ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೇಶದ ಪ್ರತಿಷ್ಠಿತ ನಗರ ಅಬುಧಾಬಿ(Abu Dhabi)ಯಲ್ಲಿ ವಾಸಿಸುತ್ತಿರುವ 29 ವರ್ಷದ ಭಾರತೀಯ ಮೂಲದ ಯುವಕ ಅನಿಲ್ ಕುಮಾರ್ ಬೊಳ್ಳಾ (Anilkumar Bolla) ಲಾಟರಿಯಲ್ಲಿ 100 ಮಿಲಿಯನ್ ದಿನಾರ್ (240 ಕೋಟಿ ರೂ.) ಗೆದ್ದಿದ್ದು, ಇದು ಯುಎಇಯ ಇತಿಹಾಸದಲ್ಲೇ ಅತಿದೊಡ್ಡ ಲಾಟರಿ ಬಹುಮಾನವಾಗಿದೆ. ಅನಿಲ್ ಅವರು 12 ಟಿಕೆಟ್‌ಗಳನ್ನು ಒಂದೇ ಬಾರಿ ಖರೀದಿಸಿದ್ದು, ಅದರಲ್ಲಿ ಒಂದು ಸಂಖ್ಯೆ '11' ಅವರ ತಾಯಿಯ ಜನ್ಮದಿನವನ್ನು ಸೂಚಿಸುತ್ತದೆ. ಇದೇ ಸಂಖ್ಯೆ ಅವರ ಅದೃಷ್ಟ ಬದಲಿಸಿದೆ. ಈ ಜಯದೊಂದಿಗೆ ಅವರು ಯುಎಇ ಲಾಟರಿ ಇತಿಹಾಸದ ಮೊದಲ 100 ಮಿಲಿಯನ್ ದಿನಾರ್ ವಿಜೇತರಾಗಿದ್ದಾರೆ.
“ತಾಯಿಯ ಜನ್ಮದಿನವೇ ಅದೃಷ್ಟದ ಕೀಲಿ”
“ನಾನು ಯಾವುದೇ ಮ್ಯಾಜಿಕ್ ಮಾಡಲಿಲ್ಲ, ಕೇವಲ ‘ಈಸಿ ಪಿಕ್’ ಅನ್ನು ಆಯ್ಕೆ ಮಾಡಿಕೊಂಡೆ. ನಾನು 12 ಟಿಕೆಟ್‌ಗಳನ್ನು ಖರೀದಿಸಿದ್ದೆ. ಅದರಲ್ಲಿ ಲಾಟರಿ ಕೊನೆಯ ಸಂಖ್ಯೆ ತುಂಬಾ ವಿಶೇಷವಾಗಿದೆ. ಇದು ನನ್ನ ಅಮ್ಮನ ಹುಟ್ಟುಹಬ್ಬದ ದಿನ... ಅದೇ ನನಗೆ ಅದೃಷ್ಟ ತಂದುಕೊಟ್ಟಿತು," ಎಂದು ಅನಿಲ್ ಕುಮಾರ್ ಬೊಳ್ಳಾ ಸಂತಸ ವ್ಯಕ್ತಪಡಿಸಿದ್ದಾರೆ. “ನಾನು ಸೋಫಾದ ಮೇಲೆ ಕುಳಿತಿದ್ದೆ… ಲಾಟರಿ ರಿಸಲ್ಟ್ ನೋಡಿ ದಂಗಾಗಿ ಹೋದೆ.! ಎಂದು ಅವರು ಹೇಳಿದ್ದಾರೆ. ಈಸಿ ಪಿಕ್ ಎಂದರೆ, ಲಾಟರಿ ಟಿಕೆಟ್‌ನಲ್ಲಿ ಸಂಖ್ಯೆಗಳನ್ನು ನಾವೇ ಆಯ್ಕೆ ಮಾಡದೆ, ಯಂತ್ರದಿಂದ ಸ್ವಯಂಚಾಲಿತವಾಗಿ ಆಯ್ಕೆಯಾಗುವ ವಿಧಾನ.
