ಇಸ್ರೇಲ್‌ನಿಂದ ಮತ್ತೆ ಕ್ಷಿಪಣಿ ದಾಳಿ ಶುರು; ರಾಜಧಾನಿ ಟೆಹ್ರಾನ್‌ನಲ್ಲಿ ಭಾರಿ ಸ್ಫೋಟ
ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿಯನ್ನು ಹತ್ಯೆ ಮಾಡಿದ ಬಳಿಕ ಇರಾನ್ ಇಸ್ರೇಲ್ ಹಾಗೂ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿ ಮಾಡಿತ್ತು. ಇದೀಗ ಪ್ರತೀಕಾರಕ್ಕಾಗಿ ಇಸ್ರೇಲ್ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ದಾಳಿ ನಡೆಸಿದೆ.
ಸಂಗ್ರಹ ಚಿತ್ರ -
ಟೆಹ್ರಾನ್: ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿಯನ್ನು ಹತ್ಯೆ ಮಾಡಿದ ಬಳಿಕ ಇರಾನ್ ಇಸ್ರೇಲ್ ಹಾಗೂ ಅಮೆರಿಕದ (US-Israel Attacks on Iran) ವಾಯುನೆಲೆಗಳ ಮೇಲೆ ದಾಳಿ ಮಾಡಿತ್ತು. ಇದೀಗ ಪ್ರತೀಕಾರಕ್ಕಾಗಿ ಇಸ್ರೇಲ್ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ದಾಳಿ ನಡೆಸಿದೆ. ಭಾನುವಾರ ಇರಾನ್ ರಾಜಧಾನಿಯಲ್ಲಿ ಬಹು ಸ್ಫೋಟಗಳು ಸಂಭವಿಸಿವೆ. ನಗರದಾದ್ಯಂತ ಬೃಹತ್ ಸ್ಫೋಟಗಳ ಸದ್ದು ಕೇಳಿಬಂದಿದ್ದು, ಸ್ಫೋಟಗಳ ನಂತರ ಆಕಾಶಕ್ಕೆ ದೊಡ್ಡ ಹೊಗೆಯ ಗೊಂಚಲುಗಳು ಏರುತ್ತಿರುವುದನ್ನು ತೋರಿಸುವ ವೀಡಿಯೊಗಳು ಕಾಣಿಸಿಕೊಂಡಿವೆ.
ಖಮೇನಿಯವರ ಸಾವಿಗೆ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿ ಮಧ್ಯಪ್ರಾಚ್ಯದಲ್ಲಿ ಕ್ಷಿಪಣಿಗಳನ್ನು ಹಾರಿಸಿದ ಕೆಲವೇ ಗಂಟೆಗಳ ನಂತರ ಈ ಹೊಸ ದಾಳಿ ನಡೆದಿದೆ - ಅವುಗಳಲ್ಲಿ ಹಲವು ದುಬೈ, ಅಬುಧಾಬಿ, ಕತಾರ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ಪ್ರದೇಶಗಳನ್ನು ಒಳಗೊಂಡಿದೆ. ಇಸ್ಲಾಮಿಕ್ ಗಣರಾಜ್ಯ ಇರಾನ್‌ನ ಸಶಸ್ತ್ರ ಪಡೆಗಳ ಇತಿಹಾಸದಲ್ಲಿ ಅತ್ಯಂತ ಉಗ್ರ ಆಕ್ರಮಣಕಾರಿ ಕಾರ್ಯಾಚರಣೆ ಯಾವುದೇ ಕ್ಷಣದಲ್ಲಿ ಪ್ರಾರಂಭವಾಗಲಿದೆ" ಎಂದು ಇರಾನ್‌ನ ಕ್ರಾಂತಿಕಾರಿ ಪಡೆಗಳು ಟೆಲಿಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ.
ಪರಮಾಣು ಮಾತುಕತೆ ಸ್ಥಗಿತಗೊಂಡ ಬಳಿಕ, ಇರಾನ್ ತನ್ನ ಪರಮಾಣು ಚಟುವಟಿಕೆಗಳನ್ನು ಪುನರಾರಂಭಿಸಿದೆ. ಅಲ್ಲದೇ ಈ ಬಾರಿ ಅಮೆರಿಕದ ಜೊತೆಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಇರಾನ್ ಘೋಷಿಸಿದೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಪ್ರತೀಕಾರದ ಪ್ರತಿಜ್ಞೆ ಮಾಡಿರುವ ಇರಾನ್ ರೆವಲ್ಯೂಷನರಿ ಗಾರ್ಡ್, "ನಮ್ಮ ಪ್ರತಿಕ್ರಿಯೆಯು ಯುಎಸ್ ಮತ್ತು ಇಸ್ರೇಲ್ ವಿರುದ್ಧ ಇತಿಹಾಸದಲ್ಲಿ ಅತ್ಯಂತ ಉಗ್ರ ಆಕ್ರಮಣಕಾರಿ ಕಾರ್ಯಾಚರಣೆ ಆಗಿರುತ್ತದೆ" ಎಂದು ಭರವಸೆ ನೀಡಿದೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ಇರಾನ್ ದಾಳಿ ನಡೆಸಿದೆ. ದುಬೈ ವಿಮಾನ ನಿಲ್ದಾಣವನ್ನು ನೇರವಾಗಿ ಗುರಿಯಾಗಿಸಿಕೊಂಡು ದಾಳಿ ನಡೆದಿದೆ.
ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ: ದಶಕಗಳ ಹಿಂದಿನ ಬಾಬಾ ವಂಗಾ ಭವಿಷ್ಯ ನಿಜವಾಗುತ್ತಿದೆಯೇ?
ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನ ವಿವಿಧ ಪ್ರದೇಶಗಳಲ್ಲಿ ತುರ್ತು ಎಚ್ಚರಿಕೆ ಸಂದೇಶಗಳನ್ನು ರವಾನಿಸಿದ್ದು, ನಿವಾಸಿಗಳು ಹಾಗೂ ಪ್ರವಾಸಿಗರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಕ್ಷಿಪಣಿ ದಾಳಿ ಹಿನ್ನೆಲೆ ಭದ್ರತೆಗಳನ್ನು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ.