ವಾಷಿಂಗ್ಟನ್, ಸೆ. 12: ಹೊರ್ಮುಜ್ ಜಲಸಂಧಿಯನ್ನು (Strait of Hormuz) ಬಳಸದೆಯೇ ಕಚ್ಚಾ ತೈಲವನ್ನು ರಫ್ತು ಮಾಡಲು ಪ್ರಮುಖ ಮಾರ್ಗವಾಗಿದ್ದ ಸೌದಿ ಅರೇಬಿಯಾದ ಪೂರ್ವ-ಪಶ್ಚಿಮ ತೈಲ ಪೈಪ್‌ಲೈನ್ ಅನ್ನು ಸ್ಥಗಿತಗೊಳಿಸಿದ ವೈಮಾನಿಕ ದಾಳಿಗೆ ಇರಾನ್ ಬಹುಶಃ ಕಾರಣ ಇರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ. ಈ ಪ್ರಮುಖ ತೈಲ ಪೈಪ್‌ಲೈನ್ ಮೇಲಿನ ದಾಳಿಯ ಹಿಂದೆ ಇರಾನ್ ಕೈವಾಡವಿದೆಯೇ ಎಂದು ಡಬ್ಲಿನ್‌ನಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ಬಹುಶಃ ಅವರೇ ಇರಬಹುದು ಎಂದು ಹೇಳಿದ್ದಾರೆ.
ಈ ಬಿಕ್ಕಟ್ಟಿನ ಬೆನ್ನಲ್ಲೇ ಟ್ರಂಪ್ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರೊಂದಿಗೆ ದೂರವಾಣಿ ಮೂಲಕ ಸುದೀರ್ಘವಾಗಿ ಮಾತನಾಡಿದ್ದಾರೆ. ಸೌದಿ ಯುವರಾಜನನ್ನು ತಮ್ಮ ಆಪ್ತ ಸ್ನೇಹಿತ ಎಂದು ಬಣ್ಣಿಸಿದ ಟ್ರಂಪ್, ಅಮೆರಿಕವು ಸೌದಿ ಅರೇಬಿಯಾದ ಪರ ದೃಢವಾಗಿ ನಿಲ್ಲಲಿದೆ ಎಂದು ಹೇಳಿದ್ದಾರೆ.
ಯೆಮನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ತಮ್ಮ ಆಡಳಿತವನ್ನು ಸಂಪರ್ಕಿಸಿದ್ದು, ಈ ಸಂಘರ್ಷದಲ್ಲಿ ಅಮೆರಿಕ ನೇರವಾಗಿ ಭಾಗಿಯಾಗುವುದನ್ನು ತಾವು ಬಯಸುವುದಿಲ್ಲ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.
ಇರಾನ್ ವಿರುದ್ಧ ಸೋಷಿಯಲ್ ಮೀಡಿಯಾ ಮೂಲಕವೂ ಅಮೆರಿಕ ದಾಳಿ: ಇರಾನ್ ನಕ್ಷೆಯಲ್ಲಿ ಡೊನಾಲ್ಡ್ ಟ್ರಂಪ್ ಮುಖ ಬಳಕೆ
ಇರಾಕ್‌ನಿಂದ ಹಾರಿಸಲಾದ ಡ್ರೋನ್‌ಗಳು ಪೂರ್ವ-ಪಶ್ಚಿಮ ಪೈಪ್‌ಲೈನ್ ಗುರಿಯಾಗಿಸಿಕೊಂಡಿವೆ ಎಂದು ಸೌದಿ ಅಧಿಕಾರಿಗಳು ಹೇಳಿದ ನಂತರ ಟ್ರಂಪ್ ಅವರ ಹೇಳಿಕೆ ಹೊರಬಿದ್ದಿದೆ. ಈ ಪೈಪ್‌ಲೈನ್ ಸೌದಿ ಅರೇಬಿಯಾದ ಗಲ್ಫ್ ಕರಾವಳಿಯ ಬಳಿಯಿರುವ ಅಬ್‌ಕೈಕ್ ಅನ್ನು ಕೆಂಪು ಸಮುದ್ರದ ಯಾನ್ಬುಗೆ ಸಂಪರ್ಕಿಸುತ್ತದೆ. ಮಧ್ಯಪ್ರಾಚ್ಯ ಸಂಘರ್ಷ ಪ್ರಾರಂಭವಾದಾಗಿನಿಂದ ಹೊರ್ಮುಜ್ ಜಲಸಂಧಿಯ ಸುತ್ತಲಿನ ಅಡಚಣೆಯ ನಡುವೆ ಕಚ್ಚಾ ತೈಲವನ್ನು ರಫ್ತು ಮಾಡಲು ಪರ್ಯಾಯ ಮಾರ್ಗವಾಗಿ ಸೌದಿಯು ತನ್ನ ಬಳಕೆಯನ್ನು ಹೆಚ್ಚಿಸಿದೆ.
ರಿಯಾದ್ ಮತ್ತು ಮದೀನಾ ಪ್ರದೇಶಗಳಲ್ಲಿ ಪೂರ್ವ-ಪಶ್ಚಿಮ ಪೈಪ್‌ಲೈನ್ ಅನ್ನು ಇರಾಕ್ ಕಡೆಯಿಂದ ಬಂದ ಹಲವು ಡ್ರೋನ್‌ಗಳು ಗುರಿಯಾಗಿಸಿಕೊಂಡು ನಡೆಸಿದ ದಾಳಿಯನ್ನು ಸೌದಿ ವಿದೇಶಾಂಗ ಸಚಿವಾಲಯ ಖಂಡಿಸಿದೆ. ಈ ದಾಳಿಯಲ್ಲಿ ಹಲವಾರು ಗಾಯಗಳು ಮತ್ತು ಹಾನಿ ಸಂಭವಿಸಿದೆ ಎಂದು ಅದು ಹೇಳಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೈಪ್‌ಲೈನ್ ಅನ್ನು ಸ್ಥಗಿತಗೊಳಿಸಲಾಗಿದೆ. ದಾಳಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ.
ಇರಾಕ್ ಸರ್ಕಾರವು ಈ ದಾಳಿಯು ತನ್ನದೇ ಭೂಪ್ರದೇಶದಿಂದ ನಡೆದಿದೆ ಎಂಬುದನ್ನು ಅಧಿಕೃತವಾಗಿ ದೃಢಪಡಿಸಿದೆ. ಅಲ್ಲದೆ, ಇದಕ್ಕೆ ಕಾರಣರಾದ ದಕ್ಷಿಣ ಪ್ರಾಂತ್ಯದ ಮೈಸನ್ ಪ್ರದೇಶದ ಸೇನಾ ಕಮಾಂಡರ್‌ನನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿಸಿದೆ. ಸೌದಿ ಅರೇಬಿಯಾದ ಮೇಲಿನ ಈ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಇರಾಕ್, ಮೈಸನ್ ಗವರ್ನರೇಟ್ ವ್ಯಾಪ್ತಿಯ ಒಳಗಿನಿಂದ ಈ ದಾಳಿಯನ್ನು ನಡೆಸಲಾಗಿತ್ತು ಎಂದು ಸ್ಪಷ್ಟಪಡಿಸಿದೆ. ಬಹ್ರೇನ್, ಜೋರ್ಡಾನ್ ಮತ್ತು ಕತಾರ್ ಕೂಡ ದಾಳಿಯನ್ನು ಖಂಡಿಸಿದವು.