ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ನನ್ನ ತಾಯಿ 6 ತಿಂಗಳು ನನ್ನೊಂದಿಗೆ ಮಾತುಬಿಟ್ಟರು, ವಾಟ್ಸಾಪ್‌ನಲ್ಲಿ ಬ್ಲಾಕ್‌ ಮಾಡಿದ್ದರು’; ನಟಿ ಭಾಗ್ಯಶ್ರೀ ಬೋರ್ಸೆಗೆ ಇಂತಹ ಪರಿಸ್ಥಿತಿ ಬಂದಿದ್ದೇಕೆ?

'ಲೇನಿನ್' ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಟಿ ಭಾಗ್ಯಶ್ರೀ ಬೋರ್ಸೆ, ತಮ್ಮ ಸಿನಿಮಾ ರಂಗದ ಪ್ರವೇಶಕ್ಕೆ ಕುಟುಂಬದಿಂದ ಎದುರಾಗಿದ್ದ ತೀವ್ರ ವಿರೋಧವನ್ನು ನೆನಪಿಸಿಕೊಂಡಿದ್ದಾರೆ. ನಟಿಯಾಗುವ ನಿರ್ಧಾರದಿಂದಾಗಿ ತಾಯಿ ಆರು ತಿಂಗಳು ಮಾತನ್ನೇ ಬಂದ್ ಮಾಡಿ ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

ನಟಿ ಭಾಗ್ಯಶ್ರೀ ಬೋರ್ಸೆ ನೋವಿನ ಕಥೆ; ಅವ್ರ ಕುಟುಂಬದವರು ಹೀಗೇಕೆ ಮಾಡಿದ್ರು?

-

Avinash GR
Avinash GR Jul 28, 2026 1:47 PM

ಸಾಲು ಸಾಲು ಸೋಲುಗಳನ್ನು ಕಂಡು, ಸದ್ಯ ಅಖಿಲ್‌ ಅಕ್ಕಿನೇನಿ ನಟನೆಯ 'ಲೇನಿನ್' ಚಿತ್ರದ ಮೂಲಕ ಸಕ್ಸಸ್‌ ಕಂಡಿರುವ ಮರಾಠಿ ಮೂಲದ ನಟಿ ಭಾಗ್ಯಶ್ರೀ ಬೋರ್ಸೆ ಅವರ ವೈಯಕ್ತಿಕ ಬದುಕಿನ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್‌ ವಿಚಾರಗಳು ಹೊರಬಿದ್ದಿವೆ. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಸಾಮಾನ್ಯ ಕುಟುಂಬದಿಂದ ಬಂದ ಭಾಗ್ಯಶ್ರೀಗೆ ನಟಿಯಾಗಬೇಕು ಎಂಬುದು ಮಹಾದಾಸೆಯಾಗಿತ್ತು. ಆದರೆ, ಅವರ ಈ ನಿರ್ಧಾರಕ್ಕೆ ಇಡೀ ಕುಟುಂಬದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತಂತೆ.

ಈಚೆಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವಾಗ ನಟಿ ಭಾಗ್ಯಶ್ರೀ ತಮ್ಮ ಸಿನಿಮಾ ಪಯಣವನ್ನು ಹಂಚಿಕೊಂಡಿದ್ದಾರೆ. ತಾವು ನಟಿಯಾಗಲು ನಿರ್ಧರಿಸಿದಾಗ ತಮ್ಮ ತಾಯಿ ಹಲವು ತಿಂಗಳುಗಳ ಕಾಲ ತಮ್ಮೊಂದಿಗೆ ಮಾತನಾಡಲೇ ಇಲ್ಲ ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ಅಲ್ಲದೆ, ಹಣದ ಮಹತ್ವ ಹಾಗೂ ಪ್ರತಿಯೊಬ್ಬ ಮಹಿಳೆಗೂ ತನ್ನದೇ ಆದ ಬ್ಯಾಂಕ್ ಖಾತೆ ಏಕೆ ಇರಬೇಕು ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

