ʼʼಅಮೆರಿಕದಿಂದ ತೈಲ ಖರೀದಿಸಿ ಇಲ್ಲವೇ ಹೊಸ ಮಾರ್ಗ ಕಂಡುಕೊಳ್ಳಿʼʼ: ಯುದ್ಧಕ್ಕೆ ನೆರವಾಗದ ರಾಷ್ಟ್ರಗಳ ವಿರುದ್ಧ ಡೊನಾಲ್ಡ್ ಟ್ರಂಪ್ ಗುಟುರು
Donald Trump: ಇರಾನ್ ವಿರುದ್ಧದ ಯುದ್ಧದಲ್ಲಿ ತಮ್ಮ ನೆರವಿಗೆ ಬಾರದ ಇಂಗ್ಲೆಂಡ್, ಫ್ರಾನ್ಸ್‌ನಂತಹ ದೇಶಗಳ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಗುಡುಗಿದ್ದಾರೆ. ʼʼತೈಲಕ್ಕಾಗಿ ನಿಮ್ಮದೇ ದಾರಿ ಕಂಡುಕೊಳ್ಳಿʼʼ ಎಂದು ಹೇಳಿದ್ದಾರೆ. ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್ನಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ.
ಹೊರ್ಮುಜ್ ಜಲಸಂಧಿ ಮತ್ತು ಡೊನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ) -
ವಾಷಿಂಗ್ಟನ್, ಮಾ. 31: ಇರಾನ್ ಅನ್ನು ಸುಲಭವಾಗಿ ಮಣಿಸಬಹುದು ಎಂದುಕೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಲೆಕ್ಕಾಚಾರ ತಲೆ ಕೆಳಗಾಗಿದೆ. ಪಶ್ಚಿಮ ಏಷ್ಯಾ ಯುದ್ಧ ಆರಂಭವಾಗಿ 1 ತಿಂಗಳು ಕಳೆದಿದ್ದರೂ ಇರಾನ್ ಮಣಿಯುವ ಲಕ್ಷಣ ಕಾಣಿಸುತ್ತಿಲ್ಲ. ಅದರ ಬದಲಾಗಿ ಇನ್ನಷ್ಟು ಶಕ್ತವಾಗಿ ಅಮರಿಕ ಮತ್ತು ಇಸ್ರೇಲ್ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಜತೆಗೆ ತೈಲ ಸಾಗಾಟದ ಅತ್ಯಂತ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯ (Strait of Hormuz) ಮೇಲೆ ಹಿಡಿತವನ್ನು ಮತ್ತಷ್ಟು ಶಕ್ತಗೊಳಿಸಿದೆ. ಅಮೆರಿಕ ಬೆದರಿಕೆಗೂ ಬಗ್ಗುತ್ತಿಲ್ಲ. ಇದರಿಂದ ಡೊನಾಲ್ಡ್ ಟ್ರಂಪ್ ಹತಾಶರಾದಂತೆ ಕಾಣಿಸುತ್ತಿದ್ದು, ಯುದ್ಧದಲ್ಲಿ ತಮ್ಮ ನೆರವಿಗೆ ಬಾರದ ಇಂಗ್ಲೆಂಡ್, ಫ್ರಾನ್ಸ್‌ನಂತಹ ದೇಶಗಳ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.
ಇರಾನ್ ವಿರುದ್ಧದ ದಾಳಿಗೆ ನೆರವಾಗದ ದೇಶಗಳ ವಿರುದ್ಧ ಹರಿಹಾಯ್ದಿರುವ ಟ್ರಂಪ್, ʼʼತೈಲಕ್ಕಾಗಿ ನಿಮ್ಮದೇ ದಾರಿ ಕಂಡುಕೊಳ್ಳಿʼʼ ಎಂದು ಹೇಳಿದ್ದಾರೆ. ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್ನಲ್ಲಿ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ.
ಮಿತ್ರ ರಾಷ್ಟ್ರಗಳ ವಿರುದ್ಧ ಟ್ರಂಪ್ ಗುಡುಗು:
Trump is escalating pressure on U.S. allies, telling countries struggling to access jet fuel through the Strait of Hormuz including the UK to buy American fuel or “go to the Strait, and just TAKE IT.”
— Washington Eye (@washington_EY) March 31, 2026
He also warned that nations unwilling to back Washington should stop… pic.twitter.com/O1Vl6cfRgK
ಹತಾಶರಾದ್ರಾ ಟ್ರಂಪ್?
ಇರಾನ್ ವಿರುದ್ಧದ ದಾಳಿಗೆ ನೆರವಾಗದ ರಾಷ್ಟ್ರಗಳು ಒಂದೋ ಅಮೆರಿಕದಿಂದ ತೈಲ ಖರೀದಿಸಬೇಕು ಇಲ್ಲವೇ ಹೊರ್ಮುಜ್ ಜಲಸಂಧಿಗೆ ಹೋಗಿ ತೈಲ ಪಡೆದುಕೊಳ್ಳಬೇಕು ಎಂದು ಟ್ರಂಪ್ ತಿಳಿಸಿದ್ದಾರೆ. ತಮ್ಮ ಮಿತ್ರ ರಾಷ್ಟ್ರಗಳ ನಿಲುವಿನಿಂದ ಟ್ರಂಪ್ ಹತಾಶರಾಗಿರುವುದು ಇದರಿಂದ ಸ್ಪಷ್ಟ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ʼʼಹಲವು ದೇಶಗಳು ತಮಗಾಗಿ ಹೋರಾಡುವುದು ಹೇಗೆ ಎನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹೇಗೆ ನೀವು ಅಮೆರಿಕದ ಸಹಾಯಕ್ಕೆ ನಿಂತಿಲ್ಲವೋ, ಹಾಗೆ ನಿಮಗೆ ಸಹಾಯ ಮಾಡಲು ಅಮೆರಿಕ ಇರುವುದಿಲ್ಲʼʼ ಎಂದಿದ್ದಾರೆ.
