ಹೊರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ದಾಳಿ: 11 ಭಾರತೀಯ ನಾವಿಕರಿಗೆ ಗಾಯ
Strait of Hormuz: ಒಮಾನ್ ಕರಾವಳಿಯ ಸಮೀಪ ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಪನಾಮಾ ಧ್ವಜದ ಎಂಟಿ ಆನ್ ಪೀಸ್ ಹಡಗಿನ ಮೇಲೆ ದಾಳಿ ನಡೆದಿದ್ದು, 11 ಭಾರತೀಯರು ಸೇರಿ 12 ಮಂದಿ ನಾವಿಕರು ಗಾಯಗೊಂಡಿದ್ದಾರೆ. ಹಡಗಿನಲ್ಲಿದ್ದ 19 ಸಿಬ್ಬಂದಿಯಲ್ಲಿ 17 ಮಂದಿ ಭಾರತೀಯರಾಗಿದ್ದು, ಗಾಯಾಳುಗಳನ್ನು ಒಮಾನ್ ಅಧಿಕಾರಿಗಳ ನೆರವಿನಿಂದ ಖಸಾಬ್‌ಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲಿನ ದಾಳಿಗಳು ತಕ್ಷಣ ನಿಲ್ಲಬೇಕು ಎಂದು ಒತ್ತಾಯಿಸಿದೆ.
ಸಾಂದರ್ಭಿಕ ಚಿತ್ರ -
ಒಮಾನ್, ಅ. 6: ಹೊರ್ಮುಜ್ ಜಲಸಂಧಿಯಲ್ಲಿ (Strait of Hormuz) ಸಾಗುತ್ತಿದ್ದ ಪನಾಮಾ ಧ್ವಜದ ಎಂಟಿ ಆನ್ ಪೀಸ್ ವಾಣಿಜ್ಯ ಹಡಗಿನ ಮೇಲೆ ಮಂಗಳವಾರ ದಾಳಿ ನಡೆದಿದ್ದು, 11 ಭಾರತೀಯರು ಸೇರಿ 12 ಮಂದಿ ನಾವಿಕರು ಗಾಯಗೊಂಡಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಹಡಗಿನಲ್ಲಿ ಒಟ್ಟು 19 ಸಿಬ್ಬಂದಿ ಇದ್ದು, ಅವರಲ್ಲಿ 17 ಮಂದಿ ಭಾರತೀಯರು. ದಾಳಿಯಲ್ಲಿ ಗಾಯಗೊಂಡ ಸಿಬ್ಬಂದಿಯನ್ನು ಒಮಾನ್ ಅಧಿಕಾರಿಗಳ ನೆರವಿನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಒಮಾನ್‌ನ ಖಸಾಬ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಗಾಯಗೊಂಡ ನಾವಿಕರನ್ನು ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಲು ನೆರವಾದ ಒಮಾನ್ ಅಧಿಕಾರಿಗಳಿಗೆ ಭಾರತ ಧನ್ಯವಾದ ಸಲ್ಲಿಸಿದೆ. ವಾಣಿಜ್ಯ ಹಡಗುಗಳು, ನಾವಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳು ತಕ್ಷಣವೇ ನಿಲ್ಲಬೇಕು ಎಂದು ಭಾರತ ಆಗ್ರಹಿಸಿದೆ. ಅಂತಾರಾಷ್ಟ್ರೀಯ ಜಲಮಾರ್ಗಗಳ ಮೂಲಕ ಸಾಗಣೆ ಮತ್ತು ವಾಣಿಜ್ಯ ಚಟುವಟಿಕೆಗಳು ಶೀಘ್ರದಲ್ಲೇ ಸಹಜ ಸ್ಥಿತಿಗೆ ಮರಳಬೇಕು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತೀಯರ ಮೇಲಿನ ದಾಳಿಗೆ ವಿದೇಶಾಂಗ ಸಚಿವಾಲಯದ ಖಂಡನೆ:
🇮🇳Twelve people were injured—11 of them Indian nationals—in a strike on the vessel *On Peace* off the coast of Oman, the Indian Ministry of External Affairs stated. ''We condemn the strike on the Panama-flagged commercial vessel *On Peace* carried out earlier today off the coast of Oman. (...) Of the 19 crew members, 17 are Indian nationals. We have learned that 12 crew members were injured, including 11 Indian nationals,'' - the ministry said in a statement. It noted that the vessel was struck while passing through the Strait of Hormuz.
— Global Brief (@globalbrief_now) October 6, 2026
ಹಡಗುಗಳ ಮೇಲಿನ ದಾಳಿ ಹೆಚ್ಚಳ
ಇರಾನ್–ಅಮೆರಿಕ ಶಾಂತಿ ಮಾತುಕತೆಗಳು ವಿಫಲವಾದ ಬಳಿಕ ಹೊರ್ಮುಜ್ ಜಲಸಂಧಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಹೆಚ್ಚಾಗಿವೆ. ಅಕ್ಟೋಬರ್ ಮೊದಲ ವಾರದಲ್ಲೇ ಕನಿಷ್ಠ ಏಳು ಟ್ಯಾಂಕರ್‌ಗಳ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಇದರಲ್ಲಿ ಕುವೈತ್ ಧ್ವಜದ ಕಾಜಿಮಾ ತೃತೀಯ ಮತ್ತು ಲೈಬೀರಿಯಾ ಧ್ವಜದ ಲಿಪ್ಸಿ ಹಡಗುಗಳೂ ಸೇರಿವೆ.
