ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

M J Akbar Column: ದಿ ಟ್ರಂಪ್ ಸಿಂಡ್ರೋಮ್: ಜಗತ್ತನ್ನು ದೊಡ್ಡಣ್ಣ ನೋಡುವ ಪರಿ

ಸದ್ಯಕ್ಕೆ ಪಾಕಿಸ್ತಾನದ ಸೇನಾಪಡೆ ಮುಖ್ಯಸ್ಥ ಆಸಿಮ್ ಮುನೀರ್ ಅವರು ಟ್ರಂಪ್‌ಗೆ ಅಚ್ಚುಮೆಚ್ಚಿನ ಫೀಲ್ಡ್ ಮಾರ್ಷಲ್. ಹಿಂದೆ ಎಷ್ಟು ಮಂದಿ ಅಚ್ಚುಮೆಚ್ಚಿನ ಫೀಲ್ಡ್ ಮಾರ್ಷಲ್ ಆಗಿಹೋಗಿದ್ದಾರೋ ಗೊತ್ತಿಲ್ಲ! ಮುನೀರ್ ಬುದ್ಧಿವಂತ. ಸ್ವಪ್ರತಿಷ್ಠೆಯಿಂದ ಮೆರೆಯುವ ನಾಯಕರಿಗೆ ಬೆಣ್ಣೆ ಸವರಿ ಮಸಾಜು ಮಾಡುವುದು ಆತನಿಗೆ ಗೊತ್ತಿದೆ. ಅಮೆರಿಕದ ಅಧ್ಯಕ್ಷಗೆ ಬೇಕಿರುವುದೂ ಇದೇ. ಯಾರು ಸಲಾಂ ಹೊಡೆ ಯುತ್ತಾರೋ ಅವರು ಟ್ರಂಪ್‌ಗೆ ಫೇವರಿಟ್. ಜಾಗತಿಕ ನಾಯಕರಿಂದ ಹಿಡಿದು ಅಮೆರಿಕದ ಸಚಿವರು ಮತ್ತು ಅಧಿಕಾರಿ ಗಳವರೆಗೆ ಎಲ್ಲರಿಂದಲೂ ಟ್ರಂಪ್ ಇದನ್ನೇ ನಿರೀಕ್ಷಿಸುತ್ತಾರೆ.

ದಿ ಟ್ರಂಪ್ ಸಿಂಡ್ರೋಮ್: ಜಗತ್ತನ್ನು ದೊಡ್ಡಣ್ಣ ನೋಡುವ ಪರಿ

-

Profile
Ashok Nayak Sep 9, 2026 1:16 AM

ಅಕ್ಬರ್‌ನಾಮಾ

ಎಂ.ಜೆ.ಅಕ್ಬರ್

(ಭಾಗ 2)

ಜಗತ್ತನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೋಡುವ ರೀತಿಯೇ ಬೇರೆ. ಅವರು ದೇಶವನ್ನು ನೋಡುವುದಿಲ್ಲ, ಬದಲಿಗೆ ಅದರ ನಾಯಕನನ್ನು ನೋಡುತ್ತಾರೆ. ಅಂದರೆ ದೇಶದ ನಾಯಕರು ಯಾರು ಎಂಬುದರ ಮೇಲೆ ಆ ದೇಶವನ್ನು ಟ್ರಂಪ್ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ನಿರ್ಧಾರ ವಾಗುತ್ತದೆ. ನಾಯಕನ ಎದೆಯ ಮೇಲೆ ಒಂದಷ್ಟು ಮೆಡಲ್‌ಗಳು ನೇತಾಡುತ್ತಿದ್ದರೆ ಅವರ ತಂಟೆಗೆ ಟ್ರಂಪ್ ಹೋಗುವುದಿಲ್ಲ. ನೀತಿಯ ಮೇಲೆ ಪರಿಣಾಮ ಬೀರುವ ನಿರ್ಧಾರಗಳನ್ನು ಟ್ರಂಪ್ ನಂಬು ತ್ತಾರೆಯೇ ಹೊರತು ನಿರ್ಧಾರಗಳ ಮೇಲೆ ಪರಿಣಾಮ ಬೀರುವ ನೀತಿಗಳನ್ನು ನಂಬುವುದಿಲ್ಲ.

