ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಹತ್ಯಾಕಾಂಡ; ಗುಂಡಿಟ್ಟು ಪತ್ರಕರ್ತನ ಕೊಲೆ

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ ನಡೆದಿದೆ. ಆ ಮೂಲಕ 3 ವಾರಗಳ ಅಂತರದಲ್ಲಿ 5 ಹಿಂದೂಗಳ ಹತ್ಯೆಯಾದಂತಾಗಿದೆ. ದೀಪು ಚಂದ್ರ ದಾಸ್, ಅಮೃತ್ ಮಂಡಲ್ ಆಲಿಯಾಸ್‌ ಸಾಮ್ರಾಟ್‌, ಬಜೇಂದ್ರ ಬಿಸ್ವಾಸ್‌, ಖೋಕೋನ್‌ ದಾಸ್‌ ಬಳಿಕ ಇದೀಗ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಹಿಂದೂ ಪತ್ರಕರ್ತ 45 ವರ್ಷದ ರಾಣ ಪ್ರತಾಪ್‌ ಮೃತ ವ್ಯಕ್ತಿ. ಇವರನ್ನು ಜನವರಿ 5ರಂದು ಕೊಲೆ ಮಾಡಲಾಗಿದೆ.

ಬಾಂಗ್ಲಾದೇಶದಲ್ಲಿ ಗುಂಡಿಟ್ಟು ಹಿಂದೂ ಪತ್ರಕರ್ತನ ಹತ್ಯೆ

ರಾಣ ಪ್ರತಾಪ್‌ (ಸಂಗ್ರಹ ಚಿತ್ರ) -

Ramesh B
Ramesh B Jan 5, 2026 9:22 PM

ಢಾಕಾ, ಜ. 5: ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ ನಡೆದಿದೆ (Bangladesh Unrest). ದೀಪು ಚಂದ್ರ ದಾಸ್, ಅಮೃತ್ ಮಂಡಲ್ ಆಲಿಯಾಸ್‌ ಸಾಮ್ರಾಟ್‌, ಬಜೇಂದ್ರ ಬಿಸ್ವಾಸ್‌, ಖೋಕೋನ್‌ ದಾಸ್‌ ಬಳಿಕ ಇದೀಗ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ. ಹಿಂದೂ ಪತ್ರಕರ್ತ 45 ವರ್ಷದ ರಾಣ ಪ್ರತಾಪ್‌ ಮೃತ ವ್ಯಕ್ತಿ. ಇವರು ಕಾರ್ಖಾನೆಯೊಂದರ ಮಾಲಕರಾಗಿದ್ದರು ಮತ್ತು ದಿನ ಪತ್ರಿಕೆಯೊಂದರ ಹಂಗಾಮಿ ಸಂಪಾದಕರಾಗಿದ್ದರು. ರಾಣ ಪ್ರತಾಪ್‌ ಅವರ ಮೇಲೆ ದುಷ್ಕರ್ಮಿಗಳ ಗುಂಪು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಮೊಹಮ್ಮದ್‌ ಯೂನುಸ್‌ ನೇತೃತ್ವದ ಮಧ್ಯಂತರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದು, ಇತ್ತೀಚೆಗೆ ಇದು ಮತ್ತಷ್ಟು ಹೆಚ್ಚಾಗಿದೆ.

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ:



ಘಟನೆ ವಿವರ

ಜನವರಿ 5ರ ಸಂಜೆ 6 ಗಂಟೆ ಸುಮಾರಿಗೆ ನೈಋತ್ಯ ಬಾಂಗ್ಲಾದೇಶದ ಜಶೋರ್‌ನ ಮಣಿರಾಂಪುರ ಉಪ ಜಿಲ್ಲೆಯ ಕೊಪಾಲಿಯಾ ಬಜಾರ್‌ನಲ್ಲಿ ಪ್ರತಾಪ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೋಹರ್‌ಪುರ ಯೂನಿಯನ್ ಪರಿಷತ್‌ನ ಅಧ್ಯಕ್ಷ ಅಖ್ತರ್ ಫಾರೂಕ್ ಮಿಂಟು ಈ ಬಗ್ಗೆ ಮಾತನಾಡಿ, ʼʼಕೇಶಬ್‌ಪುರ ಉಪ ಜಿಲ್ಲೆಯ ಅರುವಾ ಗ್ರಾಮದ ಶಾಲಾ ಶಿಕ್ಷಕನ ಮಗನಾದ ಪ್ರತಾಪ್ 2 ವರ್ಷಗಳಿಂದ ಕೊಪಾಲಿಯಾ ಬಜಾರ್‌ನಲ್ಲಿ ಐಸ್ ಕಾರ್ಖಾನೆಯನ್ನು ನಡೆಸುತ್ತಿದ್ದಾರೆʼʼ ಎಂದು ತಿಳಿಸಿದ್ದಾರೆ. ಸೋಮವಾರ ಸಂಜೆ ಕೆಲವು ವ್ಯಕ್ತಿಗಳು ಅವರನ್ನು ಐಸ್ ಕಾರ್ಖಾನೆಯಿಂದ ಹೊರಗೆ ಕರೆದೊಯ್ದು, ಒಂದು ಗಲ್ಲಿಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ.

