Sheikh Hasina: ಸೇನಾಡಳಿತದಿಂದ ಬಾಂಗ್ಲಾವನ್ನು ಕಾಪಾಡಿದ್ದ ದಿಟ್ಟ ನಾಯಕಿ ಶೇಖ್ ಹಸೀನಾ ಅವರ ಹಿನ್ನಲೆ ಏನು ಗೊತ್ತಾ..?
2009ರಿಂದ ಸತತ 15 ವರ್ಷ ಆಡಳಿತ ನಡೆಸಿದ್ದ ಬಾಂಗ್ಲಾದೇಶದ ಅವಾಮಿ ಲೀಗ್ ನಾಯಕಿ ಹಾಗೂ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಗಲ್ಲು ಶಿಕ್ಷೆ ವಿಧಿಸಿದೆ. ಆದ್ರೆ ಬಾಂಗ್ಲಾವನ್ನು ಅಭಿವೃದ್ಧಿಗೊಳಿಸಿದ ಅವರ ರಾಜಕೀಯ ಜೀವನ ಹೇಗಿತ್ತು ಗೊತ್ತಾ..?
ಶೇಖ್ ಹಸೀನಾ -
ನವದೆಹಲಿ: ಬಾಂಗ್ಲಾ(Bangla) ಪದಚ್ಯುತ ಪ್ರಧಾನಿ ಶೇಖ್ ಹಸೀನಾ(Sheikh Hasina) ಅವರ ಮೇಲಿರುವ ಮಾನವ ಹಕ್ಕು ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT-BD) ಮಹತ್ತರವಾದ ತೀರ್ಪು ಅನ್ನು ನೀಡಿದ್ದು, ಶೇಖ್ ಹಸೀನಾ ಅವರಿಗೆ ಬಾಂಗ್ಲಾದೇಶದ (Bangladesh) ಗಲ್ಲು ಶಿಕ್ಷೆ ವಿಧಿಸಲಾಗಿದೆ. ಬಾಂಗ್ಲಾದೇಶದಲ್ಲಿ ರಾಜಕೀಯ ಅರಾಜಕತೆ ತಲೆದೋರಿ, ಒಂದು ಕಾಲದಲ್ಲಿ ಬಾಂಗ್ಲಾವನ್ನು ಸೇನಾ ಆಳ್ವಿಕೆಯಿಂದ ಕಾಪಾಡಿದ್ದ ಶೇಖ್ ಹಸೀನಾ, ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೀವ ಉಳಿಸಿಕೊಳ್ಳಲು ಪರಾರಿಯಾಗಿ ಭಾರತಕ್ಕೆ ಬಂದು ಜೀವ ಉಳಿಸಿಕೊಂಡಿದ್ದರು. ಆದರೆ ಈಗ ಅವರ ಜೀವನವೇ ಅಂತ್ಯ ಆಗುವ ಹಂತಕ್ಕೆ ಬಂದು ನಿಂತಿದ್ದು, ಬಾಂಗ್ಲಾವನ್ನು ಐದು ದಶಕಗಳ ಕಾಲ ಆಳಿದ ಅವರ ರಾಜಕೀಯ ಜೀವನದ ಬಗ್ಗೆ ಇಲ್ಲಿದೆ ಮಾಹಿತಿ.
ಕುಟುಂಬ ಕಳೆದುಕೊಂಡು ಅನಾಥವಾದರು
ಶೇಖ್ ಹಸೀನಾ, ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ್ದ ಕ್ರಾಂತಿಕಾರಿ ನಾಯಕ ಹಾಗೂ ಮಾಜಿ ಪ್ರಧಾನಿ ಶೇಖ್ ಮುಜೀಬುರ್ ರೆಹಮಾನ್ ಅವರ ಮಗಳು. ಆದರೆ
1975ರಲ್ಲಿ ಆಗ ಅವರ ಬದುಕಿನಲ್ಲಿ ಊಹಿಸಲಾರದಂತಹ ಘಟನೆ ನಡೆಯಿತು. ತಮ್ಮ ಕುಟುಂಬದ ಜೊತೆ ವಿದೇಶ ಪ್ರಯಾಣದಲ್ಲಿದ್ದರು. ಈ ವೇಳೆ ಒಂದು ಕಡೆ ಸೇನಾ ಅಧಿಕಾರಿಗಳು ಹಸೀನಾ ಅವರ ತಂದೆ ಹಾಗೂ ಪ್ರಧಾನಿ ಶೇಖ್ ಮುಜೀಬುರ್ ರೆಹಮಾನ್ ಅವರನ್ನು ಹತ್ಯೆ ಮಾಡಿದ್ದರು. ಮತ್ತೊಂದು ಕಡೆ ದಂಗೆಯಲ್ಲಿ ಹಸೀನಾ ಅವರ ತಾಯಿ, ಮೂವರು ಸಹೋದರರು ಕೂಡ ಬಲಿಯಾಗಿದ್ದರು. ಆಗ ಶೇಖ್ ಹಸೀನಾ ಅವರಿಗೆ ಕೇವಲ 27 ವರ್ಷ ಅಷ್ಟೇ.
ವೈರತ್ವಕ್ಕೆ ನಾಂದಿ
1990ರಲ್ಲಿ ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ ಜೊತೆ (ಬಿಎನ್‌ಪಿ) ಸೇರಿ ಒಪ್ಪಂದ ಮಾಡಿಕೊಂಡ ಹಸೀನಾ ಸೇನಾ ಸರ್ವಾಧಿಕಾರಿ ಹುಸೇನ್ ಮುಹಮ್ಮದ್ ಎರ್ಷಾದ್ ಅವರನ್ನು ಪದಚ್ಯುತಗೊಳ್ಳುವಂತೆ ಮಾಡಿದರು. ಅಲ್ಲಿಂದ ಅವರಿಗೆ ರಾಜಕಾರಣದಲ್ಲಿ ಶತ್ರುಗಳು ಹುಟ್ಟಿಕೊಂಡರು.
