ಅಮೆರಿಕ-ಇರಾನ್ ನಡುವಿನ ಕದನ ವಿರಾಮ ವಿಫಲ: ಮತ್ತೆ ಮುಚ್ಚಿದ ಹೊರ್ಮುಜ್ ಜಲಸಂಧಿ, ಭಾರತಕ್ಕೆ ಇಂಧನ ಕೊರತೆಯ ಆತಂಕ
US-Iran Ceasefire Collapses: ಅಮೆರಿಕ-ಇರಾನ್ ಕದನ ವಿರಾಮ ವಿಫಲಗೊಂಡಿರುವುದು ಭಾರತವನ್ನು ಮತ್ತೆ ಹೈಅಲರ್ಟ್ ಸ್ಥಿತಿಯಲ್ಲಿರಿಸಿದೆ. ಹೊರ್ಮುಜ್ ಜಲಸಂಧಿಯನ್ನು ಟೆಹರಾನ್ ಮತ್ತೆ ಮುಚ್ಚಿರುವುದು ಕಳವಳಕ್ಕೆ ಕಾರಣವಾಗಿದೆ. ಜೂನ್‌ನಲ್ಲಿ ಸಹಿ ಹಾಕಲಾದ ಕದನ ವಿರಾಮ ಒಪ್ಪಂದವು ಸಂಘರ್ಷವನ್ನು ಕೆಲವು ದಿನಗಳ ಮಟ್ಟಿಗೆ ತಾತ್ಕಾಲಿಕವಾಗಿ ಕಡಿಮೆ ಮಾಡಿತ್ತು. ಆದರೆ ಇದೀಗ ಪರಿಸ್ಥಿತಿ ಮತ್ತೆ ಹದಗೆಟ್ಟಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಜು. 12: ಅಮೆರಿಕ-ಇರಾನ್ ಕದನ ವಿರಾಮ (US-Iran Ceasefire) ವಿಫಲಗೊಂಡಿರುವುದು ಭಾರತವನ್ನು ಮತ್ತೆ ಹೈ ಅಲರ್ಟ್ ಸ್ಥಿತಿಯಲ್ಲಿರಿಸಿದೆ. ಹೊರ್ಮುಜ್ ಜಲಸಂಧಿಯನ್ನು (Strait of Hormuz) ಟೆಹರಾನ್ ಮತ್ತೊಮ್ಮೆ ಮುಚ್ಚಿರುವುದು ಕಳವಳಕ್ಕೆ ಕಾರಣವಾಗಿದೆ. ಇದು ವಿಶ್ವದ ಮತ್ತು ಭಾರತದ ತೈಲ, ಇಂಧನ ಸಾಗಾಟದ ಪ್ರಮುಖ ಮಾರ್ಗ ಎನಿಸಿಕೊಂಡಿದೆ. ಹೀಗಾಗಿ ಜಲಸಂಧಿ ಮುಚ್ಚಿರುವುದು ಭಾರತಕ್ಕೆ ಮತ್ತೆ ಇಂಧನ ಕೊರತೆಯ ಆತಂಕಕ್ಕೆ ಕಾರಣವಾಗಿದೆ. ಇರಾನ್ ಮೇಲೆ ವಾಷಿಂಗ್ಟನ್ ಹೊಸ ವೈಮಾನಿಕ ದಾಳಿ ಆರಂಭಿಸಿದ್ದು, ಗಲ್ಫ್ ರಾಷ್ಟ್ರಗಳು ತಮ್ಮ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿವೆ. ಇದರ ಬೆನ್ನಲ್ಲೇ ಇಂಧನ ಬೆಲೆ ಏರಿಕೆ, ಸರಕು ಸಾಗಣೆ ಮತ್ತು ಗಲ್ಫ್ ಪ್ರದೇಶದಲ್ಲಿರುವ ಲಕ್ಷಾಂತರ ಭಾರತೀಯರ ಸುರಕ್ಷತೆಯ ಕುರಿತು ಚರ್ಚೆ ಆರಂಭವಾಗಿದೆ.
ಜೂನ್‌ನಲ್ಲಿ ಸಹಿ ಹಾಕಲಾದ ಕದನ ವಿರಾಮ ಒಪ್ಪಂದವು ಸಂಘರ್ಷವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿತ್ತು. ಆದರೆ ಇತ್ತೀಚಿನ ಅಮೆರಿಕ-ಇರಾನ್‌ನ ಮಿಲಿಟರಿ ಕಾರ್ಯಾಚರಣೆ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗುವ ಎಲ್ಲ ಲಕ್ಷಣ ತೋರಿಸಿದೆ. ಹೊರ್ಮುಜ್ ಜಲಸಂಧಿಯು ಜಾಗತಿಕ ತೈಲ ವ್ಯಾಪಾರದ ಸುಮಾರು ಐದನೇ ಒಂದು ಭಾಗವನ್ನು ಹೊಂದಿದೆ. ಇದು ವಿಶ್ವದ ಅತ್ಯಂತ ನಿರ್ಣಾಯಕ ಇಂಧನ ಕಾರಿಡಾರ್‌ಗಳಲ್ಲಿ ಒಂದು.
