#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

PM Narendra Modi: ಅಸ್ವಸ್ಥ ಬಿಜೆಪಿ ಕಾರ್ಯಕರ್ತನಿಗಾಗಿ ಮಧ್ಯದಲ್ಲೇ ಭಾಷಣ ನಿಲ್ಲಿಸಿದ ಮೋದಿ

ಸುಮಾರು 27 ವರ್ಷಗಳ ಬಳಿಕ ಬಿಜೆಪಿ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದಿದೆ. 48 ಕ್ಷೇತ್ರಗಳಲ್ಲಿ ಕಮಲ ಪಡೆ ಜಯಗಳಿಸಿದ್ದು, ಆಪ್‌ನ ಹ್ಯಾಟ್ರಿಕ್‌ ಕನಸು ನುಚ್ಚು ನೂರಾಗಿದೆ. ಬಿಜೆಪಿ ಗೆಲುವಿನ ಬೆನ್ನಲ್ಲೇ ಕಚೇರಿಗೆ ಆಗಮಿಸಿದ ಪ್ರಧಾನಿ ಮೋದಿ ಸಾವಿರಾರು ಕಾರ್ಯಕರ್ರನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಅಸ್ವಸ್ಥಗೊಂಡಿದ್ದ ಬಿಜೆಪಿ ಕಾರ್ಯಕರ್ತನನ್ನು ಗಮನಿಸಿ ತಮ್ಮ ಭಾಷಣವನ್ನು ಕೆಲಹೊತ್ತು ನಿಲ್ಲಿಸಿ ಆತನನ್ನು ಉಪಚರಿಸುವಂತೆ ಕೇಳಿಕೊಂಡರು.

ಬಿಜೆಪಿ ಕಾರ್ಯಕರ್ತನಿಗಾಗಿ ಮಧ್ಯದಲ್ಲೇ ಭಾಷಣ ನಿಲ್ಲಿಸಿದ ಮೋದಿ

Profile Ramesh B Feb 8, 2025 8:37 PM

ಹೊಸದಿಲ್ಲಿ: ಇಡೀ ದೇಶದ ಕುತೂಹಲ ಕೆರಳಿಸಿದ ದಿಲ್ಲಿ ವಿಧಾಸಭಾ ಚುನಾಣೆಯ ಫಲಿತಾಂಶ ಹೊರ ಬಿದ್ದಿದ್ದು (Delhi Election Results 2025), ಬಿಜೆಪಿ (BJP) ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. 70 ಸ್ಥಾನಗಳ ಪೈಕಿ 48 ಕ್ಷೇತ್ರಗಳಲ್ಲಿ ಕಮಲ ಅರಳಿದೆ. ಬಿಜೆಪಿಯ ಪ್ರಚಂಡ ಗೆಲುವಿನ ನಂತರ ಪ್ರಧಾನಿ ನರೇಂದ್ರ ಮೋದಿ (PM Narendra Modi) ದಿಲ್ಲಿಯ ಬಿಜೆಪಿ ಪ್ರಧಾನ ಕಚೇರಿಗೆ ಆಗಮಿಸಿದರು. ಬಳಿಕ ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕಾರ್ಯಕರ್ತನೊಬ್ಬ ಅಸ್ವಸ್ಥನಾಗಿದ್ದನ್ನು ವೇದಿಕೆ ಮೇಲಿನಿಂದಲೇ ಗಮನಿಸಿದ ಮೋದಿ ತಮ್ಮ ಭಾಷಣವನ್ನು ಸ್ವಲ್ಪ ಹೊತ್ತು ತಡೆದು, ಆತನಿಗೆ ನೀರು ಒದಗಿಸುವಂತೆ ಪಕ್ಕದಲ್ಲಿದ್ದವರಿಗೆ ಸೂಚಿಸಿದರು.

ರಾಷ್ಟ್ರ ರಾಜಧಾನಿ ದಿಲ್ಲಿ ಸೇರಿದಂತೆ ಸುತ್ತಮುತ್ತಲಿನ ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಬಿಜೆಪಿ ಏಕಕಾಲಕ್ಕೆ ಅಧಿಕಾರದಲ್ಲಿದೆ ಎಂದು ಮಾತನಾಡುತ್ತಿದ್ದ ಪ್ರಧಾನಿ, ವೇದಿಕೆಯ ಹತ್ತಿರದ ಸಾಲಿನಲ್ಲಿ ಕುಳಿತಿದ್ದ ಪಕ್ಷದ ಕಾರ್ಯಕರ್ತನೊಬ್ಬ ಅನಾರೋಗ್ಯದಿಂದ ಬಳಲುತ್ತಿರುವುದನ್ನು ಗಮನಿಸಿದರು.



