Ranjith Ashwath Column: ಖಜಾನೆ ಖಾಲಿಯಾದಷ್ಟು, ಭರ್ತಿಯಾಗುವುದು ಎಲ್ಲಿಂದ ?
ಒಪಿಎಸ್ ಮರು ಜಾರಿಗೊಳಿಸಿದರೆ ಇಂದೇ ಆರ್ಥಿಕ ಹೊರೆಯಾಗುತ್ತದೆ ಎಂದಲ್ಲ. ಆದರೆ ದೀರ್ಘಕಾಲ ದಲ್ಲಿ ಸರಕಾರ ಖಜಾನೆಗೆ ಬಹುದೊಡ್ಡ ಹೊಡೆತ ಎನ್ನುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಬದ್ಧತಾ ವೆಚ್ಚ ಶೇ.60ರ ಸಮೀಪದಲ್ಲಿರುವುದರಿಂದ ಒಪಿಎಸ್ ಒಂದು ವೇಳೆ ಜಾರಿಯಾದರೆ, ಬದ್ಧತಾ ವೆಚ್ಚ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
-
ಅಶ್ವತ್ಥಕಟ್ಟೆ
ರಾಜಕೀಯ ಪಕ್ಷಗಳ ಮತ ಬೇಟೆಯ ಕಾರಣಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ‘ಉಚಿತ’ ಘೋಷಣೆಗಳ ಪರ್ವ ಹೆಚ್ಚುತ್ತಲೇ ಸಾಗಿದೆ. ಉಚಿತ ಯೋಜನೆಗಳ ಬಗ್ಗೆ ಆರ್ಥಿಕ ತಜ್ಞರು, ಆರ್ಬಿಐ ಸೇರಿದಂತೆ ಸುಪ್ರೀಂ ಕೋರ್ಟ್ ಎಚ್ಚರಿಕೆಯ ಹೊರತಾಗಿಯೂ ಪಕ್ಷಾತೀತವಾಗಿ ಪಕ್ಷಗಳು ಘೋಷಣೆಗಳನ್ನು ನೀಡುತ್ತಲೇ ಬರುತ್ತಿವೆ. ಅದರಲ್ಲಿಯೂ 2023ರ ಕರ್ನಾಟಕ ವಿಧಾನ ಸಭಾ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ ‘ಪಂಚಗ್ಯಾರಂಟಿ’ ಭರವಸೆಗಳು ಈ ಹಿಂದಿನ ಎಲ್ಲ ಉಚಿತ ಘೋಷಣೆಗಳಿಗಿಂತ ಹೆಚ್ಚು ಆಕರ್ಷಿತವಾಗಿ ಇಡೀ ದೇಶಕ್ಕೆ ‘ಮಾದರಿ’ ಎನಿಸಿದವು.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಪಂಚಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಯನ್ನು ಕಾಂಗ್ರೆಸ್ ಹಿಡಿಯಿತು. ಈ ಗ್ಯಾರಂಟಿಗಳು ಚುನಾವಣೆಯಲ್ಲಿ ವರ್ಕ್ಔಟ್ ಆಗುತ್ತದೆ ಎನ್ನುವ ಸ್ಪಷ್ಟನೆ ಸಿಗುತ್ತಿದ್ದಂತೆ, ಈ ಹಿಂದೆ ವಿರೋಧಿಸಿದ್ದ ಬಿಜೆಪಿ ಸೇರಿದಂತೆ ಬಹುತೇಕ ಎಲ್ಲ ಪಕ್ಷಗಳು ಕರ್ನಾಟಕ ಗ್ಯಾರಂಟಿ ಯೋಜನೆಗಳ ಹಾದಿಯನ್ನೇ ಹಿಡಿದಿದ್ದು ಹಳೇ ವಿಷಯ.
ಪಂಚಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಕರ್ನಾಟಕ ಯಶಸ್ವಿಯಾದರೂ, ಈ ಯೋಜನೆಗಳಿಂದ ಎದುರಾದ ‘ಆರ್ಥಿಕ ಇಕ್ಕಟ್ಟ’ನ್ನು ನಿಭಾಯಿಸುವಲ್ಲಿ ಕಳೆದ ಮೂರು ವರ್ಷಗಳಿಂದ ರಾಜ್ಯ ಸರಕಾರ ಹೋರಾಡುತ್ತಿದೆ. ಪಂಚಗ್ಯಾರಂಟಿ ಯೋಜನೆಯ ಹೊಡೆತದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಸಿಗುತ್ತಿಲ್ಲ ಎನ್ನುವ ಆರೋಪದ ನಡುವೆಯೇ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟ ಸಹೋದ್ಯೋಗಿಗಳು ಹತ್ತು ಹಲವು ಘೋಷಣೆಗಳನ್ನು ಮಾಡುತ್ತಿದ್ದಾರೆ. ಅದರಲ್ಲಿಯೂ ಕಳೆದ ಚುನಾವಣೆ ವೇಳೆ ಕಾಂಗ್ರೆಸ್ ಘೋಷಿಸಿದ್ದ ಒಪಿಎಸ್ ಮರುಜಾರಿ ವಿಷಯ ವಾಗಿ ಸರಕಾರದ ನಿಲುವು ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ: Ranjith H Ashwath Column: ಚದುರಿದ ಕಮಲದ ದಳವನ್ನು ಕೂಡಿಸೋರ್ಯಾರು ?
ಹಿರಿಯೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಒಪಿಎಸ್ ಮರುಜಾರಿಗೆ ಬಗ್ಗೆ ಶೀಘ್ರವೇ ತೀರ್ಮಾನಿಸಲಾಗುವುದು ಎನ್ನುವ ಘೋಷಣೆಯನ್ನು ಮಾಡಿದ್ದಾರೆ. ಆದರೆ ನಿಜವಾಗಿಯೂ ಒಪಿಎಸ್ ಜಾರಿ ಸಾಧ್ಯವೇ ಎನ್ನುವ ಪ್ರಶ್ನೆಗೆ ಆರ್ಥಿಕ ತಜ್ಞರು ಭಿನ್ನ ಉತ್ತರ ನೀಡುತ್ತಿದ್ದಾರೆ.
ಒಪಿಎಸ್ ಮರು ಜಾರಿಗೊಳಿಸಿದರೆ ಇಂದೇ ಆರ್ಥಿಕ ಹೊರೆಯಾಗುತ್ತದೆ ಎಂದಲ್ಲ. ಆದರೆ ದೀರ್ಘ ಕಾಲದಲ್ಲಿ ಸರಕಾರ ಖಜಾನೆಗೆ ಬಹುದೊಡ್ಡ ಹೊಡೆತ ಎನ್ನುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿ ದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಬದ್ಧತಾ ವೆಚ್ಚ ಶೇ.60ರ ಸಮೀಪದಲ್ಲಿರುವುದರಿಂದ ಒಪಿಎಸ್ ಒಂದು ವೇಳೆ ಜಾರಿಯಾದರೆ, ಬದ್ಧತಾ ವೆಚ್ಚ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಏಕೆಂದರೆ, ಈಗಲೇ ಪಿಂಚಣಿಗೆ ರಾಜ್ಯ ಸರಕಾರ ಬರೋಬ್ಬರಿ 40 ಸಾವಿರ ಕೋಟಿ ರು. ವ್ಯಯಿಸುತ್ತಿದೆ. ಇದರೊಂದಿಗೆ 2006ರ ನಂತರದ ಸರಕಾರಿ ಸಿಬ್ಬಂದಿಗಳನ್ನು ಪಿಂಚಣಿ ಯೋಜನೆಗೆ ಸೇರಿಸಿದರೆ ಖಜಾನೆಗೆ ಬಹುದೊಡ್ಡ ಹೊಡೆತ ಎನ್ನುವ ಆತಂಕವಿದೆ. ಆರ್ಬಿಐ ಅಧ್ಯಯನವೊಂದರ ಪ್ರಕಾರ, ಎನ್ಪಿಎಸ್ ಬದಲು ಒಪಿಎಸ್ ಮರುಜಾರಿಯಿಂದ 4.5 ಪಟ್ಟು ಹೆಚ್ಚು ಆರ್ಥಿಕ ಹೊರೆ ರಾಜ್ಯದ ಮೇಲೆ ಬೀಳಲಿದೆ.