ಭಾರತವು ತನ್ನ ತೈಲ ಪೂರೈಕೆದಾರರನ್ನು ವೈವಿಧ್ಯಗೊಳಿಸುವ ಮೂಲಕ ಹೊರ್ಮುಜ್ ಜಲಸಂಧಿಯ ಮೂಲಕ ಸಾಗಣೆಯಾಗುವ ಕಚ್ಚಾ ತೈಲದ ಮೇಲಿನ ತನ್ನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿದ್ದರೂ, ಎಲ್‌ಪಿಜಿ ಆಮದು ಇಂದಿಗೂ ಪ್ರಮುಖ ಆತಂಕದ ವಿಷಯವಾಗಿ ಉಳಿದಿದೆ. ಭಾರತವು ತನ್ನ ಅಡುಗೆ ಅನಿಲದ ಅಗತ್ಯಗಳ ಪೈಕಿ ಸುಮಾರು ಶೇಕಡಾ 60ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. ಈ ಒಟ್ಟು ಆಮದಿನ ಪೈಕಿ ಸರಿಸುಮಾರು ಶೇಕಡಾ 90ರಷ್ಟು ಭಾಗವು ಹೊರ್ಮುಜ್ ಜಲಸಂಧಿಯ ಮೂಲಕವೇ ಹಾದು ಬರುತ್ತದೆ.
ಅಮೆರಿಕ-ಇಸ್ರೇಲ್‌ನಿಂದ ಕದನ ವಿರಾಮ ಒಪ್ಪಂದ ಉಲ್ಲಂಘನೆ: ಮತ್ತೆ ಹೊರ್ಮುಜ್ ಜಲಸಂಧಿ ಮುಚ್ಚಿದ ಇರಾನ್
ಹೊರ್ಮುಜ್ ಜಲಸಂಧಿ ಸ್ಥಗಿತ ಮುಂದುವರಿದರೆ, ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಗಳು ದೇಶದಲ್ಲಿ ಎಲ್ಲಕ್ಕಿಂತ ಮೊದಲು ಏರಿಕೆಯ ಒತ್ತಡಕ್ಕೆ ಒಳಗಾಗಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ತೈಲ ಮಾರುಕಟ್ಟೆಗಳು ಈಗಾಗಲೇ ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಲು ಪ್ರಾರಂಭಿಸಿವೆ. ಅಮೆರಿಕದ ಹೊಸ ವೈಮಾನಿಕ ದಾಳಿಗಳ ಬೆನ್ನಲ್ಲೇ, ಈ ಸಂಘರ್ಷವು ಜಾಗತಿಕ ಇಂಧನ ಪೂರೈಕೆಯನ್ನು ಸಂಪೂರ್ಣವಾಗಿ ಅಡ್ಡಿಪಡಿಸಬಹುದು ಎಂಬ ಭೀತಿಯಿಂದಾಗಿ ಜುಲೈ 9ರಂದು ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ ಸುಮಾರು 79 ಡಾಲರ್ ಸಮೀಪಕ್ಕೆ ತಲುಪಿದೆ.
ಕಳವಳ
ಈ ಸಂಘರ್ಷವು ಕೊಲ್ಲಿಯಾದ್ಯಂತ ವಾಸಿಸುವ ಭಾರತೀಯ ಪ್ರಜೆಗಳಿಗೂ ಕಳವಳವನ್ನುಂಟು ಮಾಡಿದೆ. ಯುಎಇ, ಕತಾರ್, ಕುವೈತ್ ಮತ್ತು ಬಹ್ರೇನ್ ಸೇರಿ ಆರು ಗಲ್ಫ್ ದೇಶಗಳಲ್ಲಿ 1 ಕೋಟಿಗೂ ಹೆಚ್ಚು ಭಾರತೀಯರು ವಾಸಿಸುತ್ತಿದ್ದಾರೆ. ಈ ವಾರ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ಈ ಪ್ರದೇಶವನ್ನು ಗುರಿಯಾಗಿಸಿಕೊಂಡಿದ್ದರಿಂದ ಇವೆಲ್ಲವೂ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿವೆ.
ಹೊರ್ಮಜ್ ಜಲಸಂಧಿಯ ಮೂಲಕ ಹಾದು ಹೋಗುವ ಭಾರತೀಯ ಧ್ವಜ ಹೊಂದಿರುವ ಹಡಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ವಿದೇಶಾಂಗ ಸಚಿವಾಲಯ ಈ ಹಿಂದೆ ದೃಢಪಡಿಸಿತ್ತು. ಜೂನ್ ಕದನ ವಿರಾಮವು ಉದ್ವಿಗ್ನತೆಯನ್ನು ಕಡಿಮೆ ಮಾಡಿದ ನಂತರವೂ, ಭಾರತೀಯ ಧ್ವಜ ಹೊಂದಿರುವ 10 ಹಡಗುಗಳು ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿಯೇ ಉಳಿದಿವೆ.