Mossad: ಇರಾನ್ ವಿರುದ್ಧದ ಇಸ್ರೇಲ್ ದಾಳಿಯಲ್ಲಿ ಮೊಸಾದ್ ನೆರವಾಗಿದ್ದು ಹೇಗೆ? ಇಲ್ಲಿದೆ ರೋಚಕ ಡಿಟೇಲ್ಸ್
Israel-Iran Conflict: ಇಸ್ರೇಲ್-ಇರಾನ್ ಮಧ್ಯೆ ಸಂಘರ್ಷ ತಾರಕಕ್ಕೇರಿದೆ. ಇಸ್ರೇಲಿನ ವಿಶ್ವ ವಿಖ್ಯಾತ ಗುಪ್ತಚರ ಸಂಸ್ಥೆ ಮೊಸಾದ್ನ ದಾಳಿಗೆ ಇರಾನ್ ಅಕ್ಷರಶಃ ಇರಾನ್ ತತ್ತರಿಸಿದೆ. ಮೊಸಾದ್ನ ಜಾಲವನ್ನು ಮಟ್ಟಹಾಕಲು ಇರಾನಿ ಅಧಿಕಾರಿಗಳು ಅಕ್ಷರಶಃ ಪರದಾಡುತ್ತಿದ್ದಾರೆ. ಶಂಕಿತ ವ್ಯಕ್ತಿಗಳ ಬಗ್ಗೆ ದಯವಿಟ್ಟು ತಿಳಿಸಿ ಎಂದು ಜನರಿಗೆ ಒತ್ತಾಯಿಸುತ್ತಿದ್ದಾರೆ. ಹಾಗಾದರೆ ಮೊಸಾದ್ ಸಂಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ? ಇಲ್ಲಿದೆ ವಿವರ.


ಟೆಹರಾನ್: ಇರಾನ್ ಅಧಿಕಾರಿಗಳಿಗೆ ಈಗ ಕಂಡ ಕಂಡವರೆಲ್ಲ ಇಸ್ರೇಲಿನ ವಿಶ್ವ ವಿಖ್ಯಾತ ಗುಪ್ತಚರ ಸಂಸ್ಥೆ ಮೊಸಾದ್ನ (Mossad) ಏಜೆಂಟರಿರಬೇಕು ಎಂಬ ಅನುಮಾನ ಕಾಡುತ್ತಿದೆ. ಇದೇ ಮೊದಲಲ್ಲ, ಹಲವಾರು ಮಂದಿಯನ್ನು ಸಾಕ್ಷ್ಯಾಧಾರವಿಲ್ಲದೆ, ಕೇವಲ ಶಂಕಿಸಿ ಗಲ್ಲಿಗೇರಿಸಲಾಗಿದೆ. ಒಂದು ಕಡೆ ಮೊಸಾದ್, ಮತ್ತೊಂದು ಕಡೆ ಇಸ್ರೇಲ್ ವಾಯುಪಡೆ. ಈ ಎರಡು ಸಿಂಹಗಳ ದಾಳಿಗೆ ಇರಾನ್ ಬೆಚ್ಚಿದೆ.
ಮೊಸಾದ್ನ ಜಾಲವನ್ನು ಮಟ್ಟಹಾಕಲು ಇರಾನಿ ಅಧಿಕಾರಿಗಳು ಅಕ್ಷರಶಃ ಪರದಾಡುತ್ತಿದ್ದಾರೆ. ಶಂಕಿತ ವ್ಯಕ್ತಿಗಳ ಬಗ್ಗೆ ದಯವಿಟ್ಟು ತಿಳಿಸಿ ಎಂದು ಜನರಿಗೆ ಒತ್ತಾಯಿಸುತ್ತಿದ್ದಾರೆ. ಮೊಸಾದ್ ಇರಾನಿನೊಳಕ್ಕೆ ಹೇಗೆ ನುಸುಳಿದೆ? ಇರಾನಿನ ಅಂತರಿಕ ದೌರ್ಬಲ್ಯಗಳನ್ನು ಪತ್ತೆ ಹೆಚ್ಚಿ ಹೇಗೆ ಮಟ್ಟ ಹಾಕುತ್ತಿದೆ? ಇಸ್ರೇಲಿನ ಸೇನಾ ಕಾರ್ಯಾಚರಣೆಗಳು, ಪರಮಾಣು ವಿಜ್ಞಾನಿಗಳ ಸಂಹಾರಕ್ಕೆ ಸಹಕರಿಸಿದೆ, ಇರಾನ್ನ ಪರಮಾಣು ಬಾಂಬ್ ತಯಾರಿಕೆಯ ಮಹತ್ತ್ವಾಕಾಂಕ್ಷೆಯನ್ನು ಹೇಗೆ ಹೊಸಕಿದೆ ಎಂಬುದು ರಣ ರೋಚಕ. ಮುಖ್ಯವಾಗಿ ಇಸ್ರೇಲಿಗರ ಅದ್ಭುತ ಧೈರ್ಯ-ಸಾಹಸ, ತಂತ್ರಜ್ಞಾನ ಮತ್ತು ಬುದ್ಧಿಮತ್ತೆಯ ವಿಶ್ವರೂಪ ದರ್ಶನ.