Lenin Event: ಅಖಿಲ್ 'ಲೆನಿನ್' ಸಿನಿಮಾದಲ್ಲಿ ಅದೊಂದು ತಪ್ಪು ಮಾಡಿಬಿಟ್ಟೆ; ನಟ ನಾಗಾರ್ಜುನ

ಕುಟುಂಬ ಸದಸ್ಯರಿಂದ ತೀವ್ರ ವಿರೋಧ

"ನಾನು ನನ್ನ ತಾಯಿಗೆ ಕರೆ ಮಾಡಿ, ನಟನೆ ಕುರಿತ ನಿರ್ಧಾರ ತಿಳಿಸಿದೆ. ಆದರೆ, ಅವರು ಬೇಡ ಎಂದರು. ತಂದೆಗೆ ಕರೆ ಮಾಡಿದೆ, ಅವರು 'ತಾಯಿ ಬೇಡ ಅನ್ನುತ್ತಿದ್ದಾಳೆ' ಎಂದರು. ಕನಿಷ್ಠ ನನ್ನ ಸಹೋದರಿಯಾದರೂ ನನಗೆ ಬೆಂಬಲ ನೀಡಬಹುದು ಎಂದುಕೊಂಡು ಅವಳಿಗೆ ಕರೆ ಮಾಡಿದೆ. ಆದರೆ ಅವಳು ಕೂಡ 'ಮನೆಯಲ್ಲಿ ಬೇಡ ಅನ್ನುತ್ತಿದ್ದಾರೆ' ಎಂದಳು. ಹೀಗೆ ಪ್ರತಿಯೊಬ್ಬರೂ ನನ್ನ ನಿರ್ಧಾರವನ್ನು ನಿರಾಕರಿಸಿದರು" ಎಂದು ಭಾಗ್ಯಶ್ರೀ ಹೇಳಿದ್ದಾರೆ.

ಪೋಷಕರಾದಾಗ ನಿಮಗಿದು ಅರ್ಥವಾಗುತ್ತದೆ

ಅವರ ಪ್ರಕಾರ, ಕುಟುಂಬದವರು ಯಾವುದೇ ಕೆಟ್ಟ ಉದ್ದೇಶದಿಂದ ವಿರೋಧಿಸಲಿಲ್ಲ; ಬದಲಿಗೆ ಈ ಅಪರಿಚಿತ ಕ್ಷೇತ್ರದಲ್ಲಿ ಮಗಳ ಸುರಕ್ಷತೆಯ ಬಗ್ಗೆ ಅವರಿಗೆ ಭಯವಿತ್ತು. "ನೀವು ಸ್ವತಃ ತಾಯಿ-ತಂದೆಯಾದಾಗ ಮಾತ್ರ ನಿಮಗಿದು ಅರ್ಥವಾಗುತ್ತದೆ. ಅದೊಂದು ರೀತಿಯ ಭಯ. ತಮ್ಮ ಚಿಕ್ಕ ಮಗಳು ಹೊರಗಿನ ಇಷ್ಟೊಂದು ದೊಡ್ಡ ಜಗತ್ತಿಗೆ ಹೋಗುತ್ತಿದ್ದಾಳೆ, ಅಲ್ಲಿ ಕೆಟ್ಟ ಜನರಿದ್ದರೆ ಏನು ಮಾಡುವುದು? ಎಂಬ ಚಿಂತೆ ಅವರಿಗಿತ್ತು" ಎಂದು ಭಾಗ್ಯಶ್ರೀ ಹೇಳಿದ್ದಾರೆ.‌

ಅಕ್ಕಿನೇನಿ ನಾಗಾರ್ಜುನ ಪುತ್ರ ಅಖಿಲ್ ನಟನೆಯ 'ಲೆನಿನ್' ಚಿತ್ರದಲ್ಲಿ ಅಬ್ಬರಿಸಿದ ಕನ್ನಡದ ಪ್ರತಿಭಾವಂತ ಕಲಾವಿದರು