ಇಷ್ಟಾಗಿಯೂ ಅವರ ಈ ಸಿದ್ಧಾಂತ ಯಾದೃಚ್ಛಿಕವಾಗಿರಬಹುದು. ಇತಿಹಾಸಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಅವಕಾಶ ಟ್ರಂಪ್‌ಗೆ ಇದೆ. ಏಕೆಂದರೆ ಅವರು ಜಗತ್ತಿನ ದೊಡ್ಡಣ್ಣ. ವಿರೋಧಾಭಾಸಗಳ ಬಗ್ಗೆ ಟ್ರಂಪ್ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಹೊರಡಿಸುವ ಹೊಸ ಆದೇಶವೇ ಅಮೆರಿಕದ ಹೊಸ ನೀತಿಯಾಗಿರುತ್ತದೆ. ಮುಂದಿನ ಆದೇಶ ಹೊರಡಿಸಿದಾಗ ಆ ನೀತಿಯೂ ಬದಲಾಗುತ್ತದೆ.

ಸದ್ಯಕ್ಕೆ ಪಾಕಿಸ್ತಾನದ ಸೇನಾಪಡೆ ಮುಖ್ಯಸ್ಥ ಆಸಿಮ್ ಮುನೀರ್ ಅವರು ಟ್ರಂಪ್‌ಗೆ ಅಚ್ಚುಮೆಚ್ಚಿನ ಫೀಲ್ಡ್ ಮಾರ್ಷಲ್. ಹಿಂದೆ ಎಷ್ಟು ಮಂದಿ ಅಚ್ಚುಮೆಚ್ಚಿನ ಫೀಲ್ಡ್ ಮಾರ್ಷಲ್ ಆಗಿಹೋಗಿದ್ದಾರೋ ಗೊತ್ತಿಲ್ಲ! ಮುನೀರ್ ಬುದ್ಧಿವಂತ. ಸ್ವಪ್ರತಿಷ್ಠೆಯಿಂದ ಮೆರೆಯುವ ನಾಯಕರಿಗೆ ಬೆಣ್ಣೆ ಸವರಿ ಮಸಾಜು ಮಾಡುವುದು ಆತನಿಗೆ ಗೊತ್ತಿದೆ. ಅಮೆರಿಕದ ಅಧ್ಯಕ್ಷಗೆ ಬೇಕಿರುವುದೂ ಇದೇ. ಯಾರು ಸಲಾಂ ಹೊಡೆಯುತ್ತಾರೋ ಅವರು ಟ್ರಂಪ್‌ಗೆ ಫೇವರಿಟ್. ಜಾಗತಿಕ ನಾಯಕರಿಂದ ಹಿಡಿದು ಅಮೆರಿಕದ ಸಚಿವರು ಮತ್ತು ಅಧಿಕಾರಿ ಗಳವರೆಗೆ ಎಲ್ಲರಿಂದಲೂ ಟ್ರಂಪ್ ಇದನ್ನೇ ನಿರೀಕ್ಷಿಸುತ್ತಾರೆ.