1/2
— Levina🇮🇳 (@LevinaNeythiri) June 17, 2025
🔴It took #MOSSAD years to prepare for the drone strike in Iran.
They smuggled the drones in ship containers and sometimes in suitcases.
Israel trained the agents outside Iran and the agents trained others inside Iran.
A clandestine drone base near Tehran played a big… https://t.co/WTzKJ8CtUD pic.twitter.com/3fZ66P73u5
ಈ ಸುದ್ದಿಯನ್ನೂ ಓದಿ: Israel-Iran Conflict: ಇಸ್ರೇಲ್-ಇರಾನ್ ಉದ್ವಿಗ್ನತೆ ನಡುವೆ ಯುಎಇ ಸಮುದ್ರದಲ್ಲಿ 3 ಹಡಗುಗಳಿಗೆ ಬೆಂಕಿ? ಫೋಟೋಗಳು ವೈರಲ್
ಮೊಸಾದ್ನ ಗೂಢಚಾರರು ಹೇಗೆ ಇರುತ್ತಾರೆ? ಎಂಬುದನ್ನು ಪತ್ತೆಹಚ್ಚಲು ಇರಾನ್ ಅಧಿಕಾರಿಗಳು ಜನರಿಗೆ ಕೆಲವು ಸುಳಿವುಗಳನ್ನು ಹೇಳುತ್ತಾರೆ. ಮೊಸಾದ್ ಗೂಢಚಾರರು ಮಾಸ್ಕ್ ಹಾಕುತ್ತಾರೆ. ಕನ್ನಡಕ, ಟೊಪ್ಪಿ ಹಾಕಿರುತ್ತಾರೆ. ದೊಡ್ಡ ಲಗ್ಗೇಜ್ಗಳನ್ನು ಹೊಂದಿರುತ್ತಾರೆ. ಪಿಕಪ್ ಟ್ರಕ್ಕ್ ಗಳಲ್ಲಿ ಸಂಚರಿಸುತ್ತಾರೆ. ರಾತ್ರಿಯಲ್ಲೂ ಮಾಸ್ಕ್, ಸನ್ ಗ್ಲಾಸ್, ಟೊಪ್ಪಿ ಧರಿಸುತ್ತಾರೆ. ಕೊರಿಯರ್ನಲ್ಲಿ ಏನೇನೋ ಸ್ವೀಕರಿಸುತ್ತಾರೆ. ಮನೆಯೊಳಗಿನಿಂದ ವಿಲಕ್ಷಣ ಸದ್ದು ಬರುತ್ತದೆ. ಲೋಹದ ಪರಿಕರಗಳ ಸದ್ದು ಕೇಳಿಸುತ್ತದೆ. ಹಗಲಿನಲ್ಲೂ ಮನೆಯ ಕಿಟಿಕಿಗೆ ಪರದೆಗಳು ಬಿದ್ದಿರುತ್ತವೆ ಎಂದು ಇರಾನಿ ಅಧಿಕಾರಿಗಳು ಜನರಿಗೆ ತಿಳಿಸುತ್ತಿದ್ದಾರೆ.