2030ರ ನಂತರ ಸುಮಾರು 2.82 ಲಕ್ಷ ನೌಕರರು ನಿವೃತ್ತರಾಗಲಿದ್ದು, ಇವರಿಗೆ ಒಪಿಎಸ್ನಲ್ಲಿ ಪಿಂಚಣಿ ನೀಡಲು ಶುರು ಮಾಡಿದರೆ ಹೆಚ್ಚುವರಿಯಾಗಿ 25000 ಕೋಟಿಯಿಂದ 35000 ಕೋಟಿವರೆಗೆ ವಾರ್ಷಿಕ ಹೊರೆ ಬೀಳುವ ಸಾಧ್ಯತೆಯಿದೆ. ಈ ರೀತಿಯ ಹೆಚ್ಚುವರಿ ಹೊರೆಯನ್ನು ನಿಭಾಯಿಸಲು ಸರಕಾರಕ್ಕೆ ಹೆಚ್ಚುವರಿ ವರಮಾನದ ಅಗತ್ಯವಿರುತ್ತದೆ. ಆದರೆ ದಿನದಿಂದ ದಿನಕ್ಕೆ ಬದ್ಧತಾ ವೆಚ್ಚ ಹೆಚ್ಚಾಗುತ್ತಿದ್ದರೂ, ಬದ್ಧತಾ ವೆಚ್ಚಕ್ಕೆ ಸರಿಯಾಗಿ ವರಮಾನ ಏರುತ್ತಿಲ್ಲ.
ಜಿಎಸ್ಟಿ ಜಾರಿಗೆ ಬರುವ ಮೊದಲಾದರೆ, ರಾಜ್ಯ ಸರಕಾರಗಳಿಗೆ ತೆರಿಗೆ ಹೆಚ್ಚಿಸುವ ಅಥವಾ ತಗ್ಗಿಸುವ ಹೆಚ್ಚಿನ ಅವಕಾಶವಿತ್ತು. ಆದ್ದರಿಂದ ಬೇಡಿಕೆಗೆ ಅನುಗುಣವಾಗಿ, ತೆರಿಗೆಗಳನ್ನು ಏರಿಸುವ ಮೂಲಕ ‘ಬ್ಯಾಲೆನ್ಸ್’ ಮಾಡಲು ದಾರಿಯೊಂದು ಇತ್ತು. ಆದರೀಗ, ಜಿಎಸ್ಟಿ ಇರುವುದರಿಂದ ರಾಜ್ಯ ಸರಕಾರಗಳಿಗೆ ಹೆಚ್ಚಿನ ವ್ಯಾಪ್ತಿಯಿಲ್ಲ. ಹೆಚ್ಚೆಂದರೆ ಮದ್ಯದ ಮೇಲಿನ ತೆರಿಗೆ, ಮುದ್ರಾಂಕ ಮತ್ತು ನೋಂದಣಿ ಶುಲ್ಕ, ಮೋಟಾರು ವಾಹನ ತೆರಿಗೆ ಹಾಗೂ ವ್ಯಾಟ್ಗಳನ್ನು ಏರಿಸಲು ಅವಕಾಶವಿದೆ. ಆದರೆ ಈಗಾಗಲೇ ಮದ್ಯ, ಮುದ್ರಾಂಕ ಹಾಗೂ ನೋಂದಣಿ ಶುಲ್ಕ, ವಾಹನ ತೆರಿಗೆಗಳನ್ನು ಇತ್ತೀಚಿಗಷ್ಟೇ ಮಾಡಿರುವುದರಿಂದ ಪುನಃ ಏರಿಸಿ, ವರಮಾನ ಹೆಚ್ಚಿಸಿಕೊಳ್ಳಲು ಸಾಧ್ಯವಿಲ್ಲ.
