ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಹೊರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಸರಕು ಹಡಗು: ಸಮುದ್ರದಲ್ಲಿ ತೇಲುತ್ತಿವೆ ಐಫೋನ್‌, ಐಷಾರಾಮಿ ಪರ್ಫ್ಯೂಮ್ ಬಾಟಲಿಗಳು!

Cargo Ship Sinks in Strait of Hormuz: ಹೊರ್ಮುಜ್ ಜಲಸಂಧಿಯಲ್ಲಿ ಐಫೋನ್‌ಗಳು ಮತ್ತು ಐಷಾರಾಮಿ ಸುಗಂಧ ದ್ರವ್ಯದ ಬಾಟಲಿಗಳು ನೀರಿನಲ್ಲಿ ತೇಲುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಒಮಾನ್ ಕೊಲ್ಲಿಯಲ್ಲಿ ಇರಾನ್‌ಗೆ ಸಂಬಂಧಿಸಿದ ಹಡಗೊಂದನ್ನು ಅಮೆರಿಕದ ಪಡೆಗಳು ನಾಶಪಡಿಸಿದ ಕೆಲವೇ ದಿನಗಳ ಬಳಿಕ ಈ ದೃಶ್ಯಗಳು ಕಾಣಿಸಿಕೊಂಡಿವೆ.

ಸಮುದ್ರದಲ್ಲಿ ತೇಲಿದ ಐಫೋನ್‌, ಐಷಾರಾಮಿ ಪರ್ಫ್ಯೂಮ್ ಬಾಟಲಿಗಳು

ಸಮುದ್ರದಲ್ಲಿ ತೇಲಿದ ಐಫೋನ್‌, ಐಷಾರಾಮಿ ಪರ್ಫ್ಯೂಮ್ ಬಾಟಲಿಗಳು -

Priyanka P
Priyanka P Oct 15, 2026 7:59 PM

ಟೆಹರಾನ್, ಅ.15: ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಐಫೋನ್‌ಗಳು ಮತ್ತು ಐಷಾರಾಮಿ ಸುಗಂಧ ದ್ರವ್ಯದ ಬಾಟಲಿಗಳು ನೀರಿನಲ್ಲಿ ತೇಲುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಸರಣಿ ದಾಳಿಗಳು ನಡೆಯುತ್ತಿರುವ ನಡುವೆಯೇ, ಗಣಿಗಾರಿಕೆಯಿಂದ ಸಂಭವಿಸಿದ ಸ್ಫೋಟದಲ್ಲಿ ಯುಎಇ (UAE) ಮಾಲೀಕತ್ವದ ಸರಕು ಹಡಗು ಮುಳುಗಿದೆ ಎಂದು ಇರಾನ್ ಹೇಳಿದ ಬಳಿಕ ಈ ದೃಶ್ಯಗಳು ಹೊರಬಿದ್ದಿವೆ.

ಒಮಾನ್ ಕೊಲ್ಲಿಯಲ್ಲಿ ಇರಾನ್‌ಗೆ ಸಂಬಂಧಿಸಿದ ಹಡಗೊಂದನ್ನು ಅಮೆರಿಕದ ಪಡೆಗಳು ನಾಶಪಡಿಸಿದ ಕೆಲವೇ ದಿನಗಳ ಬಳಿಕ ಈ ದೃಶ್ಯಗಳು ಕಾಣಿಸಿಕೊಂಡಿವೆ. ಆ ಹಡಗು ಅಮೆರಿಕದ ನೌಕಾಪಡೆಯ ಹಡಗುಗಳ ಚಲನವಲನಗಳನ್ನು ರಹಸ್ಯವಾಗಿ ಗಮನಿಸುತ್ತಿತ್ತು ಮತ್ತು ಅವುಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಿತ್ತು ಎಂದು ಅಮೆರಿಕ ಆರೋಪಿಸಿತ್ತು.

ಮುಳುಗಿದ ಸರಕು ಹಡಗಿನ ಬಳಿ ಸಮುದ್ರದಲ್ಲಿ ತೇಲುತ್ತಿರುವ ಸುಗಂಧ ದ್ರವ್ಯ ಬಾಟಲಿಗಳು ಮತ್ತು ಐಫೋನ್ ಬಾಕ್ಸ್‌ಗಳ ಪ್ಯಾಕೆಟ್‌ಗಳು ಕಂಡುಬಂಡಿವೆ. ಸಣ್ಣ ದೋಣಿಗಳಲ್ಲಿ ಜನರು ಸಮುದ್ರದಲ್ಲಿ ತೇಲುತ್ತಿರುವ ಸರಕುಗಳನ್ನು ಎತ್ತಿಕೊಳ್ಳುತ್ತಿದ್ದಾರೆ. ವರದಿಗಳ ಪ್ರಕಾರ, ಸಿಂಗಾಪುರ ಧ್ವಜದ ಕಂಟೇನರ್ ಹಡಗು ಜಿಎಫ್‌ಎಸ್ ಪ್ರೈಡ್ ದುಬೈನಿಂದ ಸರಕುಗಳನ್ನು ಸಾಗಿಸುತ್ತಿತ್ತು.