ಇದನ್ನೂ ಓದಿ: M J Akbar Column: ಮೆಕ್ಕಾದಲ್ಲಿ ಮೂಡಿದ ಇಸ್ಲಾಮಿಕ್‌ ನ್ಯಾಟೋ ಎಂಬ ಮರೀಚಿಕೆ

ಚೆನ್ನಾಗಿ ಕೆಲಸ ಮಾಡುತ್ತಿದ್ದ ಅಮೆರಿಕದ ವಾರ್ತಾ ಸಚಿವೆ ಕೆರೋಲಿನ್ ಲೀವಿಟ್‌ರನ್ನು ಇತ್ತೀಚೆಗೆ ಟ್ರಂಪ್ ಕಿತ್ತು ಹಾಕಿದರು. ಏಕೆಂದರೆ, ಆಕೆ 80 ವರ್ಷದ ಟ್ರಂಪ್‌ಗಿಂತ ತನ್ನ ನವಜಾತ ಶಿಶುವಿಗೆ ಹೆಚ್ಚಿನ ಆದ್ಯತೆ ನೀಡಿದ್ದಳಂತೆ! ಇನ್ನೊಬ್ಬರು ಅಧಿಕಾರಿಗೆ ಟ್ರಂಪ್ ಮಾರುಹೋಗಿದ್ದಾರೆ. ಆಕೆಯ ಹೆಸರು ನಟಾಲಿ ಹಾರ್ಪ್. ಅವಳು 2023ರಲ್ಲಿ ಟ್ರಂಪ್‌ಗೆ ಬರೆದಿದ್ದ ಪತ್ರದಲ್ಲಿ ‘ನೀವೇ ನನ್ನ ಪಾಲಕ, ನೀವೇ ನನ್ನ ರಕ್ಷಕ’ ಎಂದು ಬರೆದಿದ್ದಳು. ಪತ್ರದ ಕೊನೆಯಲ್ಲಿ ‘ನನ್ನ ಹೃದಯಾಂತರಾಳದಿಂದ’ ಎಂದು ಬರೆದು ಸಹಿ ಹಾಕಿದ್ದಳು. ಅದು ಲವ್ ಅಫೇರ್ ಅಲ್ಲ, ಅಭಿಮಾನದ ಅಫೇರ್.

ತನ್ನೆದುರು ಮಂಡಿಯೂರದ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಥವಾ ಅಮೆರಿಕದ ವ್ಲಾದಿಮಿರ್ ಪುಟಿನ್‌ರಂತಹವರ ವಿಷಯದಲ್ಲಿ ಟ್ರಂಪ್ ಜಾರುಬಂಡಿಯಿಂದ ಬೇಲಿಯವರೆಗೆ ಬೇಕಾದರೂ ಜಿಗಿಯುತ್ತಾರೆ. ಆದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾದ ಮಾರ್ಕ್ ಕಾರ್ನಿ ಮಂಡಿಯೂರುವುದಕ್ಕೆ ನಿರಾಕರಿಸಿದಾಗ ಭಾರತ ಮತ್ತು ಕೆನಡಾದ ವಿಷಯದಲ್ಲಿ ಟ್ರಂಪ್ ಅವರ ವಿದೇಶಾಂಗ ನೀತಿ ಹೇಗೆ ಕಠೋರವಾಯಿತು ಎಂಬುದನ್ನು ಎಲ್ಲರೂ ನೋಡಿದ್ದಾರೆ. ಈಗಲೂ ಕೆನಡಾ ವಿಷಯದಲ್ಲಿ ಅಮೆರಿಕದ ನೀತಿ ಅನಾಹುತಕಾರಿಯಾಗಿದೆ. ಬ್ರಿಟನ್ ಮತ್ತು ದಕ್ಷಿಣ ಕೊರಿಯಾ ವಿಷಯದಲ್ಲಿ ಟ್ರಂಪ್ ನಿಲುವು ಸ್ವಲ್ಪ ಮೃದುವಾಗಿದೆ. ಇರಾನ್ ಯುದ್ಧಕ್ಕೆ ಸೇನೆ ಕಳುಹಿಸಲು ಇವೆರಡೂ ದೇಶಗಳು ನಿರಾಕರಿಸಿದಾಗ ಟ್ರಂಪ್ ಸ್ವಲ್ಪ ಸಿಟ್ಟಾಗಿದ್ದರೂ, ಕಠಿಣ ಶಿಕ್ಷೆ ನೀಡಲಿಲ್ಲ.

