300ಕ್ಕೂ ಹೆಚ್ಚು ಪತ್ರಕರ್ತರಿಗೆ ಗೇಟ್ ಪಾಸ್ ನೀಡಿದ ವಾಷಿಂಗ್ಟನ್ ಪೋಸ್ಟ್; ಪುತ್ರ ನೌಕರಿ ಕಳೆದುಕೊಂಡಿದ್ದಕ್ಕೆ ಶಶಿ ತರೂರು ಎನಂದ್ರು?
ಡಿಜಿಟಲ್ ಮಾಧ್ಯಮ ಕ್ಷೇತ್ರದ ಬದಲಾವಣೆಗಳು ಮತ್ತು ಆರ್ಥಿಕ ನಷ್ಟದ ಹಿನ್ನೆಲೆ, ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ 300ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮುಂದಾಗಿದೆ. ಜಾಹೀರಾತು ಆದಾಯದ ಇಳಿಕೆ, ಓದುಗರ ಸಂಖ್ಯೆಯ ಕುಸಿತ ಹಾಗೂ ಹೆಚ್ಚಿದ ಕಾರ್ಯಾಚರಣಾ ವೆಚ್ಚಗಳು ಈ ನಿರ್ಧಾರಕ್ಕೆ ಕಾರಣವಾಗಿವೆ. ಸುಮಾರು 150 ವರ್ಷಗಳ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಉದ್ಯೋಗ ಕಡಿತಗಳಲ್ಲಿ ಒಂದಾಗಿದೆ.
ಶಶಿ ತರೂರ್ -
ನವದೆಹಲಿ: ಅಮೆರಿಕದ ಖ್ಯಾತ ದಿನಪತ್ರಿಕೆ ವಾಷಿಂಗ್ಟನ್ ಪೋಸ್ಟ್(Washington Post’s) ಆರ್ಥಿಕ ನಷ್ಟ ಮತ್ತು ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬದಲಾವಣೆಗಳ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಉದ್ಯೋಗ ಕಡಿತಕ್ಕೆ (lay off) ಮುಂದಾಗಿದೆ. ಸಂಸ್ಥೆಯ ನಿರ್ಧಾರದಿಂದ 300 ಕ್ಕೂ ಹೆಚ್ಚು ಪತ್ರಕರ್ತರು(Journalists) ಹಾಗೂ ಸಿಬ್ಬಂದಿಯನ್ನು ಕೆಲಸ ಕಳೆದುಕೊಂಡಿದ್ದಾರೆ. ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ಈ ಪತ್ರಿಕೆಯಲ್ಲಿ ನಡೆದ ಅತ್ಯಂತ ದೊಡ್ಡ ಮಟ್ಟದ ಉದ್ಯೋಗ ಕಡಿತಗಳಲ್ಲಿ ಇದೂ ಒಂದು ಎಂದು ವರದಿಗಳು ತಿಳಿಸಿವೆ.
ಸಂಸ್ಥೆಯ ಕಾರ್ಯನಿರ್ವಾಹಕ ಸಂಪಾದಕರು ಈ ನಿರ್ಧಾರವನ್ನು “ ಈ ಬೆಳವಣಿಗೆ ನೋವು ತಂದರು, ಅಗತ್ಯ ಹಾಗೂ ಅನಿವಾರ್ಯವಾಗಿದೆ” ಎಂದು ವಿವರಿಸಿದ್ದಾರೆ. ಡಿಜಿಟಲ್ ಓದುಗರ ಸಂಖ್ಯೆ ಕುಸಿತ, ಜಾಹೀರಾತು ಆದಾಯದಲ್ಲಿ ಇಳಿಕೆ ಮತ್ತು ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚಗಳು ಈ ಕ್ರಮಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆಗೆ ಸುಮಾರು 100 ಮಿಲಿಯನ್ ಡಾಲರ್‌ಗಳಷ್ಟು ಆರ್ಥಿಕ ನಷ್ಟ ಉಂಟಾಗಿದೆ.
ವಜಾಗೊಂಡವರಲ್ಲಿ ಜಾಗತಿಕ ವ್ಯವಹಾರಗಳ ಅಂಕಣಕಾರ ಹಾಗೂ ಅಂತರರಾಷ್ಟ್ರೀಯ ರಾಜಕೀಯ ವಿಶ್ಲೇಷಕರಾದ ಇಶಾನ್ ತರೂರ್ ಕೂಡ ಸೇರಿದ್ದಾರೆ. ಅವರು ಹಲವು ವರ್ಷಗಳಿಂದ ವರ್ಡ್‌ವ್ಯೂ ಎಂಬ ಸುದ್ದಿಪತ್ರ ಮತ್ತು ಅಂಕಣದ ಮೂಲಕ ಜಾಗತಿಕ ವಿಚಾರಗಳ ಕುರಿತು ಲೇಖನಗಳನ್ನು ಬರೆಯುತ್ತಿದ್ದರು. ಈ ಸುದ್ದಿಪತ್ರಕ್ಕೆ ಅರ್ಧ ಮಿಲಿಯನ್‌ಗಿಂತ ಹೆಚ್ಚು ಚಂದಾದಾರರು ಇದ್ದರು ಎಂದು ವರದಿಯಾಗಿದೆ.
