್ದೇಕೆ?
ತನ್ನನ್ನು ತಾನು ಮಾಜಿ ಮುಸ್ಲಿಂ ಎಂದು ಗುರುತಿಸಿಕೊಂಡಿದ್ದ ಸಲೀಂನ ಮೇಲೆ ಫೆಬ್ರವರಿಯಲ್ಲಿ ದಾಳಿ ನಡೆಯಿತು. ಗಾಜಿಯಾಬಾದ್‌ನಲ್ಲಿರುವ ಆತನ ಮನೆಗೆ ನುಗ್ಗಿದ ಇಬ್ಬರು ಹಲ್ಲೆ ನಡೆಸಿದ್ದರು. ದಾಳಿ ನಡೆಸಿದವರನ್ನು ಝೀಶನ್ ಮತ್ತು ಗುಲ್ಫಾಮ್ ಎಂದು ಗುರುತಿಸಲಾಗಿದೆ. ಮುಸ್ಲಿಂ ದೇವರನ್ನು, ಪ್ರವಾದಿಯನ್ನು ಸಲೀಂ ಅವಮಾನಿಸಿದ್ದಾನೆ ಎಂದು ಆರೋಪಿಸಿ ಹಲ್ಲೆ ನಡೆಸಲಾಯಿತು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.