ಇಸ್ಲಾಮಾಬಾದ್: ಇರಾನ್ ಬಂದರುಗಳ (Iran port) ಮೇಲೆ ಅಮೆರಿಕ (America) ವಿಧಿಸಿರುವ ನಿರ್ಬಂಧವು ಕದನ ವಿರಾಮ (peace talks) ಮಾತುಕತೆಗೆ ಅಡ್ಡಿಯಾಗಿದೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ (Pakistan army chief) ಅಸೀಮ್ ಮುನೀರ್ (Asim Munir) ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (US President Donald Trump) ಹೇಳಿದ್ದಾರೆ ಎನ್ನಲಾಗಿದೆ. ದೂರವಾಣಿ ಮೂಲಕ ಮಾತನಾಡಿರುವ ಅವರು, ಕದನ ವಿರಾಮ ಮಾತುಕತೆಗೆ ಇರಾನ್ ಬರುವುದಿಲ್ಲ. ಇದಕ್ಕೆ ಮುಖ್ಯ ಕಾರಣ ಅಮೆರಿಕ ಹೊರ್ಮುಜ್ ಜಲ ಮಾರ್ಗದಲ್ಲಿ ವಿಧಿಸಿರುವ ನಿರ್ಬಂಧವಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ದೂರವಾಣಿ ಸಂಭಾಷಣೆ ನಡೆಸಿರುವ ಅಸೀಮ್ ಮುನೀರ್ ಅವರು, ಇರಾನ್ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನವು ಇರಾನ್ ಜೊತೆಗೆ ಕದನ ವಿರಾಮ ಮಾತುಕತೆಗೆ ಅಡ್ಡಿಯಾಗಿದೆ ಎಂದಿದ್ದು, ಈ ಕುರಿತು ಪರಿಶೀಲನೆ ನಡೆಸುವುದಾಗಿ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ ಎನ್ನಲಾಗಿದೆ.
ಅಮೆರಿಕದೊಂದಿಗಿನ ಮಾತುಕತೆಯಿಂದ ಹಿಂದೆ ಸರಿದ ಇರಾನ್: ಶಾಂತಿ ಒಪ್ಪಂದದ ಕಥೆಯೇನು?
ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಇರಾನ್ ಮೇಲೆ ಯುಎಸ್ ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯ ಭಾಗಗಳಲ್ಲಿ ಉದ್ವಿಗ್ನತೆ ತೀವ್ರವಾಗಿತ್ತು. ಕಳೆದ ವಾರ ಇಸ್ಲಾಮಾಬಾದ್ ನಲ್ಲಿ ಯುಎಸ್ ಮತ್ತು ಇರಾನ್ ನಡುವಿನ ಕದನ ವಿರಾಮ ಮಾತುಕತೆ ವಿಫಲವಾದ ಬಳಿಕ ಅಮೆರಿಕವು ಇರಾನ್ ಬಂದರುಗಳ ಮೇಲೆ ನಿರ್ಬಂಧ ಹೇರಿ ಹೊರ್ಮುಜ್ ನಲ್ಲಿ ದಿಗ್ಬಂಧನ ವಿಧಿಸಿತ್ತು. ಇದು ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಅಡ್ಡಿಯಾಗಿದೆ ಎಂದು ಮುನೀರ್ ಎಚ್ಚರಿಸಿದ್ದಾರೆ ಎಂದು ಪಾಕಿಸ್ತಾನಿ ಭದ್ರತಾ ಮೂಲಗಳು ತಿಳಿಸಿವೆ ಎನ್ನಲಾಗಿದೆ.
ಈ ಕುರಿತು ಪರಿಶೀಲನೆ ನಡೆಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದು, ಟೆಹರಾನ್ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ ಬಳಿಕ ಇಸ್ಲಾಮಾಬಾದ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಮಾತುಕತೆ ಸಾಧ್ಯತೆ ಇಲ್ಲ ಎನ್ನಲಾಗಿದೆ. ಇದರಿಂದ ಮಧ್ಯಪ್ರಾಚ್ಯ ಸಂಘರ್ಷದಲ್ಲಿ ಕದನ ವಿರಾಮ ವಿಸ್ತರಣೆಯಾಗುವುದೋ ಎಂಬುದನ್ನು ಕಾದು ನೋಡಬೇಕಿದೆ.
ಅಸೀಮ್ ಮುನೀರ್ ಅವರು ಇತ್ತೀಚೆಗೆ ಮೂರು ದಿನಗಳ ಟೆಹರಾನ್ ಭೇಟಿ ನೀಡಿದ್ದರು. ಅಲ್ಲಿ ಅವರು ಅಧ್ಯಕ್ಷರು, ವಿದೇಶಾಂಗ ಸಚಿವರು ಮತ್ತು ಉನ್ನತ ಮಿಲಿಟರಿ ಅಧಿಕಾರಿಗಳು ಸೇರಿದಂತೆ ಹಿರಿಯ ಇರಾನಿನ ನಾಯಕರನ್ನು ಭೇಟಿಯಾಗಿ ಉದ್ವಿಗ್ನತೆಯನ್ನು ಶಮನಗೊಳಿಸಲು ಒತ್ತಾಯಿಸಿದ್ದರು ಎನ್ನಲಾಗಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಅವರು ಇತ್ತೀಚೆಗೆ ಅಮೆರಿಕದ ಪ್ರತಿನಿಧಿಗಳೊಂದಿಗೆ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಈ ತಿಂಗಳ ಆರಂಭದಲ್ಲಿ ಆಗಮಿಸಿದ್ದರು. ಆದರೆ ಮಾತುಕತೆ ವಿಫಲಗೊಂಡಿತ್ತು.
ಎರಡನೇ ಸುತ್ತಿನ ಮಾತುಕತೆಗೆ ಬರಲು ಇರಾನ್ ನಿರಾಕರಿಸಿದ್ದು, ಇದಕ್ಕೆ ಅಮೆರಿಕದ ಅತಿಯಾದ ಬೇಡಿಕೆಗಳು, ಸ್ಥಾನ ಬದಲಾವಣೆ, ಬಂದರುಗಳ ಮೇಲೆ ನೌಕಾ ದಿಗ್ಬಂಧನ ಕಾರಣಗಳಾಗಿವೆ ಎಂದು ಹೇಳಿದೆ.
ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಇರಾನ್‌ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ರೆಜಾ ಅರೆಫ್ ಅವರು ವಾಷಿಂಗ್ಟನ್‌ನ ವಿಧಾನ ಅಸಮಂಜಸವಾಗಿದೆ. ಒತ್ತಡದಲ್ಲಿ ಮಾತುಕತೆಗಳಿಗೆ ಒತ್ತಾಯಿಸುತ್ತಿದೆ ಎಂದು ಆರೋಪಿಸಿದ್ದಾರೆ.