ಕೂಡಲೇ ತಮ್ಮ ಮಾತನ್ನು ನಿಲ್ಲಿಸಿದ ಮೋದಿ, ʼʼಅವರು ನಿದ್ದೆ ಮಾಡುತ್ತಿದ್ದಾರಾ? ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದಾರಾ? ಡಾಕ್ಟರ್‌ ಕೂಡಲೇ ಅವರನ್ನು ಪರೀಕ್ಷಿಸಿ. ಅವರಿಗೆ ಸ್ವಲ್ಪ ನೀರು ಕೊಡಿ. ಅವರನ್ನು ಗಮನಿಸಿʼʼ ಎಂದು ಪಕ್ಕದಲ್ಲಿದ್ದವರಿಗೆ ಸೂಚಿಸಿದರು. ನೀರು ಕುಡಿದ ಆತ ಸುಧಾರಿಸಿಕೊಂಡಿರುವುದಾಗಿ ತಿಳಿಸಿದ ಬಳಿಕ ಮೋದಿ ತಮ್ಮ ಮಾತು ಮುಂದುವರಿಸಿದರು.

"ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ಈ ಎಲ್ಲ ರಾಜ್ಯಗಳಲ್ಲಿ (ದಿಲ್ಲಿ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ) ಬಿಜೆಪಿ ಸರ್ಕಾರವಿದೆ. ಈ ಕಾಕತಾಳೀಯ ಬೆಳವಣಿಗೆ ಅಭಿವೃದ್ಧಿಯ ಅಸಂಖ್ಯಾತ ಸಾಧ್ಯತೆಗಳನ್ನು ತೆರೆಯಲು ನೆರವಾಗಲಿದೆ. ಈ ಇಡೀ ಪ್ರದೇಶಗಳಲ್ಲಿ ಮೂಲ ಸೌಕರ್ಯ ಹೆಚ್ಚಿಸುವತ್ತ ಗಮನ ಹರಿಸಲಾಗುತ್ತಿದೆʼʼ ಎಂದು ಅವರು ಭರವಸೆ ನೀಡಿದರು.

ಆಪ್‌ ವಿರುದ್ಧ ವಾಗ್ದಾಳಿ

ಇದೇ ವೇಳೆ ಮೋದಿ ಅವರು ಆಪ್‌ ವಿರುದ್ಧ ವಾಗ್ದಾಳಿ ನಡೆಸಿದರು. ಆಪ್‌ ಸರ್ಕಾರ ಪವಿತ್ರ ಯಮುನಾ ನದಿಯನ್ನು ಅಪವಿತ್ರಗೊಳಿಸಿದೆ ಎಂದು ಆರೋಪಿಸಿದರು. ʼʼತಾಯಿ ಯಮುನಾ ನಮ್ಮ ಆಧ್ಯಾತ್ಮಿಕತೆಯ ಸಂಕೇತ. ಆಕೆಯ ಆಶೀರ್ವಾದ ಯಾವತ್ತೂ ನಮ್ಮ ಮೇಲಿರಲಿ ಎಂದು ನಾವೆಲ್ಲ ಆಶೀಸುತ್ತೇವೆ. ಆದರೆ ಆಪ್‌ ನಾಯಕರು ತಾಯಿ ಯಮುನಾ ಬಗ್ಗೆ ಯಾವುದೇ ಕಾಳಜಿ ವಹಿಸಿಲ್ಲ. ಆ ಮೂಲಕ ನಮ್ಮ ನಂಬಿಕೆಗಳಿಗೆ ತೀವ್ರ ಧಕ್ಕೆ ತಂದಿದ್ದಾರೆ. ದಿಲ್ಲಿಯ ಜನರ ನಂಬಿಕೆಗಳನ್ನು ಆಪ್‌ ನಾಯಕರು ತುಳಿದಿದ್ದಾರೆ. ನಂತರ ಇದಕ್ಕೆ ಹರಿಯಾಣ ಕಾರಣ ಎಂದು ಬಹಿರಂಗವಾಗಿ ಆರೋಪಿಸುತ್ತಿದ್ದಾರೆ" ಎಂದು ಪ್ರಧಾನಿ ಆರೋಪಿಸಿದರು.

ಈ ಸುದ್ದಿಯನ್ನೂ ಓದಿ: PM Narendra Modi: ದಿಲ್ಲಿ ಇನ್ಮುಂದೆ ಆಪ್‌ ಮುಕ್ತ; ವಿಕಾಸ, ವಿಶ್ವಾಸ್‌, ವಿಷನ್‌ಗೆ ಸಿಕ್ಕ ಗೆಲುವಿದು-ಪ್ರಧಾನಿ ಮೋದಿ ಅಬ್ಬರ

''ಯಮುನಾ ನದಿಯನ್ನು ದಿಲ್ಲಿಯ ಗುರುತನ್ನಾಗಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡುತ್ತಿದ್ದೇವೆ. ಇದೊಂದು ಕಠಿಣ ಸವಾಲು ಮತ್ತು ಸಾಧಿಸಲು ತುಂಬ ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ನನಗೆ ಗೊತ್ತು. ಆದರೆ ನಮ್ಮ ನಿರ್ಧಾರ ದೃಢವಾಗಿದ್ದಾಗ ಈ ಗುರಿ ಅಸಾಧ್ಯವೇನಲ್ಲʼʼ ನರೇಂದ್ರ ಮೋದಿ ತಿಳಿಸಿದರು.