ಸೌದಿ ಅರೇಬಿಯಾ ವಿಮಾನ ನಿಲ್ದಾಣಗಳ ಮೇಲೆ ಹೌತಿ ಬಂಡುಕೋರರ ದಾಳಿ: ಅಕ್ಟೋಬರ್ 10ರವರೆಗೆ ರಿಯಾದ್ ಟ್ರಿಪ್ ರದ್ದುಗೊಳಿಸಿದ ಏರ್ ಇಂಡಿಯಾ, ಇಂಡಿಗೋ
Houthi Airport Attacks: ಸೌದಿ ಅರೇಬಿಯಾದ ಪ್ರಮುಖ ವಿಮಾನ ನಿಲ್ದಾಣಗಳು, ತೈಲ ಸಂಸ್ಕರಣಾಗಾರಗಳು ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಬೆಂಬಲಿತ ಹೌತಿ ಬಂಡುಕೋರರು ದಾಳಿಗಳನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ, ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳು ರಿಯಾದ್ ನಗರಕ್ಕೆ ತೆರಳುವ ಮತ್ತು ಅಲ್ಲಿಂದ ಆಗಮಿಸುವ ಎಲ್ಲ ವಿಮಾನಗಳ ಹಾರಾಟವನ್ನು ಅಕ್ಟೋಬರ್ 10ರವರೆಗೆ ಸಂಪೂರ್ಣವಾಗಿ ರದ್ದುಗೊಳಿಸಿವೆ.
ಸೌದಿ ಅರೇಬಿಯಾದ ಏರ್‌ಪೋರ್ಟ್ ಮೇಲೆ ದಾಳಿ -
ರಿಯಾದ್, ಅ. 8: ಸೌದಿ ಅರೇಬಿಯಾದ ಪ್ರಮುಖ ವಿಮಾನ ನಿಲ್ದಾಣಗಳು, ತೈಲ ಸಂಸ್ಕರಣಾಗಾರಗಳು ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಇರಾನ್ ಬೆಂಬಲಿತ ಹೌತಿ ಬಂಡುಕೋರರು (Houthi Airport Attacks) ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ, ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳು ಮಹತ್ವದ ನಿರ್ಧಾರ ಕೈಗೊಂಡಿವೆ. ಭಾರತದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಸೇರಿ ಪ್ರಮುಖ ಬಜೆಟ್ ವಿಮಾನಯಾನ ಸಂಸ್ಥೆ ಇಂಡಿಗೋ ರಿಯಾದ್ ನಗರಕ್ಕೆ ತೆರಳುವ ಮತ್ತು ಅಲ್ಲಿಂದ ಆಗಮಿಸುವ ಎಲ್ಲ ವಿಮಾನಗಳ ಹಾರಾಟವನ್ನು ಅಕ್ಟೋಬರ್ 10ರವರೆಗೆ ಸಂಪೂರ್ಣವಾಗಿ ರದ್ದುಗೊಳಿಸಿವೆ.
ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಬಿಗುವಿನ ಭದ್ರತಾ ಪರಿಸ್ಥಿತಿ ಮತ್ತು ಹೆಚ್ಚುತ್ತಿರುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ವಿಮಾನ ರದ್ದತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಹಾಗೂ ಪ್ರಯಾಣ ಅನಿಶ್ಚಿತತೆ ಎದುರಿಸುತ್ತಿರುವ ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು ಪೂರ್ಣ ಪ್ರಮಾಣದ ಹಣ ಮರುಪಾವತಿ ಅಥವಾ ಯಾವುದೇ ಹೆಚ್ಚುವರಿ ದಂಡವಿಲ್ಲದೆ ಉಚಿತವಾಗಿ ಪ್ರಯಾಣದ ದಿನಾಂಕವನ್ನು ಮರುಹೊಂದಿಸಿಕೊಳ್ಳುವ ಸೌಲಭ್ಯವನ್ನು ಪ್ರಕಟಿಸಿವೆ. ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಕ್ತಾರರು, "ಪ್ರಸ್ತುತ ಪ್ರದೇಶದಲ್ಲಿ ಉದ್ಭವಿಸಿರುವ ಗಂಭೀರ ಭದ್ರತಾ ಸನ್ನಿವೇಶವನ್ನು ನಾವು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ನಾವು ಮೊದಲ ಆದ್ಯತೆ ನೀಡುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.
ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ:
🚨🇾🇪🇸🇦 RIYADH AIRPORT UNDER ATTACK! An material damage caught fire at King Khalid International Airport following #Houthi missile attacks. Lufthansa has suspended #Riyadh flights until October 16, while Air India has halted services until October 10. #SaudiArabia #Yemen #Riyadh https://t.co/VC1BnKBYfC
— Baba Thoka Asli (@TheRealThoka_) October 8, 2026
ಮೂವರ ಸಾವು
ಬುಧವಾರ (ಅಕ್ಟೋಬರ್ 7) ರಿಯಾದ್ ಹಾಗೂ ಅಭಾ ವಿಮಾನ ನಿಲ್ದಾಣಗಳ ಮೇಲೆ ಹೌತಿ ಬಂಡುಕೋರರು ನಡೆಸಿದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು. ಸೌದಿ ಅರೇಬಿಯಾ ಮತ್ತು ಯೆಮೆನ್ ಮೈತ್ರಿಕೂಟದ ಪಡೆಗಳು ಬಂಡುಕೋರರ ವಿರುದ್ಧ ಬೃಹತ್ ಮಟ್ಟದ ವಾಯು ಹಾಗೂ ಭೂಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ ಬಳಿಕ ನಾಗರಿಕ ವಿಮಾನ ನಿಲ್ದಾಣಗಳಲ್ಲಿ ದಾಖಲಾದ ಮೊದಲ ಸಾವು-ನೋವು ಇದಾಗಿದೆ.
ಮೆಕ್ಕಾ ಗುರಿಯಾಗಿಸಿಕೊಂಡ ಹೌತಿ ದಾಳಿ: ಸೌದಿಯಲ್ಲಿ ಮೊದಲ ಬಾರಿಗೆ ವೈಮಾನಿಕ ಎಚ್ಚರಿಕೆ
ಈ ಭೀಕರ ದಾಳಿಯ ಬೆನ್ನಲ್ಲೇ, ಗುರುವಾರ ಮುಂಜಾನೆ ರಿಯಾದ್ ರಾಜಧಾನಿಯ ಸುತ್ತಮುತ್ತ ಸರಣಿ ಸ್ಫೋಟಗಳ ಶಬ್ದಗಳು ಮೊಳಗಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾಧಿಕಾರವು, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ತಮ್ಮ ವಿಮಾನಗಳ ಸ್ಥಿತಿಗತಿಯನ್ನು ಸಂಬಂಧಪಟ್ಟ ಏರ್‌ಲೈನ್ಸ್‌ಗಳ ಮೂಲಕ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳುವಂತೆ ತುರ್ತು ಮಾರ್ಗಸೂಚಿ ಹೊರಡಿಸಿದೆ.
ಹೌತಿ ಉಗ್ರರಿಂದ 'ಕಡೆಯ ಎಚ್ಚರಿಕೆ'
ಇನ್ನೊಂದೆಡೆ, ಸೌದಿ ವಾಯುಪ್ರದೇಶವು ತಮ್ಮ ಮಿಲಿಟರಿ ಕಾರ್ಯಾಚರಣೆಯ ಪ್ರಮುಖ ಯುದ್ಧರಂಗವಾಗಿದ್ದು, ಅಲ್ಲಿ ವಿಮಾನ ಹಾರಾಟ ನಡೆಸುವ ಅಪಾಯಗಳ ಕುರಿತು ಜಾಗತಿಕ ನಾಗರಿಕ ವಿಮಾನಯಾನ ಸಂಸ್ಥೆಗಳಿಗೆ ಹೌತಿ ಉಗ್ರರು 'ಕಡೆಯ ಎಚ್ಚರಿಕೆ' ನೀಡಿದ್ದಾರೆ. ವಾಯುಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಅಂತಾರಾಷ್ಟ್ರೀಯ ಮಾರ್ಗಗಳು ಅಸ್ತವ್ಯಸ್ತಗೊಂಡಿದ್ದು, ಭಾರತೀಯ ಸಂಸ್ಥೆಗಳು ಸದ್ಯ ಪರಿಸ್ಥಿತಿ ತಿಳಿಯಾಗುವವರೆಗೂ ರಿಯಾದ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.