ಆಸ್ಟ್ರೇಲಿಯಾದಲ್ಲಿ ಮತ್ತೊಂದು ಶೂಟೌಟ್; ಬೋಂಡಿ ಬೀಚ್ ದಾಳಿಯ ಶೋಕಾಚರಣೆಯಂದೇ ಗುಂಡಿನ ದಾಳಿ, ಮೂವರು ಸಾವು
Shootout in Australia: ಆಸ್ಟ್ರೇಲಿಯಾದಲ್ಲಿ ಮತ್ತೊಂದು ಭೀಕರ ಗುಂಡಿನ ದಾಳಿ ನಡೆದಿದೆ. ಈ ದಾಳಿ, ಸಿಡ್ನಿಯ ಬೋಂಡಿ ಬೀಚ್ ದಾಳಿಯಲ್ಲಿ ಮೃತಪಟ್ಟವರ ಸ್ಮರಣಾರ್ಥ ಶೋಕಾಚರಣೆಯ ದಿನವೇ ಸಂಭವಿಸಿದ್ದು, ಮೂವರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷ ಸೇರಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಮತ್ತೊಂದು ಶೂಟೌಟ್ -
ಕ್ಯಾನ್‍ಬೆರಾ, ಜ. 22: ಡಿಸೆಂಬರ್‌ನಲ್ಲಿ ಆಸ್ಟ್ರೀಲಿಯಾದ ಬೋಂಡಿ ಬೀಚ್‌ನಲ್ಲಿ ಆಯೋಜಿಸಿದ್ದ ಯಹೂದಿ ಉತ್ಸವದ ವೇಳೆ ನಡೆದ ಗುಂಡಿನ ದಾಳಿಯಲ್ಲಿ (Bondi Beach attack) 15 ಜನರು ಮೃತಪಟ್ಟ ಘಟನೆಯ ರಾಷ್ಟ್ರೀಯ ಶೋಕಾಚರಣೆಯ ದಿನದಂದು, ಮತ್ತೊಂದು ಶೂಟೌಟ್ ಜರುಗಿದೆ. ಕೆಲವೇ ದಿನಗಳ ಅಂತರದಲ್ಲಿ ನಡೆದ ಮತ್ತೊಂದು ದಾಳಿಗೆ ಆಸ್ಟ್ರೇಲಿಯಾ (Australia) ಬೆಚ್ಚಿ ಬಿದ್ದಿದೆ. ಬೋಂಡಿ ಬೀಚ್ ದಾಳಿಯ ಒಂದು ತಿಂಗಳ ನಂತರ ನ್ಯೂ ಸೌತ್ ವೇಲ್ಸ್‌ನಲ್ಲಿ ನಡೆದ ಈ ಶೂಟೌಟ್‌ನಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂದೂಕುಧಾರಿ ಮೊದಲು ತನ್ನ ಮಾಜಿ ಗೆಳತಿ ಮತ್ತು ಎನ್‌ಎಸ್‍ಡಬ್ಲ್ಯು ಸೆಂಟ್ರಲ್ ವೆಸ್ಟ್ ಪ್ರದೇಶದ ಲೇಕ್ ಕಾರ್ಗೆಲ್ಲಿಗೊದಲ್ಲಿ ಕಾರಿನಲ್ಲಿದ್ದ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ. ನಂತರ ಪಟ್ಟಣದಲ್ಲಿ ತನಗೆ ಪರಿಚಿತರಾಗಿರುವ ಇತರ ಇಬ್ಬರ ಮೇಲೆ ಗುಂಡಿನ ಮಳೆಗೆರೆದ. ಘಟನೆಯಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಮೃತಪಟ್ಟಿದ್ದಾರೆ.
ಆಸ್ಟ್ರೇಲಿಯಾ ಶೂಟೌಟ್‌ನ ಮಾಹಿತಿ:
#Shootout at #LakeCargelligo, #NSW: Walker St causing 3 dead (2 women,1 man) & 1 man critical
— Dr. Subhash (@Subhash_LiveS) January 22, 2026
. Gunman still armed & at large, police on manhunt. #NSWShooting #Australia pic.twitter.com/n0A2VVVTin
ಸಿಡ್ನಿ ನಗರದಿಂದ ಸುಮಾರು 600 ಕಿಲೋಮೀಟರ್ ಪಶ್ಚಿಮದಲ್ಲಿರುವ ನ್ಯೂ ಸೌತ್ ವೇಲ್ಸ್‌ನಲ್ಲಿ ಗುಂಡಿನ ದಾಳಿ ನಡೆದಿದ್ದು, ಸ್ಥಳಕ್ಕೆ ತುರ್ತು ಸೇವಾ ಸಿಬ್ಬಂದಿ ಧಾವಿಸಿದ್ದಾರೆ. ಸಾರ್ವಜನಿಕರಿಗೆ ಆ ಪ್ರದೇಶವನ್ನು ದೂರವಿರಲು ಪೊಲೀಸರು ಮನವಿ ಮಾಡಿದ್ದು, ಸ್ಥಳೀಯ ನಿವಾಸಿಗಳು ಮನೆಯೊಳಗೇ ಉಳಿಯುವಂತೆ ಸೂಚಿಸಿದ್ದಾರೆ. ಶಂಕಿತ ಬಂದೂಕುಧಾರಿ ಪಟ್ಟಣದಲ್ಲಿ ಅಡಗಿಕೊಂಡಿದ್ದಾನೆ ಮತ್ತು ಅವನ ಬಳಿ ಆಯುಧವಿದೆ ಎಂದು ಹೇಳಲಾಗಿದೆ. ಆತನ ಸೆರೆಗೆ ಪೊಲೀಸರು ಭಾರಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಸಿಡ್ನಿಯ ಬೋಂಡಿ ಬೀಚ್‌ನಲ್ಲಿ ಯಹೂದಿಗಳ ಹನುಕ್ಕಾ ಹಬ್ಬವನ್ನು ಆಚರಿಸುವ ಕಾರ್ಯಕ್ರಮವೊಂದರಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡು ಹಾರಿಸಿ 15 ಜನರನ್ನು ಹತ್ಯೆ ಮಾಡಿದ ಒಂದು ತಿಂಗಳ ನಂತರ ಈ ಗುಂಡಿನ ದಾಳಿ ನಡೆದಿದೆ. ಇದನ್ನು ದಶಕಗಳಲ್ಲಿ ಆಸ್ಟ್ರೇಲಿಯಾದ ಕಂಡ ಅತ್ಯಂತ ಭೀಕರ ಸಾಮೂಹಿಕ ಗುಂಡಿನ ದಾಳಿ ಎಂದು ಕರೆಯಲಾಗಿದೆ.
ಮೃತ ಮಾಲೀಕನ ಶವಕ್ಕೆ ಕಾವಲಾಗಿ ನಿಂತಿರುವ ಶ್ವಾನ
ಈ ದಾಳಿಗಳಿಂದ ಬೆಚ್ಚಿ ಬಿದ್ದಿರುವ ಆಸ್ಟ್ರೇಲಿಯಾ ರಾಷ್ಟ್ರವ್ಯಾಪಿ ಗನ್ ಬೈಬ್ಯಾಕ್ ಯೋಜನೆಗೆ ಅವಕಾಶ ನೀಡುವ ಹಾಗೂ ಶಸ್ತ್ರಾಸ್ತ್ರ ಪರವಾನಗಿಗೆ ಅರ್ಜಿ ಸಲ್ಲಿಸುವವರ ಹಿನ್ನೆಲೆ ಪರಿಶೀಲನೆಯನ್ನು ಕಠಿಣಗೊಳಿಸುವ ಹೊಸ ಕಾನೂನುಗಳನ್ನು ಜಾರಿಗೆ ತಂದಿದೆ. ಇದೇ ವೇಳೆ, ಆಸ್ಟ್ರೇಲಿಯಾದ ಬೇರೆ ರಾಜ್ಯಗಳಿಗಿಂತ ಅತಿ ಹೆಚ್ಚು ಶಸ್ತ್ರಾಸ್ತ್ರಗಳಿರುವ ನ್ಯೂ ಸೌತ್ ವೇಲ್ಸ್‌ನಲ್ಲಿ ಒಬ್ಬ ವ್ಯಕ್ತಿಗೆ ಗರಿಷ್ಠ ನಾಲ್ಕು ಬಂದೂಕುಗಳಷ್ಟೇ ಹೊಂದಲು ಅವಕಾಶ ನೀಡುವ ಮತ್ತು ಪರವಾನಗಿ ಹೊಂದಿರುವವರು ಗನ್ ಕ್ಲಬ್ ಸದಸ್ಯರಾಗಿರುವುದನ್ನು ಕಡ್ಡಾಯಗೊಳಿಸುವ ಕಾನೂನುಗಳನ್ನು ಜಾರಿಗೊಳಿಸಿದೆ.
ಬೋಂಡಿ ಬೀಚ್ ಶೂಟೌಟ್
ಸಿಡ್ನಿಯ ಜನಪ್ರಿಯ ಬೀಚ್‌ನಲ್ಲಿ ಯಹೂದಿಯನ್ನರ ಹನುಕ್ಕಾ ಹಬ್ಬದ ಆಚರಣೆಯ ವೇಳೆ ಸಾಜಿದ್ ಅಕ್ರಮ್ ಮತ್ತು ಆತನ ಮಗ ನವೀದ್ ಜನ ಸಮೂಹದ ಮೇಲೆ ಗುಂಡು ಹಾರಿಸಿದ್ದರು. ಬಳಿಕ ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ಆರೋಪಿ ಸಾಜಿದ್ ಅಕ್ರಮ್ ಹತನಾಗಿದ್ದ. ಹೀಗಾಗಿ ಸಾವಿನ ಸಂಖ್ಯೆ 16ಕ್ಕೇರಿತು. ಆತನ ಪುತ್ರ ನವೀದ್ ಗಾಯಗೊಂಡಿದ್ದ.
ಭಾರತ ಮೂಲದ ಆರೋಪಿ ಸಾಜಿದ್ ಅಕ್ರಮ್ ಆಸ್ಟ್ರೇಲಿಯಾದಲ್ಲಿ ನೆಲೆಸಿದ ನಂತರ ಯುರೋಪಿಯನ್ ಮೂಲದ ಮಹಿಳೆಯನ್ನು ವಿವಾಹವಾಗಿದ್ದ. ಈ ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಇಬ್ಬರೂ ಆಸ್ಟ್ರೇಲಿಯಾದ ನಾಗರಿಕರು.