"ಇರಾನ್ ಮೇಲಿನ ದಾಳಿಯಲ್ಲಿ ಭಾಗಿಯಾಗಲು ನಿರಾಕರಿಸಿದ, ಹೊರ್ಮುಜ್ ಜಲಸಂಧಿಯಿಂದಾಗಿ ಇಂಧನವನ್ನು ಪಡೆಯಲು ಸಾಧ್ಯವಾಗದ ಇಂಗ್ಲೆಂಡ್‌ನಂತಹ ಎಲ್ಲ ದೇಶಗಳಿಗೆ ನಾನು ಸಲಹೆ ನೀಡುತ್ತೇನೆ: ಅಮೆರಿಕದಿಂದ ತೈಲ ಖರೀದಿಸಿ. ನಮ್ಮಲ್ಲಿ ಸಾಕಷ್ಟು ದಾಸ್ತಾನು ಇದೆ. ಇಲ್ಲವೇ ಹೊರ್ಮುಜ್ ಜಲಸಂಧಿಗೆ ತೆರಳಿ ಅಲ್ಲಿಂದ ತೆಗೆದುಕೊಳ್ಳಿʼʼ ಎಂದು ಹೇಳಿದ್ದಾರೆ. ಸದ್ಯ ಟ್ರಂಪ್ ಅವರ ಈ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಹೊರ್ಮುಜ್ ಜಲಸಂಧಿ ತೆರೆಯದಿದ್ದರೂ ಯುದ್ಧ ಕೊನೆಗೊಳಿಸಲು ಮುಂದಾದ ಅಮೆರಿಕ
ಇರಾನ್‌ನಿಂದ ತಿರುಗೇಟು
ಫೆಬ್ರವರಿ 28ರಂದು ಇಸ್ರೇಲ್ ಜತೆಗೂಡಿ ಅಮೆರಿಕ ಇರಾನ್ ಮೇಲೆ ದಾಳಿ ನಡೆಸುವ ಮೂಲಕ ಸಂಘರ್ಷ ಆರಂಭವಾಯ್ತು. ಅಂದಿನಿಂದ ಇರಾನ್ ಹೊರ್ಮುಜ್ ಜಲಸಂಧಿಯನ್ನು ಸ್ಥಗಿತಗೊಳಿಸಿದ್ದು, ಭಾರತದಂತಹ ಕೆಲವೇ ಕೆಲವು ರಾಷ್ಟ್ರಗಳ ಹಡಗು ಸಾಗಲು ಅನುಮತಿ ನೀಡುತ್ತಿದೆ.
ಪರ್ಷಿಯನ್ ಕೊಲ್ಲಿಯನ್ನು ಒಮನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಜತೆ ಸಂಪರ್ಕಿಸುವ ಹೊರ್ಮುಜ್ ಜಲಸಂಧಿಯು ವಿಶ್ವದ ಪ್ರಮುಖ ತೈಲ ಸಾಗಾಟ ಮಾರ್ಗ ಎನಿಸಿಕೊಂಡಿದೆ. ವಿಶ್ವದ ಸುಮಾರು ಶೇಕಡಾ 25ರಷ್ಟು ತೈಲ ಇಲ್ಲಿಂದಲೇ ಸಾಗುತ್ತದೆ. ಭಾರತಕ್ಕೆ ಅಗತ್ಯವಾದ ಶೇ. 80ರಷ್ಟು ಇಂಧನವು ಈ ಮಾರ್ಗದ ಮೂಲಕವೇ ಹಾದುಹೋಗುತ್ತದೆ. ಇರಾನ್ ಹಡಗು ಸಾಗಣೆಗೆ, ವಿಶೇಷವಾಗಿ ಅಮೆರಿಕ, ಇಸ್ರೇಲ್ ಮತ್ತು ಯುದ್ಧವನ್ನು ಬೆಂಬಲಿಸುವ ದೇಶಗಳಿಗೆ ಈ ಮಾರ್ಗವನ್ನು ಮುಚ್ಚಿದೆ. ಹೀಗಾ ನೂರಾರು ಹಡಗುಗಳು ಸಂಚರಿಸಲು ಸಾಧ್ಯವಾಗದೆ ಅಲ್ಲೇ ಲಂಗರು ಹಾಕಿವೆ. ಇದರಿಂದ ಜಾಗತಿಕವಾಗಿ ಇಂಧನ ಪೂರೈಕೆ ಸ್ಥಗಿತವಾಗಿದ್ದು, ಬೆಲೆ ಏರಿಕೆಯ ಆತಂಕ ಎದುರಾಗಿದೆ.
ಟ್ರಂಪ್ ಥಂಡಾ
ಸೋಮವಾರವಷ್ಟೇ ಬೆದರಿಕೆ ಒಡ್ಡಿದ್ದ ಟ್ರಂಪ್ ಹೊರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನನ್ನು ಧ್ವಂಸಗೊಳಿಸುವುದಾಗಿ ಎಚ್ಚರಿಸಿದ್ದರು. ಇರಾನ್‌ನ ಅಧೀನದಲ್ಲಿರುವ ಖಾರ್ಗ್ ದ್ವೀಪವನ್ನು ನಾಶಪಡಿಸುವುದಾಗಿ, ವಿದ್ಯುತ್ ಸ್ಥಾವರ, ತೈಲ ಬಾವಿಲ ಮೇಲೆ ದಾಳಿ ನಡೆಸುವುದಾಗಿ ತಿಳಿಸಿದ್ದರು.
ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.