ಅಧಿಕಾರವೆಂಬುದು ವೈಯಕ್ತಿಕ. ಅದು ಟ್ರಂಪ್ ಅವರ ಸ್ವಭಾವದಲ್ಲೇ ಇದೆ. ಅವರ ಜಗತ್ತು ‘ಗೆದ್ದವರು’ ಮತ್ತು ‘ಸೋತವರ’ ನಡುವೆ ವಿಭಜನೆಗೊಂಡಿದೆ. ಇತಿಹಾಸ ತನ್ನನ್ನು ಒಬ್ಬ ವಿಫಲ ನಾಯಕನೆಂದು ಅಳಿಸಿ ಹಾಕಬಹುದು ಎಂಬ ಕಹಿ ಯೋಚನೆಯನ್ನು ತಡೆದುಕೊಳ್ಳಲು ಟ್ರಂಪ್‌ಗೆ ಸಾಧ್ಯವಾಗುತ್ತಿಲ್ಲ. ಕೊಲ್ಲಿ ಯುದ್ಧದಿಂದ ಅಮೆರಿಕ ಹಿಂದೆ ಸರಿಯುವುದನ್ನು ನಾವು ನೋಡು ತ್ತಿದ್ದೇವೆ. ಇರಾನ್ ಇನ್ನೂ ತನ್ನ ಆಟವನ್ನು ಬಿಗಿಯಾಗಿಯೇ ಆಡುತ್ತಿದೆ. ಆದರೆ, ಟ್ರಂಪ್ ಇಲ್ಲಿ ಆಡುತ್ತಿರುವ ಆಟ ಜಾಗತಿಕ ಯುದ್ಧದ ಇತಿಹಾಸದಲ್ಲಿ ಚೀನಾದ ಮಾವೋ ಜೆಡಾಂಗ್ ಮೊಟ್ಟ ಮೊದಲ ಬಾರಿಗೆ ಆಡಿದ ಆಟವನ್ನು ಎಂಬುದು ನಿಮಗೆ ಗೊತ್ತಿರಲಿ. ಅದೇನು ಆಟ? ಒಮ್ಮೆ ಕುಣಿಕೆ ಯನ್ನು ಬಿಗಿ ಮಾಡುವುದು, ನಂತರ ಪುನಃ ಅದನ್ನು ಸಡಿಲ ಬಿಡುವುದು, ಮತ್ತೆ ಬಿಗಿ ಮಾಡುವುದು. ಅಂದರೆ ಇರಾನ್ ಯುದ್ಧದಿಂದ ಅಮೆರಿಕ ಯಾವತ್ತೂ ಸಂಪೂರ್ಣ ಹಿಂದೆ ಸರಿಯುವುದಿಲ್ಲ. ಆದರೆ ಜಗತ್ತಿನಲ್ಲಿ ಏಕಪಕ್ಷೀಯ ಪ್ರಭುತ್ವದ ಕಾಲ ಮುಗಿದಿದೆ. ಅಂದರೆ ಟ್ರಂಪ್ ಹೇಳಿದ್ದೇ ವೇದವಾಕ್ಯ ಎಂಬ ಕಾಲ ಇನ್ನಿಲ್ಲ.

ಮೊದಲಿಗೆ ಇರಾನ್‌ನ ನೈತಿಕ ನಾಯಕ ಮತ್ತು ಆಡಳಿತಾತ್ಮಕ ನಾಯಕರ ಶಿರಚ್ಛೇದ ಮಾಡಿದ ಟ್ರಂಪ್, ನಂತರ ಆ ದೇಶದ ಮೇಲೆ ಬಾಂಬ್‌ಗಳ ಸುರಿಮಳೆಗೈದು ‘ಶಿಲಾಯುಗ’ಕ್ಕೆ ಕಳುಹಿಸುವ ಬೆದರಿಕೆ ಹಾಕಿದರು. ಬಳಿಕ ಇರಾನ್ ಅನ್ನು ಮಣಿಸಲು ಕೊನೆಯ ಅಸ್ತ್ರವಾಗಿ ಹಿಂದೆಂದೂ ಕೇಳರಿಯದ ರೀತಿಯ ಜಾಗತಿಕ ನಿರ್ಬಂಧಗಳನ್ನು ವಿಧಿಸುವ ಬೆದರಿಕೆಯೊಡ್ಡಿದರು. ಆದರೆ ಕೇವಲ 48 ಗಂಟೆಯೊಳಗೆ ಆ ಬೆದರಿಕೆಯ ಬಾಂಬ್ ಠುಸ್ ಆಯಿತು. ಏಕೆಂದರೆ ಚೀನಾದ ವಕ್ತಾರರು ತಣ್ಣನೆಯ ಪ್ರತಿಕ್ರಿಯೆ ನೀಡಿ, ‘ಚೀನಾ ಯಾವತ್ತೂ ಶ್ವೇತಭವನದಿಂದ ಆದೇಶಗಳನ್ನು ಪಡೆಯುವು ದಿಲ್ಲ’ ಎಂದು ಹೇಳಿದರು. ಚೀನಾ ಆಗಲಿ, ರಷ್ಯಾ ಆಗಲಿ ಪಾದರಸದ ವೇಗದಲ್ಲಿ ಬದಲಾಗುವ ಅಮೆರಿಕದ ಅಧ್ಯಕ್ಷನ ನಿರ್ಧಾರಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ.