ಬಹಳ ಆಶ್ಚರ್ಯವಾಗುವುದು ಏನೆಂದರೆ, ಇರಾನ್ನ ಪರಮಾಣು ಕೇಂದ್ರಗಳ ಮೇಲೆ ಇಸ್ರೇಲಿನ " ಆಪರೇಷನ್ ರೈಸಿಂಗ್ ಲಯನ್ʼʼ ಮಿಲಿಟರಿ ಕಾರ್ಯಾಚರಣೆಯಲ್ಲಿ, ಮೊಸಾದ್ ನಿರ್ಣಾಯಕ ಪಾತ್ರ ವಹಿಸಿತ್ತು. ಇರಾನಿನ ಕ್ಷಿಪಣಿಗಳು ಹಾಗೂ ಪರಮಾಣು ಕೇಂದ್ರಗಳನ್ನು ಗುರಿಯಾಗಿಟ್ಟು ಇಸ್ರೇಲ್ ತನ್ನ ಎಫ್-35 ಜೆಟ್ ಯುದ್ಧ ವಿಮಾನಗಳ ಮೂಲಕ ದಾಳಿ ನಡೆಸುವುದಕ್ಕೆ ಮೊದಲೇ, ಮೊಸಾದ್ನ ಡ್ರೋನ್ಗಳು ಕಾರ್ಯಾಚರಣೆ ನಡೆಸಿತ್ತು. ಇಸ್ರೇಲ್ ವಾಯುಪಡೆಯ ದಾಳಿಗೆ ಸಾಕಷ್ಟು ಮುಂಚಿತವಾಗಿ ಮೊಸಾದ್ ಶಸ್ತ್ರಾಸ್ತ್ರಗಳನ್ನು ಇರಾನಿನ ಒಳಕ್ಕೆ ಕಳ್ಳಸಾಗಣೆ ಮಾಡಿತ್ತು. ವಾಲ್ ಸ್ಟ್ರೀಟ್ ವರದಿಯ ಪ್ರಕಾರ, ಹಡಗುಗಳು, ಟ್ರಕ್ಕುಗಳು ಮತ್ತು ಸೂಟ್ ಕೇಸ್ಗಳಲ್ಲಿ ಡ್ರೋನ್ ನ ಬಿಡಿ ಭಾಗಗಳು, ಅಧುನಿಕ ಆಯುಧಗಳು ಇರಾನಿಗೆ ಸಾಗಣೆಯಾಗಿತ್ತು. ಇರಾನಿನಲ್ಲಿಯೇ ಒಂದು ಡ್ರೋನ್ನ ನೆಲೆಯನ್ನೂ ಅಭಿವೃದ್ಧಿಪಡಿಸಿತ್ತು. ಅಂದರೆ ಇರಾನಿನ ಅಣ್ವಸ್ತ್ರ ಮತ್ತು ಕ್ಷಿಪಣಿ ಯೋಜನೆಗಳ ಕೇಂದ್ರಗಳನ್ನು ಧ್ವಂಸಗೊಳಿಸಲು ಇಸ್ರೇಲ್ ವರ್ಷಗಟ್ಟಲೆ ಕಾಲದಿಂದ ಪೂರ್ವ ಸಿದ್ಧತೆಗಳನ್ನು ನಡೆಸಿತ್ತು. ಆದರೆ ಇರಾನ್ ಅಧಿಕಾರಿಗಳಿಗೆ ಇದರ ಸುಳಿವೇ ಇದ್ದಿರಲಿಲ್ಲ!
ಕೆಲ ವರ್ಷಗಳಿಂದಲೂ ಮೊಸಾದ್ಗೆ ಇರಾನ್ ಆಟದ ಬಯಲಾಗಿತ್ತು. ಗೆರಿಲ್ಲಾ ಮಾದರಿಯ ಯುದ್ಧ ತಂತ್ರಗಾರಿಕೆಯಲ್ಲಿ ಇಸ್ರೇಲ್ ತನ್ನ ಮೇಲುಗೈಯನ್ನು ಮತ್ತೆ ಸಾಬೀತುಪಡಿಸಿದೆ. ಹೀಗಾಗಿ ಇರಾನಿನ ಪ್ರಮುಖ ಸೇನಾಧಿಕಾರಿಗಳು, ಅಣು ವಿಜ್ಞಾನಿಗಳು ಅನೂಹ್ಯವಾಗಿ ಹತರಾಗಿದ್ದಾರೆ.
