ನವದೆಹಲಿ: ಬಾಂಗ್ಲಾದೇಶದ (Bangladesh) ಮಾಜಿ ಪ್ರಧಾನಿ ಶೇಖ್ ಹಸೀನಾ (ex PM Sheikh Hasina) ಅವರಿಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (International Crimes Tribunal)ಯು ಮರಣದಂಡನೆಯನ್ನು ವಿಧಿಸಿದ ಬಳಿಕ ಅವರನ್ನು ದೇಶಕ್ಕೆ ಒಪ್ಪಿಸುವಂತೆ ಬಾಂಗ್ಲಾದೇಶವು ಅಂತತಾರಾಷ್ಟ್ರೀಯ ಅಪರಾಧ ಪೊಲೀಸ್ ಸಂಸ್ಥೆಯ ( International Criminal Police Organization/Interpol ) ನೆರವು ಪಡೆಯಲಿದೆ. ಈಗಾಗಲೇ ಅವರನ್ನು ಮರಳಿ ದೇಶಕ್ಕೆ ಒಪ್ಪಿಸಲು ಡಾ. ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾ ಸರ್ಕಾರ ಭಾರತಕ್ಕೆ ಮನವಿಯನ್ನು ಸಲ್ಲಿಸಿದ್ದು, ಇದರ ಕುರಿತು ಭಾರತದ ನಡೆ ಏನು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಅವರ ಮಾಜಿ ಗೃಹ ಸಚಿವ ಅಸದುಜ್ಜಮಾನ್ ಖಾನ್ ಕಮಲ್ ಅವರನ್ನು ಭಾರತದಿಂದ ಗಡಿಪಾರು ಮಾಡುವಂತೆ ಮುಹಮ್ಮದ್ ಯೂನಸ್ ಅವರ ಮಧ್ಯಂತರ ಆಡಳಿತವು ಅಂತಾರಾಷ್ಟ್ರೀಯ ಅಪರಾಧ ಪೊಲೀಸ್ ಸಂಸ್ಥೆಯ ನೆರವು ಕೋರಲು ಸಿದ್ಧತೆ ನಡೆಸುತ್ತಿದೆ.
ಇದನ್ನೂ ಓದಿ: ಬಂದೂಕು ಹಿಡಿದು ಅಂಗಡಿ ಮಾಲಕನಿಂದ ಹಣ, ಮೊಬೈಲ್ ದೋಚಿದ ಕಳ್ಳ; ಬಾಲಕಿಯ ಮುಗ್ಧತೆಗೆ ಮನಸೋತು ಹಣೆಗೆ ಮುತ್ತಿಟ್ಟು ಹೋದ
ಅಂತಾರಾಷ್ಟ್ರೀಯ ಅಪರಾಧಗಳ ವಿರುದ್ಧ ಒಟ್ಟಾಗಿ ಕೆಲಸ ಮಾಡುವುದಕ್ಕೆ ಸಹಾಯ ಮಾಡಲು 196 ಸದಸ್ಯ ರಾಷ್ಟ್ರಗಳ ಪೊಲೀಸ್ ಪಡೆಗಳಿಗೆ ಬೆಂಬಲ ನೀಡುವ ಅಂತಾರಾಷ್ಟ್ರೀಯ ಅಪರಾಧ ಪೊಲೀಸ್ ಸಂಸ್ಥೆಯು ಭಾರತದಿಂದ ಶೇಖ್ ಹಸೀನಾ ಅವರನ್ನು ಗಡಿಪಾರು ಮಾಡುವಂತೆ ಮಾಡಲು ಯಾವ ರೀತಿ ಸಹಾಯ ಮಾಡಬಹುದೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.
ಕಳೆದ ವಾರ ಢಾಕಾದಲ್ಲಿರುವ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ಶೇಖ್ ಹಸೀನಾ ಮತ್ತು ಅಸದುಜ್ಜಮಾನ್ ಖಾನ್ ಕಮಲ್ ಅವರಿಗೆ ಮರಣದಂಡನೆಯನ್ನು ವಿಧಿಸಿದೆ. ಇವರಿಬ್ಬರನ್ನೂ ಗಡಿಪಾರು ಮಾಡುವಂತೆ ಮುಹಮ್ಮದ್ ಯೂನಸ್ ಅವರ ಮಧ್ಯಂತರ ಆಡಳಿತವು ಈಗಾಗಲೇ ಭಾರತಕ್ಕೆ ಮನವಿಯನ್ನು ಸಲ್ಲಿಸಿದೆ.