‘ಏಳು ನೆರೆ ದೇಶಗಳನ್ನು ಹೊಂದಿರುವ ಇರಾನ್‌ಗೆ ದಿಗ್ಬಂಧನ ವಿಧಿಸುವುದು ಯಾರಿಗೂ ಸಾಧ್ಯವಿಲ್ಲ’ ಎಂದು ಇರಾನ್‌ನ ಮಾಜಿ ಮಂತ್ರಿಯೊಬ್ಬರು ನನಗೊಮ್ಮೆ ಹೇಳಿದ್ದರು. ಇರಾನ್ ಏಳು ದೇಶಗಳ ಜೊತೆಗೆ ಭೂಗಡಿಯನ್ನು ಹಂಚಿಕೊಂಡಿದೆ. ಇವುಗಳಲ್ಲದೆ, ಇನ್ನೂ ಆರು ದೇಶಗಳ ಜೊತೆಗೆ ಜಲಗಡಿ ಹಂಚಿಕೊಂಡಿದೆ. ಟ್ರಂಪ್ ಬಳಿ ಅಫಘಾನಿಸ್ತಾನ ಅಥವಾ ತುರ್ಕ್‌ಮೆನಿಸ್ತಾನ ಅಥವಾ ಅರ್ಮೇನಿ ಯಾ ಅಥವಾ ಅಜರ್‌ಬೈಜನ್ ಮೇಲೆ ತನ್ನ ನಿರ್ಧಾರಗಳನ್ನು ಹೇರುವ ನಾವಿಕರು ಇಲ್ಲ. ಇರಾನ್‌ನಿಂದ ಅಲ್ಯುಮಿನಿಯಂ, ಸತು, ನೈಸರ್ಗಿಕ ಅನಿಲಗಳ ಖರೀದಿಯನ್ನು ಟರ್ಕಿ ನಿಲ್ಲಿಸುತ್ತದೆ ಯೇ? ಅಥವಾ ತನ್ನಲ್ಲಿನ ಯಂತ್ರೋಪಕರಣಗಳು, ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್ಕನ್ನು ಇರಾನ್‌ಗೆ ರಫ್ತು ಮಾಡುವುದನ್ನು ನಿಲ್ಲಿಸುತ್ತದೆಯೇ? ಟರ್ಕಿಗೆ ಬೇಕಾದ ಶೇ.20ರಷ್ಟು ಅನಿಲಗಳನ್ನು ಇರಾನ್ ಪೂರೈಸುತ್ತದೆ.

