Babucha Pant Fashion: ಸಮ್ಮರ್ ಫ್ಯಾಷನ್‌ಗೆ ಮರಳಿದ ದೊಗಲೆ ಬಬುಚಾ ಪ್ಯಾಂಟ್
Summer Fashion: ಸಮ್ಮರ್ ಫ್ಯಾಷನ್‌ನಲ್ಲಿ ನಾನಾ ವಿನ್ಯಾಸದ ಬಬುಚಾ ಪ್ಯಾಂಟ್‌ಗಳು ಮರಳಿವೆ. ಡ್ಯಾನ್ಸ್ ಪ್ರಿಯರ ಫೇವರೇಟ್ ಲಿಸ್ಟ್‌ನಲ್ಲಿದ್ದ ಈ ಶೈಲಿಯ ಪ್ಯಾಂಟ್‌ಗಳು, ಇದೀಗ ಹೊಸ ವಿನ್ಯಾಸದಲ್ಲಿ ಬಿಡುಗಡೆಗೊಂಡಿದ್ದು, ಎಲ್ಲಾ ವರ್ಗದ ಯುವತಿಯರನ್ನು ಸೆಳೆದಿವೆ. ಹಾಗಾದಲ್ಲಿ, ಇದ್ಯಾವ ಬಗೆಯ ಪ್ಯಾಂಟ್? ಆಯ್ಕೆ ಹೇಗೆ? ಇಲ್ಲಿದೆ ವಿವರ.

ಚಿತ್ರಗಳು: ಪಿಕ್ಸೆಲ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಫ್ಯಾಷನ್‌ನಲ್ಲಿ ಬಬುಚಾ ಪ್ಯಾಂಟ್‌ಗಳು (Babucha Pant fashion) ಮರಳಿವೆ. ಹೌದು, ಈ ಬೇಸಿಗೆಯ ಸೀಸನ್‌ನಲ್ಲಿ, ಟೀನೇಜ್ ಹಾಗೂ ಕಾಲೇಜು ಯುವತಿಯರನ್ನು ಸವಾರಿ ಮಾಡತೊಡಗಿವೆ. ಇಷ್ಟು ದಿನ ಲೆಗ್ಗಿಂಗ್ಸ್-ಜೆಗ್ಗಿಂಗ್ಸ್-ಟ್ರೆಗ್ಗಿಂಗ್ಸ್, ಧೋತಿ ಪ್ಯಾಂಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಹುಡುಗಿಯರು ಕೂಡ ಈ ದೊಗಲೆ ಬಬುಚಾ ಪ್ಯಾಂಟ್‌ನತ್ತ ವಾಲತೊಡಗಿದ್ದಾರೆ. ಐಸ್ ವಾಶ್, ಜೆಟ್ ಬ್ಲಾಕ್, ಲ್ಯಾವೆಂಡರ್, ಗ್ರೇ, ತಿಳಿ ನೀಲಿ, ಒಂಬ್ರೆಯಂತಹ ಮಿಕ್ಸ್ ಅಂಡ್ ಮ್ಯಾಚ್ ಹಾಗೂ ಡಾರ್ಕ್ ಶೇಡ್‌ಗಳ ಬಬುಚಾ ಪ್ಯಾಂಟ್‌ಗಳು ಚಾಲ್ತಿಯಲ್ಲಿವೆ. ಆಲ್ ಟೈಂ ಬ್ಲೀಚ್ ಬ್ಲೂ, ಐಸ್ ಬ್ಲ್ಯೂ ಶೈನಿ ಶೇಡ್ಸ್‌ನ ಹಾಟ್ ಕಲರ್‌ಗಳು ಟ್ರೆಂಡ್‌ಗೆ ಸೇರಿವೆ. ಇನ್ನು, ಬೂಟಿನೊಂದಿಗೆ ಬಬುಚಾ ಪ್ಯಾಂಟ್ ಧರಿಸುವ ಫ್ಯಾಷನ್ ಮಕ್ಕಳನ್ನು ಆವರಿಸಿಕೊಂಡಿವೆ. ಚಂಕಿ ಬೆಲ್ಟ್ ಜತೆ ಬಬುಚಾ ಪ್ಯಾಂಟ್ ಧರಿಸುವ ಕಾನ್ಸೆಪ್ಟ್, ಐಟಿ-ಬಿಟಿ ಹುಡುಗಿಯರ ಲಿಸ್ಟ್‌ಗೆ ಸೇರಿವೆ.