ಈ ಸುದ್ದಿಯನ್ನು ಓದಿ: Sheikh Hasina: ಶೇಖ್ ಹಸೀನಾಳಿಗೆ ಆಶ್ರಯ ನೀಡುತ್ತಿರುವುದು ತಪ್ಪು; ಹಸ್ತಾಂತರ ಪ್ರಕ್ರಿಯೆ ಕೋರಿ ಭಾರತಕ್ಕೆ ಬಾಂಗ್ಲಾ ಪತ್ರ
ಪ್ರಧಾನಿಯಾಗಿ ಆಯ್ಕೆ
1996ರಲ್ಲಿ ಶೇಖ್ ಹಸೀನಾ ಪ್ರಧಾನಿಯಾಗಿ ಆಯ್ಕೆಯಾದರು. ಆದರೆ ಸೇನಾ ಬೆಂಬಲಿತ ಸರ್ಕಾರದ ದಂಗೆಯೊಂದಿಗೆ ಭ್ರಷ್ಟಾಚಾರ ಆರೋಪ ಕೇಳಿಬಂದ ಮೇಲೆ 2007ರಲ್ಲಿ ಜೈಲು ಪಾಲದ್ದರು. ಆದರೆ ಒಂದೇ ವರ್ಷದಲ್ಲಿ ಈ ಪ್ರಕರಣವನ್ನು ಕೈಬಿಡಲಾಯಿತು. ಇದರಿಂದ ಅವರು ಚುನಾವಣೆಗೆ ಸ್ಪರ್ಧಿಸಲೂ ಸ್ವತಂತ್ರರಾದರು. ಭಾರಿ ಬಹುಮತದೊಂದಿಗೆ ಹಸೀನಾ ಜಯಭೇರಿ ಬಾರಿಸಿದರು. ಅಲ್ಲಿಂದ ಮತ್ತೆ ಅವರು ರಾಜಕೀಯ ಜೀವನದ ಯಶಸ್ಸಿನ ಪಯಣ ಆರಂಭವಾಯಿತು.
ಬಾಂಗ್ಲಾ ಅಭಿವೃದ್ಧಿ
1971ರಲ್ಲಿ ಭಾರತದ ಸಹಾಯದ ಮೂಲಕ ಪಾಕಿಸ್ತಾನದಿಂದ ಪ್ರತ್ಯೇಕಗೊಂಡು ರಚನೆಯಾದ ಬಾಂಗ್ಲಾದೇಶ, ಜಗತ್ತಿನ ಬಡದೇಶಗಳಲ್ಲಿ ಒಂದು. ಆದರೆ 2009ರ ನಂತರ ಹಸೀನಾ ಆಡಳಿತದಲ್ಲಿ ಅದು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ವಾರ್ಷಿಕ ಸರಾಸರಿ ಶೇ 6ರ ಪ್ರಗತಿ ಕಂಡಿರುವ ಬಾಂಗ್ಲಾ, 2021ರ ನಂತರ ಭಾರತಕ್ಕಿಂತಲೂ ಅಧಿಕ ತಲಾದಾಯ ಹೊಂದಿದ ಸಾಧನೆ ಮಾಡಿದೆ. ದೇಶದ ಶೇ 95ಕ್ಕೂ ಅಧಿಕ ಜನಸಂಖ್ಯೆಗೆ ಈಗ ವಿದ್ಯುತ್ ಸಂಪರ್ಕ ದೊರಕಿದೆ. ಬಡತನ ಮಟ್ಟದ ಪ್ರಮಾಣವೂ ಗಣನೀಯವಾಗಿ ಕಡಿಮೆ ಆಯಿತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ
ಅಲ್ಲದೇ 2017ರಲ್ಲಿ ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆಯ ಸಂತ್ರಸ್ತರಾದ ಸಾವಿರಾರು ರೊಹಿಂಗ್ಯಾ ಮುಸ್ಲಿಮರಿಗೆ ಆಶ್ರಯ ನೀಡಿದ್ದರು. ಹಸೀನಾ ಅವರ ಈ ನಡೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.
ಇನ್ನು ನಾಗರಿಕ ಸೇವೆಗಳ ಉದ್ಯೋಗ ಕೋಟಾ ವಿರುದ್ಧ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಸಣ್ಣದಾಗಿ ಆರಂಭವಾದ ಪ್ರತಿಭಟನೆ, ಬೃಹತ್ ಸ್ವರೂಪ ಪಡೆದುಕೊಂಡಿದೆ. ಅದು ಹಿಂಸಾಚಾರಕ್ಕೆ ತಿರುಗಿ 300ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾಗಿದೆ. ತಮ್ಮ ಈಗಿನ ಸತತ 15 ವರ್ಷಗಳ ಆಡಳಿತದಲ್ಲಿ ಶೇಖ್ ಹಸೀನಾ ಅತ್ಯಂತ ಕೆಟ್ಟ ಸನ್ನಿವೇಶ ಎದುರಿಸಿದ್ದರು. ಇದು ಅವರ ರಾಜೀನಾಮೆಯಲ್ಲಿ ಅಂತ್ಯವಾಯಿತು. ಒಂದೂವರೆ ಎರಡು ತಿಂಗಳಿನಲ್ಲಿಯೇ ಇಡೀ ದೇಶದ ಚಿತ್ರಣ ಬದಲಾಯಿತು.