ಇನ್ನು ಪೆಟ್ರೋಲ್-ಡೀಸೆಲ್ ಮೇಲಿನ ಕರವನ್ನು ವಿಧಿಸಲು ಅವಕಾಶವಿದ್ದರೂ, ಈಗಲೇ ಪೆಟ್ರೋಲ್ ದರ 110 ದಾಟಿದ್ದು, ಡೀಸೆಲ್ ದರ ನೂರರ ಗಡಿಯಲ್ಲಿದೆ. ಹೀಗಿರುವಾಗ ಹೆಚ್ಚುವರಿ ಸೆಸ್ ಹಾಕಲು ಪ್ರಯತ್ನಿಸಿದರೆ ಅದು ಮತ್ತೊಮ್ಮೆ ಜನಾಕ್ರೋಶಕ್ಕೆ ಕಾರಣವಾಗಲಿದೆ. ಇನ್ನುಳಿದಂತೆ ಸ್ಥಳೀಯ ಸಂಸ್ಥೆಗಳ ತೆರಿಗೆ ಹಾಕಿ ಹೆಚ್ಚುವರಿ ಹಣ ಪಡೆಯಬಹುದಾದರೂ, ಸ್ಥಳೀಯ ಸಂಸ್ಥೆಯಲ್ಲಿ ಸಂಗ್ರಹ ವಾದ ಅನುದಾನ ಅಲ್ಲಿಯೇ ವಿನಿಯೋಗಿಸಬೇಕಾಗುವುದರಿಂದ ರಾಜ್ಯ ಸರಕಾರದ ಖಜಾನೆಯ ಮೇಲಿನ ಹೊರೆಯನ್ನು ಕೊಂಚ ತಗ್ಗಿಸಬಹುದೇ ಹೊರತು ಇಳಿಸಲು ಸಾಧ್ಯವಿಲ್ಲ. ಅದರಲ್ಲಿಯೂ ರಾಜ್ಯ ಸರಕಾರ ಘೋಷಣೆ ಮಾಡುವುದಾಗಿ ಭರವಸೆ ನೀಡುತ್ತಿರುವ ಒಪಿಎಸ್ನ ಬೃಹತ್ ಯೋಜನೆ ಗಳಿಗೆ ಈ ಹೆಚ್ಚುವರಿ ಅನುದಾನಗಳು ಬಹುದೊಡ್ಡ ಕೊಡುಗೆ ನೀಡುತ್ತವೆ ಎನ್ನಲು ಸಾಧ್ಯವೇ ಇಲ್ಲ.
ಹಿರಿಯೂರು ಉಪಚುನಾವಣೆ ಹತ್ತಿರದಲ್ಲಿರುವುದರಿಂದ ಒಪಿಎಸ್ ವಿಷಯದಲ್ಲಿ ಆಲೋಚನೆ ಮಾಡುವುದಾಗಿ ಭರವಸೆ ನೀಡಿ ಸದ್ಯ ‘ಬೀಸುವ ದೊಣ್ಣೆಯಿಂದ’ ಸರಕಾರ ತಪ್ಪಿಸಿಕೊಂಡಿದೆ. ಆದರೆ ಮಾಸಿಕ ವೇತನ ಹೆಚ್ಚಿಸುವಂತೆ ಆಗ್ರಹಿಸಿ ಕಳೆದೊಂದು ವಾರದಿಂದ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತರ ಹೋರಾಟ ಇದೀಗ ಸರಕಾರಕ್ಕೆ ಬಿಸಿತುಪ್ಪವಾಗಿದೆ.
ಆಶಾ ಕಾರ್ಯಕರ್ತರು ಆಗ್ರಹಿಸುತ್ತಿರುವುದರಿಂದ ವೇತನ ಹೆಚ್ಚಿಸಿದರೆ ವಾರ್ಷಿಕವಾಗಿ ಸರಕಾರಕ್ಕೆ ಹೆಚ್ಚುವರಿ ಸುಮಾರು 350 ಕೋಟಿ ರು. ಅನುದಾನ ಅಗತ್ಯವಿದೆ. ಆದರೆ ಈ ಅನುದಾನ ಹೊಂದಿ ಸಲು ಆರ್ಥಿಕ ಇತಿಮಿತಿಗಳಿವೆ ಎನ್ನುವ ಮಾತನ್ನು ಡಿ.ಕೆ. ಶಿವಕುಮಾರ್ ಸ್ವತಃ ಒಪ್ಪಿಕೊಂಡಿದ್ದಾರೆ. ಆದರೆ ವೇತನ ಹೆಚ್ಚಿಸುವ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎನ್ನುವ ಪಟ್ಟನ್ನು ಹಿಡಿದಿರುವು ದರಿಂದ ‘ತಾರ್ಕಿಕ’ ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆಗೆ ಸರಕಾರ ಸಿಲುಕಿದೆ. ಆದರೆ ವಾರ್ಷಿಕವಾಗಿ 365 ಕೋಟಿ ರು. ಹೆಚ್ಚುವರಿಯಾಗಿ ನೀಡಲು ಸರಕಾರ ‘ಇತಿಮಿತಿ’ಯ ಮಾತನ್ನು ಆಡುತ್ತಿರುವಾಗ, ಮಂಗಳೂರಿನಲ್ಲಿ ನಡೆದ ಸಂಪುಟದಲ್ಲಿ 32 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡುವುದು, ಬೆಂಗಳೂರು ವ್ಯಾಪ್ತಿಯಲ್ಲಿ ಸಾವಿರ ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಘೋಷಣೆ ಮಾಡುವುದು, ರಸ್ತೆ ಅಭಿವೃದ್ಧಿಗೆ 16 ಸಾವಿರ ಕೋಟಿ ರು. ಎಲ್ಲಿಂದ ಹೊಂದಿಸಲಾಗುತ್ತದೆ ಎನ್ನುವುದು ಪ್ರತಿಪಕ್ಷಗಳ ಪ್ರಶ್ನೆಯಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ‘ಒಂದೆಡೆ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಲು ಹಣಕಾಸಿನ ಅಡಚಣೆಗಳನ್ನು ಮುಂದಿಡುತ್ತಿರುವ ಸರಕಾರ ಕಾಂಗ್ರೆಸ್ ಕಾರ್ಯಕರ್ತರಿಗೆ ಅನುಕೂಲ ಕಲ್ಪಿಸುವ ಸಮಿತಿಗಳ ರಚನೆ, ಬೋರ್ಡ್ಗಳು, ಕಾರ್ಪೊರೇಷನ್ಗಳ ನೇಮಕಾತಿಗೆ ನೂರಾರು ಕೋಟಿ ರುಪಾಯಿ ವ್ಯಯಿಸುತ್ತಿದೆ.
ವಿಧಾನಸಭಾ ಕ್ಷೇತ್ರವಾರು ಗ್ಯಾರಂಟಿ ಅನುಷ್ಠಾನ ಸಮಿತಿಗಳ ಅಧ್ಯಕ್ಷರನ್ನು ನೇಮಿಸಿ, ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ನೀಡುವ ಮೂಲಕ ತೆರಿಗೆದಾರರ ಹಣವನ್ನು ಪೋಲು ಮಾಡಲಾಗುತ್ತಿದೆ. ಭಾರತ್ ಜೋಡೋ ಅನುಷ್ಠಾನ ಸಮಿತಿಯನ್ನು ರಚಿಸಿ 35 ಕೋಟಿ ಮೀಸಲಿಡುವ ನಿರ್ಧಾರ ಕೈಗೊಂಡಿರುವುದು ಸ್ಪಷ್ಟ.
ರಾಜ್ಯದಲ್ಲಿ ಭೀಕರ ಬರಗಾಲ ಮತ್ತು ಆರ್ಥಿಕ ಸಂಕಷ್ಟವಿರುವ ಸಂದರ್ಭದಲ್ಲಿ ಇಂತಹ ಸಮಿತಿಗಳ ರಚನೆಯ ಅಗತ್ಯವೇನು?’ ಎಂದು ಪ್ರಶ್ನಿಸಿದ್ದಾರೆ. ಯಾವುದೇ ಹೊಸ ಬೇಡಿಕೆಗೆ ‘ಅನುದಾನ’ ಕೊರತೆಯ ವಿಷಯವನ್ನು ಮುಂದಿಡುವ ರಾಜ್ಯ ಸರಕಾರ, ನಿಗಮ ಮಂಡಳಿ ನೇಮಕ, ಗ್ಯಾರಂಟಿ ಅನುಷ್ಠಾನ ಸಮಿತಿಯ ನೇಮಕ, ಭಾರತ್ ಜೋಡೋ ಸಂಘಗಳ ಆರಂಭಕ್ಕೆ ಹೆಚ್ಚುವರಿ ಅನುದಾನ ನೀಡುತ್ತಿರುವುದು ಇದೀಗ ರಾಜಕೀಯವಾಗಿ ಪ್ರತಿಪಕ್ಷಗಳಿಗೆ ಅಸ್ತ್ರವಾಗಿದೆ.
