ಹೊಸ ಹೆಚ್-1ಬಿ ವೀಸಾಗಳ ಮೇಲಿನ ಶುಲ್ಕ ರದ್ದು, ಡೊನಾಲ್ಡ್ ಟ್ರಂಪ್ ಕ್ರಮ ಕಾನೂನುಬಾಹಿರ ಎಂದ ಫೆಡರಲ್ ನ್ಯಾಯಾಲಯ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿದೇಶಿ ಕಾರ್ಮಿಕರ H-1B ವೀಸಾ ಮೇಲೆ ವಿಧಿಸಿರುವ 1,00,000 ಡಾಲರ್ ಶುಲ್ಕವನ್ನು ಯುಎಸ್ ಫೆಡರಲ್ ನ್ಯಾಯಾಲಯ ಕಾನೂನು ಬಾಹಿರ ಎಂದು ಹೇಳಿ ರದ್ದುಗೊಳಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಡೊನಾಲ್ಡ್ ಟ್ರಂಪ್ ಅವರು ಈ ಶುಲ್ಕವನ್ನು ಘೋಷಿಸಿದ್ದರು. ಇದೀಗ ನ್ಯಾಯಾಲಯದ ತೀರ್ಪಿನಿಂದ ಟ್ರಂಪ್ ಗೆ ಭಾರಿ ಮುಖಭಂಗವಾಗಿದೆ.
ಸಂಗ್ರಹ ಚಿತ್ರ -
ವಾಷಿಂಗ್ಟನ್: ಕಳೆದ ಸೆಪ್ಟೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ವಿದೇಶಿ ಕಾರ್ಮಿಕರ H-1B ವೀಸಾ (H-1B visas) ವಿಧಿಸಿದ್ದ 1,00,000 ಡಾಲರ್ ಶುಲ್ಕವನ್ನು ಯುಎಸ್ (US) ಫೆಡರಲ್ ನ್ಯಾಯಾಲಯ (US Federal court) ರದ್ದುಗೊಳಿಸಿದೆ. ಈ ಕುರಿತು 20 ಡೆಮಾಕ್ರಟಿಕ್ ರಾಜ್ಯ ಅಟಾರ್ನಿ ಜನರಲ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಬೋಸ್ಟನ್‌ನಲ್ಲಿನ (Boston) ಯುಎಸ್ ಜಿಲ್ಲಾ ನ್ಯಾಯಾಲಯ ಕಾಂಗ್ರೆಸ್‌ನ ನಿಯೋಗವಿಲ್ಲದೆ ಜಾರಿಗೊಳಿಸಿರುವ ಈ ನೀತಿಯು ಕಾನೂನು ಬಾಹಿರವಾಗಿದೆ ಎಂದು ಹೇಳಿದೆ.
ಬೋಸ್ಟನ್‌ನಲ್ಲಿನ ಯುಎಸ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಲಿಯೋ ಸೊರೊಕಿನ್ ಅವರು ಈ ಕುರಿತು ತೀರ್ಪು ನೀಡಿದ್ದು, ಕಾಂಗ್ರೆಸ್ ಗೆ ಅಧಿಕಾರ ನೀಡದ ಶುಲ್ಕವು ಕಾನೂನುಬಾಹಿರ ತೆರಿಗೆಯಾಗಿದೆ. ಹೀಗಾಗಿ ಹೆಚ್ಚು ಕೌಶಲ ಹೊಂದಿರುವ ವಿದೇಶಿ ಕಾರ್ಮಿಕರಿಗೆ ಹೊಸ ಹೆಚ್-1ಬಿ ವೀಸಾಗಳ ಮೇಲಿನ 1,00,000 ಡಾಲರ್ ಶುಲ್ಕವನ್ನು ಫೆಡರಲ್ ನ್ಯಾಯಾಲಯ ರದ್ದುಗೊಳಿಸಿದೆ ಎಂದು ತಿಳಿಸಿದ್ದಾರೆ.
ಅಮೆರಿಕ ಸರ್ಕಾರ ಪ್ರತಿ ವರ್ಷ ಸುಮಾರು 65,000 ಹೆಚ್ -1ಬಿ ವೀಸಾವನ್ನು ನೀಡುತ್ತದೆ. ಇದರಲ್ಲಿ ಪದವಿ ಹೊಂದಿರುವ ಕಾರ್ಮಿಕರಿಗೆ 20,000 ವೀಸಾಗಳನ್ನು ಮೂರರಿಂದ ಆರು ವರ್ಷಗಳವರೆಗೆ ಅನುಮೋದಿಸಲಾಗುತ್ತದೆ. ವಿದೇಶಿ ಉದ್ಯೋಗಿಗೆ ವೀಸಾ ನೀಡ ಬಯಸುವ ಉದ್ಯೋಗದಾತರು ಸುಮಾರು 2,000 ಡಾಲರ್ ನಿಂದ 5,000 ಡಾಲರ್ ವರೆಗೆ ಶುಲ್ಕ ಪಾವತಿಸಬೇಕಾಗಿತ್ತು. ಆದರೆ ಶುಲ್ಕ ಹೆಚ್ಚಳವು ಹೆಚ್-1ಬಿ ವೀಸಾ ಬೇಡಿಕೆಯನ್ನು ಕಡಿಮೆ ಮಾಡಿದೆ.