ಇರಾನ್‌ನ ಪರಮೋಚ್ಚ ನಾಯಕನನ್ನು ಬದಲಿಸಿದರೆ ಆ ದೇಶ ಅಯ್ಯೋ ಅಮ್ಮಾ ಎಂದು ಶರಣಾಗುತ್ತದೆ ಎಂದು ಟ್ರಂಪ್ ನಂಬಿದ್ದರು. ಆದರೆ, ಇರಾನ್‌ನ ಸಾಂಸ್ಥಿಕ ವ್ಯವಸ್ಥೆಯ ಆಳ ಅಗಲ ಈ ಮನುಷ್ಯನಿಗೆ ಗೊತ್ತಿರಲಿಲ್ಲ. ಹೀಗಾಗಿ ತಪ್ಪು ಲೆಕ್ಕಾಚಾರಕ್ಕೆ ದೊಡ್ಡ ಬೆಲೆ ತೆರಬೇಕಾಯಿತು. ವಾಸ್ತವ ಸಂಗತಿಗಳು ತನಗೆ ವಿರುದ್ಧವಾದಾಗ ಟ್ರಂಪ್ ಕೂಗಾಡತೊಡಗುತ್ತಾರೆ. ಹೊರ್ಮುಜ್ ಜಲಸಂಧಿಯ ನಿಯಂತ್ರಣದ ವಿಷಯ ದಲ್ಲಿ ಇರಾನ್ ಜೊತೆಗೆ ಕೈಜೋಡಿಸಿದರೆ ಒಮಾನ್‌ನ ಹುಟ್ಟಡಗಿಸಿಬಿಡುತ್ತೇನೆ ಎಂದು ಅವರು ಅಬ್ಬರಿಸಿದ್ದರು. ಒಮಾನ್‌ನ ಸುಮ್ಮನೆ ಉಳಿಯಿತು. ಏನೂ ಆಗಲಿಲ್ಲ.

ಪಾಶ್ಚಾತ್ಯ ಯುದ್ಧ ಪಂಡಿತರು ಇರಾನ್ ಯುದ್ಧದಲ್ಲಿ ಅಮೆರಿಕಕ್ಕೆ ಆದ ಸೋಲಿನ ನಷ್ಟವನ್ನು ಅಂದಾಜು ಮಾಡುತ್ತಿದ್ದಾರೆ. ಮಾರ್ಕ್ ಅರ್ಬನ್ ಅವರು ಆಗಸ್ಟ್ 16ರ ಬ್ರಿಟನ್ನಿನ ಸಂಡೇ ಟೈಮ್ಸ್‌ ನಲ್ಲಿ ಬರೆದ ಲೇಖನದ ಪ್ರಕಾರ ಅಮೆರಿಕದ ಪೇಟ್ರಿಯಾಟ್ ಕ್ಷಿಪಣಿಗಳ ದಾಸ್ತಾನು 2300ರಿಂದ 80ಕ್ಕೆ ಇಳಿದಿದೆ. ಥಾಡ್ ಕ್ಷಿಪಣಿಗಳ ದಾಸ್ತಾನು 2023ರಲ್ಲಿ 600 ಇತ್ತು, ಈಗ 250ಕ್ಕಿಂತ ಕೆಳಗೆ ಇಳಿದಿದೆ. ಕಳೆದ 18 ತಿಂಗಳಲ್ಲಿ ಅಮೆರಿಕ ತನ್ನಲ್ಲಿದ್ದ ಅರ್ಧದಷ್ಟು ಟೊಮಾಹಾಕ್ ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದೆ.

2026ರ ಫೆಬ್ರವರಿಯಲ್ಲಿ ಅಮೆರಿಕದ ಬಳಿಯಿದ್ದ 350 ಲ್ಯಾಂಡ್-ಬೇಸ್ಡ್ ಪ್ರಿಸಿಶನ್ ಮಿಸೈಲ್‌ಗಳಲ್ಲಿ ಈಗ ಒಂದೂ ಉಳಿದಿಲ್ಲ. ಆದರೆ ಇರಾನ್ ಈಗಲೂ ಶಿಲಾಯುಗಕ್ಕೆ ತಲುಪಿಲ್ಲ. ಪೆಂಟಗನ್‌ನ ಅಧಿಕೃತ ಸಶಸ್ತ್ರ ಪಡೆಗಳ ನಿಯತಕಾಲಿಕೆಯ ಪ್ರಕಾಶಕ ಹಾಗೂ ಸಂಪಾದಕರು ಯುಎಸ್‌ಎಸ್ ಅಬ್ರಹಾಂ ಲಿಂಕನ್ ಏರ್‌ಕ್ರಾಫ್ಟ್ ಕ್ಯಾರಿಯರ್‌ನ ದಯನೀಯ ಸ್ಥಿತಿಯನ್ನು ಹೊರಜಗತ್ತಿಗೆ ತಿಳಿಸಿದ ಕಾರಣಕ್ಕೆ ಅವರನ್ನು ಟ್ರಂಪ್ ಕಿತ್ತು ಹಾಕಿದ್ದಾರೆ.

ಪೆಂಟಗನ್ ತನ್ನ ನೆಲೆಗಳನ್ನು ಮುಚ್ಚುತ್ತಿದೆ. ಅಮೆರಿಕದ ಅಧಿಕೃತ ವರದಿಗಳ ಪ್ರಕಾರ ಇರಾನ್ ಯುದ್ಧದಲ್ಲಿ 18 ಸೈನಿಕರು ಮೃತಪಟ್ಟು, 770 ಮಂದಿ ಗಾಯಗೊಂಡಿದ್ದಾರೆ. ಜುಲೈನಲ್ಲಿ ಲಾಕ್‌ ಹೀಡ್ ಮಾರ್ಟಿನ್ ಕಂಪನಿಯ ಜೊತೆಗೆ ಪೆಂಟಗನ್ 60 ಬಿಲಿಯನ್ ಡಾಲರ್ ಮೊತ್ತದ ಪೇಟ್ರಿ ಯಾಟ್ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದೆ. ಬಹಳ ಬೇಗ ಅಂದರೂ 2030ಕ್ಕೆ ಆ ಕ್ಷಿಪಣಿಗಳು ಅಮೆರಿಕದ ಸೇನೆಗೆ ಲಭಿಸಲಿವೆ. 2030ರಲ್ಲಿ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿರುವುದಿಲ್ಲ. ಕಾಯ್ದೆ ಯನ್ನೇ ಬದಲಿಸಿ ಮೂರನೇ ಅವಧಿಗೆ ಅಧ್ಯಕ್ಷರಾದರೂ ಆ ವೇಳೆಗೆ ಅವರ ಅಧಿಕಾರ ಸಮಾಪ್ತಿ ಯಾಗಿರುತ್ತದೆ.

ಇದೇ ವೇಳೆ, ಪೆಸಿಫಿಕ್ ಪ್ರದೇಶದಲ್ಲಿ ಬಳಸುವುದಕ್ಕಾಗಿ 1200 ಖಂಡಾಂತರ ಕ್ಷಿಪಣಿಗಳನ್ನು ಚೀನಾ ಸಿದ್ಧಪಡಿಸಿಟ್ಟುಕೊಂಡಿದೆ.

ಕೊಲ್ಲಿಯ ಮೇಲೆ ಅಧಿಕಾರಯುತ ಹಿಡಿತ ಸಾಧಿಸುವ ತನ್ನ ನೀತಿಯನ್ನು ಅಮೆರಿಕ ಈಗಾಗಲೇ ಬದಲಿಸಿ ಕೊಂಡಿದೆ. 2025ರ ರಾಷ್ಟ್ರೀಯ ಭದ್ರತಾ ತಂತ್ರಗಾರಿಕೆ ದಾಖಲೆಯಲ್ಲಿ ‘ಯಾವ ದೇಶದ ಪರವಾಗಿ ಅಮೆರಿಕ ಹೋರಾಟ ನಡೆಸುತ್ತದೆಯೋ ಆ ದೇಶವು ಯುದ್ಧದ ಪ್ರಾಥಮಿಕ ಜವಾಬ್ದಾರಿ ಯನ್ನು ತೆಗೆದುಕೊಳ್ಳಬೇಕು. ತನ್ಮೂಲಕ ಒಟ್ಟಾರೆ ರಕ್ಷಣಾ ವ್ಯವಸ್ಥೆಗೆ ನಮಗಿಂತ ಹೆಚ್ಚಿನ ಕೊಡುಗೆ ಯನ್ನು ನೀಡಬೇಕು’ ಎಂದು ಬರೆಯಲಾಗಿದೆ. ವಾಸ್ತವವಾಗಿ ಪಶ್ಚಿಮ ಯುರೋಪಿಯನ್ ದೇಶಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ತನ್ನ ರಣನೀತಿಯಲ್ಲಿ ಈ ಬದಲಾವಣೆ ಮಾಡಿ ಕೊಂಡಿದೆ.

