ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dasara holidays: ಶಾಲೆಗಳ ದಸರಾ ರಜೆ ಅ.18 ರವರೆಗೆ ವಿಸ್ತರಣೆ; ಮೃತ ಸಮೀಕ್ಷಕರ ಕುಟುಂಬಕ್ಕೆ 20 ಲಕ್ಷ ಪರಿಹಾರ

Caste census: 10 ದಿನಗಳ ಕಾಲ ದಸರಾ ರಜೆ ವಿಸ್ತರಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಶಿಕ್ಷಣ ಸಚಿವರು ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಹಾಗೂ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಧನ್ಯವಾದ ಸಲ್ಲಿಸಿದ್ದಾರೆ.

ದಸರಾ ರಜೆ ಅ.18 ರವರೆಗೆ ವಿಸ್ತರಣೆ; ಮೃತ ಸಮೀಕ್ಷಕರ ಕುಟುಂಬಕ್ಕೆ ಪರಿಹಾರ

-

Prabhakara R Prabhakara R Oct 7, 2025 5:49 PM

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ, ಜಾತಿ ಸಮೀಕ್ಷೆ ಕಾರ್ಯ ಸಮರ್ಪಕವಾಗಿ ಪೂರ್ಣಗೊಳ್ಳಲು ಶಾಲೆಗಳ ದಸರಾ ರಜೆ (Dasara holidays) 10 ದಿನಗಳ ಕಾಲ ವಿಸ್ತರಿಸಬೇಕೆಂಬ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಅವರ ಮನವಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಂದಿಸಿದ್ದಾರೆ. ಮುಖ್ಯಮಂತ್ರಿಗಳು ಪ್ರತ್ಯೇಕ ಸಭೆ ನಡೆಸಿ, ಅ.8 ರಿಂದ ಅ.18 ರವರೆಗೆ ದಸರಾ ರಜೆ ವಿಸ್ತರಿಸಿದ್ದಾರೆ.

ಇನ್ನು ಜಾತಿ ಸಮೀಕ್ಷೆ ಮಾಡುವಾಗ ಮೃತಪಟ್ಟ ಸಮೀಕ್ಷಕರಿಗೆ 20 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಈಚೆಗೆ ಬಾಗಲಕೋಟೆ ಜಿಲ್ಲೆ ಬಾಗಲಕೋಟೆ ತಾಲ್ಲೂಕು ರಾಂಪೂರ ಬಳಿ ಸಮೀಕ್ಷೆಗೆ ತೆರಳಿದ ಶಿಕ್ಷಕಿಯೊಬ್ಬರು ಸೇರಿ ಮೂವರು ಮೃತಪಟ್ಟಿದ್ದರು. ಪರಿಹಾರ ನೀಡಲು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದ ಹಿನ್ನೆಲೆಯಲ್ಲಿ ಮೃತ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

ಸಮೀಕ್ಷೆ ಕಾರ್ಯ ಸಮರ್ಪಕವಾಗಿ ನಡೆಯಲು, ಶಾಲೆ ಆರಂಭಗೊಂಡರೆ ಅದಕ್ಕಾಗಿ ಶಿಕ್ಷಕರಿಗೆ ಆಗುವ ಸಮಸ್ಯೆಗಳ ಕುರಿತು, ಮಂಗಳವಾರ ಬೆಳಗ್ಗೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ನೇತೃತ್ವದಲ್ಲಿ ಶಿಕ್ಷಕ ಸಂಘದ ಮುಖಂಡರು ಹಾಗೂ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿ ರಶ್ಮಿ ಮಹೇಶ ಅವರನ್ನು ಭೇಟಿ ಮಾಡಿ, ಇನ್ನೂ ಕನಿಷ್ಠ 10 ದಿನಗಳ ಕಾಲ ರಜೆ ನೀಡಬೇಕೆಂದು ಮನವಿ ಮಾಡಿದರು.

ಸಮೀಕ್ಷೆದಾರರ ಶಾಲೆ ಒಂದು ಕಡೆಯಿಂದ, ಸಮೀಕ್ಷೆ ನಡೆಯುವ ಸ್ಥಳ ಮತ್ತೊಂದೆಡೆ ಇದೆ. ಹೀಗಾಗಿ ಎರಡೂ ಕಾರ್ಯ ಒಟ್ಟಿಗೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಮನವರಿಕೆ ಮಾಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳು ಪ್ರತ್ಯೇಕ ಸಭೆ ನಡೆಸಿ, ಅ.8 ರಿಂದ ಅ.18 ರವರೆಗೆ ದಸರಾ ರಜೆ ವಿಸ್ತರಿಸಿದ್ದಾರೆ. ಸಭೆಯ ನಂತರ ಸ್ವತಃ ಮುಖ್ಯಮಂತ್ರಿಗಳೇ ಶಿಕ್ಷಕರ ಸಂಘದ ಮನವಿಯ ಮೇರೆಗೆ ರಜೆ ನೀಡುವುದಾಗಿ ಘೋಷಿಸಿದರು. ಇನ್ನು ಅ.19 ರಿಂದ ಅ.22 ರವರೆಗೆ ದೀಪಾವಳಿ ರಜೆಗಳಿವೆ. ಹೀಗಾಗಿ ಅ.23 ರಂದು ಶಾಲೆಗಳು ಪುನರಾರಂಭಗೊಳ್ಳಲಿವೆ.

ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ವಿಶೇಷ ಮುನೀಶ್ ಮೌದ್ಗಿಲ್, ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಮಧುಸೂಧನ್ ಪಾಲ್ಗೊಂಡರೇ, ಟೆಲಿಕಾನ್ಫರೆನ್ಸ್ ಮೂಲಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ರಶ್ಮಿ ಮಹೇಶ್, ವಿಕಾಸ್‌ ಸುರಳ್ಕರ್ ಪಾಲ್ಗೊಂಡಿದ್ದರು.

ಇನ್ನು 10 ದಿನಗಳ ಕಾಲ ದಸರಾ ರಜೆ ವಿಸ್ತರಿಸಲು ಕಾರಣರಾದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ, ಶಿಕ್ಷಣ ಸಚಿವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಹಾಗೂ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅಭಿನಂದನೆ ಸಲ್ಲಿಸಿದ್ದಾರೆ.