ಬಕ್ರೀದ್‌ಗೆ ಬಲಿ ಕೊಡದೆ ಬಾಂಗ್ಲಾದೇಶ ಮೃಗಾಲಯಕ್ಕೆ "ಡೊನಾಲ್ಡ್ ಟ್ರಂಪ್" ಸ್ಥಳಾಂತರ!
‘Donald Trump buffalo’ shifted to zoo: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಹೋಲುವ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಎಮ್ಮೆಯನ್ನು ಬಕ್ರೀದ್‌ಗೆ ಮುನ್ನಾದಿನದಂದು ರಕ್ಷಿಸಿ, ಬಾಂಗ್ಲಾದೇಶದ ರಾಷ್ಟ್ರೀಯ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ. ಜನರ ಆಸಕ್ತಿ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಕೊನೆಯ ಕ್ಷಣದಲ್ಲಿ ಮಧ್ಯಪ್ರವೇಶಿಸಿದರು.
ಬಾಂಗ್ಲಾದೇಶ ಮೃಗಾಲಯಕ್ಕೆ ‘ಡೊನಾಲ್ಡ್ ಟ್ರಂಪ್ ಎಮ್ಮೆ’ ಶಿಫ್ಟ್ -
ಢಾಕಾ, ಮೇ 28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಹೋಲುವ ಕಾರಣಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ಎಮ್ಮೆಯನ್ನು ಬಕ್ರೀದ್‌ಗೆ ಮುನ್ನಾದಿನದಂದು ರಕ್ಷಿಸಿ, ಬಾಂಗ್ಲಾದೇಶದ (Bangladesh) ರಾಷ್ಟ್ರೀಯ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ. ಸುಮಾರು 700 ಕೆಜಿ ತೂಕದ ಈ ಎಮ್ಮೆ, ಅದರ ವಿಶಿಷ್ಟವಾದ ಬಿಳಿ ಹಣೆ ಮತ್ತು ವಿಭಿನ್ನ ಕೂದಲಿನ ಮಾದರಿಯನ್ನು ಹೊಂದಿದೆ. ಅದರ ಫೋಟೋ ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಶೀಘ್ರದಲ್ಲೇ ವೈರಲ್ ಆಯ್ತು. ಎಮ್ಮೆ ನೋಡಿದ ನೆಟ್ಟಿಗರು, ಡೊನಾಲ್ಡ್ ಟ್ರಂಪ್ ಎಮ್ಮೆ (Donald Trump buffalo) ಎಂದೇ ಹೆಸರಿಟ್ಟರು.
ಈ ಎಮ್ಮೆಯನ್ನು ಅದರ ಮಾಲೀಕ 38 ವರ್ಷದ ಜಿಯಾ ಉದ್ಧಿನ್ ಮೃದಾ ಮಾರಾಟ ಮಾಡಿದ್ದರು. ಆದರೆ ಜನರ ಆಸಕ್ತಿ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರದ ಅಧಿಕಾರಿಗಳು ಕೊನೆಯ ಕ್ಷಣದಲ್ಲಿ ಮಧ್ಯಪ್ರವೇಶಿಸಿದರು. ಅವರು ಆ ಪ್ರಾಣಿಯನ್ನು ಖರೀದಿಸಿ, ಢಾಕಾದ ಬಾಂಗ್ಲಾದೇಶ ರಾಷ್ಟ್ರೀಯ ಮೃಗಾಲಯಕ್ಕೆ ವರ್ಗಾಯಿಸಿದ್ದಾರೆ. ಎಮ್ಮೆಯನ್ನು ಬಲಿಕೊಡುವ ಬದಲು ಸಾರ್ವಜನಿಕ ಪ್ರದರ್ಶನಕ್ಕಾಗಿ ಇರಿಸಲಾಗುತ್ತದೆ.
ಭದ್ರತಾ ಕಾಳಜಿಯಿಂದಾಗಿ ಪ್ರಾಣಿಯನ್ನು ರಕ್ಷಿಸಲಾಗಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊನೆಯ ಕ್ಷಣದಲ್ಲಿ, ಭದ್ರತಾ ಕಾಳಜಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದಾಗಿ ಎಮ್ಮೆಯನ್ನು ಬಲಿ ನೀಡದಂತೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಉಲ್ಲೇಖಿಸಿದ್ದಾರೆ.
