ಅಮೆರಿಕದೊಂದಿಗಿನ ಮಾತುಕತೆಯಿಂದ ಹಿಂದೆ ಸರಿದ ಇರಾನ್: ಶಾಂತಿ ಒಪ್ಪಂದದ ಕಥೆಯೇನು?
Iran withdraws US talks: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಂಡ ಎರಡನೇ ಸುತ್ತಿನ ಮಾತುಕತೆಗಾಗಿ ಪಾಕಿಸ್ತಾನಕ್ಕೆ ತೆರಳುತ್ತಿದೆ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಇರಾನ್ ಆ ಮಾತುಕತೆಗಳಿಂದ ಹಿಂದೆ ಸರಿದಿದೆ. ಈ ನಡುವೆ ಮಧ್ಯವರ್ತಿ ಪಾತ್ರ ವಹಿಸಲು ಉತ್ಸುಕವಾಗಿರುವ ಪಾಕಿಸ್ತಾನವು ಸಿದ್ಧತೆಗಳನ್ನು ತೀವ್ರಗೊಳಿಸಿದೆ.
ಇಸ್ಲಾಮಾಬಾದ್ನ ಚೆಕ್ಪೋಸ್ಟ್ನಲ್ಲಿ ವಾಹನ ಪರಿಶೀಲಿಸುತ್ತಿರುವ ಪಾಕಿಸ್ತಾನಿ ಪೊಲೀಸ್ ಸಿಬ್ಬಂದಿ -
ಟೆಹರಾನ್, ಏ. 20: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ತಂಡ ಎರಡನೇ ಸುತ್ತಿನ ಮಾತುಕತೆಗಾಗಿ ಪಾಕಿಸ್ತಾನಕ್ಕೆ (Pakistan) ತೆರಳುತ್ತಿದೆ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಇರಾನ್ ಆ ಮಾತುಕತೆಗಳಿಂದ ಹಿಂದೆ ಸರಿದಿದೆ. ಅಮೆರಿಕ-ಇರಾನ್ (US-Iran) ಎರಡನೇ ಸುತ್ತಿನ ಮಾತುಕತೆಯಲ್ಲಿ ಭಾಗವಹಿಸಲು ಇರಾನ್ ನಿರಾಕರಿಸಿರುವುದರಿಂದ, ಏಪ್ರಿಲ್ 22ರಂದು ಅವಧಿ ಮುಗಿಯಲಿರುವ ಕದನ ವಿರಾಮ ಒಪ್ಪಂದವನ್ನು ವಿಸ್ತರಿಸುವ ಕುರಿತು ಅನುಮಾನ ಹೆಚ್ಚಿದೆ.
ಈ ನಡುವೆ ಮಧ್ಯವರ್ತಿ ಪಾತ್ರ ವಹಿಸಲು ಉತ್ಸುಕವಾಗಿರುವ ಪಾಕಿಸ್ತಾನವು ಸಿದ್ಧತೆಗಳನ್ನು ತೀವ್ರಗೊಳಿಸಿದೆ. ಇಸ್ಲಾಮಾಬಾದ್ ಹಾಗೂ ಪಂಜಾಬ್ನ ರಾವಲ್ಪಿಂಡಿಯಲ್ಲಿ ಸಾರ್ವಜನಿಕ ಮತ್ತು ಸರಕು ಸಾಗಣೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಈ ಬಾರಿ ಪರಿಸ್ಥಿತಿ ಗಂಭೀರವಾಗಿದೆ. ಅಮೆರಿಕದ ಷರತ್ತುಗಳನ್ನು ಇರಾನ್ ಒಪ್ಪದಿದ್ದರೆ, ಇರಾನ್ನ ಪ್ರತಿ ವಿದ್ಯುತ್ ಘಟಕ ಹಾಗೂ ಪ್ರತಿ ಸೇತುವೆಯನ್ನು ನಾಶಪಡಿಸಲಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಮೆರಿಕದ ಅತಿಯಾದ ಬೇಡಿಕೆಗಳು, ಅಸಾಧ್ಯ ನಿರೀಕ್ಷೆಗಳು, ನಿಲುವಿನ ನಿರಂತರ ಬದಲಾವಣೆಗಳು ಮತ್ತು ಪರಸ್ಪರ ವಿರೋಧಿ ಹೇಳಿಕೆಗಳು ಶಾಂತಿ ಪ್ರಕ್ರಿಯೆಗೆ ಅಡ್ಡಿಯಾಗಿವೆ ಎಂದು ಆರೋಪಿಸಿದೆ. ಜತೆಗೆ, ಇರಾನ್ ತನ್ನ ಬಂದರುಗಳ ಮೇಲೆ ಅಮೆರಿಕ ಹೇರಿರುವ ನೌಕಾ ನಿರ್ಬಂಧವನ್ನು ಸಹ ಶಾಂತಿ ಒಪ್ಪಂದದ ಉಲ್ಲಂಘನೆ ಎಂದು ಪರಿಗಣಿಸಿದೆ.