ಶೇಖ್ ಹಸೀನಾ ಮತ್ತು ಅಸದುಜ್ಜಮಾನ್ ಖಾನ್ ಕಮಲ್ ಅವರ ಗಡಿಪಾರಿಗೆ ಢಾಕಾದ ವಿದೇಶಾಂಗ ಸಚಿವಾಲಯವು ನವದೆಹಲಿಗೆ ಪತ್ರ ಬರೆಯಲು ಸಿದ್ಧತೆ ನಡೆಸುತ್ತಿದೆ. ಈ ನಡುವೆಯೇ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ಪ್ರಾಸಿಕ್ಯೂಟರ್ ಗಳು ಇಂಟರ್‌ಪೋಲ್ ನೆರವು ಕೋರಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಬಾಂಗ್ಲಾದೇಶದಲ್ಲಿ 2024ರ ರ ಜುಲೈ-ಆಗಸ್ಟ್ ತಿಂಗಳಲ್ಲಿ ನಡೆದ ತೀವ್ರ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಹಸೀನಾ ಅವರು ಭಾಗಿಯಾಗಿದ್ದಾರೆ ಎಂಬ ಆರೋಪದ ಮೇರೆಗೆ ಹಸೀನಾ ಮತ್ತು ಅಸಾದುಜ್ಜಮಾನ್ ಖಾನ್ ಕಮಲ್ ಇಬ್ಬರಿಗೂ ಗೈರುಹಾಜರಿಯಲ್ಲಿ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯು ಮರಣದಂಡನೆಯನ್ನು ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಬ್ಬ ಶಂಕಿತ ಆರೋಪಿ ಮತ್ತು ಘಟನೆಗೆ ಸಾಕ್ಷಿಯಾಗಿ ಮಾರ್ಪಟ್ಟ ಮಾಜಿ ಪೊಲೀಸ್ ಮುಖ್ಯಸ್ಥ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಅವರನ್ನು ಗಲ್ಲಿಗೇರಿಸುವುದನ್ನು ತಪ್ಪಿಸಿ ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
2024ರಲ್ಲಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳು ತೀವ್ರವಾದ ಬಳಿಕ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು. ಆ ಬಳಿಕ ಅವರು ನವದೆಹಲಿಯಲ್ಲಿ ಹಾಗೂ ಅಸಾದುಜ್ಜಮಾನ್ ಖಾನ್ ಕಮಲ್ ಅವರು ಕೂಡ ಭಾರತದಲ್ಲೇ ಇದ್ದಾರೆ ಎನ್ನಲಾಗಿದೆ.
ಶೇಖ್ ಹಸೀನಾಗೆ ಇಂಟರ್‌ಪೋಲ್ ರೆಡ್ ನೊಟೀಸ್ ?
ಮರಣದಂಡನೆ ಶಿಕ್ಷೆ ಪ್ರಕಟವಾದ ಬಳಿಕ ಶೇಖ್ ಹಸೀನಾ ಮತ್ತು ಅಸಾದುಜ್ಜಮಾನ್ ಖಾನ್ ಕಮಲ್ ಅವರಿಬ್ಬರಿಗೂ ಇಂಟರ್‌ಪೋಲ್ ರೆಡ್ ನೋಟಿಸ್ ಕೋರಲು ಬಾಂಗ್ಲಾದೇಶದಲ್ಲಿ ಸಿದ್ಧತೆ ನಡೆಯುತ್ತಿವೆ ಎಂದು ಪ್ರಾಸಿಕ್ಯೂಟರ್ ಗಾಜಿ ಎಂಎಚ್ ತಮೀಮ್ ಮಂಗಳವಾರ ಹೇಳಿದ್ದಾರೆ ಎಂದು ಬಾಂಗ್ಲಾದೇಶದ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಶೇಖ್ ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾದ ಮನವಿಯನ್ನು ನಿರಾಕರಿಸಲು ಭಾರತಕ್ಕೆ ಇದೆಯೇ ಅವಕಾಶ?
ಕಳೆದ ಸೋಮವಾರ ಯೂನಸ್ ಆಡಳಿತದ ಕಾನೂನು, ನ್ಯಾಯ ಮತ್ತು ಸಂಸದೀಯ ವ್ಯವಹಾರಗಳ ಸಲಹೆಗಾರ ಆಸಿಫ್ ನಜ್ರುಲ್, ಶೇಖ್ ಹಸೀನಾ ಮತ್ತು ಕಮಲ್ ಅವರನ್ನು ಹಸ್ತಾಂತರಿಸುವಂತೆ ಕೋರಿ ಢಾಕಾ ಔಪಚಾರಿಕವಾಗಿ ನವದೆಹಲಿಗೆ ಪತ್ರ ಬರೆಯಲಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಇಂಟರ್‌ಪೋಲ್ ಸಹಾಯ ಕೋರಿರುವ ಮಾಹಿತಿ ಬಂದಿದೆ.