ಜೀವನದಲ್ಲಿ ಪಶ್ಚಾತ್ತಾಪವನ್ನು ಇಟ್ಟುಕೊಳ್ಳಬಾರದು

ಎಲ್ಲರೂ ವಿರೋಧಿಸಿದರೂ ಭಾಗ್ಯಶ್ರೀ ಅವರ ನಿರ್ಧಾರ ಮಾತ್ರ ಗಟ್ಟಿಯಾಗಿತ್ತು. "ನನ್ನ ಮನಸ್ಸಿನಲ್ಲಿ ಒಂದೇ ಒಂದು ವಿಚಾರವಿತ್ತು. 80 ವರ್ಷ ವಯಸ್ಸಾದಾಗ 'ನಾನು ಅಂದು ಹಾಗೆ ಮಾಡಿದ್ದರೆ ಏನಾಗುತ್ತಿತ್ತು?' ಎಂದು ಯೋಚಿಸುವುದು ನನಗೆ ಇಷ್ಟವಿರಲಿಲ್ಲ. ನನಗೆ ಪಶ್ಚಾತ್ತಾಪಪಡುವುದು ಇಷ್ಟವಿಲ್ಲ. ನಮ್ಮಲ್ಲಿ ಯಾರೂ ಜೀವನದಲ್ಲಿ ಪಶ್ಚಾತ್ತಾಪವನ್ನು ಇಟ್ಟುಕೊಳ್ಳಬಾರದು, ಏಕೆಂದರೆ ಅದು ನಮ್ಮನ್ನು ಹಿಂದಕ್ಕೆ ಕರೆದೊಯ್ಯುತ್ತದೆ. ನಿಮಗೆ ಏನು ಮಾಡಲು ಇಷ್ಟವಿದೆಯೋ ಅದನ್ನು ಮಾಡಿ" ಎಂದು ಭಾಗ್ಯಶ್ರೀ ಕಿವಿಮಾತು ಹೇಳಿದರು.

ತಾಯಿ ಬ್ಲಾಕ್ ಮಾಡಿದರು, 6 ತಿಂಗಳು ಮಾತನಾಡಲಿಲ್ಲ

ತಮ್ಮ ನಿರ್ಧಾರಕ್ಕೆ ಬದ್ಧರಾಗಿ ಭಾಗ್ಯಶ್ರೀ ಆಡಿಷನ್‌ಗಳನ್ನು ನೀಡಲು ಪ್ರಾರಂಭಿಸಿದರು. "ನನ್ನ ತಾಯಿ ನನ್ನನ್ನು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದರು. 6 ತಿಂಗಳ ಕಾಲ ಅವರು ನನ್ನೊಂದಿಗೆ ಮಾತನಾಡಲೇ ಇಲ್ಲ. ಇಂದು ನಾನು ಇದನ್ನು ನಗುತ್ತಾ ಹೇಳುತ್ತಿದ್ದರೂ, ಅಂದು ಆ ಸಮಯ ನನಗೆ ಅತ್ಯಂತ ಕಷ್ಟಕರವಾಗಿತ್ತು. ಆದರೆ ಎಂದಾದರೂ ಒಂದು ದಿನ ಅವರಿಗೆ ನನ್ನ ಬಗ್ಗೆ ಹೆಮ್ಮೆಯಾಗುತ್ತದೆ ಎಂಬ ನಂಬಿಕೆ ನನಗಿತ್ತು" ಎಂದು ಭಾಗ್ಯಶ್ರೀ ತಿಳಿಸಿದ್ದಾರೆ.