ಈ ಸುದ್ದಿಯನ್ನೂ ಓದಿ: Viral News: 109 ವರ್ಷಗಳಿಂದ ಹೊತ್ತಿ ಉರಿಯುತ್ತಲೇ ಇದೆ ದೇಶದ ಈ ಸಿಟಿ! ಭೂಮಿ ಇನ್ನೂ ತಣ್ಣಗಾಗಿಯೇ ಇಲ್ವಂತೆ
ಅನಿಲ್‌ನ ಮುಂದಿನ ಕನಸುಗಳೇನು?
ಅನಿಲ್ ಬೊಲ್ಲಾ ತಮ್ಮ ಗೆಲುವನ್ನು ಜವಾಬ್ದಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ಮೊತ್ತವನ್ನು ಹೇಗೆ ಹೂಡಿಕೆ ಮಾಡಬೇಕು ಎಂದು ಯೋಚಿಸುತ್ತಿದ್ದೇನೆ. ನಾನು ದೊಡ್ಡದಾಗಿ ಏನಾದರೂ ಮಾಡಬೇಕೆಂಬ ಕನಸು ಇದೆ,” ಎಂದು ಅನಿಲ್ ಹೇಳಿದರು. ಅವರು ತಮ್ಮ ತಂದೆ-ತಾಯಿಯನ್ನು ಯುಎಇಗೆ ಕರೆತಂದು, ಸೂಪರ್‌ಕಾರ್ ಖರೀದಿಸಿ, 7-ಸ್ಟಾರ್ ರೆಸಾರ್ಟ್‌ನಲ್ಲಿ ಈ ಗೆಲುವಿನ ಸಂಭ್ರಮಾಚರಣೆ ಮಾಡಬೇಕೆಂದು ಪ್ಲಾನ್ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೇ “ನನ್ನ ತಾಯಿ-ತಂದೆಯರ ಕನಸುಗಳು ಚಿಕ್ಕದಾಗಿವೆ; ನಾನು ಅವುಗಳನ್ನು ಈಡೇರಿಸಲು ಬಯಸುತ್ತೇನೆ,” ಎಂದು ಅನಿಲ್ ತಿಳಿಸಿದರು.
ಸಹಾಯ ಕಾರ್ಯಕ್ಕೂ ಹಣ ಮೀಸಲು
ಅನಿಲ್ ತಮ್ಮ ಗೆಲುವಿನ ಒಂದು ಭಾಗವನ್ನು ದಾನಕಾರ್ಯಗಳಿಗೆ ಬಳಸುವ ಯೋಜನೆಯೂ ಹೊಂದಿದ್ದಾರೆ. “ಅವಶ್ಯಕತೆಯವರಿಗೆ ಹಣ ತಲುಪುವುದೇ ನನ್ನ ನಿಜವಾದ ಸಂತೋಷ,” ಎಂದು ಅವರು ಹೇಳಿದ್ದಾರೆ. ಬಳಿಕ ಯುಎಇ ಲಾಟರಿಗೆ ಕೃತಜ್ಞತೆ ಸಲ್ಲಿಸುತ್ತಾ, “ಎಲ್ಲವೂ ಒಂದು ಕಾರಣಕ್ಕಾಗಿಯೇ ನಡೆಯುತ್ತದೆ. ಎಲ್ಲರೂ ಆಟ ಮುಂದುವರಿಸಿ, ಒಂದು ದಿನ ನಿಮಗೂ ಅದೃಷ್ಟ ಬರುವುದು ಖಚಿತ,” ಎಂದು ಅನಿಲ್ ತಿಳಿಸಿದರು.
ಖಲೀಜ್ ಟೈಮ್ಸ್ ವರದಿಯ ಪ್ರಕಾರ, ಯುಎಇ ಲಾಟರಿ ಪ್ರಾರಂಭವಾದ ನಂತರದಿಂದ 1 ಲಕ್ಷ ದಿನಾರ್‌ಗಿಂತ ಹೆಚ್ಚು ಬಹುಮಾನ ಗೆದ್ದ 200ಕ್ಕೂ ಹೆಚ್ಚು ವಿಜೇತರಿದ್ದಾರೆ. ಮತ್ತು ಒಟ್ಟಾರೆ 147 ಮಿಲಿಯನ್ ದಿನಾರ್‌ಗಿಂತ ಹೆಚ್ಚು ಬಹುಮಾನ ವಿತರಿಸಲಾಗಿದೆ.