ʼʼದಾಳಿಕೋರರು ಬೈಕ್‌ನಲ್ಲಿ ಬಂದಿದ್ದರುʼʼ ಎಂದು ಸ್ಥಳೀಯ ನಿವಾಸಿ ರಿಪನ್ ಹೊಸೈನ್ ಹೇಳಿದ್ದಾರೆ. ʼʼದುಷ್ಕರ್ಮಿಗಳು ಪ್ರತಾಪ್ ಜತೆ ವಾಗ್ವಾದ ನಡೆಸಿ, ಅವರ ತಲೆಗೆ ಹಲವು ಸುತ್ತುಗಳ ಗುಂಡು ಹಾರಿಸಿ ಪರಾರಿಯಾಗಿದ್ದಾರೆʼʼ ಎಂದು ಅವರು ಮಾಹಿತಿ ನೀಡಿದ್ದಾರೆ. ಪ್ರತಾಪ್ ಮೃತದೇಹದ ಪಕ್ಕದಲ್ಲಿ 7 ಗುಂಡುಗಳು ಪತ್ತೆಯಾಗಿವೆ.

ಜಶೋರ್‌ನ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರತಾಪ್ ವಿರುದ್ಧ ಹಲವು ಪ್ರಕರಣ ದಾಖಲಾಗಿದ್ದವು ಎಂದು ಸ್ಥಳೀಯ ಮೂಲವೊಂದು ತಿಳಿಸಿದೆ. ಪ್ರತಾಪ್‌ ನರೈಲ್ ಜಿಲ್ಲೆಯಿಂದ ಪ್ರಕಟವಾಗುವ ʼಬಿ.ಡಿ. ಖೋಬೋರ್ʼ ಎಂಬ ದಿನಪತ್ರಿಕೆಯ ಹಂಗಾಮಿ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.

ಏನಾಗ್ತಿದೆ ಬಾಂಗ್ಲಾದೇಶದಲ್ಲಿ? ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ; 10 ದಿನಗಳ ಅಂತರದಲ್ಲಿ 3 ಹಿಂದೂಗಳ ಹತ್ಯೆ

ಪತ್ರಿಕೆಯ ಸುದ್ದಿ ಸಂಪಾದಕ ಅಬುಲ್ ಕಾಶೆಮ್ ಮಾತನಾಡಿ, "ರಾಣಾ ಪ್ರತಾಪ್ ನಮ್ಮ ಪತ್ರಿಕೆಯ ಹಂಗಾಮಿ ಸಂಪಾದಕರಾಗಿದ್ದರು. ಒಂದು ಕಾಲದಲ್ಲಿ ಅವರ ವಿರುದ್ಧ ಪ್ರಕರಣಗಳಿದ್ದರೂ ಎಲ್ಲದರಿಂದಲೂ ಅವರು ಖುಲಾಸೆಗೊಂಡಿದ್ದರು. ಈ ಕೊಲೆಗೆ ಕಾರಣವೇನು ಎಂಬುದು ನನಗೆ ತಿಳಿದಿಲ್ಲʼʼ ಎಂದು ಪ್ರತಿಕ್ರಿಯಿಸಿದ್ದಾರೆ.

ಕೇಶಬ್‌ಪುರ ಉಪ ಜಿಲ್ಲೆಯ ಬಿಎನ್‌ಪಿಯ ಸುಫಲಕತಿ ಯೂನಿಯನ್ ಘಟಕದ ಪ್ರಧಾನ ಕಾರ್ಯದರ್ಶಿ ಜಹಾಂಗೀರ್ ಆಲಂ ಮಾತನಾಡಿ ರಾಣಾ ಪ್ರತಾಪ್ ಉಗ್ರಗಾಮಿ ಗುಂಪಿನ ಸದಸ್ಯ ಎಂದು ಆರೋಪಿಸಿದ್ದಾರೆ. "ಅವರು ಕೊಪಾಲಿಯಾದಲ್ಲಿ ಐಸ್ ಕಾರ್ಖಾನೆಯನ್ನು ಹೊಂದಿದ್ದರು. ಅವರ ವಿರುದ್ಧ ವಿವಿಧ ಪ್ರಕರಣ ದಾಖಲಾಗಿದೆ" ಎಂದು ಆಲಂ ಹೇಳಿದ್ದಾರೆ.