ನವದೆಹಲಿ, ಅ. 3: ಫ್ಲೈದುಬೈ (Fly dubai Attack) ವಿಮಾನ FZ1073ರ ಕಾಕ್‌ಪಿಟ್‌ನಲ್ಲಿ ನಡೆದ ದಾಳಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಭಯೋತ್ಪಾದಕ ದಾಳಿ ಎಂದು ಹೇಳಿದೆ. ಒಮನ್ ಮೂಲದ ಸಹ ಪೈಲಟ್ ಕಾಕ್‌ಪಿಟ್‌ನಲ್ಲಿದ್ದ ತುರ್ತು ಕೊಡಲಿಯಂತಹ ಆಯುಧ (Crash Axe) ಬಳಸಿ ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ (Smit Machchhar) ಮೇಲೆ ದಾಳಿ ನಡೆಸಿ, ಬಳಿಕ ವಿಮಾನದ ನಿಯಂತ್ರಣ ಪಡೆಯಲು ಯತ್ನಿಸಿದ್ದಾನೆ ಎಂದು ಯುಎಇ ಅಟಾರ್ನಿ ಜನರಲ್ ತಿಳಿಸಿದ್ದಾರೆ.
ದಾಳಿ ನಡೆದ ಸಂದರ್ಭದಲ್ಲಿ ವಿಮಾನದಲ್ಲಿ 174 ಪ್ರಯಾಣಿಕರಿದ್ದರು. ಪರಿಸ್ಥಿತಿ ಅರಿತ ಪ್ರಯಾಣಿಕರು ಹಾಗೂ ಇತರ ಸಿಬ್ಬಂದಿ ಮಧ್ಯಪ್ರವೇಶಿಸಿ ಸಹ ಪೈಲಟ್‌ನನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯ ತಪ್ಪಿದೆ.
ಯುಎಇಯ ಹಿರಿಯ ರಾಜತಾಂತ್ರಿಕ ಸಲಹೆಗಾರ ಅನ್ವರ್ ಗರ್ಗಾಶ್ ಕೂಡ ಈ ಘಟನೆಯನ್ನು ‘ʼಅತ್ಯಂತ ಅಪಾಯಕಾರಿ ಭಯೋತ್ಪಾದಕ ಕೃತ್ಯʼ’ ಎಂದು ಹೇಳಿದ್ದಾರೆ. ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅಪಾಯಕಾರಿ ಪರಿಸ್ಥಿತಿಯಲ್ಲಿ ಧೈರ್ಯ ಮತ್ತು ಜವಾಬ್ದಾರಿಯನ್ನು ತೋರಿಸಿದ್ದಾರೆ ಎಂದು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಶ್ಲಾಘಿಸಿದ್ದಾರೆ.
ಫ್ಲೈದುಬೈ ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ದಾಳಿ ನಡೆಸಿದ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಯಾರು?
ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿ ಎಂದು ಗುರುತು
ಸೌದಿ ಅರೇಬಿಯಾದ ಸರ್ಕಾರಿ ಮಾಧ್ಯಮ ʼಅಲ್ ಅರೇಬಿಯಾʼ ವರದಿ ಪ್ರಕಾರ, ದಾಳಿಯಲ್ಲಿ ಭಾಗಿಯಾಗಿದ್ದ ಸಹ ಪೈಲಟ್ ಒಮನ್ ಪ್ರಜೆ ಹಮಾಮ್ ಅಲ್-ಹಮ್ಮಾಮಿ (Hamam al-Hammami) ಎಂದು ಗುರುತಿಸಲಾಗಿದೆ. ತನಿಖೆಯ ಕುರಿತು ಮಾಹಿತಿ ಹೊಂದಿರುವ ಮೂವರು ವ್ಯಕ್ತಿಗಳೂ, ಅವರಲ್ಲಿ ಗಲ್ಫ್ ಮತ್ತು ಪಾಶ್ಚಿಮಾತ್ಯ ರಾಜತಾಂತ್ರಿಕರೂ ಸೇರಿದ್ದು, ಅಸೋಸಿಯೇಟೆಡ್ ಪ್ರೆಸ್‌ಗೆ ಅವರ ಗುರುತನ್ನು ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ.
