ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SSLC, II PU Pass marks: ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಿಂಗ್‌ ಮಾರ್ಕ್ಸ್‌ ಕಡಿತ; ಇನ್ಮುಂದೆ ಇಷ್ಟು ಅಂಕ ಪಡೆದ್ರೆ ಸಾಕು!

Reduce SSLC, II PU pass marks: ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ 4ನೇ ವರದಿಯಲ್ಲಿಯೂ ಸಹ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣತಾ ಅಂಕಗಳನ್ನು ಕಡಿಮೆ ಮಾಡಲು ಶಿಫಾರಸು ಮಾಡಿತ್ತು. ಅದರಂತೆ ಪಾಸಿಂಗ್‌ ಮಾರ್ಕ್‌ ಕಡಿಮೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ ಪಾಸಿಂಗ್‌ ಮಾರ್ಕ್ಸ್‌ ಕಡಿತ

-

Prabhakara R Prabhakara R Oct 15, 2025 3:51 PM

ಬೆಂಗಳೂರು: 2025-26ನೇ ಸಾಲಿನಿಂದಲೇ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ (SSLC, II PU Pass marks) ಉತ್ತೀರ್ಣತಾ ಅಂಕವನ್ನು ಶೇ. 35 ರಿಂದ ಶೇ. 33 ಕ್ಕೆ ಇಳಿಕೆ ಮಾಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಚಿವರು, ಈ ನಿರ್ಧಾರವು ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣ ಹೆಚ್ಚಿಸುವ ಮತ್ತು ಸಿಬಿಎಸ್‌ಇ ಹಾಗೂ ನೆರೆ ರಾಜ್ಯಗಳ ಏಕರೂಪ ಪದ್ಧತಿಯನ್ನು ರಾಜ್ಯದಲ್ಲಿ ಅಳವಡಿಸುವ ದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಪ್ರಸ್ತುತ 625 ಅಂಕಗಳಿಗೆ ಕನಿಷ್ಠ ಶೇ. 35ರಷ್ಟು (219 ಅಂಕಗಳು) ಗಳಿಸುವುದು ಕಡ್ಡಾಯವಿತ್ತು. ಹೊಸ ನಿಯಮದ ಪ್ರಕಾರ, 625 ಅಂಕಗಳಿಗೆ ಕನಿಷ್ಠ 206 ಅಂಕ (ಶೇ. 33) ಗಳಿಸಿದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಪ್ರತಿ ವಿಷಯದಲ್ಲಿ ಕಡ್ಡಾಯವಾಗಿ ಕನಿಷ್ಠ 30 ಅಂಕ ಪಡೆಯಲೇಬೇಕು.

ದ್ವಿತೀಯ ಪಿಯುಸಿ ಪರೀಕ್ಷೆ ಉತ್ತೀರ್ಣವಾಗಲು 600 ಅಂಕಗಳಿಗೆ ಕನಿಷ್ಠ ಶೇ. 35ರಷ್ಟು (210 ಅಂಕಗಳು) ಪಡೆಯಬೇಕಿತ್ತು. ಹೊಸ ನಿಯಮದಂತೆ, 600 ಅಂಕಗಳಿಗೆ ಕನಿಷ್ಠ 198 ಅಂಕ (ಶೇ. 33) ಪಡೆದರೆ ಪಾಸ್ ಆಗುತ್ತಾರೆ. ಪ್ರತಿ ವಿಷಯದಲ್ಲಿ ಲಿಖಿತ ಮತ್ತು ಆಂತರಿಕ ಅಂಕ ಸೇರಿ 30 ಅಂಕ ಬರುವುದು ಕಡ್ಡಾಯ.

ಪಾಸಿಂಗ್ ಮಾರ್ಕ್ಸ್ ಕಡಿತ ಮಾಡುವ ವಿಚಾರವನ್ನು ಶಾಲಾ ಪರೀಕ್ಷಾ ಮಂಡಳಿ ಕರಡು ಅಧಿಸೂಚನೆ ಮೂಲಕ ಸಾರ್ವಜನಿಕ ಡೊಮೇನ್‌ಗೆ ಹಾಕಿ ಅಭಿಪ್ರಾಯ ಕೇಳಿತ್ತು. ಶೇ. 33ರಷ್ಟು ಅಂಕದ ಪರವಾಗಿ 701 ಪತ್ರಗಳು ಬಂದಿದ್ವು. ಆದರೆ, ಶೇ. 35 ಅಂಕ ಪರವಾಗಿ ಕೇವಲ 8 ಪತ್ರಗಳು ಬಂದಿದ್ದವು. ಹೀಗಾಗಿ ಬಹುಮತದ ಅಭಿಪ್ರಾಯಕ್ಕೆ ಮನ್ನಣೆ ನೀಡಿ 2025-26ನೇ ಸಾಲಿನಿಂದ ಶೇ. 33ರಷ್ಟು ಮಾನದಂಡವನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಆಡಳಿತ ಸುಧಾರಣಾ ಆಯೋಗ-2 ಶಿಫಾರಸು

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಸಿ.ಬಿ.ಎಸ್.ಇ ಮತ್ತು ನೆರೆ ರಾಜ್ಯಗಳಲ್ಲಿ ಉತ್ತೀರ್ಣತೆ ಅಂಕಗಳಿಗೆ ಸಂಬಂಧಪಟ್ಟಂತೆ ಎಲ್ಲಾ ವಿಷಯಗಳಲ್ಲೂ ಹಾಗೂ ಪ್ರತಿ ವಿಷಯದಲ್ಲಿ ಕನಿಷ್ಠ ಶೇಕಡಾ 33 ರಷ್ಟು ಅಂಕಗಳನ್ನು ಪಡೆಯಬೇಕೆಂಬ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದೆ. ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ 4ನೇ ವರದಿಯಲ್ಲಿಯೂ ಸಹ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಉತ್ತೀರ್ಣತಾ ಅಂಕಗಳನ್ನು ಕಡಿಮೆ ಮಾಡಲು ಶಿಫಾರಸು ಮಾಡಿತ್ತು.

ಪ್ರಸ್ತುತ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಕನಿಷ್ಠ ಶೇಕಡಾ 35 ಅಂಕಗಳನ್ನು ಪಡೆಯಬೇಕೆಂಬ ನಿಯಮವಿರುತ್ತದೆ. ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣವನ್ನು ಹೆಚ್ಚಿಸುವ ದೃಷ್ಟಿಯಿಂದ ಮತ್ತು ಸಿಬಿಎಸ್‌ಇ ಹಾಗೂ ನೆರೆರಾಜ್ಯಗಳ ಉತ್ತೀರ್ಣತಾ ಮಾನದಂಡವನ್ನು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಸಹ ಅನ್ವಯವಾಗುವಂತೆ ಏಕರೂಪ ಪದ್ಧತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮಂಡಲಿ ನಿಯಮಗಳಲ್ಲಿ ತಿದ್ದುಪಡಿ ತರಲು ಕರಡು ನಿಯಮದ ಅಧಿಸೂಚನೆಯಲ್ಲಿ ಆಕ್ಷೇಪಣೆ ಮತ್ತು ಸಲಹೆಗಳನ್ನು ನೀಡಲು 15 ದಿನಗಳ ಕಾಲಾವಕಾಶ ನೀಡಿ ರಾಜ್ಯಪತ್ರ ಹೊರಡಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ | SSLC-2nd PUC Exam: ರಾಜ್ಯದಲ್ಲಿ ಇನ್ನುಮುಂದೆ ಎಸ್‌ಎಸ್ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಶೇ. 33 ಅಂಕ ಬಂದ್ರೂ ಪಾಸ್; ಅಧಿಸೂಚನೆ ಪ್ರಕಟ

ಕರಡು ಅಧಿಸೂಚನೆಯ ಪರವಾಗಿ 701 ಪತ್ರಗಳು ಸ್ವೀಕೃತವಾಗಿದ್ದು ಹಾಗೂ ಕೇವಲ 08 ಪತ್ರಗಳಲ್ಲಿ ಇದಕ್ಕೆ ಆಕ್ಷೇಪಿಸಿರುವುದರಿಂದ ಕರಡು ಅಧಿಸೂಚನೆಯಲ್ಲಿನ ನಿಯಮ ತಿದ್ದುಪಡಿಯನ್ನು 2025-26ನೇ ಸಾಲಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಈ ನೂತನ ನಿಯಮವು 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಾಜರಾಗುವ ಹೊಸ (REGULAR) ವಿದ್ಯಾರ್ಥಿಗಳು, ಪುನರಾವರ್ತಿತ (REPEATER) ಹಾಗೂ ಖಾಸಗಿ (PRIVATE) ಅಭ್ಯರ್ಥಿಗಳಿಗೂ ಅನ್ವಯವಾಗುತ್ತದೆ.