ಏನಿದು ಬಬುಚಾ ಪ್ಯಾಂಟ್ಸ್?
ನೋಡಲು ದೊಗಲೆ, ಎಷ್ಟು ಬೇಕಾದರೂ ಕಾಲು ಅಗಲಿಸಬಹುದು. ಸೆಮಿ ಧೋತಿ ಪ್ಯಾಂಟ್‌ನಂತೆ ಕಂಡರೂ ಅದಲ್ಲ. ಪಟಿಯಾಲ ಪ್ಯಾಂಟ್‌ನಂತಿದ್ದರೂ ಅದಲ್ಲ! ಇಂಡಿಯನ್ ಹಾಗೂ ಪಾಶ್ಚಿಮಾತ್ಯ ಪ್ಯಾಂಟ್‌ನ ಸಮಾಗಮವೇ ಈ ಬಬುಚಾ ಪ್ಯಾಂಟ್ ಎಂದರೂ ತಪ್ಪಾಗಲಾರದು! ಎನ್ನುತ್ತಾರೆ ಫ್ಯಾಷನಿಸ್ಟಾ ರಾಜ್. ಅವರ ಪ್ರಕಾರ, ಜಿಪ್ ಕಫ್, ಆ್ಯಸಿಡ್ ವಾಶ್, ಫಡ್ಜ್ ಕ್ರಾಪ್, ಕಾಟನ್ ರಿಚ್, ಫ್ರೀ ಸ್ಪಿರೀಟ್ ಶೇಡ್‌ನವು ಸದ್ಯ ಫಂಕಿ ಸ್ಟೈಲ್ ಬಯಸುವ ಹುಡುಗಿಯರ ವಾರ್ಡ್ರೋಬ್ ಸೇರಿವೆ. ಮೊದಲೆಲ್ಲಾ ಡ್ಯಾನ್ಸರ್‌ಗಳ ಸ್ವತ್ತಾಗಿದ್ದ ಈ ಪ್ಯಾಂಟ್ ಇದೀಗ ಹುಡುಗಿಯರ ಅಚ್ಚುಮೆಚ್ಚಿನ ಫ್ಯಾಷನ್ ಉಡುಪಾಗಿದೆ. ಉದ್ದಗಿರುವವರಿಗೆ, ದಪ್ಪಗಿರುವವರಿಗೆ ಬಬುಚಾ ಪ್ಯಾಂಟ್ ಸಕತ್ತಾಗಿ ಕಾಣಿಸುತ್ತವೆ.

ಸೆಲೆಬ್ರೆಟಿಗಳ ಚಾಯ್ಸ್
ಪ್ಯಾರೀಸ್ ಹಿಲ್ಟನ್, ಲಾರೆನ್ ಕಾನ್‌ರಾರಯಡ್, ಬ್ಲೇಕ್ ಲೈವ್ಲಿ, ಅನನ್ಯಾ, ಕರೀನಾ ಕಪೂರ್, ಶರ್ಲಿನ್, ದಿಶಾ ಸೇರಿದಂತೆ ನಾನಾ ಹಾಲಿವುಡ್-ಬಾಲಿವುಡ್ ಸ್ಟಾರ್‌ಗಳು ಈ ಬಬುಚಾ ಪ್ಯಾಂಟ್‌ನ ಅಭಿಮಾನಿಗಳು.
ಈ ಸುದ್ದಿಯನ್ನೂ ಓದಿ | Star Fashion: ಕಣ್ಮನ ಸೆಳೆದ ನಟಿ ಆರಾಧನಾ ರಾಮ್ ಸಮ್ಮರ್ ಲುಕ್
ಬಬುಚಾ ಪ್ಯಾಂಟ್ ಪ್ರಿಯರಿಗೆ ಟಿಪ್ಸ್
* ಬಬುಚಾ ಪ್ಯಾಂಟ್ ಆಯ್ಕೆ ಮಾಡುವಾಗ ಶೇಡ್ಸ್ ಬಗ್ಗೆ ತಿಳಿದಿರಲಿ.
* ದಪ್ಪಗಿರುವವರು ಕ್ರೆಪ್ ಹಾಗೂ ನೈಲಾನ್ ಬಟ್ಟೆಯ ಗಾಢ ವರ್ಣದ ಬಣ್ಣಗಳನ್ನೇ ಆಯ್ಕೆ ಮಾಡಿಕೊಂಡರೆ ಒಳಿತು.
* ಟ್ರಾವೆಲ್ ಮಾಡುವವರಿಗೆ ಬೆಸ್ಟ್ ಡ್ರೆಸ್‌ಕೋಡ್.
* ಉದ್ಯೋಗಸ್ಥ ಮಹಿಳೆಯರಿಗೆ ಶಾರ್ಟ್ ಕುರ್ತಾ, ಫ್ಲೇರಿ ಟಾಪ್ ಈ ಪ್ಯಾಂಟ್‌ಗೆ ವಂಡರ್‌ಫುಲ್ ಮ್ಯಾಚಿಂಗ್
* ಡೇನಿಮ್ ಜತೆ ಸೂಟ್ ಆಗದು.
* ಬಬುಚಾ ದೊಗಲೆಯಾಗಿರುವುದರಿಂದ ಸನ್ನಿವೇಶಕ್ಕೆ ತಕ್ಕಂತೆ ಧರಿಸುವುದು ಒಳಿತು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)