ಇಲ್ಲಿದೆ ವಿಡಿಯೊ:



ಕ್ಷಿಪಣಿಯಂತಹ ಸ್ಫೋಟಕ ವಸ್ತುವಿನ ದಾಳಿಗೆ ತುತ್ತಾಗಿ ಬೆಂಕಿ ಹೊತ್ತಿಕೊಂಡ ಬಳಿಕ ಜಿಎಫ್‌ಎಸ್ ಪ್ರೈಡ್ ಹಡಗು ಮುಳುಗಿದೆ. ಹಡಗಿನಲ್ಲಿದ್ದ ಎಲ್ಲಾ 21 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ಸಿಂಗಾಪುರದ ಕಡಲ ಮತ್ತು ಬಂದರು ಪ್ರಾಧಿಕಾರ ತಿಳಿಸಿದೆ.

ಹೊರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ದಾಳಿ: 11 ಭಾರತೀಯ ನಾವಿಕರಿಗೆ ಗಾಯ

ವರದಿಯ ಪ್ರಕಾರ, ಈ ಹಡಗಿನಲ್ಲಿ ಐಷಾರಾಮಿ ಸುಗಂಧ ದ್ರವ್ಯಗಳು ಮತ್ತು ಐಫೋನ್‌ಗಳು ಸೇರಿದಂತೆ ಸುಮಾರು 2,500 ಕಂಟೇನರ್‌ಗಳ ಸರಕುಗಳಿದ್ದವು. ಹಡಗು ಮುಳುಗಿದ ಬಳಿಕ ಸರಕುಗಳು ಸಮುದ್ರದ ನೀರಿನಲ್ಲಿ ತೇಲಿವೆ. ಸರಕುಗಳನ್ನು ಸಂಗ್ರಹಿಸಲು ಸಣ್ಣ ದೋಣಿಗಳು ಘಟನಾ ಸ್ಥಳದತ್ತ ಬರುತ್ತಿರುವುದೂ ಕಂಡುಬಂದಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಪ್ರಕಾರ, ಅನುಮತಿಯಿಲ್ಲದ ಮಾರ್ಗದಲ್ಲಿ ಹೊರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಸರಕು ಹಡಗು ನೌಕಾ ನೆಲಬಾಂಬ್‌ಗೆ ಡಿಕ್ಕಿ ಹೊಡೆದು ಮುಳುಗಿದೆ. ಆದರೆ, ಸಮುದ್ರಯಾನ ಅಧಿಕಾರಿಗಳ ಪ್ರಕಾರ, ಹಡಗಿನ ಮೇಲೆ ಗುರುತು ಪತ್ತೆಯಾಗದ ಸ್ಫೋಟಕ ವಸ್ತುವಿನಿಂದ ದಾಳಿ ನಡೆಸಲಾಗಿದೆ. ಹೀಗಾಗಿ, ಹಡಗು ಮುಳುಗಲು ನಿಖರವಾದ ಕಾರಣವೇನು ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಹೊರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಈ ಸರಕು ಹಡಗು ಮುಳುಗಿದೆ.

ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ, ಆಂಟಿಗುವಾ ಮತ್ತು ಬಾರ್ಬುಡಾ ದೇಶದ ಧ್ವಜ ಹೊಂದಿದ್ದ ಕೇಪ್ ಡಾವೊ ಎಂಬ ಬೃಹತ್ ಸರಕು ಸಾಗಣೆ ಹಡಗು ಕೂಡ ಹೊರ್ಮುಜ್ ಜಲಸಂಧಿಯ ಸಮೀಪ ಮುಳುಗಿದೆ. ಸೆಪ್ಟೆಂಬರ್ 23ರಂದು ಈ ಹಡಗಿನ ಮೇಲೆ ಸ್ಫೋಟಕ ವಸ್ತುವಿನಿಂದ ದಾಳಿ ನಡೆದ ಕೆಲ ವಾರಗಳ ಬಳಿಕ ಈ ಘಟನೆ ಸಂಭವಿಸಿದೆ. ಆ ದಾಳಿಯಲ್ಲಿ ಒಬ್ಬ ಸಿಬ್ಬಂದಿ ಮೃತಪಟ್ಟಿದ್ದು, ಉಳಿದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿತ್ತು.