ಮೊಸಾದ್ನ ಇರುವಿಕೆಯೇ ಇರಾನಿನ ಬೆನ್ನಿನ ಮೂಳೆಗಳಲ್ಲಿ ನಡುಕ ಸೃಷ್ಟಿಸಿದೆ. ಮಾನಸಿಕವಾಗಿ ಕುಬ್ಜವಾಗುವಂತೆ ಮಾಡಿದೆ. ಇರಾನಿನ ಹೃದಯ ಭಾಗದಲ್ಲಿರುವ ಭದ್ರತಾ ವ್ಯವಸ್ಥೆಗಳು, ಪರಮಾಣು ಕೇಂದ್ರಗಳು, ಮಿಲಿಟರಿ ಸ್ಥಾವರಗಳನ್ನೆಲ್ಲ ಮೊಸಾದ್ ಭೇದಿಸಿದೆ. ಬುದ್ಧಿಮತ್ತೆ, ಮನೋಯುದ್ಧ, ಸೈಬರ್ ದಾಳಿ, ಹೈಟೆಕ್ ಹತ್ಯೆಗಳ ಮೂಲಕ ಇರಾನಿನ ಜಂಘಾಬಲವನ್ನು ಉಡುಗಿಸಿದೆ.
ಹಲವಾರು ದಶಕಗಳಿಂದಲೂ ಮೊಸಾದ್, ಇರಾನಿನೊಳಕ್ಕೆ ಪ್ರವೇಶಿಸಿದ್ದರೂ, ಕಲೆದ 10-15 ವರ್ಷಗಳಿಂದ ಭಾರಿ ಕಾರ್ಯಾಚರಣೆ ನಡೆಸುತ್ತಿದೆ. 2010ರಲ್ಲಿ ಇರಾನ್ ಪರಮಾಣು ಬಾಂಬ್ ತಯಾರಿಸುವ ಉದ್ದೇಶದಿಂದ ಯುರೇನಿಯಂ ಸಂವರ್ಧನೆಯ ಪ್ರಕ್ರಿಯೆಯ ಅಂತಿಮ ಘಟ್ಟದಲ್ಲಿತ್ತು. ಆಗ ಮೊಸಾದ್ ಹೊಸ ತಂತ್ರಗಾರಿಕೆ ನಡೆಸಿತ್ತು. ಇರಾನಿನೊಳಗೆಯೇ ಭಿನ್ನಮತ ಹೊಂದಿರುವವರು, ಅಲ್ಪಸಂಖ್ಯಾತರು, ಕುರ್ದಿಶ್ಗಳು, ಬಲೂಚಿಗಳನ್ನು ತನ್ನ ಗುಪ್ತಚರರನ್ನಾಗಿ, ಮಾಹಿತಿದಾರರನ್ನಾಗಿ ನೇಮಿಸಿತ್ತು.
ಇರಾನಿನ 'ಟಾನ್ಜ್ ನ್ಯೂಕ್ಲಿಯರ್ ಫೆಸಿಲಿಟಿʼ ಕೇಂದ್ರವೇ ಅಣ್ವಸ್ತ್ರವನ್ನು ತಯಾರಿಸಲು ಅಣಿಯಾಗುತ್ತಿದ್ದ ತಾಣ. ಇಲ್ಲಿ ಇರಾನ್ ಯುರೇನಿಯಂ ಸಂವರ್ಧನೆ ಮಾಡುತ್ತಿತ್ತು. 2-3 ಲಕ್ಷ ಕೋಟಿ ಡಾಲರ್ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿತ್ತು. ಭೂಗತವಾಗಿರುವ ಈ ಕೇಂದ್ರವನ್ನು 7.6 ಮೀಟರ್ ದಪ್ಪದ ಕಾಂಕ್ರಿಟ್ ಶೀಲ್ಡ್ ಬಳಸಿ ಸಂರಕ್ಷಿಸಿಡಲಾಗಿತ್ತು. ಈ ಕೇಂದ್ರದ ಮೇಲೆಯೇ ಇಸ್ರೇಲ್ ದಾಳಿ ನಡೆಸಿದೆ. ಆದರೆ ಈ ನೇರ ದಾಳಿಯಿಂದ ಉಂಟಾಗಿರುವ ಹಾನಿ ಎಷ್ಟು ಎಂಬುದರ ಬಗ್ಗೆ ನಾನಾ ವರದಿಗಳಿವೆ. ಕೆಲ ವರದಿಗಳ ಪ್ರಕಾರ, ನಟಾನ್ಜ್ ನ್ಯೂಕ್ಲಿಯರ್ ಎನ್ರಿಚ್ಮೆಂಟ್ ಫೆಸಿಲಿಟಿಯ ಕೆಲ ಕಟ್ಟಡಗಳು ಧ್ವಂಸವಾಗಿವೆ. ಭೂಗತವಾಗಿರುವ ಎನ್ರಿಚ್ಮೆಂಟ್ ಘಟಕಕ್ಕೆ ವಿದ್ಯುತ್ ಪೂರೈಕೆ ಕಡಿತವಾಗಿದೆ. 80 ಗುರಿಗಳನ್ನು ಇಸ್ರೇಲ್ 50 ಯುದ್ಧ ವಿಮಾನಗಳ ಮೂಲಕ ಭೇದಿಸಿದೆ.