ಮಾರಿಷಸ್ ಬಳಿ ಒಡಿಶಾ ಮೂಲದ ನೌಕಾಪಡೆ ಅಧಿಕಾರಿ ನಾಪತ್ತೆ; ಹುಡುಕಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಕುಟುಂಬ ಮನವಿ
ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಹಿರಿಯ ರಾಜಕೀಯ ನಾಯಕ ಶಶಿ ತರೂರ್(Shashi Tharoor), ತಮ್ಮ ಪುತ್ರ ಇಶಾನ್ ತರೂರ್ ಅವರ ಅಂಕಣ ಜಾಗತಿಕ ಮಟ್ಟದಲ್ಲಿ ದೊಡ್ಡ ಓದುಗರ ಬಳಗವನ್ನು ಹೊಂದಿದ್ದು, ಅದನ್ನು ಸ್ಥಗಿತಗೊಳಿಸಿರುವುದು ವಿಚಿತ್ರ ವ್ಯವಹಾರ ನಿರ್ಧಾರವಾಗಿದೆ ಎಂದು ಅಭಿಪ್ರಾಯಪಟ್ಟರು. ವಿಶ್ವದ ಅನೇಕ ರಾಜತಾಂತ್ರಿಕರು, ವಿದ್ವಾಂಸರು ಹಾಗೂ ನೀತಿ ತಜ್ಞರು ಸಹ ಅವರ ಲೇಖನಗಳನ್ನು ನಿಯಮಿತವಾಗಿ ಓದುತ್ತಿದ್ದರು ಎಂದು ಮೊದಲಿಗೆ ಪೋಸ್ಟ್ ಹಾಕಿದ್ದು , ನಂತರ ಅವರು ತಮ್ಮ ಮೊದಲ ಸಾಮಾಜಿಕ ಜಾಲತಾಣದ ಅಕೌಂಟ್ ನಿಂದ ಈ ಪೋಸ್ಟ್ ಅನ್ನು ತೆಗೆದು, ಅಂತರರಾಷ್ಟ್ರೀಯ ವ್ಯವಹಾರಗಳ ವಿಶ್ಲೇಷಣೆಯಲ್ಲಿ ಇಶಾನ್ ಅತ್ಯುತ್ತಮರಲ್ಲಿ ಒಬ್ಬರು ಎಂಬ ಕ್ಯಾಪ್ಷನ್ ನೀಡಿ ಮತ್ತೊಂದು ಹೊಸ ಪೋಸ್ಟ್ ಹಾಕಿದ್ದಾರೆ.
ಉದ್ಯೋಗ ಕಳೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಇಶಾನ್ ತರೂರ್, ತಮ್ಮ ಸಹೋದ್ಯೋಗಿಗಳೊಂದಿಗೆ ಸುಮಾರು 12 ವರ್ಷಗಳ ಕಾಲ ಕೆಲಸ ಮಾಡಿರುವ ಅನುಭವವನ್ನು ಸ್ಮರಿಸಿಕೊಂಡು, ನ್ಯೂಸ್ ರೂಮ್ ಮತ್ತು ಸಹೋದ್ಯೋಗಿಗಳನ್ನು ಕಳೆದುಕೊಳ್ಳುವುದು ತುಂಬಾ ನೋವು ತಂದಿದೆ ಎಂದು ಹೇಳಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮೊಂದಿಗೆ ಕೆಲಸ ಮಾಡಿದ ಸಂಪಾದಕರು ಮತ್ತು ವರದಿಗಾರರು ಅತ್ಯುತ್ತಮರು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಈ ಬೆಳವಣಿಗೆ ಜಾಗತಿಕ ಪತ್ರಿಕೋದ್ಯಮ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಡಿಜಿಟಲ್ ಯುಗದಲ್ಲಿ ಮಾಧ್ಯಮ ಸಂಸ್ಥೆಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳು ಹಾಗೂ ಬದಲಾಗುತ್ತಿರುವ ಓದುಗರ ಅಭಿರುಚಿಗಳು ಮತ್ತೆ ಒಮ್ಮೆ ಬೆಳಕಿಗೆ ಬಂದಿವೆ. ತಜ್ಞರ ಪ್ರಕಾರ, ಭವಿಷ್ಯದಲ್ಲಿ ಇನ್ನಷ್ಟು ಮಾಧ್ಯಮ ಸಂಸ್ಥೆಗಳು ಪುನರ್‌ರಚನೆ ಹಾಗೂ ವೆಚ್ಚ ಕಡಿತ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.