ಇಲ್ಲಿದೆ ವಿಡಿಯೊ:
#Watch | People gather to see the viral albino buffalo with blond locks, nicknamed 'Donald Trump,' before it is sacrificed as part of the Eid al-Adha festival's 'Qurbani' ritual. pic.twitter.com/jrzX8go4LJ
— NDTV (@ndtv) May 26, 2026
ವೈರಲ್ ಆಗಿದ್ದ ಪ್ರಾಣಿಯನ್ನು ರಕ್ಷಿಸುವುದು ಹಾಗೂ ಜನರು ಅದನ್ನು ಸುರಕ್ಷಿತವಾಗಿ ವೀಕ್ಷಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಎಮ್ಮೆಯನ್ನು ಇದೀಗ ವಿಶೇಷವಾಗಿ ಮೀಸಲಾದ ಕೊಠಡಿಯಲ್ಲಿ ಇರಿಸಲಾಗಿದ್ದು, ಮೃಗಾಲಯದಲ್ಲಿ ಅತಿ ಹೆಚ್ಚು ಫೋಟೋ ತೆಗೆಯಲಾಗುವ ಪ್ರಾಣಿಗಳಲ್ಲೊಂದು ಆಗುವ ಸಾಧ್ಯತೆಯಿದೆ.
ಬಕ್ರೀದ್‌ಗೂ ಮುನ್ನ ಬಾಂಗ್ಲಾದೇಶದಲ್ಲಿ ಭಾರಿ ಸದ್ದು ಮಾಡ್ತಿವೆ 'ಡೊನಾಲ್ಡ್ ಟ್ರಂಪ್', 'ನೆತನ್ಯಾಹು' ಎಮ್ಮೆಗಳು!
ಈ ತಿಂಗಳ ಆರಂಭದಲ್ಲಿ ಈ ಎಮ್ಮೆ ಜನಪ್ರಿಯವಾದಾಗ, “ನನ್ನ ಕಿರಿಯ ಸಹೋದರ ಅದರ ತಲೆಯ ಮೇಲಿನ ಕೂದಲನ್ನು ನೋಡಿ ತಮಾಷೆಯಾಗಿ ಡೊನಾಲ್ಡ್ ಟ್ರಂಪ್ ಎಂದು ಹೆಸರಿಟ್ಟಿದ್ದಾನೆ” ಎಂದು ಅದರ ಮಾಲೀಕ ಹೇಳಿದ್ದರು. ಈ ಎಮ್ಮೆ ತುಂಬಾ ಸೌಮ್ಯ ಪ್ರಾಣಿ. ಅಲ್ಬಿನೋ ಎಮ್ಮೆಗಳು ಸಾಮಾನ್ಯವಾಗಿ ಶಾಂತಿಯುತವಾಗಿರುತ್ತವೆ. ಪ್ರಚೋದಿಸಲ್ಪಡದ ಹೊರತು ಆಕ್ರಮಣಕಾರಿಯಾಗುವುದಿಲ್ಲ ಎಂದು ಅವರು ಹೇಳಿದರು.
ಆಲ್ಬಿನೋ ಎಮ್ಮೆಗಳು ದಕ್ಷಿಣ ಏಷ್ಯಾದಲ್ಲಿ ಅಪರೂಪ ಮತ್ತು ಸಾಮಾನ್ಯವಾಗಿ ಅವುಗಳ ಸೌಮ್ಯ ಸ್ವಭಾವಕ್ಕೆ ಹೆಸರುವಾಸಿಯಾಗಿರುತ್ತವೆ. ಎಮ್ಮೆಗೆ ಜೋಳ, ಸೋಯಾಬೀನ್ ಮತ್ತು ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿತ್ತು. ಇದು ಅದರ ಗಾತ್ರ ಮತ್ತು ನೋಟಕ್ಕೆ ಕಾರಣವಾಗಿದೆ ಎಂದು ಜಿಯಾ ಉದ್ಧಿನ್ ಮೃದಾ ಹೇಳಿದರು.
ಅಂದಹಾಗೆ, ಡೊನಾಲ್ಡ್ ಟ್ರಂಪ್ ಎಮ್ಮೆ ಜೊತೆಗೆ, ಬೆಂಜಮಿನ್ ನೆತನ್ಯಾಹು ಎಮ್ಮೆ ಕೂಡ ಗಮನ ಸೆಳೆಯುತ್ತಿದೆ. 750 ಕೆ.ಜಿ. ಗಿಂತ ಹೆಚ್ಚು ತೂಕವಿರುವ ಮತ್ತೊಂದು ಎಮ್ಮೆ ನೋಡಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುವಿನಂತೆ ಇದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ.