ಕಠ್ಮಂಡು, ಅ. 11: ಭಾನುವಾರ (ಅಕ್ಟೋಬರ್ 11) ಮುಂಜಾನೆ ಬುಧಿ ಗಂಡಕಿ ನದಿಯಲ್ಲಿ (Budhi Gandaki River) ಮಣ್ಣು, ಕಲ್ಲು ಹಾಗೂ ಅವಶೇಷಗಳೊಂದಿಗೆ ಏಕಾಏಕಿ ಪ್ರವಾಹ ಉಂಟಾಗಿ 35ಕ್ಕೂ ಹೆಚ್ಚು ಮನೆಗಳು ಮತ್ತು ಸೇತುವೆಗಳು ಕೊಚ್ಚಿ ಹೋದ ಘಟನೆ ನೇಪಾಳದ (Nepal flood) ಗೋರಖಾ ಜಿಲ್ಲೆಯಲ್ಲಿ ನಡೆದಿದೆ. ಪ್ರವಾಹದಿಂದ ಜಲವಿದ್ಯುತ್ ಯೋಜನೆಗೂ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ನದಿ ತೀರದ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ನೇಪಾಳ ಸೇನೆಯು ವಾಯು ಮತ್ತು ಭೂ ಸಿಬ್ಬಂದಿಯನ್ನು ನಿಯೋಜಿಸಿದೆ. ಜನರನ್ನು ರಕ್ಷಿಸಲು, ಪರಿಹಾರ ವಿತರಿಸಲು ಮತ್ತು ದುರ್ಬಲ ಪ್ರದೇಶಗಳಿಂದ ನಿವಾಸಿಗಳನ್ನು ಸ್ಥಳಾಂತರಿಸಲು ಹೆಲಿಕಾಪ್ಟರ್‌ಗಳನ್ನು ಬಳಸಲಾಗಿದೆ. ಗಂಡಕಿ ಪ್ರಾಂತ್ಯದ ಚುಮ್ನುಬ್ರಿಯಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪ್ರವಾಹ ಉಂಟಾಗಿದ್ದು, ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಬೇಕಾಯಿತು. ನದಿಯ ನೀರಿನ ಮಟ್ಟ ಏರುತ್ತಲೇ ಇರುವುದರಿಂದ ದಡದಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ಮತ್ತು ಎತ್ತರದ ಪ್ರದೇಶಗಳಿಗೆ ತೆರಳಲು ಅಧಿಕಾರಿಗಳು ಒತ್ತಾಯಿಸಿದ್ದಾರೆ.
ನೇಪಾಳದಲ್ಲಿ ಮತ್ತೆ ಪ್ರವಾಹ:
ಚುಮ್ನುಬ್ರಿ ಗ್ರಾಮೀಣ ಪುರಸಭೆಯಲ್ಲಿ ಹಲವಾರು ಮನೆಗಳು ಕೊಚ್ಚಿಹೋಗಿವೆ ಎಂದು ಪ್ರಾಥಮಿಕ ವರದಿಗಳು ಸೂಚಿಸಿವೆ ಎಂದು ಗೂರ್ಖಾ ಜಿಲ್ಲಾಡಳಿತ ಕಚೇರಿಯ ಸಹಾಯಕ ಜಿಲ್ಲಾ ಅಧಿಕಾರಿ ನೇತ್ರ ಪ್ರಸಾದ್ ಶರ್ಮಾ ಹೇಳಿದ್ದಾರೆ. ನದಿ ತೀರದ ನಿವಾಸಿಗಳು ಜಾಗರೂಕರಾಗಿರಿ ಮತ್ತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಗೂರ್ಖಾ ಜಿಲ್ಲಾಡಳಿತ ಸೂಚಿಸಿದೆ ಎಂದು ಶರ್ಮಾ ಹೇಳಿದರು.
ತುಂಬಿ ಹರಿಯುತ್ತಿದ್ದ ನದಿಯಲ್ಲಿ ಈಜಿ ಭಾರತದ ತಲುಪಿದ 2 ಗೋಲ್ಡನ್ ರಿಟ್ರೈವರ್ ನಾಯಿಗಳು!
ಇದುವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಗೂರ್ಖಾ ಮುಖ್ಯ ಜಿಲ್ಲಾಧಿಕಾರಿ ಧರ್ಮೇಂದ್ರ ಕುಮಾರ್ ಮಿಶ್ರಾ ತಿಳಿಸಿದ್ದಾರೆ. “ಬುಧಿ ಗಂಡಕಿ ನದಿಯಲ್ಲಿನ ಪ್ರವಾಹದ ನಂತರ ನೇಪಾಳ ಸೇನೆಯ ತುಕಡಿಯನ್ನು ವಾಯು ಮತ್ತು ಭೂ ಮಾರ್ಗಗಳ ಮೂಲಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ ಮತ್ತು ಭೂಕುಸಿತದ ಅಪಾಯದಲ್ಲಿರುವ ಜಗತ್ ಪ್ರದೇಶದಿಂದ ಆರು ಜನರನ್ನು ವಿಮಾನದ ಮೂಲಕ ಸ್ಥಳಾಂತರಿಸಲಾಗಿದೆ” ಎಂದು ನೇಪಾಳ ಪ್ರಧಾನಿ ಬಾಲೆನ್ ಶಾ ಹೇಳಿದರು.
ನದಿಯ ನೀರಿನ ಮಟ್ಟ ಹೆಚ್ಚುತ್ತಿರುವುದರಿಂದ, ರಕ್ಷಣಾ ಕಾರ್ಯಾಚರಣೆ, ಪರಿಹಾರ ವಿತರಣೆ ಮತ್ತು ಸ್ಥಳಾಂತರಿಸುವಿಕೆಗಾಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ನೇಪಾಳ ಪೊಲೀಸರು, ಸಶಸ್ತ್ರ ಪೊಲೀಸ್ ಪಡೆ ಮತ್ತು ಸ್ಥಳೀಯ ಅಧಿಕಾರಿಗಳನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಸಜ್ಜುಗೊಳಿಸಲಾಗಿದೆ.
ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಹತ್ತಿರದ ಹೊಳೆಗಳಿಂದ ಪ್ರವಾಹದ ಜೋರಾದ ಸದ್ದು ನಂತರ ನಿವಾಸಿಗಳು ಚುಮ್ಲಿಂಗ್ ಮತ್ತು ಲೋಕ್ಪಾ ಸೇರಿ ನದಿ ತೀರದಿಂದ ಓಡಿಹೋಗಿದ್ದಾರೆ. ಸ್ಥಳೀಯ ಹೊಟೇಲ್‌ಗಳು ತಂಗಿದ್ದ ಪ್ರವಾಸಿಗರು ಸುರಕ್ಷಿತ ಸ್ಥಳಗಳಿಗೆ ಧಾವಿಸಿದರು ಎಂದು ನಿವಾಸಿಗಳು ತಿಳಿಸಿದ್ದಾರೆ. ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಲು ಕಾರಣವೇನೆಂದು ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.