ಹೆಚ್ -1ಬಿ ವೀಸಾಕ್ಕೆ 1,00,000 ಡಾಲರ್ ಶುಲ್ಕ ವಿಧಿಸಿದ ಬಳಿಕ ಕಳೆದ ಫೆಬ್ರವರಿ 15ರ ವೇಳೆಗೆ ಯುಎಸ್ ಪೌರತ್ವ ಮತ್ತು ವಲಸೆ ಸೇವೆಗಳು ಕೇವಲ 85 ಅರ್ಜಿಗಳನ್ನು ಮಾತ್ರ ಸ್ವೀಕರಿಸಿದೆ. ಹೆಚ್ -1ಬಿ ವೀಸಾ ನೋಂದಣಿಯು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 38.5ರಷ್ಟು ಕುಸಿತವಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿದೇಶಿ ಪ್ರಜೆಗಳ ಪ್ರವೇಶವನ್ನು ನಿರ್ಬಂಧಿಸಲು ಫೆಡರಲ್ ವಲಸೆ ಕಾನೂನಿನ ಅಡಿಯಲ್ಲಿ ಈ ಶುಲ್ಕ ವಿಧಿಸುವ ಕಾನೂನುಬದ್ಧ ಅಧಿಕಾರವನ್ನು ಹೊಂದಿದ್ದಾರೆ ಎಂದು ಆಡಳಿತ ವಾದಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಕಾಂಗ್ರೆಸ್ ಕಾನೂನಿನ ನಿಯೋಗ ರಚನೆ ಮಾಡದೆ ಅಂತಹ ತೆರಿಗೆಯನ್ನು ವಿಧಿಸಲು ಅಧ್ಯಕ್ಷರಿಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದೆ.
ಕಳೆದ ಸೆಪ್ಟೆಂಬರ್‌ನಲ್ಲಿಅಮೆರಿಕ ಡೊನಾಲ್ಡ್ ಟ್ರಂಪ್ ಅವರು, ಹೆಚ್-1ಬಿ ವೀಸಾವನ್ನು ಕಡಿಮೆ ಸಂಬಳ ಮತ್ತು ಕಡಿಮೆ ಕೌಶಲವುಳ್ಳ ಕಾರ್ಮಿಕರನ್ನು ಅಮರಿಕದ ಕಾರ್ಮಿಕರ ಬದಲಿಗೆ ಬಳಸಲು ಉದ್ದೇಶ ಪೂರ್ವಕವಾಗಿ ಬಳಸಿಕೊಳ್ಳಲಾಗಿದೆ. ಇದು ದೇಶದ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುತ್ತದೆ ಎಂದು ಹೇಳಿದ್ದರು.
ಕೆಲವು ಉದ್ಯೋಗದಾತರು ಕಡಿಮೆ ವೇತನ ನೀಡುವ ಸಲುವಾಗಿ ಹೆಚ್-1ಬಿ ವೀಸಾ ಕಾನೂನು ಮತ್ತು ಅದರ ನಿಯಮಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇದರಿಂದ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿಅತ್ಯುನ್ನತ ಕೌಶಲ್ಯವುಳ್ಳ ಜನರನ್ನು ಆಕರ್ಷಿಸುವುದು, ಉಳಿಸಿಕೊಳ್ಳುವುದು ಕಷ್ಟವಾಗಿದೆ ಎಂದು ತಿಳಿಸಿದ್ದರು.
24 ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ತೈಲ ಟ್ಯಾಂಕರ್‌ನಲ್ಲಿ ಬೆಂಕಿ ಅವಘಡ; ತಪ್ಪಿದ ಭಾರಿ ದುರಂತ
ಡೊನಾಲ್ಡ್ ಟ್ರಂಪ್ ಅವರ ವೀಸಾ ಶುಲ್ಕ ಹೆಚ್ಚಳ ಮತ್ತು ವಲಸೆ ನಿಯಮಗಳಲ್ಲಿನ ಬದಲಾವಣೆಯು ಭಾರತದಲ್ಲಿ ಕಳವಳವನ್ನು ಉಂಟು ಮಾಡಿತ್ತು. ಈ ನಡುವೆ ಕೃತಕ ಬುದ್ಧಿಮತ್ತೆಯಿಂದಾಗಿ ಸಾವಿರಾರು ತಾಂತ್ರಿಕ ಉದ್ಯೋಗಗಳು ಕಡಿತಗೊಂಡವು. ಉದ್ಯೋಗ ನೇಮಕಾತಿ ವಿಳಂಬ ಉದ್ಯೋಗ ವಲಯದಲ್ಲಿ ಭಾರಿ ಸಂಚಲನವನ್ನು ಉಂಟು ಮಾಡಿತ್ತು. ಹೀಗಾಗಿ ಭಾರತ ಮತ್ತು ಯುಎಸ್‌ನಲ್ಲಿರುವ ಭಾರತೀಯ ಕಾರ್ಮಿಕರ ವೀಸಾ ಅರ್ಜಿಗಳಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರಿಗೆ ತಿಳಿಸಿದ್ದರು. ಆದರೆ ಇದು ಭಾರತವನ್ನು ಗುರಿಯಾಗಿಸಿ ಮಾಡಿದ್ದಲ್ಲ ಎಂದು ಹೇಳಿದ್ದ ರುಬಿಯೊ ಯುಎಸ್ ವಲಸೆ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ತಿಳಿಸಿದ್ದರು.