ಇರಾನಿನಲ್ಲಿ ಪರಮೋಚ್ಚ ನಾಯಕರ ಕೈಯೊಳಗೆ ಸರ್ವಾಧಿಕಾರದ ಹಿಡಿತವಿದ್ದರೂ, ಸಾಂಸ್ಥಿಕವಾಗಿ ಆಡಳಿತ ದುರ್ಬಲವಾಗಿತ್ತು. ಭ್ರಷ್ಟಾಚಾರವಿತ್ತು. ಈ ದೌರ್ಬಲ್ಯವನ್ನು ಮೊಸಾದ್ ಬಳಸಿಕೊಂಡಿತು. ಜತೆಗೆ ಹೈಟೆಕ್ ಹತ್ಯೆಗಳು ನಡೆಯಿತು. 2020ರಲ್ಲಿ ಅಣು ವಿಜ್ಞಾನಿ ಮೊಸೆನ್ ಫಕ್ರಿಜದೇಹ್ನ ಹತ್ಯೆಗೆ ಉಪಗ್ರಹ ಆಧಾರಿತ, ಎಐ ಚಾಲಿತ ರಿಮೋಟ್ ಮೆಶೀನ್ ಗನ್ ಅನ್ನು ಬಳಸಲಾಗಿತ್ತು. ಇರಾಕಿನಲ್ಲಿನ ಕುರ್ದಿಶ್ ಬಂಡುಕೋರರು, ಪಾಕಿಸ್ತಾನ್ - ಇರಾನ್ ಗಡಿಯಲ್ಲಿರುವ ಬಲೂಚಿಸ್ತಾನ್ ಬಂಡುಕೋರರು ಕಳ್ಳಸಾಗಣೆಯ ಮಾರ್ಗಗಳಲ್ಲಿ ಮೊಸಾದ್ಗೆ ನೆರವಾಗುತ್ತಿದ್ದರು. ಜತೆಗೆ ಇರಾನಿನ ಆಂತರಿಕ ಭದ್ರತೆಯ ಲೋಪ ದೋಷಗಳನ್ನು ಚೆನ್ನಾಗಿ ಬಳಸಿಕೊಂಡಿತು.