ಹಮಾಮ್ ಅಲ್-ಹಮ್ಮಾಮಿ ಅವರ ಹಿಂದಿನ ವೃತ್ತಿ ಜೀವನದ ಬಗ್ಗೆಯೂ ಇದೀಗ ತನಿಖೆ ನಡೆಯುತ್ತಿದೆ. ವರದಿಗಳ ಪ್ರಕಾರ, ಒಮನ್ ಏರ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆತನನ್ನು ವಿಮಾನ ಹಾರಾಟದ ಕರ್ತವ್ಯದಿಂದ ಹಿಂದೆ ಸರಿಸಲಾಗಿತ್ತು. ಆತನಲ್ಲಿ ಉಗ್ರವಾದಿ ವಿಚಾರಧಾರೆಗಳ ಪ್ರಭಾವವಿರುವ ಬಗ್ಗೆ ಆತಂಕ ವ್ಯಕ್ತವಾಗಿತ್ತು ಎಂಬ ಮಾಹಿತಿಯೂ ಹೊರಬಿದ್ದಿದೆ. ಬಳಿಕ ಆಡಳಿತಾತ್ಮಕ ಹುದ್ದೆಗೆ ವರ್ಗಾಯಿಸಲಾಗಿತ್ತು ಎನ್ನಲಾಗಿದೆ.
ನಂತರ ಆತ ರಾಯಲ್ ಏರ್ ಮರಾಕ್‌ನಲ್ಲಿ ಕೆಲಸ ಮಾಡಿದ್ದು, 2025ರ ಜೂನ್‌ನಲ್ಲಿ ಅಲ್ಲಿ ಸೇರಿ 2026ರ ಜನವರಿಯಲ್ಲಿ ಉದ್ಯೋಗ ತೊರೆದಿದ್ದ ಎಂದು ಲಿಂಕ್ಡಿನ್ ಪ್ರೊಫೈಲ್‌ನಲ್ಲಿ ಮಾಹಿತಿ ಇತ್ತು. ಕೊನೆಗೆ ಫ್ಲೈದುಬೈಗೆ ಸೇರಿದ್ದ ಎನ್ನಲಾಗಿದೆ. ಆದರೆ ಆ ಪ್ರೊಫೈಲ್ ನಿಜವಾಗಿಯೂ ದಾಳಿಯಲ್ಲಿ ಭಾಗಿಯಾಗಿದ್ದ ಸಹ ಪೈಲಟ್‌ಗೆ ಸೇರಿದ್ದೇ ಎಂಬುದು ಖಚಿತವಾಗಿಲ್ಲ.
ಸಾಮಾಜಿಕ ಜಾಲತಾಣದ ಚಟುವಟಿಕೆಗಳೂ ತನಿಖೆಯ ಭಾಗ
ಹಮಾಮ್ ಅಲ್-ಹಮ್ಮಾಮಿಯದ್ದೆಂದು ನಂಬಲಾಗಿರುವ ಸಾಮಾಜಿಕ ಜಾಲತಾಣ ಖಾತೆಯೊಂದು ವಿಮಾನ ಘಟನೆ ನಡೆದ ದಿನದವರೆಗೂ ಸಕ್ರಿಯವಾಗಿದ್ದು, ನಂತರ ಡಿಲೀಟ್ ಆಗಿದೆ ಎಂದು ಎಪಿ ವರದಿ ತಿಳಿಸಿದೆ.