ಸೆಪ್ಟೆಂಬರ್ 9ರಂದು ಅಮೆರಿಕವು ಐದು ಇರಾನಿನ ತೈಲ ಟ್ಯಾಂಕರ್‌ಗಳನ್ನು ಮುಳುಗಿಸಿದ ಬಳಿಕ, ಹೊರ್ಮುಜ್ ಜಲಸಂಧಿಯ ಸಮೀಪ 10 ಹಡಗುಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ ಹೇಳಿತ್ತು. ಯುದ್ಧ ಆರಂಭವಾದ ಬಳಿಕ ಎರಡೂ ಬಣಗಳಿಂದ ಹಡಗುಗಳ ಮೇಲೆ ನಡೆದ ದಾಳಿಗಳಲ್ಲಿ ಇದು ಅತಿದೊಡ್ಡ ಘೋಷಿತ ಅಲೆಗಳಲ್ಲಿ ಒಂದಾಗಿದೆ.
150 ಸ್ವದೇಶಿ ಪ್ರಯಾಣಿಕರಿದ್ದ ವಿಮಾನವನ್ನೇ ಹೊಡೆದುರುಳಿಸಲು ಸಿದ್ಧವಾಗಿತ್ತು ಇಸ್ರೇಲ್
ಭಾರತೀಯ ನಾವಿಕರೂ ಬಲಿ
ಈ ಸಂಘರ್ಷದಲ್ಲಿ ಭಾರತೀಯ ನಾವಿಕರೂ ಬಲಿಯಾಗಿದ್ದಾರೆ. ಜುಲೈಯಲ್ಲಿ ಒಮಾನ್‌ನ ಪ್ರಾದೇಶಿಕ ಜಲಪ್ರದೇಶದಲ್ಲಿ ಯುಎಇ ಸಂಪರ್ಕ ಹೊಂದಿದ್ದ ಎಂಟಿ ಮೊಂಬಾಸಾ ಮತ್ತು ಎಂಟಿ ಅಲ್ ಬಹಿಯಾ ಟ್ಯಾಂಕರ್‌ಗಳ ಮೇಲೆ ಇರಾನ್‌ನ ಕ್ರೂಸ್ ಕ್ಷಿಪಣಿ ದಾಳಿ ನಡೆದಿತ್ತು. ಈ ದಾಳಿಯಲ್ಲಿ ರೋಹನ್ ಕುಮಾರ್ ಎಂಬ ಭಾರತೀಯ ನಾವಿಕ ಮೃತಪಟ್ಟಿದ್ದು ಮತ್ತೂ 10 ಭಾರತೀಯರು ಗಾಯಗೊಂಡಿದ್ದರು.
ಸೆಪ್ಟೆಂಬರ್ 23ರಂದು ಹೊರ್ಮುಜ್ ಜಲಸಂಧಿಯಲ್ಲಿ ಆಂಟಿಗುವಾ ಮತ್ತು ಬಾರ್ಬುಡಾ ಧ್ವಜದ ಎಂವಿ ಕೇಪ್ ದಾವೋ ಸರಕು ಹಡಗಿನ ಮೇಲೆ ನಡೆದ ದಾಳಿಯಲ್ಲಿ ಭಾರತೀಯ ನಾವಿಕ ಸೂರಜ್ ಯಾದವ್ ಮೃತಪಟ್ಟಿದ್ದರು.
ಹೊರ್ಮುಜ್ ಜಲಸಂಧಿ ಏಕೆ ಪ್ರಮುಖ?
ಹೊರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿಯನ್ನು ಒಮಾನ್ ಕೊಲ್ಲಿ ಮತ್ತು ಅರಬ್ಬಿ ಸಮುದ್ರದೊಂದಿಗೆ ಸಂಪರ್ಕಿಸುವ ಪ್ರಮುಖ ಜಲಮಾರ್ಗ. ಅಮೆರಿಕ-ಇಸ್ರೇಲ್-ಇರಾನ್ ಯುದ್ಧಕ್ಕೂ ಮುನ್ನ ಜಗತ್ತಿನ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ ಸಾಗಣೆಯ ಸುಮಾರು ಐದನೇ ಒಂದು ಭಾಗ ಈ ಮಾರ್ಗದ ಮೂಲಕ ಸಾಗುತ್ತಿತ್ತು. ಈ ಜಲಮಾರ್ಗದಲ್ಲಿ ಅಡಚಣೆ ಉಂಟಾದರೆ ಇಂಧನ ಪೂರೈಕೆ ಏರುಪೇರಾಗುತ್ತದೆ. ಸಾಗಣೆ ಮತ್ತು ವಿಮಾ ವೆಚ್ಚಗಳೂ ಹೆಚ್ಚಾಗುತ್ತದೆ.
ಭಾರತ ತನ್ನ ಅಗತ್ಯದ ಶೇಕಡಾ 85ಕ್ಕೂ ಹೆಚ್ಚು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಹೊರ್ಮುಜ್ ಜಲಸಂಧಿಯಲ್ಲಿನ ಯಾವುದೇ ದೀರ್ಘಕಾಲದ ಅಸ್ಥಿರತೆ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.
ಹೊರ್ಮುಜ್ ಮಾರ್ಗದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ ಪರ್ಯಾಯ ಇಂಧನ ಪೂರೈಕೆದಾರರು ಮತ್ತು ಮಾರ್ಗಗಳನ್ನು ಬಳಸುವ ಪ್ರಯತ್ನ ನಡೆಸುತ್ತಿದೆ. ಆದರೂ ಜಾಗತಿಕ ಇಂಧನ ಬೆಲೆ ಹಾಗೂ ಸಾಗಣೆ ವೆಚ್ಚಗಳ ಏರಿಕೆ ಭಾರತದ ಆಮದು ವೆಚ್ಚದ ಮೇಲೆ ಒತ್ತಡ ತರುತ್ತದೆ.