ನವದೆಹಲಿ. ಮೇ 21: ಅಮೆರಿಕದ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಲ್ಲಿ ನಡೆಯುತ್ತಿರುವ ಇತ್ತೀಚಿನ ಉದ್ಯೋಗ ಕಡಿತ (layoff) ಕ್ರಮಗಳು, ವಿಶೇಷವಾಗಿ ಮೆಟಾ ಕೈಗೊಂಡ ಲೇಆಫ್‌ಗಳು, H-1B ವೀಸಾ ಹೊಂದಿರುವ ಭಾರತೀಯ ಟೆಕ್ಕಿಗಳಿಗೆ ಭಾರಿ ಹೊಡೆತ ನೀಡಿವೆ. ಹಲವು ವರ್ಷಗಳಿಂದ ಭಾರತೀಯ ಇಂಜಿನಿಯರ್‌ಗಳು ಮತ್ತು ಸಾಫ್ಟ್‌ವೇರ್ ಡೆವಲಪರ್‌ಗಳು ಅಮೆರಿಕದ (America) ಅಗ್ರ ತಂತ್ರಜ್ಞಾನ ಕಂಪನಿಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಕೋಡ್ ಬರೆಯುತ್ತಿದ್ದರು, ತಂಡಗಳನ್ನು ಮುನ್ನಡೆಸುತ್ತಿದ್ದರು, ಮನೆ ಖರೀದಿಸಿ ಕುಟುಂಬಗಳೊಂದಿಗೆ ಸ್ಥಿರ ಜೀವನ ಕಟ್ಟಿಕೊಂಡಿದ್ದರು.
ಆದರೆ ಈಗ, ಒಂದೇ ಒಂದು ಲೇಆಫ್ ಇಮೇಲ್ ಸಾವಿರಾರು ಭಾರತೀಯರ ಬದುಕನ್ನು ಅಸ್ಥಿರಗೊಳಿಸಿದೆ. ಅಮೆರಿಕದ ಟೆಕ್ ಕ್ಷೇತ್ರದಲ್ಲಿ ನಡೆಯುತ್ತಿರುವ ಹೊಸ ಹಂತದ ಉದ್ಯೋಗ ಕಡಿತವು ಕೇವಲ ಕೆಲಸ ಕಳೆದುಕೊಳ್ಳುವ ಸಮಸ್ಯೆಯಷ್ಟೇ ಅಲ್ಲ. ಅದು ಭಾರತೀಯ ವೃತ್ತಿಪರರಲ್ಲಿ ಹಳೆಯ ಭಯವನ್ನೂ ಮತ್ತೆ ಜೀವಂತಗೊಳಿಸಿದೆ. ಉದ್ಯೋಗ ಕಳೆದುಕೊಂಡರೆ ಅಮೆರಿಕದಲ್ಲಿ ಉಳಿಯುವ ಹಕ್ಕನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಮೆಟಾ ಸಂಸ್ಥೆ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದತ್ತ ಹೆಚ್ಚಿನ ಒತ್ತು ನೀಡುತ್ತಿರುವ ಹಿನ್ನೆಲೆ ಸುಮಾರು 8,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ. ಅಮೆಜಾನ್ ಕೂಡ ಹಲವು ಹಂತಗಳಲ್ಲಿ ಸಿಬ್ಬಂದಿ ಕಡಿತ ಮುಂದುವರಿಸಿದೆ. ಅಮೆರಿಕದಲ್ಲಿ ಉದ್ಯೋಗ ಕಳೆದುಕೊಂಡ ಕ್ಷಣದಿಂದಲೇ ಸಮಯದ ವಿರುದ್ಧದ ಹೋರಾಟ ಆರಂಭವಾಗುತ್ತದೆ. H-1B ವೀಸಾ ನಿಯಮಗಳ ಪ್ರಕಾರ, ಕೆಲಸ ಕಳೆದುಕೊಂಡವರು 60 ದಿನಗಳೊಳಗೆ ಹೊಸ ಉದ್ಯೋಗ ಹುಡುಕಬೇಕು, ಇಲ್ಲವಾದರೆ ದೇಶ ತೊರೆಯಬೇಕಾಗುತ್ತದೆ.
ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ಭಾರತೀಯ ಟೆಕ್ಕಿಗಳು H-1B ವೀಸಾ ಆಧಾರದಲ್ಲಿ ಉದ್ಯೋಗದಲ್ಲಿದ್ದಾರೆ. ಈ ವೀಸಾ ನೇರವಾಗಿ ಅವರು ಕೆಲಸ ಮಾಡುವ ಕಂಪನಿಗೆ ಸಂಬಂಧಿಸಿದಿರುವುದರಿಂದ, ಉದ್ಯೋಗ ಕಳೆದುಕೊಂಡ ಕ್ಷಣದಿಂದಲೇ ಅವರ ಭವಿಷ್ಯದ ಮೇಲೂ ಅನಿಶ್ಚಿತತೆ ಆವರಿಸುತ್ತದೆ.
ಅಮೆರಿಕದ ವಲಸೆ ನಿಯಮಗಳ ಪ್ರಕಾರ, ಉದ್ಯೋಗ ಕಳೆದುಕೊಂಡ H-1B ವೀಸಾ ಹೊಂದಿರುವವರಿಗೆ ಸಾಮಾನ್ಯವಾಗಿ ಕೇವಲ 60 ದಿನಗಳ ಅವಧಿ ಮಾತ್ರ ಸಿಗುತ್ತದೆ. ಈ ಅವಧಿಯೊಳಗೆ ಹೊಸ ಉದ್ಯೋಗ ನೀಡಲು ಮತ್ತು ವೀಸಾಕ್ಕೆ ಪ್ರಾಯೋಜಕತ್ವ ನೀಡಲು ಸಿದ್ಧವಾಗಿರುವ ಮತ್ತೊಂದು ಕಂಪನಿಯನ್ನು ಹುಡುಕಬೇಕಾಗುತ್ತದೆ. ಅದು ಸಾಧ್ಯವಾಗದಿದ್ದರೆ ಅವರು ಅಮೆರಿಕ ತೊರೆಯಬೇಕಾಗುತ್ತದೆ. ಈ ಒತ್ತಡ ಭಾರತೀಯ ಉದ್ಯೋಗಿಗಳ ಬದುಕನ್ನೇ ಬದಲಾಯಿಸುತ್ತದೆ.
ಇದರ ಜೊತೆಗೆ ಮನೆ ಸಾಲದ ಇಎಂಐ, ಮಕ್ಕಳ ಶಾಲಾ ಪ್ರವೇಶ, ಆರೋಗ್ಯ ವಿಮೆ, ಕುಟುಂಬದ ಭವಿಷ್ಯ ಮತ್ತು ಅಮೆರಿಕದಲ್ಲೇ ಉಳಿಯುವ ಸಾಧ್ಯತೆಗಳ ಬಗ್ಗೆ ಕೂಡ ದೊಡ್ಡ ಆತಂಕ ಶುರುವಾಗುತ್ತದೆ. ಅನೇಕ ಕುಟುಂಬಗಳಿಗೆ ಇದು ಕೇವಲ ವೃತ್ತಿಜೀವನದ ಸಮಸ್ಯೆ ಮಾತ್ರವಲ್ಲ, ಸಂಪೂರ್ಣ ಜೀವನವೇ ಅಸ್ಥಿರವಾಗುವಂತಹ ಪರಿಸ್ಥಿತಿಯಾಗಿದೆ.