ಫ್ಲೈದುಬೈ ಮೇಲಿನ ದಾಳಿ ಭಯೋತ್ಪಾದಕ ಕೃತ್ಯ ಎಂದು ಮೊದಲ ಬಾರಿ ಒಪ್ಪಿಕೊಂಡ ಯುಎಇ
ಆತನ ಹೆಸರಿನ ಲಿಂಕ್ಡಿನ್ ಖಾತೆಯಲ್ಲಿ ಘಟನೆಯ ದಿನ ಎರಡು ಪೋಸ್ಟ್‌ಗಳು ಪ್ರಕಟವಾಗಿದ್ದವು ಎನ್ನಲಾಗಿದೆ. ಅವುಗಳಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನದ ಕಾಕ್‌ಪಿಟ್ ಸೇರಿ ವಿಮಾನಯಾನಕ್ಕೆ ಸಂಬಂಧಿಸಿದ ಹಲವು ವಿಡಿಯೊಗಳಿದ್ದವು. ಮತ್ತೊಂದು ವಿಡಿಯೊದಲ್ಲಿ 2023ರ ಅಕ್ಟೋಬರ್ 11ರ ದಿನಾಂಕದೊಂದಿಗೆ ಕಾಕ್‌ಪಿಟ್ ದೃಶ್ಯ ಕಾಣಿಸಿಕೊಂಡಿತ್ತು.
ಆ ವಿಡಿಯೋದಲ್ಲಿ ಅಲ್-ಖೈದಾ ಮಾಜಿ ನಾಯಕ ಅಯ್ಮಾನ್ ಅಲ್-ಜವಾಹಿರಿ (Ayman al-Zawahiri) ಫೋಟೊ ಕೂಡ ಕಾಣಿಸಿಕೊಂಡಿತ್ತು ಎಂದು ವರದಿಯಾಗಿದೆ. ಮತ್ತೊಂದು ವಿಡಿಯೊದಲ್ಲಿ 2009ರ ಆತ್ಮಹತ್ಯಾ ಬಾಂಬ್ ದಾಳಿಗೆ ಸಂಬಂಧಿಸಿದ ಅಲ್-ಖೈದಾ ವ್ಯಕ್ತಿ ಹುಮಾಮ್ ಖಲೀಲ್ ಅಬು-ಮುಲಾಲ್ ಅಲ್-ಬಲಾವಿ ಅವರ ಚಿತ್ರವಿತ್ತು ಎನ್ನಲಾಗಿದೆ.
ಅಲ್-ಹಮ್ಮಾಮಿ ಬ್ರಿಟನ್‌ನ ಬಕಿಂಗ್ಹ್ಯಾಮ್‌ಶೈರ್ ನ್ಯೂ ಯೂನಿವರ್ಸಿಟಿಯಲ್ಲಿ ಏವಿಯೇಷನ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಮೂರು ವರ್ಷದ ಕೋರ್ಸ್ ಪೂರ್ಣಗೊಳಿಸಿದ್ದ ಎಂದು CNN ವರದಿ ಮಾಡಿದೆ. ಆದಾಗ್ಯೂ, ಈ ಲಿಂಕ್ಡಿನ್ ಖಾತೆ ಅಥವಾ ಅದರಲ್ಲಿ ಪ್ರಕಟವಾಗಿದ್ದ ವಿಷಯಗಳು ಫ್ಲೈದುಬೈ ಸಹ ಪೈಲಟ್ ಹಮಾಮ್ ಅಲ್-ಹಮ್ಮಾಮಿಯದ್ದೇ ಎಂಬುದನ್ನು ಭಾರತ್ ಟುಡೇ ದೃಢಪಡಿಸಿಲ್ಲ. ತನಿಖಾಧಿಕಾರಿಗಳು ಆತನ ಹಿನ್ನೆಲೆ ಮತ್ತು ಸಂಭವನೀಯ ಉಗ್ರವಾದಿ ಸಂಪರ್ಕಗಳ ಕುರಿತು ಹೆಚ್ಚಿನ ಮಾಹಿತಿ ಪರಿಶೀಲಿಸುತ್ತಿದ್ದಾರೆ.