2018ರಲ್ಲಿ ಮೊಸಾದ್ ಒಂದು ಭಾರಿ ಮಹತ್ತ್ವಾಕಾಂಕ್ಷೆಯ ಸಾಹಸ ಮಾಡಿತ್ತು. ತೆಹರಾನ್ ನಲ್ಲಿ ಇರಾನಿನ ರಹಸ್ಯ AMAD ಪ್ರಾಜೆಕ್ಟ್ನ 1 ಲಕ್ಷಕ್ಕೂ ಹೆಚ್ಚು ದಾಖಲೆಗಳನ್ನು ಮೊಸಾದ್ ಏಜೆಂಟರು ಎಗರಿಸಿದ್ದರು. ಗಂಟೆಗಳಲ್ಲೇ ಕೆಲಸ ಮುಗಿಸಿ ಇಸ್ರೇಲಿಗೆ ಅದೇ ದಿನ ರಾತ್ರಿ ರಹಸ್ಯ ದಾಖಲೆಗಳನ್ನು ರವಾನಿಸಿದ್ದರು. 2020ರಲ್ಲಿ ಇರಾನಿನ ಪರಮಾಣು ಪಿತಾಮಹ ಎಂದೇ ಪ್ರಸಿದ್ಧಿ ಪಡೆದಿದ್ದ ಅಣು ವಿಜ್ಞಾನಿ ಮೊಸೆನ್ ಫಕ್ರಿಜದೇಹ್ ಹತನಾಗಿದ್ದ. 2021ರಲ್ಲಿ ನಟಾನ್ಜ್ನಲ್ಲಿದ್ದ ನ್ಯೂಕ್ಲಿಯರ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿತ್ತು. ಇದರ ಹಿಂದೆ ಮೊಸಾದ್ ಇತ್ತೆಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಇಸ್ರೇಲ್ಗೆ ತನ್ನ ಪ್ರಜೆಗಳ ರಕ್ಷಣೆಗೆ ಮತ್ತು ದೇಶದ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲು ಇರಾನಿನ ಪರಮಾಣು ಕಾರ್ಯಕ್ರಮವನ್ನು ನಿಷ್ಕ್ರಿಯಗೊಳಿಸುವುದು ಅತ್ಯಂತ ಅನಿವಾರ್ಯವಾಗಿತ್ತು. ಇದನ್ನೇ ಹಲವು ವರ್ಷಗಳಿಂದ ಇಸ್ರೇಲ್ ಪ್ರಧಾನಿ ನೇತನ್ಯಾಹು ಬಲವಾಗಿ ಪ್ರತಿಪಾದಿಸುತ್ತಿದ್ದರು.

ಹಾಗಂತ ಈಗ ಇಸ್ರೇಲ್ ಎದುರಿನ ಸವಾಲು ಸಂಪೂರ್ಣ ಮುಕ್ತಾಯವಾಗಿದೆ ಎಂದೇನೂ ಇಲ್ಲ! ಇರಾನ್ ಹಾನಿಗೀಡಾಗಿರುವ ನಟಾನ್ಜ್ ಸ್ಥಾವರವನ್ನು ದುರಸ್ತಿಪಡಿಸಿಕೊಳ್ಳಬಹುದು. ಹಾಗೆಯೇ ಇರಾನಿನ ಕೋಮ್ ನಗರದ ಬಳಿಯಿರುವ ಪರ್ವತಗಳ ಪ್ರದೇಶದಲ್ಲಿ ಕೂಡ ಪರಮಾಣು ಕಾರ್ಯಕ್ರಮಗಳನ್ನು ನಡೆಸುವ ಫೋರ್ಡೊ ಫ್ಯುಯೆಲ್ ಎನ್ರಿಚ್ಮೆಂಟ್ ಘಟಕ ಇದೆ. ಇದನ್ನು ನಾಶಪಡಿಸಲು ಇಸ್ರೇಲಿಗೆ ಭೂಗತ ಬಂಕರ್ಗಳನ್ನು ಧ್ವಂಸಗೊಳಿಸಬಲ್ಲ, ಅಮೆರಿಕದ ನಿಯಂತ್ರಣದಲ್ಲಿರುವ ಶಸ್ತ್ರಾಸ್ತ್ರ ಬೇಕಾಗುತ್ತದೆ. ಅಮೆರಿಕದ ವಾಯುಪಡೆಯ ಬಳಿ ಇರುವ GBU-57A/B MOP " ಬಂಕರ್ ಬಸ್ಟರ್ ಬಾಂಬ್ʼ ಎಂದು ಪ್ರಸಿದ್ಧವಾಗಿದೆ. 13,600 ಕೆಜಿ ತೂಕವಿರುವ ಈ ಆಯುದ್ಧ ಭೂಮಿಯ ಒಳಗಿರುವ ಬಂಕರ್ಗಳನ್ನು ನಾಶಪಡಿಸಬಲ್ಲುದು.
ಇಂಥ ಸವಾಲುಗಳಿದ್ದರೂ, ಇಸ್ರೇಲ್ ನೇರವಾಗಿ ಇರಾನಿನ ಪರಮಾಣು ಘಟಕಗಳ ಮೇಲೆ ದಾಳಿ ಆರಂಭಿಸಿದೆ.