ಪಶ್ಚಿಮ ಯುರೋಪ್‌ನ ದೇಶಗಳು 1990ರ ಬಳಿಕ ತಮ್ಮ ರಕ್ಷಣಾ ಬಜೆಟ್‌ನ ಹಣವನ್ನು ಸಾಮಾಜಿಕ ಕಲ್ಯಾಣ ಯೋಜನೆಗೆ ಬಳಕೆ ಮಾಡತೊಡಗಿದ್ದವು. ವಾಷಿಂಗ್ಟನ್‌ನ ದೃಷ್ಟಿಯಲ್ಲಿ ಮೆಕ್ಕಾ ಒಪ್ಪಂದಕ್ಕೆ ಸಹಿ ಹಾಕಿರುವ ಅಮೆರಿಕದ ಮಿತ್ರ ದೇಶಗಳು ಯುದ್ಧದಲ್ಲಿ ಪಾಲ್ಗೊಳ್ಳಬೇಕಾಗಿ ಬಂದರೆ ಅದರ ವೆಚ್ಚವನ್ನು ಅವೇ ಭರಿಸುತ್ತವೆ. ಅಂದರೆ, ಅವು ಅಮೆರಿಕದ ಪ್ರಾಬಲ್ಯಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿರು ತ್ತವೆಯೇ? ಇಲ್ಲ. ಆದರೆ, ಅವು ಅಪಾಯವನ್ನೇ ಮರುವ್ಯಾಖ್ಯಾನ ಮಾಡಬಲ್ಲವು. ಅದರಿಂದಾಗಿ ಅವು ಅಮೆರಿಕದ ಹಿತಾಸಕ್ತಿಯ ಬಗ್ಗೆ ಕಡಿಮೆ ತಲೆಕೆಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಇರಾನ್ ಮೇಲೆ ಟ್ರಂಪ್ ನಡೆಸಿದ ದಾಳಿಯಿಂದಾಗಿ ಅರಬ್ಬರ ಕೊಲ್ಲಿಗೆ ಅಪಾರ ನಷ್ಟವಾಗಿದೆ. ಆರ್ಥಿಕ ಲೆಕ್ಕಾಚಾರಗಳು ತಲೆಕೆಳಗಾಗಿವೆ. ತಕ್ಷಣಕ್ಕೆ ಸಾಕಷ್ಟು ಹಾನಿಯಾಗಿದೆ. ಸೌದಿಯ ಸುಧಾರಣಾ ಕ್ರಮಗಳು ಸ್ಥಗಿತಗೊಂಡಿವೆ. ಪೆಟ್ರೋಲಿಯಂ ಮೂಲಸೌಕರ್ಯಗಳ ಮೇಲೆ ಕೊಲ್ಲಿ ದೇಶಗಳಿಗೆ ಇದ್ದ ಆತ್ಮವಿಶ್ವಾಸ ಕ್ಷೀಣಿಸಿದೆ. ಇಂಧನ ಪೂರೈಕೆಯ ಮಾರ್ಗಗಳಿಗೆ ಅಡ್ಡಿಯಾಗಿದೆ. ಇವೆಲ್ಲ ಕಾರಣದಿಂದ ಕೊಲ್ಲಿಯಲ್ಲಿ ಅಮೆರಿಕವು ಈಗ ಅವಸಾನದಂಚಿಗೆ ಸಾಗುತ್ತಿರುವ ಶಕ್ತಿಯಾಗಿ ಪರಿಣಮಿಸಿದೆ. ಯುದ್ಧ ನಿಂತರೆ ಈ ಪ್ರದೇಶವನ್ನು ಮರುನಿರ್ಮಾಣ ಮಾಡಲು ದಶಕಗಳೇ ಬೇಕು. ಯುದ್ಧ ನಿಂತರೆ ಎಂಬುದನ್ನು ಅಂಡರ್‌ಲೈನ್ ಮಾಡಿ ಓದಿಕೊಳ್ಳುವುದು.

(ಮುಂದುವರೆಯುವುದು)