ಆತಂಕದ ನಡುವೆಯೂ ಹೊರ್ಮುಜ್ ಜಲಸಂಧಿ ದಾಟಿದ ಭಾರತದದ 'ದೇಶ್ ಗರಿಮಾ' ನೌಕೆ
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಟ್ರಂಪ್ ಅವರ ವಿಶೇಷ ಪ್ರತಿನಿಧಿಗಳಾದ ಸ್ಟೀವ್ ವಿಟ್ಕಾಫ್ ಮತ್ತು ಜಾರೆಡ್ ಕುಶ್ನರ್ ಇಸ್ಲಾಮಾಬಾದ್ಗೆ ಎರಡನೇ ಸುತ್ತಿನ ಮಾತುಕತೆಗಾಗಿ ತೆರಳುವ ನಿರೀಕ್ಷೆಯಿದೆ.
ಪಾಕಿಸ್ತಾನವು ಇಸ್ಲಾಮಾಬಾದ್ನ ಸೆರೆನಾ ಹೋಟೆಲ್, ಇಸ್ಲಾಮಾಬಾದ್ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದೆ. ಇದೇ ಹೋಟೆಲ್ನಲ್ಲಿ ಏಪ್ರಿಲ್ 11 ಮತ್ತು 12ರಂದು ಮೊದಲ ಸುತ್ತಿನ ಮಾತುಕತೆ ನಡೆದಿತ್ತು. ಮುಂದಿನ ಮಾತುಕತೆಯೂ ಅಲ್ಲೇ ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲೈನ್ ಲೆವಿಟ್ ಹೇಳಿದ್ದಾರೆ.
ಈ ಪರಿಸ್ಥಿತಿಯ ನಡುವೆ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ವರದಿಯ ಪ್ರಕಾರ, ಅವರು ಇರಾನ್ ಬಂದರುಗಳ ಮೇಲೆ ಅಮೆರಿಕ ಹೇರಿರುವ ನೌಕಾ ನಿರ್ಬಂಧ ಇಸ್ಲಾಮಾಬಾದ್ನಲ್ಲಿ ನಡೆಯಬೇಕಿದ್ದ ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಅಡ್ಡಿಯಾಗುತ್ತಿದೆ ಎಂದು ಎಚ್ಚರಿಸಿದ್ದಾರೆ.
ಏಪ್ರಿಲ್ 8ರಂದು ಪ್ರಾರಂಭವಾದ 14 ದಿನಗಳ ಕದನ ವಿರಾಮ ಏಪ್ರಿಲ್ 22ರಂದು ಕೊನೆಗೊಳ್ಳಲಿದೆ. ಅದಕ್ಕಾಗಿಯೇ ಎರಡನೇ ಸುತ್ತಿನ ಮಾತುಕತೆಯನ್ನು ವಿಸ್ತರಿಸಲು ಇದು ಕೊನೆಯ ಅವಕಾಶವೆಂದು ಪರಿಗಣಿಸಲಾಗುತ್ತಿದೆ.
ಪಾಕಿಸ್ತಾನದಲ್ಲಿ ಅಮೆರಿಕ ಜತೆ ನಡೆಯಲಿರುವ ಎರಡನೇ ಸುತ್ತಿನ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಇರಾನ್ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ತನ್ನ ಬಂದರುಗಳ ಮೇಲೆ ನಡೆಯುತ್ತಿರುವ ಅಮೆರಿಕದ ನೌಕಾ ದಿಗ್ಬಂಧನವನ್ನು ಸಹ ಅದು ಬೆಟ್ಟು ಮಾಡಿದೆ. ಈ ಮಧ್ಯೆ, ಮಾತುಕತೆ ನಡೆಯುತ್ತದೆಯೇ ಎಂಬುದನ್ನು ಪಾಕಿಸ್ತಾನವು ಅಧಿಕೃತವಾಗಿ ದೃಢಪಡಿಸಿಲ್ಲ.