ಚಪ್ಪಲಿ ಕೊಡಿಸದ ತಂದೆ

"ನಾನು ಚಿಕ್ಕವಳಿದ್ದಾಗ ಒಮ್ಮೆ ನನ್ನ ತಂದೆಯೊಂದಿಗೆ ರಸ್ತೆಯಲ್ಲಿ ಹೋಗುತ್ತಿದ್ದೆ. ನನಗೆ ಆ ಘಟನೆ ಇಂದಿಗೂ ಸ್ಪಷ್ಟವಾಗಿ ನೆನಪಿದೆ. ಅಲ್ಲಿ 200 ರೂಪಾಯಿಯ ಒಂದು ಜೊತೆ ಚಪ್ಪಲಿ ಇತ್ತು. ನನಗೆ ಆ ಚಪ್ಪಲಿ ಬೇಕು ಎಂದು ತಂದೆಗೆ ಹೇಳಿದೆ. ಆದರೆ ಅವರು ಕೊಡಿಸಲಿಲ್ಲ, ಮುಂದಕ್ಕೆ ಹೊರಟುಹೋದರು. ನನಗೆ ತುಂಬಾ ಬೇಸರವಾಯಿತು. 'ಬರೀ 200 ರೂಪಾಯಿಯ ಚಪ್ಪಲಿಯನ್ನು ಸಹ ನನಗೆ ಕೊಡಿಸಲು ನನ್ನ ತಂದೆಗೆ ಸಾಧ್ಯವಿಲ್ಲವೇ?' ಅನಿಸಿತು. ಆ ಘಟನೆಯ ನಂತರ ನಾನು ಎರಡು ವಿಷಯಗಳನ್ನು ನಿರ್ಧರಿಸಿದೆ. ಮೊದಲನೆಯದು, ಯಾವಾಗಲೂ ವಸ್ತುಗಳ ಬೆಲೆಯನ್ನು ಚೌಕಾಸಿ ಮಾಡುವುದು. ಎರಡನೇ ವಿಷಯವೆಂದರೆ, ಜೀವನದಲ್ಲಿ ಎಂದಿಗೂ ಯಾರ ಬಳಿಯೂ ಹಣ ಕೇಳಬಾರದು. ನನ್ನ ತಂದೆ ನನಗೆ ಕಲಿಸಿದ ಅತ್ಯಂತ ದೊಡ್ಡ ಪಾಠ ಇದು ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ ಭಾಗ್ಯಶ್ರೀ.

ಸ್ವಂತ ಮನೆ ಮತ್ತು ಪ್ರತ್ಯೇಕ ಬ್ಯಾಂಕ್ ಖಾತೆ ಇರಬೇಕು

"ನಿಮಗೆ ಬೇಕಾದುದನ್ನು ನಿಮ್ಮ ಸ್ವಂತ ಹಣದಲ್ಲೇ ಖರೀದಿಸುವಷ್ಟು ಸ್ವಾವಲಂಬಿಗಳಾಗಿರಬೇಕು. ಅದು ಅತ್ಯಂತ ಸಾಧಾರಣ ಚಪ್ಪಲಿಯೇ ಆಗಿರಲಿ ಅಥವಾ ಪೋಷಕರಿಗೆ ನೀಡುವ ದೊಡ್ಡ ಉಡುಗೊರೆಯೇ ಆಗಿರಲಿ. ನಿಮಗೆ ನಿಮ್ಮದೇ ಆದ ಒಂದು ಸ್ವಂತ ಮನೆ ಮತ್ತು ಪ್ರತ್ಯೇಕ ಬ್ಯಾಂಕ್ ಖಾತೆ ಇರಬೇಕು. ಇದು ನಿಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ, ನಿಮ್ಮನ್ನು ಸಶಕ್ತರನ್ನಾಗಿ ಮಾಡುತ್ತದೆ. ನಿಜ ಹೇಳಬೇಕೆಂದರೆ, ಈ ವಿಷಯಗಳೇ ನಿಮ್ಮನ್ನು ನಿಜವಾದ ಅರ್ಥದಲ್ಲಿ ಸ್ವತಂತ್ರರನ್ನಾಗಿ ಮಾಡುತ್ತವೆ" ಎಂದು ವಿದ್ಯಾರ್ಥಿನಿಯರಿಗೆ ಭಾಗ್ಯಶ್ರೀ ಬೋರ್ಸೆ ಕರೆ ನೀಡಿದ್ದಾರೆ.