ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊರ್ಮುಜ್ ಜಲಸಂಧಿ, ರೊಮೇನಿಯಾದಲ್ಲಿ ಟ್ಯಾಂಕರ್‌ಗಳ ಮೇಲೆ ದಾಳಿ: 24 ಭಾರತೀಯ ನಾವಿಕರು ಸುರಕ್ಷಿತ

Attacks on Tankers: ಹೊರ್ಮುಜ್ ಜಲಸಂಧಿ ಮತ್ತು ರೊಮೇನಿಯಾದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ದಾಳಿಗೊಳಗಾದ ಎರಡು ಹಡಗುಗಳಲ್ಲಿದ್ದ ಎಲ್ಲಾ 24 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಟೆಹರಾನ್, ಅ.17: ಹೊರ್ಮುಜ್ ಜಲಸಂಧಿ (Strait of Hormuz) ಮತ್ತು ರೊಮೇನಿಯಾದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ದಾಳಿಗೊಳಗಾದ ಎರಡು ಹಡಗುಗಳಲ್ಲಿದ್ದ ಎಲ್ಲಾ 24 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ (Sarbananda Sonowal) ತಿಳಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸೋನೋವಾಲ್, 15 ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ಕಚ್ಚಾ ತೈಲ ಟ್ಯಾಂಕರ್ ಹಡಗು ಎಂಟಿ ಎಸ್‌ಟಿ 3, ಅಕ್ಟೋಬರ್ 16ರಂದು ಹೊರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಒಳಗಾಗಿದೆ ಎಂದು ಹೇಳಿದ್ದಾರೆ.

ಇನ್ನು, ಒಂಬತ್ತು ಭಾರತೀಯ ನಾವಿಕರನ್ನು ಹೊಂದಿದ್ದ ರಾಸಾಯನಿಕ ಟ್ಯಾಂಕರ್ ಹಡಗು ಯಾರಾ ಜೆ (YARA J) ಅಕ್ಟೋಬರ್ 14ರಂದು ರೊಮೇನಿಯಾದ ಸುಲಿನಾ ಲಂಗರು ತಾಣದಲ್ಲಿ ಡ್ರೋನ್ ದಾಳಿಗೆ ತುತ್ತಾಗಿದೆ ಎಂದು ತಿಳಿಸಿದ್ದಾರೆ. ಅದೃಷ್ಟವಶಾತ್, ಎರಡೂ ಹಡಗುಗಳಲ್ಲಿದ್ದ ಎಲ್ಲಾ 24 ಭಾರತೀಯರು ಸಂಪೂರ್ಣ ಸುರಕ್ಷಿತವಾಗಿದ್ದಾರೆ. ಯಾವುದೇ ಸಾವು ಅಥವಾ ಗಾಯಗಳು ಸಂಭವಿಸಿಲ್ಲ ಎಂದು ಸೋನೋವಾಲ್ ಹೇಳಿದ್ದಾರೆ.

ಎರಡೂ ಘಟನೆಗಳ ಮೇಲೆ ಸರ್ಕಾರ ನಿಕಟ ನಿಗಾ ಇರಿಸಿದ್ದು, ಭಾರತೀಯ ನಾವಿಕರ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಹಡಗು ನಿರ್ವಹಣಾ ಕಂಪನಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಇಲ್ಲಿದೆ ಪೋಸ್ಟ್:



ಇದಕ್ಕೂ ಮೊದಲು, ಗುರುವಾರ (ಅ.15)) ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸಮುದ್ರ ಸಂಚಾರ ಮತ್ತು ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸಿತ್ತು. ಇಂತಹ ದಾಳಿಗಳು ಕಾನೂನುಬದ್ಧವಾಗಿ ಮತ್ತು ನೈತಿಕವಾಗಿ ಯಾವುದೇ ಸಮರ್ಥನೆಗೆ ಅರ್ಹವಲ್ಲ ಎಂದು ಪುನರುಚ್ಚರಿಸಿದ್ದ ಭಾರತ, ಭಾರತೀಯ ಪ್ರಜೆಗಳು ಸೇರಿದಂತೆ ಎಲ್ಲಾ ನಾವಿಕರ ಸುರಕ್ಷತೆಯನ್ನು ಕಾಪಾಡುವಂತೆ ಭಾರತ ಒತ್ತಾಯಿಸಿತ್ತು.

ಹೊರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಸರಕು ಹಡಗು: ಸಮುದ್ರದಲ್ಲಿ ತೇಲುತ್ತಿವೆ ಐಫೋನ್‌, ಐಷಾರಾಮಿ ಪರ್ಫ್ಯೂಮ್ ಬಾಟಲಿಗಳು!

ಮಧ್ಯಪ್ರಾಚ್ಯದ ಪರಿಸ್ಥಿತಿ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಡೆದ ತ್ರೈಮಾಸಿಕ ಮುಕ್ತ ಚರ್ಚೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿ ಹರೀಶ್ ಪರ್ವತನೇನಿ ಅವರು ಸಂಘರ್ಷವನ್ನು ತಕ್ಷಣವೇ ತಗ್ಗಿಸುವಂತೆ ಭಾರತ ಕರೆ ನೀಡಿದೆ ಎಂದು ತಿಳಿಸಿದರು. ಅಲ್ಲದೆ, ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂಘರ್ಷವನ್ನು ಬಗೆಹರಿಸಿಕೊಳ್ಳುವಂತೆ ಆಗ್ರಹಿಸಿದರು.

ವಾಣಿಜ್ಯ ಹಡಗುಗಳು, ನಾವಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳು ನಿಲ್ಲಬೇಕು ಎಂದು ಭಾರತ ಒತ್ತಿಹೇಳಿದೆ. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ, ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಹಡಗುಗಳ ಮುಕ್ತ ಸಂಚಾರ ಹಾಗೂ ಯಾವುದೇ ಅಡೆತಡೆಯಿಲ್ಲದೆ ಸಮುದ್ರ ವಾಣಿಜ್ಯ ನಡೆಯುವುದನ್ನು ಖಚಿತಪಡಿಸಬೇಕು ಎಂದೂ ಭಾರತ ತಿಳಿಸಿದೆ.

ಅಕ್ಟೋಬರ್ 11ರಂದು ನಿಕರಾಗುವಾ ದೇಶದ ಧ್ವಜ ಹೊಂದಿದ್ದ ಎಂಟಿ ಪೆಟ್ರೋ ಡಾಲ್ಫಿನ್ ಟ್ಯಾಂಕರ್ ಹಡಗಿನ ಮೇಲೆ ಡ್ರೋನ್ ದಾಳಿ ನಡೆದಿತ್ತು. 11 ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ಈ ಹಡಗು ಸೋಹಾರ್ ಲಂಗರು ತಾಣದಲ್ಲಿದ್ದಾಗ ದಾಳಿಗೆ ಒಳಗಾಗಿತ್ತು. ಈ ಘಟನೆಯ ಬಳಿಕ ಇಬ್ಬರು ಭಾರತೀಯರು ನಾಪತ್ತೆಯಾಗಿದ್ದು, ಒಂಬತ್ತು ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ರಕ್ಷಿಸಲಾದ ಎಲ್ಲರೂ ಸುರಕ್ಷಿತವಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ.