ಫ್ಲೈದುಬೈ ಮೇಲಿನ ದಾಳಿ ಭಯೋತ್ಪಾದಕ ಕೃತ್ಯ ಎಂದು ಮೊದಲ ಬಾರಿ ಒಪ್ಪಿಕೊಂಡ ಯುಎಇ: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಬಗ್ಗೆ ಅಚ್ಚರಿಯ ಹೇಳಿಕೆ
Flydubai Attack: ಫ್ಲೈದುಬೈ ವಿಮಾನದಲ್ಲಿನ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ಯುಎಇಯ ಹಿರಿಯ ಅಧಿಕಾರಿ ಅನ್ವರ್ ಗರ್ಗಶ್ ಅಭಿಪ್ರಾಯಪಟ್ಟಿದ್ದಾರೆ. “ಉಗ್ರವಾದ ಮತ್ತು ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಅಗತ್ಯ” ಎಂದು ಆ ಅಧಿಕಾರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆಯ ಬಳಿಕ ಹೆಚ್ಚಿನ ಜಾಗರೂಕತೆ ವಹಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದ್ದಾರೆ.
ಯುಎಇ ಅಧಿಕಾರಿ ಅನ್ವರ್ ಗರ್ಗಶ್ (ಸಂಗ್ರಹ ಚಿತ್ರ) -
ದುಬೈ, ಅ. 2: ಫ್ಲೈದುಬೈ ವಿಮಾನದಲ್ಲಿ ನಡೆದ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ಯುಎಇಯ ಹಿರಿಯ ಅಧಿಕಾರಿ ಅನ್ವರ್ ಗರ್ಗಶ್ ಹೇಳಿದ್ದಾರೆ. ಇದೇ ವೇಳೆ ಸಹ-ಪೈಲಟ್‌ನಿಂದ ದಾಳಿಗೊಳಗಾದರೂ ಧೈರ್ಯದಿಂದ ಕಾರ್ಯನಿರ್ವಹಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ (Smit Machchhar) ಅವರನ್ನು ಶ್ಲಾಘಿಸಿದ್ದಾರೆ. ಗಂಭೀರ ಭಯೋತ್ಪಾದಕ ಕೃತ್ಯವನ್ನು ಎದುರಿಸಿ, ಸಂಭವಿಸಬಹುದಾಗಿದ್ದ ಭೀಕರ ದುರಂತವನ್ನು ಧೈರ್ಯದಿಂದ ನಿಭಾಯಿಸಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಪ್ರಶಂಸೆಗೆ ಅರ್ಹರು ಎಂದು ಹೇಳಿದ್ದಾರೆ.
“ಉಗ್ರವಾದ ಮತ್ತು ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಅಗತ್ಯ” ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಘಟನೆಯ ಬಳಿಕ ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಅವರು ಕರೆ ನೀಡಿದ್ದಾರೆ. ಫ್ಲೈದುಬೈ ವಿಮಾನವನ್ನು ಅಪಘಾತಕ್ಕೀಡು ಮಾಡಲು ನಡೆದ ಪ್ರಯತ್ನವನ್ನು ಭಯೋತ್ಪಾದಕ ದಾಳಿ ಎಂದು ಯುಎಇಯ ಅಧಿಕಾರಿಯೊಬ್ಬರು ಅಧಿಕೃತವಾಗಿ ಕರೆದಿರುವುದು ಇದೇ ಮೊದಲು.
ಇಲ್ಲಿದೆ ಪೋಸ್ಟ್:
يستحق الطيار الهندي في "فلاي دبي" سميت ماتشهار كل التقدير، فقد جسّد في مواجهة عمل ارهابي خطير وكارثة محتملة معنى الشجاعة والمسؤولية. مهنيته وحسّه الأخلاقي في أحلك الظروف يجعلان منه بطلاً حقيقياً.