ಇದೇ ವಿಷಯವನ್ನು ಮುಂದಿಟ್ಟುಕೊಂಡು ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರು, ಆಶಾ ಕಾರ್ಯಕರ್ತರ ವೇತನ ಹೆಚ್ಚಳದ ಬೇಡಿಕೆ, ರೈತರ ಪರಿಹಾರ, ಸರಕಾರಿ ನೌಕರರ ಒಪಿಎಸ್ ಒತ್ತಡ ಸೇರಿದಂತೆ ಹತ್ತು ಹಲವು ಬೇಡಿಕೆಗಳು ಸರಕಾರದ ಮುಂದಿವೆ. ಆದರೆ ಈ ಎಲ್ಲ ಯೋಜನೆಗಳಿಗೆ ಎದುರಾಗುವ ಅನುದಾನ ಕೊರತೆ, ತಮ್ಮ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ, ಸಂಪುಟ ಸ್ಥಾನಮಾನ ನೀಡುವ ಸಮಯದಲ್ಲಿ ಏಕೆ ಆಗುವುದಿಲ್ಲ ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ನಾಯಕರ ಬಳಿ ಉತ್ತರವಿಲ್ಲ.
ಒಂದೆಡೆ ಅನುದಾನ ಕೊರತೆಯನ್ನು ಅನುಭವಿಸುತ್ತಿರುವ ಸರಕಾರಕ್ಕೆ ಶಾಸಕರ ಅಸಮಾಧಾನವೂ ಬಹುದೊಡ್ಡ ತಲೆನೋವಾಗಿದೆ. ಕಾಂಗ್ರೆಸ್ನ ಹಲವು ಶಾಸಕರು ಅನುದಾನ ಸಿಗುತ್ತಿಲ್ಲ ಎನ್ನುವ ಅಸಮಧಾನವನ್ನು ನಿರಂತರವಾಗಿ ಹೊರಹಾಕುತ್ತಲೇ ಬಂದಿದ್ದಾರೆ. ಈ ಹಿಂದೆ ಅಸಮಾಧಾನ ಭುಗಿಲೆದ್ದ ಸಮಯದಲ್ಲಿ ಕಾಂಗ್ರೆಸ್ ಶಾಸಕರಿಗೆ ನೂರು ಕೋಟಿ ನೀಡುವ ಭರವಸೆಯನ್ನು ಡಿ.ಕೆ.ಶಿವಕುಮಾರ್ ಅವರು ನೀಡಿದ್ದರು. ಆದರೆ ಈ ಅನುದಾನದ ಸಂಪನ್ಮೂಲ ಎಲ್ಲಿಂದ ಎನ್ನುವ ಪ್ರಶ್ನೆಯಿರುವುದರಿಂದ ಈವರೆಗೆ ಅನುದಾನ ಬಿಡುಗಡೆಯಾಗಿಲ್ಲ. ಚುನಾವಣೆಗೆ ಒಂದುವರೆ ವರ್ಷವಿರುವ ಈ ಸಮಯದಲ್ಲಿಯೂ ಅನುದಾನ ಸಿಗದೇ ಇರುವುದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ಯಾರಂಟಿ ಯೋಜನೆಗಳನ್ನು ಸರಕಾರ ಕ್ಷೇತ್ರದ ಜನರಿಗೆ ನೀಡುತ್ತಿದ್ದರೂ, ಅದನ್ನು ತಮ್ಮ ವೈಯಕ್ತಿಕ ಸಾಧನೆಯೆಂದು ‘ತೋರಿಸಿಕೊಳ್ಳಲು’ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯಗಳನ್ನು ಶಾಸಕರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಗ್ಯಾರಂಟಿ ಘೋಷಣೆಗಳ ಮೇಲೆಯೇ ಅಧಿಕಾರದ ಚುಕ್ಕಾಣಿ ಹಿಡಿದಿರುವುದರಿಂದ, ಅದನ್ನು ಬದಿಗಿಟ್ಟು ಯೋಜಿಸಿ ಎನ್ನುವ ಹೇಳಲು ಸಾಧ್ಯವಾಗದ ಸ್ಥಿತಿ ಅನೇಕ ಶಾಸಕರಲ್ಲಿದೆ.
ಚುನಾವಣೆ ಸಿದ್ಧತೆ ಈಗಾಗಲೇ ಆರಂಭವಾಗಿರುವುದರಿಂದ ಪಂಚಗ್ಯಾರಂಟಿ ಯೋಜನೆಗಳನ್ನು ಉಳಿಸಿಕೊಳ್ಳುವ ಜತೆಜತೆಗೆ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡುವ ಸವಾಲಿದೆ. ಆದರೆ ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿಗೆ ಬಹುದೊಡ್ಡ ಪಾಲು ನೀಡುವುದು ತೀವ್ರ ಸವಾಲಿನ ಕೆಲಸ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಹೊಸ ಯೋಜನೆಗಳಿಗಿಂತ ಈಗಾಗಲೇ ಘೋಷಣೆ ಯಾಗಿರುವ ಯೋಜನೆಗಳಿಗೆ ಅನುದಾನ ನೀಡಲೇ ಸರಕಾರ ಆರ್ಥಿಕ ಕೊರತೆಯ ನೆಪ ಹೇಳುತ್ತಿದೆ.
ಹೀಗಿರುವಾಗ ಹೊಸ ಯೋಜನೆಗಳಿಗೆ ಅನುದಾನ ಹೊಂದಿಸುವುದು ಎಲ್ಲಿಂದ ಎನ್ನುವ ಪ್ರಶ್ನೆಗೆ ಉತ್ತರವಿಲ್ಲ. ಇನ್ನು ಈ ಅನುದಾನ ಕೊರತೆಯನ್ನು ನೀಗಿಸಲು ಪಿಪಿಪಿ ಮಾದರಿ, ಸಿಎಸ್ಆರ್ ಅನುದಾನವನ್ನು ಬಳಸಿಕೊಳ್ಳುವ ಯತ್ನಕ್ಕೂ ಸರಕಾರ ಕೈಹಾಕಿದೆ. ಚುನಾವಣೆಗೆ ಒಂದುವರೆ ವರ್ಷವಿರುವ ಈ ಸಮಯದಲ್ಲಿ ಅನುದಾನ ನೀಡಲೇಬೇಕಾದ ಒತ್ತಡ ಸರಕಾರದ ಮೇಲಿದೆ.
ಅನುದಾನದ ಜತೆಜತೆಗೆ ಒಪಿಎಸ್ ಜಾರಿ, ಆಶಾ ಕಾರ್ಯಕರ್ತರ ವೇತನ ಹೆಚ್ಚಳದಂತಹ ‘ಬೇಡಿಕೆ’ಗಳನ್ನು ಈಡೇರಿಸಬೇಕಾದ ಅನಿವಾರ್ಯತೆಗೆ ಸರಕಾರ ಸಿಲುಕಿದೆ. ಈ ಒತ್ತಡದ ಜತೆಗೆ ಸ್ವಪಕ್ಷೀಯ ಶಾಸಕರಿಂದಲೇ ತಮ್ಮ ಕ್ಷೇತ್ರಗಳಿಗೆ ಅನುದಾನ ನೀಡಿಲ್ಲ ಎನ್ನುವ ‘ಬೇಸರ’ದ ಮಾತುಗಳನ್ನು ಅಲ್ಲಲ್ಲಿ ಆಡುತ್ತಿದ್ದು, ಅದನ್ನು ನಿಭಾಯಿಸುವುದೂ ಡಿ.ಕೆ.ಶಿವಕುಮಾರ್ ಸರಕಾರದ ಮುಂದಿರುವ ಬಹುದೊಡ್ಡ ಸವಾಲು ಎಂದರೆ ತಪ್ಪಾಗುವುದಿಲ್ಲ.
ಒಂದೆಡೆ ದಿನದಿಂದ ದಿನಕ್ಕೆ ಬೇಡಿಕೆಗಳ ಪಟ್ಟಿ ಹೆಚ್ಚಾಗುತ್ತಿದ್ದು, ಇನ್ನೊಂದೆಡೆ ಆರ್ಥಿಕ ಶಿಸ್ತಿನ ಲಕ್ಷ್ಮಣ ಗೆರೆಯ ಗಡಿಯಲ್ಲಿ ಕರ್ನಾಟಕದ ಆರ್ಥಿಕತೆ ನಿಂತಿರುವ ಸಮಯದಲ್ಲಿ ಈ ಎಲ್ಲವಕ್ಕೂ ಹಣ ಹೊಂದಿಸುವುದು ಎಲ್ಲಿಂದ ಎನ್ನುವುದೇ ಈಗಿರುವ ಯಕ್ಷಪ್ರಶ್ನೆ.