— د. أنور قرقاش (@AnwarGargash) October 2, 2026
بعيدا عن الاختزال السهل لما جرى أو تبني وترويج نظريات المؤامرة، تبقى اليقظة…
ಸೆಪ್ಟೆಂಬರ್ 30ರಂದು ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ಹಾರಾಟ ನಡೆಸುತ್ತಿದ್ದಾಗ ಆಕಾಶದಲ್ಲೇ ಪೈಲಟ್ ಸ್ಮಿತ್ ಮಚ್ಚಾರ್ ಅವರ ಮೇಲೆ ಸಹ ಪೈಲಟ್ ಮಾರಣಾಂತಿಕ ದಾಳಿ ನಡೆಸಿದ್ದ. ಈ ವೇಳೆ ಕುಗ್ಗದೆ ಧೈರ್ಯ ತೋರಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಕಾಕ್‌ಪಿಟ್ ತೆರೆದಿದ್ದರು. ನಂತರ ಇಸ್ರೇಲ್ ಮೂಲದ ಪ್ರಯಾಣಿಕರೊಬ್ಬರು ಹಲ್ಲೆ ಮಾಡಿದ ಸಹ-ಪೈಲಟ್‌ನನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದರು
ಫ್ಲೈದುಬೈ ವಿಮಾನದಲ್ಲಿ ಇರಿತಕ್ಕೊಳಗಾದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ನೊಂದಿಗೆ ಪ್ರಧಾನಿ ಮೋದಿ ಮಾತುಕತೆ
ನಂತರ ವಿಮಾನದಲ್ಲಿದ್ದ ಪೈಲಟ್ ವಿಮಾನವನ್ನು ಸೌದಿ ಅರೇಬಿಯಾದ ತಬೂಕ್‌ನಲ್ಲಿ ಸುರಕ್ಷಿತವಾಗಿ ಇಳಿಸಿದರು. ವಿಮಾನವು 174 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಕ್ಯಾಪ್ಟನ್ ಸ್ಮಿತ್ ಯುಎಇನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
ಇನ್ನು ಫ್ಲೈದುಬೈ ವಿಮಾನದಲ್ಲಿ ನಡೆದ ಇರಿತ ಘಟನೆಯ ಬಗ್ಗೆ ದುಬೈ ತನಿಖೆಗೆ ಆದೇಶಿಸಿದೆ. ಘಟನೆಯ ಭಯೋತ್ಪಾದಕ ದಾಳಿ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದೆ. ವಿಮಾನವು ಯುಎಇಯಲ್ಲಿ ನೋಂದಾಯಿಸಲ್ಪಟ್ಟಿದ್ದು ಮತ್ತು ಅದರ ಧ್ವಜವನ್ನು ಹೊಂದಿರುವುದರಿಂದ ಘಟನೆಯ ಕಾರಣವನ್ನು ತನಿಖೆ ಮಾಡಲು ತಂಡವನ್ನು ರಚಿಸಲಾಗುವುದು ಎಂದು ಯುಎಇ ವಿದೇಶಾಂಗ ಸಚಿವಾಲಯ ಹೇಳಿದೆ.
“ಘಟನೆಯ ಕಾರಣಗಳ ಕುರಿತು ತನಿಖೆ ನಡೆಸಲು ಸಾರ್ವಜನಿಕ ಅಭಿಯೋಜಕ ಕಚೇರಿಯ ವಿಶೇಷ ತಜ್ಞರನ್ನೊಳಗೊಂಡ ತಂಡವನ್ನು ರಚಿಸುವಂತೆ ಯುಎಇ ಅಟಾರ್ನಿ ಜನರಲ್ ಕೌನ್ಸಿಲರ್ ಡಾ. ಹಮದ್ ಅಲ್ ಶಮ್ಸಿ ಆದೇಶಿಸಿದ್ದಾರೆʼʼ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಮಚ್ಚಾರ್ ಅವರನ್ನು ಇರಿದು ಸುಮಾರು 180 ಜನರಿದ್ದ ವಿಮಾನವನ್ನು ಪತನಗೊಳಿಸಲು ಯತ್ನಿಸಿದ ಫ್ಲೈದುಬೈ ಸಹ-ಪೈಲಟ್ ಯಾರೆಂದು ಯುಎಇ ಇನ್ನೂ ಬಹಿರಂಗಪಡಿಸಿಲ್ಲ.